Dec 31, 2010

ಹೊಸ ವರ್ಷದ ಶುಭಾಶಯಗಳು...

ನಮ್ಮ ಸಂಸ್ಕೃತಿಯಲ್ಲಿ ನಾಳೆ ಹೊಸ ವರ್ಷ ಅಲ್ಲ. ಆದರೂ ವ್ಯಾವಹಾರಿಕವಾಗಿ ಈ ಕ್ಯಾಲೆಂಡರಿಗೆ ನಾವು ಒಗ್ಗಿ ಹೋಗಿದ್ದೇವೆ. ಕ್ಯಾಲೆಂಡರ್ ಬದಲುವ ಈ ವೇಳೆಯಲ್ಲಿ ನಿಮಗೆಲ್ಲ 2011ರ ಶುಭಾಶಯಗಳು.

Dec 22, 2010

ನಿಲ್ಲು ಚಂದಿರ


ನಿಲ್ಲು ನಿಲ್ಲು ಚಂದಿರ
ಎಲ್ಲಿ ಓಡುವೆ
ನನ್ನ ಬಿಟ್ಟು ಏಕೆ ನೀನು
ಓಡಿ ಹೋಗುವೆ..!
               ಹಗಲಿನಲ್ಲಿ ಹೋದೆ ನೀ
               ಎಲ್ಲಿ ಚಂದಿರ
               ಇರುಳಿನಲ್ಲಿ ಎಲ್ಲಿ ಇದೆ
               ನಿನ್ನ ಮಂದಿರ...!
ನಿಲ್ಲು ನಿಲ್ಲು ಚಂದಿರ
ಎಲ್ಲಿ ಓಡುವೆ
ಚೆಲ್ಲು ಚೆಲ್ಲು ಸುಂದರ
ಬೆಳದಿಂಗಳ ನೋಡುವೆ

-- ಶ್ವೇತಾ.ಕೆ
ಆರನೇ ತರಗತಿ

Dec 15, 2010

ಜಾದೂ...

ಮೊನ್ನೆ ಸೋಮವಾರ ನಮ್ಮ ಸಂಸ್ಥೆಗೆ ಉಡುಪಿ ಜಿಲ್ಲೆಯ ಪಾಂಗಾಳದಲ್ಲಿರುವ ಗೋಪಾಲಕೃಷ್ಣ ಶೆಣೈ ಬಂದಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ಅವರು ಪರಿಚಿತರು. ಶಾಲೆಗಳಿಗೆ ಭೇಟಿ ನೀಡಿ ಜಾದೂ ಪ್ರದರ್ಶನ ನಡೆಸುವುದು ಅವರ ಹವ್ಯಾಸ. ಅವರ ಜಾದೂ ಪ್ರದರ್ಶನ ವಿದ್ಯಾರ್ಥಿಗಳಿಗೆ ಕುತೂಹಲದ ಕ್ಷಣವನ್ನು ಒದಗಿಸಿತು.

Dec 11, 2010

ಐಟಿ ಪ್ರೋಜೆಕ್ಟ್

ಶಾಲಾ ಸುದ್ದಿಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ತಡವಾಗಿದ್ದಕ್ಕೆ ಕ್ಷಮೆ ಇರಲಿ. ಮಧ್ಯಾವಧಿ ಪರೀಕ್ಷೆಗಳು, ಪಠ್ಯೇತರ ಚಟುವಟಿಕೆಗಳ ನಡುವೆ ಈ ಕಡೆ ತಲೆ ಹಾಕಲು ಸಾಧ್ಯವಾಗಿಲ್ಲ. ಆದರೆ ಈ ನಡುವೆಯೂ ನಮ್ಮ ವಿದ್ಯಾರ್ಥಿಗಳು ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದರು ಎಂಬುದನ್ನು ತಿಳಿಸಲು ಸಂತಸವಾಗುತ್ತಿದೆ. ಅಂತಹದ್ದೇ ಒಂದು ಕಾರ್ಯಕ್ರಮ ನಿನ್ನೆ ನಡೆಯಿತು.
ಐಟಿ ಕ್ಲಬ್ ಆರಂಭವಾದ ನಂತರ ನಡೆದ ಕೆಲವಾರು ಚಟುವಟಿಕೆಗಳ ಭಾಗವಾಗಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರೋಜೆಕ್ಟನ್ನು ನಿನ್ನೆ ಸಭೆಯಲ್ಲಿ ಪ್ರದರ್ಶಿಸಿದರು. ಶಿಖರಗಳು, ನಮ್ಮ ವಿಶ್ವ ಮತ್ತು ಗ್ರಹಗಳ ಬಗ್ಗೆ ಸಿದ್ಧ ಪಡಿಸಿದ ಪ್ರತ್ಯೇಕ ಪ್ರೋಜೆಕ್ಟ್ ಗಳನ್ನು ಅವರು ಮಂಡಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ ಮಾರ್ಗ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಕಂಪ್ಯೂಟರ್ ಶಿಕ್ಷಕಿ ಶಿವಕುಮಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವತಿ ಸ್ವಾಗತಿಸಿ ಕಿರಣ್ ಮಹೇಶ್ ವಂದಿಸಿದರು. ವೈಶಾಲಿ ಎಂ.ಸಿ ಕಾರ್ಯಕ್ರಮ ನಿರೂಪಿಸಿದರು.

Oct 26, 2010

ಆರನೇ ತರಗತಿಯ ನಿಶಿತಾ

ಕಳೆದ ವರ್ಷ ನಿಶಿತಾ ಬಿಡಿಸಿದ ಚಿತ್ರ ಇದು. ಪುಟಾಣಿಗಳ ಕಲ್ಪನೆ ಕ್ಯಾನ್ವಾಸ್ ಮೇಲೆ ಹೇಗೆ ಮುದ್ದು ಮುದ್ದಾಗಿ ರೂಪುಗೊಳ್ಳುತ್ತದೆಯಲ್ಲವೇ...

Oct 20, 2010

ವಿದ್ಯಾ ದಶಮಿ

 
ನಮ್ಮ ಶಾಲೆಯ ವಿದ್ಯಾ ದಶಮಿ ಕಾರ್ಯಕ್ರಮ ಮೊನ್ನೆ ೧೭.೧೦.೨೦೧೦ ರಂದು ವೇದಮೂರ್ತಿ ಮಹಾದೇವ ಭಟ್ಟ ಕೋಣಮ್ಮೆ ಇವರ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಅವರು ಪುಟಾಣಿಗಳಿಗೆ ‘ಹರಿಶ್ರೀ’ ಬರೆದು ಅಕ್ಷರಾಭ್ಯಾಸ ಮಾಡಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಡಿ.ಪಿ.ಭಟ್, ಅನಂತಕೃಷ್ಣ ಭಟ್ ಹಿಳ್ಳೆಮನೆ, ಶ್ಯಾಮರಾಜ್ ದೊಡ್ಡಮಾಣಿ, ವೇಣುಗೋಪಾಲ ಆರೋಳಿ ಉಪಸ್ಥಿತರಿದ್ದರು.

Oct 7, 2010

ಚಿತ್ರ - ವೈಶಾಖ್

ನಾಲ್ಕನೇ ತರಗತಿಯ ವೈಶಾಖ್ ಬಿಡಿಸಿದ ಚಿತ್ರ ಇದು. ಎಲ್ಲೋ ಕಂಡ ಚಿತ್ರಗಳನ್ನು ಮತ್ತೆ ಎಷ್ಟು ಸುಂದರವಾಗಿ ಬಿಡಿಸುವ ಪ್ರತಿಭೆ ಇದೆ ಪುಟಾಣಿಗಳಲ್ಲಿ ಅಲ್ಲವೇ...

Sep 30, 2010

ರಂಗೋಲಿ

ಇದು ಏಳನೇ ತರಗತಿಯ ಕಾರ್ತಿಕ್ ಬಿಡಿಸಿದ ರಂಗೋಲಿ. ಇಂದು ನಾಡೆಲ್ಲ ಒತ್ತಡದಲ್ಲಿ ಮುಳುಗಿದೆ. ಮಕ್ಕಳು ಬಿಡಿಸಿದ ಈ ಚಿತ್ರ ನಮ್ಮ ಮನಸ್ಸಿಗೆ ತಂಪೆರೆಯಲಿ...

Sep 24, 2010

ಐಟಿ ಕ್ಲಬ್ ಉದ್ಘಾಟನೆ


“ಜಗತ್ತು ಕಂಪ್ಯೂಟರ್ ಬೆಳವಣಿಗೆಯ ಮೂಲಕ ಹೊಸ ಮನ್ವಂತರದ ಕಡೆಗೆ ದಾಪುಗಾಲು ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ಜಗತ್ತಿನ ಜೊತೆಯಲ್ಲಿ ಬೆಳೆಯುವ ದೃಷ್ಟಿಯಿಂದ ಐಟಿ ಕ್ಲಬ್ ಆರಂಭಿಸಲಾಗಿದೆ. ಜಾಗತಿಕ ಬೆಳವಣಿಗೆಗಳ ಕಡೆಗೆ ಗಮನ ನೀಡುತ್ತಾ ಮಾಹಿತಿ ಪೂರ್ಣ ಅಧ್ಯಯನ ನಡೆಸಲು ಐಟಿ ಕ್ಲಬ್ ವಿದ್ಯಾರ್ಥಿಗಳಿಗೆ ನೆರವಾಗಲಿದೆ." ಎಂದು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಭೆ ಮಾರ್ಗ ಅಭಿಪ್ರಾಯಪಟ್ಟರು. ಅವರು ೨೩.೦೯.೨೦೧೦ ಗುರುವಾರ ನಮ್ಮ ಶಾಲಾ ವಿದ್ಯಾರ್ಥಿಗಳ ಐಟಿ ಕ್ಲಬ್ ಉದ್ಘಾಟಿಸಿ ಮಾತನಾಡುತ್ತಿದ್ದರು.

 ಶಾಲಾ ಆಡಳಿತ ಮಂಡಳಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿ ಇಂದಿರಾ.ಎಂ. ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಸುಹಾಸ್ ಜಿ.ಕಾಕತ್ಕರ್ ಸ್ವಾಗತಿಸಿ ನಿಕ್ಷಿತ್ ವಂದಿಸಿದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.

Sep 1, 2010

ಶ್ರೀಕೃಷ್ಣ ಜಯಂತಿ

“ಅಧರ್ಮದ ಮೇರೆ ಮೀರಿದಾಗ ಅವತಾರವೆತ್ತಿದ ಕೃಷ್ಣ ಪರಮಾತ್ಮನು ಧರ್ಮದ ಪುನಸ್ಥಾಪನೆ ಮಾಡಿದನು. ಸತ್ಯ, ಧರ್ಮದಿಂದ ಬಾಳಿ ಬದುಕುವ ಜನರ ಏಳಿಗೆಗಾಗಿ ಶ್ರಮಿಸಿದನು. ದೇವತಾರಾಧನೆ ಮತ್ತು ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ವಿದ್ಯಾಲಯಗಳಲ್ಲಿ ಅಂತಹ ಧಾರ್ಮಿಕ ಮೌಲ್ಯದ ದಿನಗಳನ್ನು ಆಚರಿಸುವುದು ಸ್ತುತ್ಯರ್ಹವಾಗಿದೆ" ಎಂದು ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಬಿ.ರಾವ್ ಹೇಳಿದರು. ಅವರು ೦೧.೦೯.೨೦೧೦ ಬುಧವಾರ ಮುಜುಂಗಾವು ಶ್ರೀಭಾರತೀ ವಿದ್ಯಾಸಂಸ್ಥೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.


ಶ್ರೀಭಾರತೀ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ಹಾಗೂ ಶ್ರೀ ಭಾರತೀ ವಿದ್ಯಾಪೀಠ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಹರಿಶಂಕರ ಶರ್ಮ ಸ್ವಾಗತಿಸಿ ವೈಶಾಲಿ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಮುದ್ದುಕೃಷ್ಣ ವೇಷ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Aug 21, 2010

ಬಾಂಧವ್ಯದ ಸಂಕೇತ ರಕ್ಷಾಬಂಧನ

“ರಕ್ಷಾಬಂಧನ ಅಣ್ಣತಂಗಿಯರಿಗೆ ಪ್ರೀತಿಯ ದಿನ. ತಂಗಿ ಅಣ್ಣನಿಗೆ ನೀಡುವ ರಕ್ಷಾಬಂಧನ ಸಹೋದರತೆಯ ಪರಮ ಸಂಕಲ್ಪವನ್ನು ಅನಾವರಣಗೊಳಿಸುತ್ತದೆ. ಈ ಬಾರಿ ಓಣಂ ಮತ್ತು ರಕ್ಷಾಬಂಧನ ಜೊತೆಯಾಗಿ ಬಂದಿರುವುದು ಹಬ್ಬಗಳ ಆಚರಣೆಯ ಮಹತ್ವವನ್ನು ಹೆಚ್ಚಿಸುತ್ತದೆ. ಕೋಮು ಸೌಹಾರ್ದಕ್ಕೆ ಕಾರಣವಾಗುವ ಓಣಂ ಹಬ್ಬ ನಾಡಿನ ಒಳಿತಿಗೆ ಪ್ರಯತ್ನಿಸುತ್ತದೆ" ಎಂದು ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳ ಪ್ರೌಢಶಾಲಾ ಸಂಸ್ಕೃತ ಶಿಕ್ಷಕ ನಾರಾಯಣ ಜಿ.ಹೆಗಡೆ ಅಭಿಪ್ರಾಯಪಟ್ಟರು. ಅವರು ೨೧.೦೮.೨೦೧೦ ಶನಿವಾರ ನಮ್ಮ ಶಾಲೆಯಲ್ಲಿ ರಕ್ಷಾಬಂಧನ ಮತ್ತು ಓಣಂ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.


ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶ್ರೀ ಭಾರತೀ ವಿದ್ಯಾಪೀಠ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವತಿ ಸ್ವಾಗತಿಸಿ ಕಿರಣ ಮಹೇಶ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

Aug 20, 2010

ಸುರಂಗದ ಕೊನೆಯ ಬೆಳಕು

ಸುರಂಗದ ಕೊನೆಯ ಬೆಳಕು
- ಅನ್ನಪೂರ್ಣಿಮ. ಜೆ.ಎಂ - ಏಳನೇ ತರಗತಿ

ಅಲೆದು ಅಲೆದು ಸುಸ್ತಾಗಿದ್ದಾರೆ
ಆದರೆ ಸಿಗುತ್ತಿಲ್ಲ ಎಲ್ಲೂ ನೆಲೆ
ಅತ್ತು ಕರೆದು ಗೋಗರೆಯುತ್ತಾರೆ
ನೀಡುತ್ತಿಲ್ಲ ಕಣ್ಣೀರಿಗೂ ಬೆಲೆ

ಹುಡುಕುವರು ಇಲ್ಲಿ ಕಾಣದ ಯಾವುದೋ ವಸ್ತುವನ್ನು
ಪರಿಗಣಿಸರು ಇವರಿಗಾಗುವ ಬೇನೆ
ಅಲೆಮಾರಿಗಳಲ್ಲ ಇವರು ಆದರೂ ಅಲೆಯುತ್ತಾರೆ
ಭಿಕ್ಷುಕರೇನಲ್ಲ ಇವರು ಆದರೂ ಬೇಡುತ್ತಾರೆ

ಇವರಿಗೆ ಹಸಿವು ಬಾಯಾರಿಕೆಯ ಪರಿವಿಲ್ಲ
ರಾತ್ರಿ ಹಗಲೆಂಬುದರ ಅರಿವೇ ಇಲ್ಲ
ಎತ್ತಲೋ ನಡೆಯುತ್ತಾರೆ ಎಲ್ಲಿಗೋ ದೃಷ್ಟಿ ನೆಟ್ಟು
ಮಾರ್ನುಡಿಯಲ್ಲಿ ಹಿಡಿದು ಎಳೆದರೂ ಜುಟ್ಟು

ಎತ್ತಲೋ ದೂರ ಹಾರಿದೆ ಇವರ
ನೆಮ್ಮದಿ ಶಾಂತಿಯ ಆ ಪಕ್ಷಿ
ಮೊರೆಯಿಡುತ್ತಾರೆ ಕೋರಿ ದೇವರ
ನಮ್ಮ ವೇದನೆಗೆ ನೀನೇ ಸಾಕ್ಷಿ

ಇನ್ನೂ ಅರಸುತ್ತಲೇ ಇದ್ದಾರೆ
ಕಳೆದ ವಸ್ತುವೊಂದನ್ನು ಹುಡುಕುವಂತೆ
ಮತ್ತೂ ಕಾತರಿಸುತ್ತಲೇ ಇದ್ದಾರೆ
ಸುರಂಗದ ಕೊನೆಯ ಬೆಳಕನ್ನು ಕಾಣುವಂತೆ

Aug 17, 2010

ಸ್ವಾತಂತ್ರ್ಯೋತ್ಸವ


“ದೇಶವು ಸ್ವತಂತ್ರವಾಗಿ ೬೩ ವರ್ಷಗಳು ಕಳೆದಿವೆ. ನಮ್ಮದೇ ಆಡಳಿತ ವ್ಯವಸ್ಥೆ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಯ ನಾಯಕರನ್ನು ಗೌರವಿಸುವುದು ನಮ್ಮ ಕರ್ತವ್ಯ" ಎಂದು ಕುಂಬಳೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಭಿಪ್ರಾಯಪಟ್ಟರು. ಅವರು ಮೊನ್ನೆ ನಮ್ಮ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಆಡಳಿತ ಮಂಡಳಿ ಅಧ್ಯಕ್ಷ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಭಟ್ ಅಮ್ಮಂಕಲ್ಲು, ಮೊಹಮ್ಮದ್ ಪೆಲತ್ತಡ್ಕ, ಕೃಷ್ಣಮೂರ್ತಿ ಪುದುಕೋಳಿ, ಶ್ಯಾಮಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಇಂದಿರಾ ಸ್ವಾಗತಿಸಿ ಈಶ್ವರಚಂದ್ರ ಜೋಯ್ಸ ವಂದಿಸಿದರು. ಪ್ರತಿಮಾ ಡಿ.ಕೆ ಕಾರ್ಯಕ್ರಮ ನಿರೂಪಿಸಿದರು.

Aug 13, 2010

ವೈದ್ಯರೊಂದಿಗೆ ಮಾತುಕತೆ

"ಜೀವನದಲ್ಲಿ ಶಿಸ್ತು ರೂಪಿಸಿಕೊಳ್ಳುವುದರ ಜೊತೆಗೆ ಶುಚಿತ್ವದ ಕಡೆಗಿನ ಗಮನವನ್ನೂ ಬೆಳೆಸಿಕೊಳ್ಳಬೇಕು. ಹಿರಿಯರ ಬಗ್ಗೆ ಗೌರವವನ್ನು ಬೆಳೆಸಿಕೊಂಡು ವಿದ್ಯಾರ್ಥಿ ದೆಸೆಯಲ್ಲಿಯೇ ಶುಚಿತ್ವ, ಆರೋಗ್ಯ ಮತ್ತು ಅಧ್ಯಯನಗಳ ಬಗ್ಗೆ ಶ್ರದ್ಧೆ ವಹಿಸಿದರೆ ಯಶಸ್ಸು ಸಾಧ್ಯ" ಎಂದು ಖ್ಯಾತ ವೈದ್ಯೆ ಡಾ| ಮಾಲತೀ ಪ್ರಕಾಶ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮಲ್ಲಿ ನಡೆದ ವೈದ್ಯರೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ- ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಪ್ರೀತಾ.ಎಂ ಸ್ವಾಗತಿಸಿ ಶಿಕ್ಷಕಿ ಸರಿತಾ ವಂದಿಸಿದರು. ರಮ್ಯಾ.ಎಂ. ಕಾರ್ಯಕ್ರಮ ನಿರೂಪಿಸಿದರು.

Aug 8, 2010

ವೃಂದಾವನ - ಶ್ರೀವತ್ಸ.ಕೆ ಆರನೇ ತರಗತಿ

ಬನ್ನಿರಿ ಬನ್ನಿರಿ ಗೆಳೆಯರೆ

ವೃಂದಾವನದೆಡೆಗೆ ಸಾಗೋಣ

ಇರುಳು ಬಣ್ಣದ ಬೆಳಕಿನ ಬೆಳಗಿದ

ಗೆಲುವಿಗೆ ಚೆಲುವಿಗೆ ಬಾಗೋಣ

ನೀರಿನ ಹರಿವಿನ ಕಡಲಿನ ಹಾಗಿನ

ಭಾರೀ ಜಲಾಶಯ ಒಂದೆಡೆಗೆ

ಬಗೆ ಬಗೆ ಜಾತಿಯ ಮರಗಿಡ ಬಳ್ಳಿಯ

ಹುಲ್ಲಿನ ಹಾಸಿಗೆ ಬೇರೆಡೆಗೆ

ಗಿಡದೆಡೆಯಲಿ ಹಸುರಿನ ಮಡಿಲಲಿ

ಸಾವಿರ ವಿದ್ಯುದ್ದೀಪಗಳು

ಕತ್ತಲ ಮೊತ್ತವ ಹೊಡೆಹೊಡೆದಟ್ಟುವ

ರಂಗಿನ ಬೆಳಕಿನ ತೋಪುಗಳು

Aug 5, 2010

ಒಂದು ಚಿತ್ರ

ಇದು ಎಂಟನೇ ತರಗತಿಯ ಇಂದಿರಾ ಬಿಡಿಸಿದ ಚಿತ್ರ.

Jul 31, 2010

‘ಪ್ರತಿಭಾ ಭಾರತೀ’ ತಿಂಗಳ ಕಾರ್ಯಕ್ರಮ

“ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜ್ಯೋತಿಯಾಗು ಜಗಕೆಲ್ಲ ಎಂಬ ಮಾತು ನಮಗೆಲ್ಲ ದಾರಿದೀಪವಾಗಬೇಕು. ಪುಟಾಣಿಗಳು ದೀಪಗಳಂತೆ, ಅದು ಶಾಲೆಯಲ್ಲಿ ಬೆಳಗುತ್ತದೆ. ಜೀವನ ಮೌಲ್ಯಗಳನ್ನು ಅಭಿವ್ಯಕ್ತಿಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ.” ಎಂದು ಇಚ್ಲಂಪಾಡಿ ಹಿರಿಯ ಬುನಾದಿ ಶಾಲಾ ಮುಖ್ಯೋಪಾಧ್ಯಾಯ ಪಿ. ನರಹರಿ ಅಭಿಪ್ರಾಯಪಟ್ಟರು. ಅವರು ದಿನಾಂಕ ೩೦.೦೭.೨೦೧೦ ಶುಕ್ರವಾರ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಆರನೇ ತರಗತಿ ವಿದ್ಯಾರ್ಥಿ ನವನೀತ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್.ಎಂ, ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಿರಣ ಮಹೇಶ ಸ್ವಾಗತಿಸಿ, ಸುಹಾಸ್ ಜಿ.ಕಾಕತ್ಕರ್ ವಂದಿಸಿದರು. ಕೃಷ್ಣಕಿರಣ ಮತ್ತು ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.

Jul 25, 2010

ಪ್ರತಿಭಾ ಭಾರತೀ ಉದ್ಘಾಟನೆ...

ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ವಿಕಾಸಕ್ಕಾಗಿ ನಮ್ಮಲ್ಲಿ ರೂಪುಗೊಂಡಿರುವ ವೇದಿಕೆ ‘ಪ್ರತಿಭಾ ಭಾರತೀ’. ಪ್ರತಿಭಾ ಭಾರತೀ ವಾರ್ಷಿಕ ಉದ್ಘಾಟನೆಯನ್ನು ಈ ಬಾರಿ ನೆರವೇರಿಸಿದವರು ಹಿರಿಯ ಚಿತ್ರಕಲಾ ಅಧ್ಯಾಪಕ ಶ್ರೀ ರಾಮಕೃಷ್ಣ ಹೆಬ್ಬಾರ್. ಧನ್ಯವಾದಗಳು.
ಕಾರ್ಯಕ್ರಮದ ಬಹುಪಾಲು ಕರ್ತವ್ಯವನ್ನೂ ವಿದ್ಯಾರ್ಥಿಗಳೇ ನಿರ್ವಹಿಸುವುದು ಪ್ರತಿಭಾ ಭಾರತೀ ವಿಶೇಷ.

Jul 22, 2010

ವನಜೀವನ ಯಜ್ಞ

“ಎಳವೆಯಲ್ಲೇ ಪರಿಸರ ಕುರಿತ ಕಾಳಜಿ ಜಾಗೃತಗೊಳ್ಳಲು ವನಮಹೋತ್ಸವ ಕಾರ್ಯಕ್ರಮ ಉತ್ತಮ ತರಬೇತಿ ನೀಡುತ್ತದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ, ಅರಣ್ಯ ಸಂರಕ್ಷಣೆಯ ಆಶಯಗಳು ಮೂಡುತ್ತವೆ. ಈ ನಿಟ್ಟಿನಲ್ಲಿ ಗೋಕರ್ಣ ಮಂಡಲಾಧೀಶ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಂಕಲ್ಪ ನಮಗೆಲ್ಲ ಉತ್ತಮ ಹಾದಿಯನ್ನು ತೋರಿಸಿದೆ." ಎಂದು ಪುತ್ತಿಗೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಜಯಂತ ಪಾಟಾಳಿ ಅಭಿಪ್ರಾಯಪಟ್ಟರು. ಅವರು ನಮ್ಮ ಶಾಲೆಯಲ್ಲಿ ೨೧.೦೭.೨೦೧೦ ಬುಧವಾರದಂದು ವನಜೀವನ ಯಜ್ಞ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಭೆ-ಮಾರ್ಗ ಮತ್ತು ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವತಿ ಸ್ವಾಗತಿಸಿ ಜೀವಿತ್ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

Jul 21, 2010

ಎಯ್ಯೂರಿನ ಭತ್ತದ ಗದ್ದೆಗೆ ಭೇಟಿ

ಕ್ಷೇತ್ರ ಭೇಟಿಯ ಉದ್ದೇಶದಲ್ಲಿ ಮೊನ್ನೆ ಸೋಮವಾರ ಎಡನಾಡು ಗ್ರಾಮದ ಕೃಷಿಕ ಎಯ್ಯೂರು ಚಂದ್ರಶೇಖರ ಭಟ್ಟರ ಭತ್ತದ ಗದ್ದೆಗೆ ಭೇಟಿ ನೀಡಿ ಬಂದೆವು. ವಿದ್ಯಾರ್ಥಿಗಳು ಭತ್ತದ ಗದ್ದೆಗೆ ಇಳಿದು ನಾಟಿ ಕಾರ್ಯದ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಸ್ವಯಂ ಭತ್ತದ ಗಿಡಗಳನ್ನು ನೆಟ್ಟು ಹೊಸ ಅನುಭೂತಿಯನ್ನು ಪಡೆದುಕೊಂಡರು.

Jun 2, 2010

ಶಾಲಾ ಪ್ರವೇಶೋತ್ಸವ


ನಮ್ಮ ಶಾಲಾ ಪ್ರವೇಶೋತ್ಸವವನ್ನು ೦೧.೦೬.೨೦೧೦ ಮಂಗಳವಾರದಂದು ಪುತ್ತಿಗೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಜಯಂತ ಪಾಟಾಳಿ ಉದ್ಘಾಟಿಸಿದರು. ಆಡಳಿತ ಮಂಡಳಿಯ ಮುಖ್ಯಸ್ಥ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಧರ್ಮತ್ತಡ್ಕ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಉಳುವಾನ ರಾಮಚಂದ್ರ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಶಾಲಾ ಮುಖ್ಯೋಪಾಧ್ಯಾಯ ಎಮ್.ಶ್ಯಾಮ ಭಟ್, ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವೈಶಾಲಿ ಸ್ವಾಗತಿಸಿ ಅನೂಷಾ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

ಗುರುನಮನ

ಶ್ರೀಮತಿ ಚಂದ್ರಪ್ರಭಾ ಬಿ. ರಾವ್ ನಮ್ಮ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಬೇಸಿಗೆ ತರಬೇತಿ ನೀಡಿದ್ದಾರೆ. ೨೫.೦೫.೨೦೧೦ ರಂದು ತರಬೇತಿ ಶಿಬಿರದ ಕೊನೆಯ ದಿನದ ಸಂದರ್ಭದಲ್ಲಿ ನಮ್ಮೆಲ್ಲರ ಪ್ರೀತಿಯ ಮೇಡಂಗೆ ಗೌರವ ಸಲ್ಲಿಸಿದ್ದೇವೆ. ಈ ಸಂದರ್ಭದಲ್ಲಿ ಕಥೆಗಾರ್ತಿ ಕೃಷ್ಣವೇಣಿ ಕಿದೂರು, ಲಕ್ಷ್ಮಿ. ವಿ. ಭಟ್, ಆಡಳಿತ ಮಂಡಳಿಯ ಶ್ಯಾಮರಾಜ್. ಡಿ.ಕೆ ಉಪಸ್ಥಿತರಿದ್ದರು. ಸೀರೆ ಹೊದೆಸಿ ನಮ್ಮೆಲ್ಲರ ಪರವಾಗಿ ಗೌರವಿಸಿದವರು ಶಾಲಾ ಮುಖ್ಯೋಪಾಧ್ಯಾಯ ಎಂ. ಶ್ಯಾಮ ಭಟ್, ದರ್ಬೆ ಮಾರ್ಗ.

ಆಂಗ್ಲ ಭಾಷಾ ತರಬೇತಿ ಆರಂಭ

ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿದ್ದ ಶ್ರೀಮತಿ ಚಂದ್ರಪ್ರಭಾ ಬಿ. ರಾವ್ ಪ್ರಸ್ತುತ ಮುಂಬೈ ನಿವಾಸಿಯಾಗಿದ್ದಾರೆ. ನಮ್ಮ ವಿದ್ಯಾರ್ಥಿಗಳ ಮೇಲಿನ ಪ್ರೀತಿಯಿಂದ ಬೇಸಿಗೆ ರಜಾಕಾಲದಲ್ಲಿ ನಮ್ಮ ಸಂಸ್ಥೆಗೆ ಬಂದು ವಿದ್ಯಾರ್ಥಿಗಳಿಗೆ ವಿಶೇಷ ಆಂಗ್ಲಭಾಷಾ ತರಬೇತಿ ನಡೆಸಿಕೊಟ್ಟಿದ್ದಾರೆ. ಇದು ಶಿಬಿರದ ಉದ್ಘಾಟನೆಯ ನೋಟ. ಈ ಸಂದರ್ಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಆಡಳಿತ ಮಂಡಳಿಯ ಶ್ಯಾಮರಾಜ್. ಡಿ. ಕೆ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್.ಎಂ, ದರ್ಬೆ ಮಾರ್ಗ ಉಪಸ್ಥಿತರಿದ್ದರು.

May 3, 2010

ಕವನ - ಹೀಗ್ಯಾಕೆ

- ಶ್ರೀಸುಧಾ. ಎಂ
೭ನೇ ತರಗತಿ


ಬಸ್ಸೆಂಬ ವಾಹನವೆ
ನಿಸ್ಸೀಮ ನೀದಿನವು
ಉತ್ಸಾಹದಿಂದೇಕೆ ಓಡುವುದು ಹೇಳು

ಕೇಳಿದರೆ ಬಾಲಕರೆ
ಹೇಳುವೆನು ಉತ್ತರವ
ಅಲ್ಲಲ್ಲಿ ನಿಲ್ಲುತ ಸಾಗುವುದೇ ಬಾಳು

ಉರುಳುತಿವೆ ಗಾಲಿಗಳು
ಬರುತಲಿದೆ ದನಿ ಬಹಳ
ತಿರುಗುತಿದೆ ಎಡೆ ಬಿಡದೆ
ನೀ ಇರುಳ ತನಕ

ಜನರನು ಹೊತ್ತೊಯ್ದು
ಮನವನ್ನು ಮುದಗೊಳಿಸಿ
ದಿನ ದಿನವ ದೂಡುವೆನು
ಹರುಷದಲಿ ನಾನು

Apr 15, 2010

ವಿಷು ಹಬ್ಬದ ಶುಭಾಶಯಗಳು.

ಇದು ಸೌರಮಾನ ಯುಗಾದಿಯ ವಿಶೇಷ, ಪರಶುರಾಮನ ಸೃಷ್ಟಿಯ ನಾಡಿನಲ್ಲಿ ವಿಷು ಜನಸಾಮಾನ್ಯರ ಹಬ್ಬ. ಇಂದು ವಿಷು, ಈ ವಿಷು ನಮಗೆಲ್ಲ ಸುಖ, ಶಾಂತಿ, ನೆಮ್ಮದಿ ತರಲಿ.

Apr 11, 2010

ಕಾಮನಬಿಲ್ಲು

 - ಕವಿತಾ. ಕೆ
 ೭ನೇ ತರಗತಿ
ಬಿಲ್ಲೆ ಬಿಲ್ಲೆ
ಕಾಮನಬಿಲ್ಲೆ
ಬಿಲ್ಲೆ ಬಿಲ್ಲೆ
ಕಾಮನಬಿಲ್ಲೆ

ಅಕಾಶದ ಅಧಿಪತಿ ನೀನು
ನಮ್ಮ ಕಣ್ಣ ತೆರೆಸುವೆ ನೀನು
ಕಾಮನಬಿಲ್ಲೆ
ಕಾಮನಬಿಲ್ಲೆ

ನೇರಳೆ ನೀಲಿ ಹಸಿರು
ಕೇಸರಿ ಹಳದಿ ಕೆಂಪು
ಕಾಮನಬಿಲ್ಲೆ
ಕಾಮನಬಿಲ್ಲೆ

ಬಣ್ಣ ಬಣ್ಣದ ರಂಗನು ಚೆಲ್ಲಿ
ಮೋಡದ ಬಾಗಿಲ ತೆರೆಸುವನಲ್ಲಿ
ಕಾಮನಬಿಲ್ಲೆ
ಕಾಮನಬಿಲ್ಲೆ

Apr 4, 2010

‘ಪ್ರತಿಭಾ ಭಾರತೀ’ ವಾರ್ಷಿಕ ಸಮಾರೋಪ


“ಸನಾತನ ಸಂಸ್ಕೃತಿಗಳು ಆಧುನಿಕತೆಯ ಸ್ಪರ್ಶಕ್ಕೆ ಸಿಲುಕಿರುವ ಈ ದಿನಗಳಲ್ಲಿ ನಮ್ಮ ಭಾರತೀಯ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಶಾಲೆಗಳ ಅಗತ್ಯ ಬಹಳವಾಗಿದೆ. ಮುಜುಂಗಾವಿನ ಪುಣ್ಯಭೂಮಿಯಲ್ಲಿ ತಲೆಯೆತ್ತಿ ವಿದ್ಯಾದಾನದ ಮಹತ್ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗೆ ಉತ್ತಮ ಭವಿಷ್ಯವಿದೆ" ಎಂದು ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷ ಥೋಮಸ್ ಡಿ’ ಸೋಜ ಹೇಳಿದರು. ಅವರು ೩೧.೦೩.೨೦೧೦ ಬುಧವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಂಸ್ಥೆ ‘ಪ್ರತಿಭಾ ಭಾರತೀ’ಯ ವಾರ್ಷಿಕ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಶಾಲಾ ವಿದ್ಯಾರ್ಥಿನಿ ಇಂದಿರಾ.ಎಂ ಅಧ್ಯಕ್ಷತೆ ವಹಿಸಿದ್ದಳು. ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮಭಟ್ ದರ್ಭೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕವಿತಾ.ಕೆ ವರದಿ ವಾಚಿಸಿದರು.

ವಿದ್ಯಾರ್ಥಿನಿ ಅಶ್ವತಿ ಸ್ವಾಗತಿಸಿ ಅನುಷಾ ವಂದಿಸಿದರು. ಅರ್ಪಿತಾ ಮತ್ತು ವೈಶಾಲಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಅಧ್ಯಯನ ವರ್ಷದಲ್ಲಿ ನೂರು ಶೇಕಡಾ ಹಾಜರಾತಿ ಹೊಂದಿದ ೧೮ ಮಂದಿ ವಿದ್ಯಾರ್ಥಿನಿಯರಿಗೆ ಅಗ್ರೇಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Mar 29, 2010

ಕಥೆ - ಕಾರ್ಗಾಲದ ಒಂದು ದಿನ

- ಪೂಜಾ. ಬಿ
೫ನೇ ತರಗತಿ
ರಾಜು ಆ ದಿನ ಬೇಗನೆ ಎದ್ದನು. ಕಿಟಕಿಯಿಂದ ಹೊರಗೆ ನೋಡಿದನು. ಅಯ್ಯೋ, ಹೇಗಪ್ಪಾ ಶಲೆಗೆ ಹೋಗುವುದು ಎಂದು ಚಿಂತಿಸಿದನು. ಅವನು ಅವನ ದಿನನಿತ್ಯದ ಕೆಲಸಗಳನ್ನು ಮಾಡಿದನು. ಆ ಹೊತ್ತಿಗೆ ತಂಗಿ ರಮ್ಯಾ ಶಾಲೆಗೆ ಹೊರಟು ನಿಂತಿದ್ದಳು. ಧಾರಾಕಾರ ಮಳೆಯಲ್ಲಿಯೇ ಅವರಿಬ್ಬರು ಶಾಲೆಗೆ ಹೋದರು. ನಡೆಯುತ್ತಾ ನಡೆಯುತ್ತಾ ಮುಂದೆ ಸಾಗಿದರು. ಮಳೆಯಲ್ಲಿ ಆಟ ಆಡುತ್ತಾ ಮುಂದೆ ಹೋಗಿ ತೋಡಿನ ಬದಿ ತಲಪಿದರು.

ತೋಡಿನಲ್ಲಿ ತುಂಬಾ ಕೆಂಪು ನೀರಿತ್ತು. ನೀರಿನಲ್ಲಿ ಏನೋ ತೇಲುತ್ತಿರುವುದನ್ನು ರಾಜು ಕಂಡನು. ಕುತೂಹಲದಿಂದ ಬಗ್ಗಿ ನೋಡಿದನು. ಕೂಡಲೇ ಕಾಲು ಜಾರಿ ಬಿದ್ದನು. ಆಗ ಅವನ ತಂಗಿ ಅಯ್ಯೋ ಎಂದು ಜೋರಾಗಿ ಕೂಗಿದಳು. ಆಗ ಗದ್ದೆ ಕೆಲಸ ಮಾಡುವವರು ಒಡಿ ಬಂದರು. ಆಗಲೂ ರಮ್ಯಾ ಜೋರಾಗಿ ಕೂಗುತ್ತಿದ್ದಳು. ಅಣ್ಣ ನೀರಿಗೆ ಬಿದ್ದ ಕಾಪಾಡಿ ಎಂದು ಹೇಳಿದಳು. ಆಗ ಕೆಲಸದವರು ನೀರಿಗೆ ಹಾರಿ ಈಜಿಕೊಂಡು ಹೋದರು.

ಸ್ವಲ್ಪ ದೂರದಲ್ಲಿ ತೋಡಿನ ಬದಿಯಲ್ಲಿ ರಾಜುವನ್ನು ಕಂಡರು. ಅವನು ಒಂದು ಮರದ ಬೇರನ್ನು ಗಟ್ಟಿಯಾಗಿ ಹಿಡಿದಿದ್ದನು. ಕೆಲಸಗಾರರು ಅವನನ್ನು ಎತ್ತಿ ಮೇಲೆ ತಂದರು. ಅಲ್ಲಿಗೆ ಓಡಿ ಬಂದ ರಮ್ಯಾಳಿಗೆ ಸಂತೋಷವಾಯಿತು. ಅಣ್ಣನನ್ನು ರಕ್ಷಿಸಿದ ಕೆಲಸಗಾರರಿಗೆ ಧನ್ಯವಾದ ಹೇಳಿದಳು. ಮನೆಗೆ ಹಿಂತಿರುಗಿ ಉಡುಪು ಬದಲಾಯಿಸಿ ಶಾಲೆಗೆ ಹೋದರು. ಆಗಲೇ ಶಾಲೆ ಪ್ರಾರಂಭವಾಗಿತ್ತು.

ತಡವಾದ ಕಾರಣವನ್ನು ಅಧ್ಯಾಪಿಕೆ ಕೇಳಿದರು. ರಾಜು ದಾರಿಯಲ್ಲಿ ಬರುವಾಗ ನಡೆದ ಘಟನೆಯನ್ನು ವಿವರಿಸಿದನು. ಅದನ್ನು ಕೇಳಿ ಎಲ್ಲರಿಗೂ ಆಶ್ಚರ್ಯ, ಸಂತೋಷವಾಯಿತು. ಆಗ ಅಧ್ಯಾಪಿಕೆಯು “ನೋಡಿ ಮಕ್ಕಳೇ, ನೀವು ಶಾಲೆಗೆ ಬರುವಾಗ ನೀರಿನಲ್ಲಿ ಆಟವಾಡದೆ ನೇರವಾಗಿ ಬರಬೇಕು. ತೋಡಿನ ಬದಿಯಲ್ಲಿ ಜಾಗರೂಕತೆಯಿಂದ ನಡೆಯಬೇಕು” ಎಂದು ಹಿತವಚನವನ್ನು ಹೇಳಿದರು.

Mar 24, 2010

ಗುಲಾಬಿ ಹೂ

-ಅಕ್ಷತ. ಎಂ
೬ನೇ ತರಗತಿ
ಹೂವೇ ಹೂವೇ ಚಂದದ ಹೂವೇ
ಬಣ್ಣಬಣ್ಣದ ಗುಲಾಬಿ ಹೂವೇ
ನನ್ನ ಇಷ್ಟದ ಗುಲಾಬಿ ಹೂವೇ
ದೇವರಿಗಿಡುವ ಗುಲಾಬಿ ಹೂವೇ


ಅಂದದಚೆಂದದ ಗುಲಾಬಿ ಹೂವೇ
ಎಲ್ಲರೂ ಮುಡಿಯುವ ಗುಲಾಬಿ ಹೂವೇ
ನನ್ನ ಇಷ್ಟದ ಗುಲಾಬಿ ಹೂವೇ
ಕೆಂಪು ಬಣ್ಣದ ಗುಲಾಬಿ ಹೂವೇ

ಹಸಿರು ಎಲೆಗಳ ಗುಲಾಬಿ ಹೂವೇ
ಹೂವೇ,
ನನ್ನ ಇಷ್ಟದ ಗುಲಾಬಿ ಹೂವೇ

Mar 20, 2010

ಪ್ರಧಾನಾಚಾರ್ಯರ ಮಾತು

‘ವಿಕಾಸ’ ಜೀವನದಲ್ಲಿ ನಡೆಯುವ ಒಂದು ಪ್ರಕ್ರಿಯೆ. ಈ ವಿಕಾಸಕ್ಕೆ ಸೂಕ್ತ ವಾತಾವರಣ ಮತ್ತು ಅವಕಾಶಗಳು ಬೇಕು. ಈ ವಿಕಾಸವು ಮಾನಸಿಕವಾಗಿ, ಬೌದ್ಧಿಕವಾಗಿ, ಶಾರೀರಿಕವಾಗಿ, ನೈತಿಕವಾಗಿ ನಡೆದಾಗ ಮಾತ್ರ ಒಬ್ಬ ಪರಿಪೂರ್ಣ ವ್ಯಕ್ತಿಯ ನಿರ್ಮಾಣ ಸಾಧ್ಯ. ವಿಕಾಸವು ಬಾಲ್ಯದಿಂದಲೇ ಆರಂಭವಾಗುವುದು. ಇದಕ್ಕೆ ಪೂರಕ ವಾತಾವರಣ ಮನೆ, ಶಾಲೆ, ಸಮಾಜದಲ್ಲಿ ಸಿಗಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ವಿಕಾಸಕ್ಕೆ ತಕ್ಕುದಾದ ಪ್ರೇರಣೆ ಅವಶ್ಯ.


‘ಪ್ರತಿಭೆ’ ಎಂಬುದು ಪ್ರತಿಯೊಂದು ಮಗುವಿನಲ್ಲೂ ಅಡಗಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸ್ವಾಭಿಮಾನವಿದೆ, ಬುದ್ಧಿಶಕ್ತಿಯಿದೆ, ಪ್ರತಿಭೆ ಇದ್ದೇ ಇದೆ. ‘ಯಾ ವಿದ್ಯಾ ಸಾ ವಿಮುಕ್ತಯೇ’ ಎಂಬ ಋಷಿವಾಣಿಯಂತೆ ಮಾನವನ ಪ್ರತಿಭೆ ಅರಳುವಂತೆ ಮಾಡಿ ಅವನ ಸರ್ವಾಂಗೀಣ ಉನ್ನತಿಗೆ ಸಹಾಯಕವಾಗುವ ಸಾಧನವೇ ವಿದ್ಯೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ತಾನು ಮುಂದೆ ಏನಾಗಬೇಕೆಂಬ ನಿರ್ದಿಷ್ಟ ಗುರಿಹೊಂದಿ ಬಾಲ್ಯದಿಂದಲೇ ಆ ಗುರಿಗಳತ್ತ ಕಾರ್ಯೋನ್ಮುಖವಾಗಬೇಕು. ನಿರ್ದಿಷ್ಟ ಗುರಿಗಳೊಂದಿಗೆ ಮುನ್ನುಗ್ಗುವ ಛಲ, ಧೈರ್ಯ, ಸಾಹಸ, ನಿರಂತರ ಪರಿಶ್ರಮಗಳನ್ನು ಬೆಳೆಸಿಕೊಂಡು ಜೀವನ ನಡೆಸಬೇಕು. ಮುಂದೆ ಗುರಿ, ಹಿಂದೆ ಗುರು. ಗುರುಗಳ ಮಾರ್ಗದರ್ಶನದಂತೆ ಸಂದರ್ಭೋಚಿತವಾಗಿ ಕಾರ್ಯ ನಡೆಸಬೇಕು. ಉತ್ಸಾಹ ಎಲ್ಲಿದೆಯೋ ಅಲ್ಲಿ ಉದಾಸೀನತೆ ಇರುವುದಿಲ್ಲ. ಅದು ಜೀವನದ ಲವಲವಿಕೆಯ ಬುಗ್ಗೆಯನ್ನು ಚಿಮ್ಮಿಸುತ್ತದೆ. ಉತ್ಸಾಹ ಜೀವನದ ಮೂಲ ಸ್ಫೂರ್ತಿ ಸೆಲೆ.


ಶಾಲೆಯೆಂಬುದು ವಿದ್ಯಾರ್ಥಿಯನ್ನು ಜೀವನಕ್ಕೆ ಅಣಿಮಾಡುವ ತಾಣವಾಗಬೇಕಾದರೆ ಪಠ್ಯೇತರ ಚಟುವಟಿಕೆಗಳು ಅಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ, ಕಲ್ಪನೆಗಳಿಗೆ, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಮೌಲಿಕ ಲೇಖನಗಳಿಗೆ ಮೂರ್ತರೂಪ ನೀಡುವ ‘ಪ್ರತಿಭಾ ಭಾರತೀ’ ಭಿತ್ತಿಪತ್ರಿಕೆ ಮತ್ತು ಇದೀಗ ಬ್ಲಾಗ್ ಪುಟಗಳನ್ನು ತೆರೆದಿದ್ದೇವೆ. ನಿಮ್ಮ ಸಲಹೆ ಸೂಚನೆಗಳನ್ನು ಸದಾ ಸ್ವೀಕರಿಸುತ್ತೇವೆ. ಪ್ರೀತಿ ಇರಲಿ, ಪ್ರೇರಣೆಯೂ..


ವಿನಯಪೂರ್ವಕ,
ನಾನು
ಶ್ಯಾಮ ಭಟ್. ಎಂ

Mar 17, 2010

‘ಮುಜುಂಗಾವು’ ಬ್ಲಾಗ್ ಉದ್ಘಾಟನೆ

ನಮ್ಮ ಪುಟ್ಟ ಪ್ರಯತ್ನಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರಿಂದ ನಿನ್ನೆ ೧೬.೦೩.೨೦೧೦ ಮಂಗಳವಾರ ಅನುಗ್ರಹಪೂರ್ವಕ ಮಂತ್ರಾಕ್ಷತೆ, ಬ್ಲಾಗ್ ಲೋಕಾರ್ಪಣೆ. ನಮ್ಮ ವಿದ್ಯಾರ್ಥಿಗಳು ರೂಪಿಸಿದ ಈ ಬ್ಲಾಗನ್ನು ಶ್ರೀಮದ್ಜಗದ್ಗುರು ಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಂಗಳವಾರ ಬೆಂಗಳೂರು ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳು ಬರೆದ ಕಥೆ, ಕವನ, ಚಿತ್ರ ಇತ್ಯಾದಿ ಸೃಜನಶೀಲ ಬರಹಗಳನ್ನು ಶಾಲಾ ವರದಿಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಈ ಬ್ಲಾಗ್ ಯಶಸ್ಸಿನ ಪಥದಲ್ಲಿ ನಡೆಯಲಿ ಎಂದು ಶ್ರೀ ಗುರುಗಳು ಈ ಸಂದರ್ಭದಲ್ಲಿ ಶುಭಹಾರೈಸಿದರು.


ಬ್ಲಾಗ್ ಲೋಕಾರ್ಪಣೆಯ ಈ ಸಮಾರಂಭದಲ್ಲಿ ಶ್ರೀಮಠದ ಮಾಧ್ಯಮ ವಿಭಾಗದ ರಾಧಾಕೃಷ್ಣ ಭಡ್ತಿ, ಮೋಹನ ಹೆಗಡೆ, ಶ್ರೀಮಠದ ಆಡಳಿತ ಕಾರ್ಯದರ್ಶಿ ಕೃಷ್ಣಪ್ರಸಾದ ಎಡಪ್ಪಾಡಿ, ಶ್ರೀಗುರುಗಳ ಆಪ್ತಕಾರ್ಯದರ್ಶಿ ಜೆಡ್ಡು ತಿರುಮಲೇಶ್ವರ ಪ್ರಸಾದ್, ಎಂ.ಎನ್.ಭಟ್ ಮದ್ಗುಣಿ, ಸಿ.ಎಚ್.ಎಸ್ ಭಟ್, ಶಾರದಾ ಜಯಗೋವಿಂದ, ಸದಾಶಿವ ಮೋಂತಿಮಾರ್ ಮತ್ತಿತರರು ಉಪಸ್ಥಿತರಿದ್ದರು.

Mar 12, 2010

ಸ್ಕಾಲರ್‌ ಶಿಪ್ - ಶ್ರೀವಿದ್ಯಾ.ಎಂ.

ಕೇರಳ ರಾಜ್ಯಮಟ್ಟದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ಆಯೋಜಿಸಲಾದ ಎಸ್.ಎಂ.ಎಸ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಎ+ ಗ್ರೇಡ್ ಪಡೆದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಏಳನೇ ತರಗತಿ ವಿದ್ಯಾರ್ಥಿನಿ ಶ್ರೀವಿದ್ಯಾ.ಎಂ. ನಗದು ಪುರಸ್ಕಾರಕ್ಕೆ ಅರ್ಹತೆ ಪಡೆದಿದ್ದಾಳೆ. ಈಕೆ ಕುಕ್ಕುಪ್ಪುಳಿ ಮಹಾಬಲೇಶ್ವರ ಭಟ್ ಮತ್ತು ಆಶಾಪಾರ್ವತಿ ಇವರ ಪುತ್ರಿ.

ಸ್ಕಾಲರ್‌ಶಿಪ್ - ವೈಶಾಲಿ

ಕೇರಳ ರಾಜ್ಯಮಟ್ಟದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ಆಯೋಜಿಸಲಾದ ಎಸ್.ಎಂ.ಎಸ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಎ+ ಗ್ರೇಡ್ ಪಡೆದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಏಳನೇ ತರಗತಿ ವಿದ್ಯಾರ್ಥಿನಿ ವೈಶಾಲಿ ನಗದು ಪುರಸ್ಕಾರಕ್ಕೆ ಅರ್ಹತೆ ಪಡೆದಿದ್ದಾಳೆ. ಈಕೆ ಮುಳಿಯಡ್ಕ ದಿ ಎಂ.ಸಿ.ನಾರಾಯಣ ಮತ್ತು ವಿದ್ಯಾ ಇವರ ಪುತ್ರಿ.

ಸಂಸ್ಕೃತದಿಂದ ಸುಸಂಸ್ಕೃತಿ: ಶ್ರೀ ಶ್ರೀ ರಾಘವೇಶ್ವರ ಭಾರತೀ

“ ನಮ್ಮ ದೇಶ ಸಂಸ್ಕೃತ ಮತ್ತು ಸಂಸ್ಕೃತಿಯಿಂದ ಬೆಳೆಯಬೇಕಾಗಿದೆ. ಭಾರತದ ಹೆಚ್ಚಿನೆಲ್ಲಾ ರಾಜ್ಯಭಾಷೆಗಳು ಸಂಸ್ಕೃತದ ರೂಪಾಂತರವಾಗಿದೆ. ಪ್ರಸ್ತುತ ನಾವು ಸಂಸ್ಕೃತವನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಹತ್ತು ವರ್ಷಗಳ ಹಿಂದೆ ನಾವು ಬಿತ್ತಿದ ಬೀಜ ಈಗ ಕಲ್ಪವೃಕ್ಷವಾಗಿ ಬೆಳೆದಿದೆ. ವಿದ್ಯಾಸಂಸ್ಥೆಯ ಮೂಲಕ ಸಾವಿರಾರು ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಾರೆ. ನವೀನ, ಪ್ರಾಚೀನಗಳ ಸಂಗಮವಾಗಿರುವ ಸಂಸ್ಕೃತ, ಪುರಾತನ ಜ್ಯೋತಿಷ, ವಾಸ್ತು ಆಧುನಿಕ ಶಿಕ್ಷಣವನ್ನು ಹೊಂದಿರುವ ಭೂತ ಭವಿಷ್ಯಗಳ ಸಂಗಮ ಸಂಸ್ಥೆಯಾಗಿದೆ. ಭಾರತ ಅಮೂಲ್ಯ ರತ್ನಗಳನ್ನು ಹುದುಗಿಸಿಕೊಂಡಿರುವ ಪುಣ್ಯಭೂಮಿ, ಆದರೆ ಮುತ್ತುರತ್ನಗಳನ್ನು ಗುರುತಿಸುವವರಿಲ್ಲದಾಗಿದ್ದಾರೆ, ವಿನಾಶದಂಚಿನಲ್ಲಿರುವ ಸಂಸ್ಕೃತ, ಸಂಸ್ಕೃತಿ, ಜ್ಯೋತಿಷ ಇತ್ಯಾದಿಗಳನ್ನು ನಾವು ಮಕ್ಕಳಿಗೆ ತಿಳಿಸಬೇಕಾಗಿದೆ.”ಎಂದು ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಆಶೀರ್ವದಿಸಿದರು. 
ಅವರು ೨೭.೦೨.೨೦೧೦ ಶನಿವಾರ ಮುಜುಂಗಾವು ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯದ ದಶಮಾನೋತ್ಸವ ಮತ್ತು ಶ್ರೀ ಭಾರತೀ ವಿದ್ಯಾಪೀಠದ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು.

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಚ್.ಕುಞ್ಞಂಬು, ಭಾರತೀಯ ಜನತಾ ಪಕ್ಷದ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ನಿವೃತ್ತ ಪ್ರಾಚಾರ್ಯ ಖಂಡಿಗೆ ಶಾಮ ಭಟ್ಟ, ಮಾನ್ಯ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ ಮಾನ್ಯ, ಶಿವಶಂಕರ ಕಿದೂರು, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಡಿಡಿಇ ವಿಭಾಗದ ನಿರ್ದೇಶಕ ಸಿ.ಎಚ್.ಪಿ. ಸತ್ಯನಾರಾಯಣ, ಆರಿಕ್ಕಾಡಿ ಶ್ರೀ ವೀರಾಂಜನೇಯ ಹಾಗೂ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾಕಾಂತ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜ್ಯೋತಿಷಿ ಕುಂಬಳೆ ಗೋಪಾಲಕೃಷ್ಣ ಅಡಿಗ, ಖಂಡಿಗೆ ಶಾಮ ಭಟ್, ವೇಮೂ ಪಳ್ಳತ್ತಡ್ಕ ಪರಮೇಶ್ವರ ಭಟ್, ಪಾಲಕ್ಕಾಡ್ ವೆಂಕಟೇಶ್ವರ ಭಟ್, ಹಿರಣ್ಯ ವೆಂಕಟೇಶ್ವರ ಭಟ್, ಕಾನ ಸುಬ್ರಾಯ ಭಟ್, ಮಿತ್ತೂರು ಕೇಶವ ಭಟ್, ಉಡುಪುಮೂಲೆ ಗೋಪಾಲಕೃಷ್ಣ ಭಟ್ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ರೂಪಿಸಿದ ಹಸ್ತಪ್ರತಿ ‘ಬೆಳಕು’ ಮತ್ತು ‘ಬೆಳಗು’ ಇವುಗಳನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಜ್ಞಾನದಾಯಿನೀ ಸಭಾ ಪರೀಕ್ಷೆಗಳಲ್ಲಿ, ವಿದ್ಯಾಲಯ ಚಟುವಟಿಕೆಗಳಲ್ಲಿ ಶ್ರೇಷ್ಟ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೇಶವಪ್ರಸಾದ ನಾಣಿತ್ತಿಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಗಳ ಪ್ರಧಾನ ಆಚಾರ್ಯರು ವರದಿ ವಾಚಿಸಿದರು. ಡಾಡಿ.ಪಿ.ಭಟ್ ಸಂಸ್ಥೆಗಳ ಪರಿಚಯವನ್ನು ಮಾಡಿದರು. ಶಿಕ್ಷಕಿ ಪಿ.ಶಿವಕುಮಾರಿ ಸಂದೇಶ ವಾಚಿಸಿದರು. ವಿದ್ಯಾರ್ಥಿ ಶ್ರೀಹರಿಶಂಕರ ಶರ್ಮಾ ಸ್ವಾಗತಿಸಿ ಈಶ್ವರಚಂದ್ರ ಜೋಯ್ಸ ವಂದಿಸಿದರು. ಮುರಳಿಕೃಷ್ಣ.ಟಿ ಕಾರ್ಯಕ್ರಮ ನಿರೂಪಿಸಿದರು.

ದಶಮಾನೋತ್ಸವ ಸ್ಮರಣ ಸಂಚಿಕೆ ‘ಜ್ಞಾನ ಭಾನು’ ಮತ್ತು ನಕ್ಷತ್ರ, ರಾಶಿ, ಗ್ರಹವನಗಳ ಸಾಮಾನ್ಯ ಪರಿಚಯವನ್ನು ಹೊತ್ತ ‘ಋಕ್ಷವನ’ ಸಿಡಿಗಳನ್ನು ಶ್ರೀಗುರುಗಳು ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ‘ರೇಣುಕಾ ಸ್ವಯಂವರ ಮತ್ತು ಭಾರ್ಗವ ವಿಜಯ’ ಯಕ್ಷಗಾನ ಜರಗಿತು.

೨೬.೦೨.೨೦೧೦ ರಂದು ೨೦೦೯ನೇ ಸಾಲಿನ ದಿಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ ಪ್ರದಾನ ಮಾಡಲಾಯಿತು. ಗೋವು ಮತ್ತು ಸಂಸ್ಕೃತ ಎಂಬ ವಿಚಾರದಲ್ಲಿ ಸದಾಶಿವ ಮೋಂತಿಮಾರ್, ವಿದ್ಯೆ ಮತ್ತು ಸಮಾಜ ಎಂಬ ವಿಚಾರದಲ್ಲಿ ಹಿರಣ್ಯ ವೆಂಕಟೇಶ್ವರ ಭಟ್ ಜ್ಯೋತಿಷ ಉಪನ್ಯಾಸಗಳನ್ನು ನೀಡಿದರು. ಗೋಷ್ಟಿಗಳಲ್ಲಿ ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ ವಿರೂಪಾಕ್ಷ ಜಡ್ಡೀಪಾಲ ಹಾಗೂ ನವದೆಹಲಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವಿದ್ವಾನ್ ವೆಂಕಟೇಶಮೂರ್ತಿ ಉಪಸ್ಥಿತರಿದ್ದರು.

೨೬.೦೨.೨೦೧೦ ರಂದು ಬೆಳಗ್ಗೆ ಗಣಪತಿ ಹವನ, ರುದ್ರಪಾರಾಯಣ, ನವಗ್ರಹ ಹವನ, ಚಂಡಿಕಾ ಹವನದೊಂದಿಗೆ ಎರಡು ದಿನಗಳ ಕಾರ್ಯಕ್ರಮ ಆರಂಭಗೊಂಡಿತು. ಖಂಡಿಗೆ ಶಾಮ ಭಟ್ ಉದ್ಘಾಟಿಸಿದರು. ಖ್ಯಾತ ನ್ಯಾಯವಾದಿ ಐ.ವಿ.ಭಟ್ ಅಧ್ಯಕ್ಷತೆ ವಹಿಸಿದರು. ಉದ್ಯಮಿ ವಸಂತ ಪೈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನದಾಸ್, ನ್ಯಾಯವಾದಿ ಎಂ.ನಾರಾಯಣ ಭಟ್, ಅಂಬಾರು ಶ್ರೀಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಮೀನಾರು ಪದ್ಮನಾಭ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದರು. ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಎಂ.ಶಾಮ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಸುಪ್ರೀತಾ.ಎಂ ಸ್ವಾಗತಿಸಿ ಜ್ಯೋತಿ.ಕೆ ವಂದಿಸಿದರು. ಸಂಜಯ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.

Mar 2, 2010

ಗಡಿನಾಡ ಮಡಿಲಲ್ಲಿ ‘ಭಾರತೀ’ಯ ಕಂಪು

ಸುತ್ತಲೆಲ್ಲ ಮಲಗಿದ ಹಚ್ಚ ಹಸಿರು, ಬೀಸಿ ಬರುವ ಕಡಲ ಗಾಳಿ, ವಿಶಾಲವಾಗಿ ಹರಡಿದ ಮುರಕಲ್ಲಿನ ಬಯಲು, ಮಧ್ಯೆ ಸರೋವರ, ಪ್ರಶಾಂತ ಪರಿಸರದ ನಡುವೆ ಧಾರ್ಮಿಕ, ಆಧ್ಯಾತ್ಮಿಕ, ಮಾನಸಿಕ ಸಂತಸಗಳನ್ನು ಹೆಚ್ಚಿಸುವ ಮುಜುಂಗಾವು, ಮುಚುಕುಂದ ಮಹರ್ಷಿಯ ತಪೋಭೂಮಿ. ಧರ್ಮ ರಕ್ಷಕನೆಂದೇ ಹೆಸರು ಪಡೆದ ಪಾರ್ಥಸಾರಥಿ ಶ್ರೀಕೃಷ್ಣ ಆರಾಧ್ಯ ಮೂರುತಿಯಾಗಿರುವ ಈ ಭೂಮಿ ದೇವಾಲಯ, ನೇತ್ರಾಲಯ ಮತ್ತು ವಿದ್ಯಾಲಯಗಳ ಸಂಗಮ ಸ್ಥಳ. ದೇವಾಲಯದ ಸನಿಹದಲ್ಲಿರುವ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯವು ಜಗತ್ತಿನ ಕಣ್ಣು ತೆರೆಸುವಲ್ಲಿ ತನ್ನ ಮಹತ್ವದ ಪ್ರಯತ್ನಗಳನ್ನು ಮಾಡುತ್ತಿದೆ.

ಜಾತಿ ಮತ ವರ್ಗಗಳ ಬೇಧವಿಲ್ಲದೆ ನೇತ್ರ ಚಿಕಿತ್ಸೆಯನ್ನು ನೀಡುವ ಈ ನೇತ್ರ ಚಿಕಿತ್ಸಾಲಯವು ಉನ್ಮೇಷ: ಎನ್ನುವ ಸಂಸ್ಕೃತ ಪದಕ್ಕೆ ಅನ್ವರ್ಥವಾಗಿದೆ. ಸಂಸ್ಕೃತ ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ. ಜನಜೀವನವನ್ನು ಆಧ್ಯಾತ್ಮದೊಂದಿಗೆ ಬೆರೆಸಿದ ಭಾಷೆ. ಆದರೆ... ಪಾಶ್ಚಾತ್ಯ ಸಂಸ್ಕೃತಿಯ ದುಷ್ಪರಿಣಾಮಗಳ ಪ್ರವಾಹದಲ್ಲಿ ನಮ್ಮ ಸನಾತನ ಸಂಸ್ಕೃತಿಯ ಮೌಲ್ಯ ಆದರ್ಶಗಳು ನಿಧಾನವಾಗಿ ಮರೆಯಾಗುತ್ತಿವೆ. ಭಾರತೀಯರ ಜೀವನಾಡಿಯಾಗಿರುವ ಸಂಸ್ಕೃತ ಮತ್ತು ಸಂಸ್ಕೃತಿಗಳ ಮೇಲೆ ಆಧುನಿಕ ವಿಚಾರಧಾರೆಗಳ ಆಕ್ರಮಣ ತೀವ್ರವಾಗಿ ನಡೆಯುತ್ತಿದೆ. ಆದರೂ ಸನಾತನ ಸಂಸ್ಕೃತಿ ಮತ್ತು ಸಂಸ್ಕೃತದ ಉಳಿವಿಗಾಗಿ ನಮ್ಮೆಲ್ಲರ ಪ್ರಯತ್ನಗಳು ಮುಂದೆ ಸಾಗುತ್ತಿವೆ.
ಸಂಸ್ಕೃತ ವಿದ್ಯಾಭ್ಯಾಸ ಇಂದಿನ ಆಧುನಿಕ ಯುಗಕ್ಕೆ ಹೇಳಿದ್ದಲ್ಲ ಎನ್ನುವ ಅಭಿಪ್ರಾಯ ಈಗಲೂ ಹಲವರ ಮನಸ್ಸಿನಲ್ಲಿದೆ. ಇಂತಹ ಅನಾನುಕೂಲಕರ ಪರಿಸ್ಥಿತಿಯಲ್ಲೂ ನಮ್ಮ ಸಂಸ್ಕೃತಿಗೆ ಉತ್ತಮ ಭವಿಷ್ಯವಿದೆ ಎನ್ನುವುದನ್ನು ಸಾಬೀತುಪಡಿಸಲು ಕಾಸರಗೋಡಿನಿಂದ ಹದಿನೈದು ಕಿಲೋ ಮೀಟರು ದೂರದಲ್ಲಿ ಅಂದರೆ ಕುಂಬಳೆಯ ಸನಿಹದ ಮುಜುಂಗಾವಿನಲ್ಲಿ ಶ್ರೀ ಭಾರತೀ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ಪ್ರಾಥಮಿಕ ಹಂತದಿಂದಲೇ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಮತ್ತು ಜೀವನ ಮೌಲ್ಯಗಳನ್ನು ಉದ್ದೀಪನಗೊಳಿಸುವ ದೃಷ್ಟಿಯಿಂದ ವಿಶಿಷ್ಟ ರೀತಿಯ ಕನ್ನಡ ಮಾಧ್ಯಮ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವಿನಲ್ಲಿದೆ. ಸಂಸ್ಕೃತ - ಕನ್ನಡ ಮಾಧ್ಯಮ ಶಿಕ್ಷಣ ರಂಗದಲ್ಲಿ ಈ ಸಂಸ್ಥೆ ಉತ್ತಮ ಪ್ರಗತಿಯನ್ನು ಸಾಧಿಸಿ ತೋರಿಸುತ್ತಿವೆ. ಪಂಚಮುಖಿ ಶಿಕ್ಷಣಕ್ಕೆ ಒತ್ತು ನೀಡಿ ಇಲ್ಲಿನ ವಿದ್ಯಾರ್ಥಿಗಳು ಬಹುಮುಖಿಯಾಗಿ ಅಭಿವೃದ್ಧಿಗೊಳ್ಳಬೇಕು ಎಂಬ ಜನಮಾನಸದ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಶ್ರೀ ಭಾರತೀ ವಿದ್ಯಾಪೀಠವು ಆಂಗ್ಲ ಮಾಧ್ಯಮ ಶಿಕ್ಷಣದ ಕಡೆಗೆ ಮುಖಮಾಡಿ ನಿಂತಿದೆ. ಶೈಕ್ಷಣಿಕ ವಿಕಾಸದ ಈ ಮಜಲಿಗೆ ಹಿರಿಯ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಎನ್ನುವ ವಿಚಾರವು ಹೊಸ ಗರಿಯನ್ನು ಮೂಡಿಸಿದೆ. ಆಧುನಿಕ ಶಿಕ್ಷಣ ವಿಧಾನದೊಂದಿಗೆ ಬಹುಬೇಗ ಹೊಂದಿಕೊಳ್ಳುವ ಉದ್ದೇಶದಿಂದ ಪ್ರಸ್ತುತ ಎಂಟನೇ ತರಗತಿಯ ತನಕ ಇಲ್ಲಿ ಕೇಂದ್ರೀಯ (ಸಿಬಿಎಸ್‌ಇ) ಪಾಠ್ಯ ಪದ್ಧತಿಯ ಪ್ರಕಾರ ಐದನೇ ತರಗತಿಯಿಂದ ಇಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಲಾಗುತ್ತಿದೆ.

ಮಕ್ಕಳ ವಿದ್ಯಾಭ್ಯಾಸವು ಮನೆಯಿಂದಲೇ ಆರಂಭವಾಗುತ್ತದೆ. ಅಲ್ಲಿನ ಉತ್ತಮ ಸಂಸ್ಕಾರದಲ್ಲಿ ಬೆಳೆದ ಮಕ್ಕಳು ಜೀವನದಲ್ಲಿ ಉನ್ನತಿಯನ್ನು ಪಡೆಯುತ್ತಾರೆ. ಪ್ರಾಥಮಿಕ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕ ವಾತಾವರಣವನ್ನು ಕಟ್ಟಿ ಕೊಡುತ್ತವೆ. ಈ ನಿಟ್ಟಿನಲ್ಲಿ ಶ್ರೀ ಭಾರತೀ ವಿದ್ಯಾ ಪೀಠವು ವಿದ್ಯಾರ್ಥಿಗಳ ಧನಾತ್ಮಕ ಬೆಳವಣಿಗೆಗೆ ಸಹಾಯ ಮಾಡುತ್ತಿದೆ. ಯೋಗ, ಸಂಗೀತ, ನೃತ್ಯ, ಸಾಹಿತ್ಯ, ಭಜನೆ, ಚಿತ್ರಕಲೆ, ರಾಮಾಯಣ ಮಹಾಭಾರತಗಳ ಅಧ್ಯಯನದ ಕಡೆಗೆ ಎರಡೂ ವಿದ್ಯಾಸಂಸ್ಥೆಗಳಲ್ಲಿ ವಿಶೇಷ ಗಮನವನ್ನು ನೀಡಲಾಗುತ್ತಿದೆ. ಸಂಸ್ಕೃತ - ಜ್ಯೋತಿಷ್ಯ ಸಂಶೋಧನೆಗಳಿಗೆ ಸೂಕ್ತ ಅವಕಾಶ ಮತ್ತು ಮಾರ್ಗದರ್ಶನಗಳನ್ನೂ ನೀಡಲಾಗುತ್ತಿದೆ. ಶಾರೀರಿಕವಾಗಿ ಇಲ್ಲಿನ ವಿದ್ಯಾರ್ಥಿಗಳು ಸಕ್ಷಮರಾಗಿರಲು ದೈಹಿಕ ಅಭ್ಯಾಸಗಳನ್ನೂ ಕ್ರೀಡಾ ಕೂಟಗಳನ್ನೂ ಆಯೋಜಿಸಲಾಗುತ್ತಿದೆ.
ವಿದ್ಯಾಲಯವು ಶಿಶುಮಂದಿರದಿಂದಲೇ ಕನ್ನಡ ಮತ್ತು ಆಂಗ್ಲ ಭಾಷೆಯ ಪರಿಚಯವನ್ನು ಮಾಡಿಕೊಡುತ್ತಿದ್ದು ಎರಡನೇ ತರಗತಿಯಿಂದ ಸಂಸ್ಕೃತ, ಮೂರನೇ ತರಗತಿಯಿಂದ ಹಿಂದಿ ಭಾಷೆಯನ್ನು ಕಲಿಸಲಾಗುತ್ತಿದೆ. ಸಂಸ್ಕೃತ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಧಾರ್ಮಿಕ ಕಾರ್ಯಕ್ರಮಗಳನ್ನೂ ಉತ್ಸವಗಳನ್ನೂ ಇಲ್ಲಿ ಆಚರಿಸಲಾಗುತ್ತಿದೆ. ಶಾರದೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಸ್ವಾತಂತ್ರ್ಯೋತ್ಸವ, ಗುರುಪೂರ್ಣಿಮಾ, ಮಕ್ಕಳ ದಿನ, ವಾರ್ಷಿಕೋತ್ಸವ, ನಕ್ಷತ್ರ ವನ, ವನ ಮಹೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕಾಗಿ ರಜಾದಿನಗಳಲ್ಲಿ ಮತ್ತು ಬೇಸಿಗೆ ರಜೆಯಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ಬೌದ್ಧಿಕ ವಿಕಾಸ ಶಿಬಿರವನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳೇ ನಿರೂಪಿಸಿ, ನಿರ್ವಹಿಸುವ ‘ಪ್ರತಿಭಾ ಭಾರತೀ’ ಸಭಾಕಾರ್ಯಕ್ರಮಗಳು ಇಲ್ಲಿನ ಇನ್ನೊಂದು ವಿಶೇಷ. ಎಲ್ಲ ಸಂಘಸಂಸ್ಥೆಗಳ ಕೇಂದ್ರವಾಗಿ ಪ್ರಬೋಧನ, ವಿಕಸನ, ಚಿಂತನದ ಧ್ಯೇಯಗಳನ್ನು ಹೊತ್ತ ‘ಜ್ಞಾನ ದೀಪ್ತಿ’ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಪೂರಕವಾಗುವ ನಿಟ್ಟಿನಲ್ಲಿ ಭಿತ್ತಿ ಪತ್ರಿಕೆ ಮತ್ತು ‘ಬೆಳಕು’ ಹಸ್ತ ಪ್ರತಿ ಸಂಚಿಕೆಗಳನ್ನು ಪುಟಾಣಿಗಳು ಬಹಳ ಆಸ್ಥೆಯಿಂದ ರೂಪಿಸುತ್ತಿದ್ದಾರೆ.
ವಿದ್ಯಾರ್ಥಿಗಳಲ್ಲಿ ಸಾಹಸಿಕ ಮನೋಭಾವವನ್ನು ಬೆಳೆಸಿ ಅವರಲ್ಲಿ ಶಾರೀರಿಕ ಮತ್ತು ಮಾನಸಿಕ ವಿಕಾಸವನ್ನು ನಿರೂಪಿಸಲು ನೆರವಾಗುವ ಸ್ಕೌಟ್ ಆಂದೋಲನವೂ ಕೂಡಾ ಇಲ್ಲಿ ಸಕ್ರಿಯವಾಗಿ ನಡೆಯುತ್ತಿದೆ . ಸ್ಕೌಟ್ ಆಂದೋಲನದ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಬೇಕೂರಿನಲ್ಲಿ ಜರಗಿದ ಎರಡು ದಿನಗಳ ಕಬ್ ಬುಲ್‌ಬುಲ್ ಉತ್ಸವವದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಹಗ್ಗದ ಮೇಲೆ ನಡಿಗೆ, ಏಣಿ ಏರುವುದು, ಮೊಸಳೆ ಕುಂಡ, ತೂಗುಯ್ಯಾಲೆ... ಹೀಗೆ ವಿವಿಧ ಸಾಹಸಿಕ ಚಟುವಟಿಕೆಗಳು, ಸ್ಪರ್ಧೆಗಳು, ಶಿಬಿರಾಗ್ನಿ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಶ್ರೀ ಭಾರತೀ ವಿದ್ಯಾಪೀಠವು ಪ್ರಥಮ ಸ್ಥಾನವನ್ನು ಗಳಿಸಿದೆ.

ವಿದ್ಯಾರ್ಥಿಗಳ ಜ್ಞಾನಾಭಿವೃದ್ದಿಗೆ ನೆರವಾಗಲು ಸುಮಾರು ಹತ್ತು ಸಾವಿರ ಪುಸ್ತಕಗಳನ್ನು ಒಳಗೊಂಡ ಶ್ರೀ ಭಾರತೀ ಗ್ರಂಥಾಲಯವು ಮುಜುಂಗಾವಿನಲ್ಲಿದೆ. ಇಲ್ಲಿ ಅತ್ಯಪೂರ್ವ ತಾಳೆಗರಿ ಗ್ರಂಥಗಳನ್ನೂ ಸಂಗ್ರಹಿಸಿಡಲಾಗಿದೆ. ಆಧುನಿಕ ವಿದ್ಯಾಭ್ಯಾಸಕ್ಕೆ ಪೂರಕವಾಗಲು ಕಂಪ್ಯೂಟರ್ ಪ್ರಯೋಗಾಲಯವನ್ನೂ ಸಜ್ಜುಗೊಳಿಸಲಾಗಿದೆ. ಅಂದರೆ ಶಿಶುಮಂದಿರದಿಂದ ಎಂಟನೇ ತರಗತಿಯ ತನಕ ಪಂಚಮುಖೀ ಶಿಕ್ಷಣದ ಅಂಗವಾಗಿ ನೈತಿಕ, ಯೋಗ, ಸಂಗೀತ, ನೃತ್ಯ, ಶಾರೀರಿಕ ವಿಷಯಗಳನ್ನು ಇಲ್ಲಿ ಅನುಷ್ಠಾನಗೊಳಿಸಲಾಗಿದೆ.

೨೦೦೯-೧೦ನೇ ಸಾಲಿನಲ್ಲಿ ಇಲ್ಲಿ ೧೫೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಅಂಗವಾಗಿರುವ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಓಫ್ ಓಪನ್ ಸ್ಕೂಲಿನ ನೇರ ಅಂಗೀಕಾರವನ್ನು ಪಡೆದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಜತೆಗೆ ಮುಜುಂಗಾವಿನ ವಿದ್ಯಾಪೀಠವೂ ಕಾರ್ಯಾಚರಿಸುತ್ತಿದೆ. ಇನ್ನಷ್ಟು ಕಟ್ಟಡ, ಕಂಪ್ಯೂಟರ್ ಪ್ರಯೋಗಾಲಯ, ಸುಸಜ್ಜಿತ ಗ್ರಂಥಾಲಯಗಳ ಸಹಿತ ಕೆಲವು ಪೂರಕ ವ್ಯವಸ್ಥೆಗಳ ಅಭಿವೃದ್ಧಿಯೂ ಆಗಬೇಕಾಗಿದೆ.
ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸೇವಾ ಯೋಜನೆಯಲ್ಲಿ ಒಳಪಟ್ಟ ಈ ವಿದ್ಯಾಸಂಸ್ಥೆಗಳ ಮೇಲ್ನೋಟವನ್ನು ಸ್ವತಃ ಶ್ರೀಗಳವರೇ ಕೈಗೊಳ್ಳುತ್ತಿದ್ದಾರೆ. ಪ್ರಧಾನ ಆಚಾರ್ಯ ಶ್ಯಾಮ ಭಟ್ ದರ್ಭೆ-ಮಾರ್ಗ ಮತ್ತು ಡಾ ಡಿ.ಪಿ.ಭಟ್ ಅಧ್ಯಕ್ಷತೆಯಲ್ಲಿ ಸಕ್ರಿಯವಾದ ಆಡಳಿತ ಸಮಿತಿ ವಿದ್ಯಾಲಯಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿವೆ.