Aug 21, 2010

ಬಾಂಧವ್ಯದ ಸಂಕೇತ ರಕ್ಷಾಬಂಧನ

“ರಕ್ಷಾಬಂಧನ ಅಣ್ಣತಂಗಿಯರಿಗೆ ಪ್ರೀತಿಯ ದಿನ. ತಂಗಿ ಅಣ್ಣನಿಗೆ ನೀಡುವ ರಕ್ಷಾಬಂಧನ ಸಹೋದರತೆಯ ಪರಮ ಸಂಕಲ್ಪವನ್ನು ಅನಾವರಣಗೊಳಿಸುತ್ತದೆ. ಈ ಬಾರಿ ಓಣಂ ಮತ್ತು ರಕ್ಷಾಬಂಧನ ಜೊತೆಯಾಗಿ ಬಂದಿರುವುದು ಹಬ್ಬಗಳ ಆಚರಣೆಯ ಮಹತ್ವವನ್ನು ಹೆಚ್ಚಿಸುತ್ತದೆ. ಕೋಮು ಸೌಹಾರ್ದಕ್ಕೆ ಕಾರಣವಾಗುವ ಓಣಂ ಹಬ್ಬ ನಾಡಿನ ಒಳಿತಿಗೆ ಪ್ರಯತ್ನಿಸುತ್ತದೆ" ಎಂದು ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳ ಪ್ರೌಢಶಾಲಾ ಸಂಸ್ಕೃತ ಶಿಕ್ಷಕ ನಾರಾಯಣ ಜಿ.ಹೆಗಡೆ ಅಭಿಪ್ರಾಯಪಟ್ಟರು. ಅವರು ೨೧.೦೮.೨೦೧೦ ಶನಿವಾರ ನಮ್ಮ ಶಾಲೆಯಲ್ಲಿ ರಕ್ಷಾಬಂಧನ ಮತ್ತು ಓಣಂ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.


ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶ್ರೀ ಭಾರತೀ ವಿದ್ಯಾಪೀಠ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವತಿ ಸ್ವಾಗತಿಸಿ ಕಿರಣ ಮಹೇಶ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

Aug 20, 2010

ಸುರಂಗದ ಕೊನೆಯ ಬೆಳಕು

ಸುರಂಗದ ಕೊನೆಯ ಬೆಳಕು
- ಅನ್ನಪೂರ್ಣಿಮ. ಜೆ.ಎಂ - ಏಳನೇ ತರಗತಿ

ಅಲೆದು ಅಲೆದು ಸುಸ್ತಾಗಿದ್ದಾರೆ
ಆದರೆ ಸಿಗುತ್ತಿಲ್ಲ ಎಲ್ಲೂ ನೆಲೆ
ಅತ್ತು ಕರೆದು ಗೋಗರೆಯುತ್ತಾರೆ
ನೀಡುತ್ತಿಲ್ಲ ಕಣ್ಣೀರಿಗೂ ಬೆಲೆ

ಹುಡುಕುವರು ಇಲ್ಲಿ ಕಾಣದ ಯಾವುದೋ ವಸ್ತುವನ್ನು
ಪರಿಗಣಿಸರು ಇವರಿಗಾಗುವ ಬೇನೆ
ಅಲೆಮಾರಿಗಳಲ್ಲ ಇವರು ಆದರೂ ಅಲೆಯುತ್ತಾರೆ
ಭಿಕ್ಷುಕರೇನಲ್ಲ ಇವರು ಆದರೂ ಬೇಡುತ್ತಾರೆ

ಇವರಿಗೆ ಹಸಿವು ಬಾಯಾರಿಕೆಯ ಪರಿವಿಲ್ಲ
ರಾತ್ರಿ ಹಗಲೆಂಬುದರ ಅರಿವೇ ಇಲ್ಲ
ಎತ್ತಲೋ ನಡೆಯುತ್ತಾರೆ ಎಲ್ಲಿಗೋ ದೃಷ್ಟಿ ನೆಟ್ಟು
ಮಾರ್ನುಡಿಯಲ್ಲಿ ಹಿಡಿದು ಎಳೆದರೂ ಜುಟ್ಟು

ಎತ್ತಲೋ ದೂರ ಹಾರಿದೆ ಇವರ
ನೆಮ್ಮದಿ ಶಾಂತಿಯ ಆ ಪಕ್ಷಿ
ಮೊರೆಯಿಡುತ್ತಾರೆ ಕೋರಿ ದೇವರ
ನಮ್ಮ ವೇದನೆಗೆ ನೀನೇ ಸಾಕ್ಷಿ

ಇನ್ನೂ ಅರಸುತ್ತಲೇ ಇದ್ದಾರೆ
ಕಳೆದ ವಸ್ತುವೊಂದನ್ನು ಹುಡುಕುವಂತೆ
ಮತ್ತೂ ಕಾತರಿಸುತ್ತಲೇ ಇದ್ದಾರೆ
ಸುರಂಗದ ಕೊನೆಯ ಬೆಳಕನ್ನು ಕಾಣುವಂತೆ

Aug 17, 2010

ಸ್ವಾತಂತ್ರ್ಯೋತ್ಸವ


“ದೇಶವು ಸ್ವತಂತ್ರವಾಗಿ ೬೩ ವರ್ಷಗಳು ಕಳೆದಿವೆ. ನಮ್ಮದೇ ಆಡಳಿತ ವ್ಯವಸ್ಥೆ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಯ ನಾಯಕರನ್ನು ಗೌರವಿಸುವುದು ನಮ್ಮ ಕರ್ತವ್ಯ" ಎಂದು ಕುಂಬಳೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಭಿಪ್ರಾಯಪಟ್ಟರು. ಅವರು ಮೊನ್ನೆ ನಮ್ಮ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಆಡಳಿತ ಮಂಡಳಿ ಅಧ್ಯಕ್ಷ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಭಟ್ ಅಮ್ಮಂಕಲ್ಲು, ಮೊಹಮ್ಮದ್ ಪೆಲತ್ತಡ್ಕ, ಕೃಷ್ಣಮೂರ್ತಿ ಪುದುಕೋಳಿ, ಶ್ಯಾಮಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಇಂದಿರಾ ಸ್ವಾಗತಿಸಿ ಈಶ್ವರಚಂದ್ರ ಜೋಯ್ಸ ವಂದಿಸಿದರು. ಪ್ರತಿಮಾ ಡಿ.ಕೆ ಕಾರ್ಯಕ್ರಮ ನಿರೂಪಿಸಿದರು.

Aug 13, 2010

ವೈದ್ಯರೊಂದಿಗೆ ಮಾತುಕತೆ

"ಜೀವನದಲ್ಲಿ ಶಿಸ್ತು ರೂಪಿಸಿಕೊಳ್ಳುವುದರ ಜೊತೆಗೆ ಶುಚಿತ್ವದ ಕಡೆಗಿನ ಗಮನವನ್ನೂ ಬೆಳೆಸಿಕೊಳ್ಳಬೇಕು. ಹಿರಿಯರ ಬಗ್ಗೆ ಗೌರವವನ್ನು ಬೆಳೆಸಿಕೊಂಡು ವಿದ್ಯಾರ್ಥಿ ದೆಸೆಯಲ್ಲಿಯೇ ಶುಚಿತ್ವ, ಆರೋಗ್ಯ ಮತ್ತು ಅಧ್ಯಯನಗಳ ಬಗ್ಗೆ ಶ್ರದ್ಧೆ ವಹಿಸಿದರೆ ಯಶಸ್ಸು ಸಾಧ್ಯ" ಎಂದು ಖ್ಯಾತ ವೈದ್ಯೆ ಡಾ| ಮಾಲತೀ ಪ್ರಕಾಶ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮಲ್ಲಿ ನಡೆದ ವೈದ್ಯರೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ- ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಪ್ರೀತಾ.ಎಂ ಸ್ವಾಗತಿಸಿ ಶಿಕ್ಷಕಿ ಸರಿತಾ ವಂದಿಸಿದರು. ರಮ್ಯಾ.ಎಂ. ಕಾರ್ಯಕ್ರಮ ನಿರೂಪಿಸಿದರು.

Aug 8, 2010

ವೃಂದಾವನ - ಶ್ರೀವತ್ಸ.ಕೆ ಆರನೇ ತರಗತಿ

ಬನ್ನಿರಿ ಬನ್ನಿರಿ ಗೆಳೆಯರೆ

ವೃಂದಾವನದೆಡೆಗೆ ಸಾಗೋಣ

ಇರುಳು ಬಣ್ಣದ ಬೆಳಕಿನ ಬೆಳಗಿದ

ಗೆಲುವಿಗೆ ಚೆಲುವಿಗೆ ಬಾಗೋಣ

ನೀರಿನ ಹರಿವಿನ ಕಡಲಿನ ಹಾಗಿನ

ಭಾರೀ ಜಲಾಶಯ ಒಂದೆಡೆಗೆ

ಬಗೆ ಬಗೆ ಜಾತಿಯ ಮರಗಿಡ ಬಳ್ಳಿಯ

ಹುಲ್ಲಿನ ಹಾಸಿಗೆ ಬೇರೆಡೆಗೆ

ಗಿಡದೆಡೆಯಲಿ ಹಸುರಿನ ಮಡಿಲಲಿ

ಸಾವಿರ ವಿದ್ಯುದ್ದೀಪಗಳು

ಕತ್ತಲ ಮೊತ್ತವ ಹೊಡೆಹೊಡೆದಟ್ಟುವ

ರಂಗಿನ ಬೆಳಕಿನ ತೋಪುಗಳು

Aug 5, 2010

ಒಂದು ಚಿತ್ರ

ಇದು ಎಂಟನೇ ತರಗತಿಯ ಇಂದಿರಾ ಬಿಡಿಸಿದ ಚಿತ್ರ.