Mar 20, 2010

ಪ್ರಧಾನಾಚಾರ್ಯರ ಮಾತು

‘ವಿಕಾಸ’ ಜೀವನದಲ್ಲಿ ನಡೆಯುವ ಒಂದು ಪ್ರಕ್ರಿಯೆ. ಈ ವಿಕಾಸಕ್ಕೆ ಸೂಕ್ತ ವಾತಾವರಣ ಮತ್ತು ಅವಕಾಶಗಳು ಬೇಕು. ಈ ವಿಕಾಸವು ಮಾನಸಿಕವಾಗಿ, ಬೌದ್ಧಿಕವಾಗಿ, ಶಾರೀರಿಕವಾಗಿ, ನೈತಿಕವಾಗಿ ನಡೆದಾಗ ಮಾತ್ರ ಒಬ್ಬ ಪರಿಪೂರ್ಣ ವ್ಯಕ್ತಿಯ ನಿರ್ಮಾಣ ಸಾಧ್ಯ. ವಿಕಾಸವು ಬಾಲ್ಯದಿಂದಲೇ ಆರಂಭವಾಗುವುದು. ಇದಕ್ಕೆ ಪೂರಕ ವಾತಾವರಣ ಮನೆ, ಶಾಲೆ, ಸಮಾಜದಲ್ಲಿ ಸಿಗಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ವಿಕಾಸಕ್ಕೆ ತಕ್ಕುದಾದ ಪ್ರೇರಣೆ ಅವಶ್ಯ.


‘ಪ್ರತಿಭೆ’ ಎಂಬುದು ಪ್ರತಿಯೊಂದು ಮಗುವಿನಲ್ಲೂ ಅಡಗಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸ್ವಾಭಿಮಾನವಿದೆ, ಬುದ್ಧಿಶಕ್ತಿಯಿದೆ, ಪ್ರತಿಭೆ ಇದ್ದೇ ಇದೆ. ‘ಯಾ ವಿದ್ಯಾ ಸಾ ವಿಮುಕ್ತಯೇ’ ಎಂಬ ಋಷಿವಾಣಿಯಂತೆ ಮಾನವನ ಪ್ರತಿಭೆ ಅರಳುವಂತೆ ಮಾಡಿ ಅವನ ಸರ್ವಾಂಗೀಣ ಉನ್ನತಿಗೆ ಸಹಾಯಕವಾಗುವ ಸಾಧನವೇ ವಿದ್ಯೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ತಾನು ಮುಂದೆ ಏನಾಗಬೇಕೆಂಬ ನಿರ್ದಿಷ್ಟ ಗುರಿಹೊಂದಿ ಬಾಲ್ಯದಿಂದಲೇ ಆ ಗುರಿಗಳತ್ತ ಕಾರ್ಯೋನ್ಮುಖವಾಗಬೇಕು. ನಿರ್ದಿಷ್ಟ ಗುರಿಗಳೊಂದಿಗೆ ಮುನ್ನುಗ್ಗುವ ಛಲ, ಧೈರ್ಯ, ಸಾಹಸ, ನಿರಂತರ ಪರಿಶ್ರಮಗಳನ್ನು ಬೆಳೆಸಿಕೊಂಡು ಜೀವನ ನಡೆಸಬೇಕು. ಮುಂದೆ ಗುರಿ, ಹಿಂದೆ ಗುರು. ಗುರುಗಳ ಮಾರ್ಗದರ್ಶನದಂತೆ ಸಂದರ್ಭೋಚಿತವಾಗಿ ಕಾರ್ಯ ನಡೆಸಬೇಕು. ಉತ್ಸಾಹ ಎಲ್ಲಿದೆಯೋ ಅಲ್ಲಿ ಉದಾಸೀನತೆ ಇರುವುದಿಲ್ಲ. ಅದು ಜೀವನದ ಲವಲವಿಕೆಯ ಬುಗ್ಗೆಯನ್ನು ಚಿಮ್ಮಿಸುತ್ತದೆ. ಉತ್ಸಾಹ ಜೀವನದ ಮೂಲ ಸ್ಫೂರ್ತಿ ಸೆಲೆ.


ಶಾಲೆಯೆಂಬುದು ವಿದ್ಯಾರ್ಥಿಯನ್ನು ಜೀವನಕ್ಕೆ ಅಣಿಮಾಡುವ ತಾಣವಾಗಬೇಕಾದರೆ ಪಠ್ಯೇತರ ಚಟುವಟಿಕೆಗಳು ಅಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ, ಕಲ್ಪನೆಗಳಿಗೆ, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಮೌಲಿಕ ಲೇಖನಗಳಿಗೆ ಮೂರ್ತರೂಪ ನೀಡುವ ‘ಪ್ರತಿಭಾ ಭಾರತೀ’ ಭಿತ್ತಿಪತ್ರಿಕೆ ಮತ್ತು ಇದೀಗ ಬ್ಲಾಗ್ ಪುಟಗಳನ್ನು ತೆರೆದಿದ್ದೇವೆ. ನಿಮ್ಮ ಸಲಹೆ ಸೂಚನೆಗಳನ್ನು ಸದಾ ಸ್ವೀಕರಿಸುತ್ತೇವೆ. ಪ್ರೀತಿ ಇರಲಿ, ಪ್ರೇರಣೆಯೂ..


ವಿನಯಪೂರ್ವಕ,
ನಾನು
ಶ್ಯಾಮ ಭಟ್. ಎಂ

1 comment:

  1. ಬಹಳ ಸಂತೋಷದ ವಿಷಯ. ಓದಿ ಖುಷಿ ಆಯಿತು. ಮಕ್ಕಳಲ್ಲಿನ ಬರವಣಿಗೆಯ ಆಸಕ್ತಿಯನ್ನು ಹೆಚಿಸಲು blogಗಳು ಖಂಡಿತಾ ಸಹಾಯ ಮಾಡುತ್ತವೆ. ನಿಮ್ಮ ಪ್ರಯತ್ನ ಸ್ವಾಗತಾರ್ಹ. ಶುಭವಾಗಲಿ.

    line spacing ಸ್ವಲ್ಪ ಹೆಚಿದ್ದರೆ ಚೆಂದ.

    ನಿಮ್ಮಯ,
    ಕೃಷ್ಣ.

    ReplyDelete