Jan 16, 2012

ವಾರ್ಷಿಕೋತ್ಸವದ ಚಿತ್ರಗಳು...

ಕಳೆದ ಭಾನುವಾರ ಅಂದರೆ ಜನವರಿ ೮ ರಂದು ಜರಗಿದ ನಮ್ಮ ವಿದ್ಯಾಪೀಠದ ದಶಮಾನೋತ್ಸವ ಕಾರ್ಯಕ್ರಮದ ವಿವಿಧ ದೃಶ್ಯಾವಳಿಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಅವರಿಂದ ಉದ್ಘಾಟಿಸಲ್ಪಟ್ಟ ಈ ಕಾರ್ಯಕ್ರಮ ತುಂಬ ಚೆನ್ನಾಗಿ ಜರಗಿತೆಂಬ ವಿಶ್ವಾಸ ನಮಗಿದೆ. ದೃಶ್ಯಾವಳಿಗಳ ಕಡೆಗೆ ಒಮ್ಮೆ ನಿಮ್ಮ ದೃಷ್ಟಿ ಹಾಯಿಸಿ...











Jan 15, 2012

ವಾರ್ಷಿಕೋತ್ಸವ


“ಮಗುವಿನ ಶಿಕ್ಷಣ ಮನೆಯಿಂದ ಆರಂಭವಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಮಗುವಿಗೆ ದೊರಕುವ ಶಿಕ್ಷಣಕ್ಕೆ ಮನೆಯ ಕಲಿಕೆ ಬಾಲಪಾಠಗಳಾಗುತ್ತವೆ. ಬೆಳವಣಿಗೆಯ ಹಂತದಲ್ಲಿ ದೊರಕುವ ನೈತಿಕ, ಆಧ್ಯಾತ್ಮಿಕ, ಧಾರ್ಮಿಕ, ಶಾರೀರಿಕ ಶಿಕ್ಷಣಗಳು ಭವ್ಯ ಜೀವನವನ್ನು ಸಾಗಿಸಲು ಪೂರಕವಾಗುತ್ತವೆ. ಆದ್ದರಿಂದ ಮನೆ ಮತ್ತು ಶಾಲೆಗಳಲ್ಲಿ ಮಗುವಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಮುಜುಂಗಾವಿನಲ್ಲಿ ಅಂತಹ ಸುಸಂಸ್ಕೃತ ವಾತಾವರಣವಿದೆ.” ಎಂದು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕರುಣಾಕರ ಅನಂತಪುರ ಅಭಿಪ್ರಾಯಪಟ್ಟರು. ಅವರು ದಿನಾಂಕ ೮.೦೧.೨೦೧೨ ಭಾನುವಾರ ನಡೆದ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ದಶಮಾನೋತ್ಸವ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯಗಳ ವರ್ಧಂತ್ಯುತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮುಜುಂಗಾವು ಶ್ರೀಭಾರತೀ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಡಾ|ಡಿ.ಪಿ.ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕೆ.ಎಫ್.ಡಿ.ಸಿಯ ಎಕೌಂಟ್ ಓಫೀಸರ್ ಎ.ಕೆ.ಹರಿದಾಸ್ ಮತ್ತು ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ತಿಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎ.ಕೃಷ್ಣ ಭಟ್ ಶುಭ ಹಾರೈಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ್ ಹಿಳ್ಳೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಭಾರತೀ ವಿದ್ಯಾಪೀಠದ ವರದಿಯನ್ನು ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ-ಮಾರ್ಗ ಹಾಗೂ ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವರದಿಯನ್ನು ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ವಾಚಿಸಿದರು.

 ಈ ಸಂದರ್ಭದಲ್ಲಿ ತಿರುಪತಿ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ರೇಂಕ್ ವಿಜೇತ ವಿದ್ಯಾರ್ಥಿನಿ ಪ್ರತಿಮಾ ಡಿ.ಕೆ. ಇವರನ್ನು ಅಶ್ವಿನಿ ನಾಣಿತ್ತಿಲು ಸನ್ಮಾನಿಸಿದರು. ಶ್ರೀಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ‘ಬೆಳಕು’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ‘ಬೆಳಗು’ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ವಿದ್ಯಾರ್ಥಿನಿಯರಾದ ಸುಪ್ರೀತಾ. ಎಂ ಸ್ವಾಗತಿಸಿ, ದೀಪಿಕಾ ವಂದಿಸಿದರು. ವಿದ್ಯಾರ್ಥಿ ಶ್ರೀಹರಿಶಂಕರ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈವಿಧ್ಯಗಳ ಜೊತೆಗೆ ಶ್ರೀಭಾರತೀ ವಿದ್ಯಾಪೀಠ ದ ವಿದ್ಯಾರ್ಥಿಗಳಿಂದ ‘ಗುರುದಕ್ಷಿಣೆ’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ‘ಮಕರಾಕ್ಷ ಕಾಳಗ’ ಯಕ್ಷಗಾನ ಬಯಲಾಟ ಜರಗಿತು.

Jan 7, 2012

ನಾಳೆ ವಾರ್ಷಿಕೋತ್ಸವ, ಬನ್ನಿ...

ನಮ್ಮ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮವು ಶ್ರೀ ಭಾರತೀ ವಿದ್ಯಾಪೀಠದ ದಶಮಾನೋತ್ಸವದ ಸಂಭ್ರಮದ ಜೊತೆ ನಾಳೆ ಮುಜುಂಗಾವಿನಲ್ಲಿ ನಡೆಯಲಿದೆ. ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಸೀತಾಂಗೋಳಿ ವಲಯ ಪರಿಷತ್ತು ಕಾರ್ಯದರ್ಶಿ ಶ್ರೀ ಎಚ್.ಸತ್ಯಶಂಕರ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ನೃತ್ಯ ಕಾರ್ಯಕ್ರಮಗಳು, ನಾಟಕ-ಹಾಡು ಇತ್ಯಾದಿ ಮನರಂಜನಾ ಕಾರ್ಯಕ್ರಮಗಳು ನಾಲ್ಕು ಘಂಟೆಯ ಇಳಿಹಗಲು ತನಕ ಮುಂದುವರಿಯಲಿವೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಉಪಸಭಾಪತಿಗಳಾದ ಸನ್ಮಾನ್ಯ ಎನ್.ಯೋಗೀಶ ಭಟ್,ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿಹಿತ್ತಿಲು, ಕೆ.ಎಫ್.ಡಿ.ಸಿ ಮಂಗಳೂರಿನ ಎಕೌಂಟ್ ಓಫೀಸರ್ ಹರಿದಾಸ್.ಎ.ಕೆ  ಮತ್ತು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕರುಣಾಕರ ಅನಂತಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ‘ಗುರುದಕ್ಷಿಣೆ’ ಮತ್ತು ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳಿಂದ ‘ವೀರಮಣಿ ಕಾಳಗ’ ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ತಮ್ಮೆಲ್ಲರನ್ನೂ ಈ ಕಾರ್ಯಕ್ರಮಕ್ಕೆ ಆದರಪೂರ್ವಕವಾಗಿ ಆಮಂತ್ರಿಸುತ್ತೇವೆ.