About Us

About Sri Bharati Vidyapeeta, Mujungavu.


ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸೇವಾ ಯೋಜನೆಯಲ್ಲಿ ಒಳಪಟ್ಟ ಈ ವಿದ್ಯಾಸಂಸ್ಥೆಗಳ ಮೇಲ್ನೋಟವನ್ನು ಸ್ವತಃ ಶ್ರೀಗಳವರೇ ಕೈಗೊಳ್ಳುತ್ತಿದ್ದಾರೆ. ಪ್ರಧಾನ ಆಚಾರ್ಯ ಶ್ಯಾಮ ಭಟ್ ದರ್ಭೆ-ಮಾರ್ಗ ಮತ್ತು ಡಾ ಡಿ.ಪಿ.ಭಟ್ ಅಧ್ಯಕ್ಷತೆಯಲ್ಲಿ ಸಕ್ರಿಯವಾದ ಆಡಳಿತ ಸಮಿತಿ ವಿದ್ಯಾಲಯಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿವೆ.

ಸುತ್ತಲೆಲ್ಲ ಮಲಗಿದ ಹಚ್ಚ ಹಸಿರು, ಬೀಸಿ ಬರುವ ಕಡಲ ಗಾಳಿ, ವಿಶಾಲವಾಗಿ ಹರಡಿದ ಮುರಕಲ್ಲಿನ ಬಯಲು, ಮಧ್ಯೆ ಸರೋವರ, ಪ್ರಶಾಂತ ಪರಿಸರದ ನಡುವೆ ಧಾರ್ಮಿಕ, ಆಧ್ಯಾತ್ಮಿಕ, ಮಾನಸಿಕ ಸಂತಸಗಳನ್ನು ಹೆಚ್ಚಿಸುವ ಮುಜುಂಗಾವು, ಮುಚುಕುಂದ ಮಹರ್ಷಿಯ ತಪೋಭೂಮಿ. ಧರ್ಮ ರಕ್ಷಕನೆಂದೇ ಹೆಸರು ಪಡೆದ ಪಾರ್ಥಸಾರಥಿ ಶ್ರೀಕೃಷ್ಣ ಆರಾಧ್ಯ ಮೂರುತಿಯಾಗಿರುವ ಈ ಭೂಮಿ ದೇವಾಲಯ, ನೇತ್ರಾಲಯ ಮತ್ತು ವಿದ್ಯಾಲಯಗಳ ಸಂಗಮ ಸ್ಥಳ. ದೇವಾಲಯದ ಸನಿಹದಲ್ಲಿರುವ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯವು ಜಗತ್ತಿನ ಕಣ್ಣು ತೆರೆಸುವಲ್ಲಿ ತನ್ನ ಮಹತ್ವದ ಪ್ರಯತ್ನಗಳನ್ನು ಮಾಡುತ್ತಿದೆ.

ಜಾತಿ ಮತ ವರ್ಗಗಳ ಬೇಧವಿಲ್ಲದೆ ನೇತ್ರ ಚಿಕಿತ್ಸೆಯನ್ನು ನೀಡುವ ಈ ನೇತ್ರ ಚಿಕಿತ್ಸಾಲಯವು ಉನ್ಮೇಷ: ಎನ್ನುವ ಸಂಸ್ಕೃತ ಪದಕ್ಕೆ ಅನ್ವರ್ಥವಾಗಿದೆ. ಸಂಸ್ಕೃತ ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ. ಜನಜೀವನವನ್ನು ಆಧ್ಯಾತ್ಮದೊಂದಿಗೆ ಬೆರೆಸಿದ ಭಾಷೆ. ಆದರೆ... ಪಾಶ್ಚಾತ್ಯ ಸಂಸ್ಕೃತಿಯ ದುಷ್ಪರಿಣಾಮಗಳ ಪ್ರವಾಹದಲ್ಲಿ ನಮ್ಮ ಸನಾತನ ಸಂಸ್ಕೃತಿಯ ಮೌಲ್ಯ ಆದರ್ಶಗಳು ನಿಧಾನವಾಗಿ ಮರೆಯಾಗುತ್ತಿವೆ. ಭಾರತೀಯರ ಜೀವನಾಡಿಯಾಗಿರುವ ಸಂಸ್ಕೃತ ಮತ್ತು ಸಂಸ್ಕೃತಿಗಳ ಮೇಲೆ ಆಧುನಿಕ ವಿಚಾರಧಾರೆಗಳ ಆಕ್ರಮಣ ತೀವ್ರವಾಗಿ ನಡೆಯುತ್ತಿದೆ. ಆದರೂ ಸನಾತನ ಸಂಸ್ಕೃತಿ ಮತ್ತು ಸಂಸ್ಕೃತದ ಉಳಿವಿಗಾಗಿ ನಮ್ಮೆಲ್ಲರ ಪ್ರಯತ್ನಗಳು ಮುಂದೆ ಸಾಗುತ್ತಿವೆ.
ಸಂಸ್ಕೃತ ವಿದ್ಯಾಭ್ಯಾಸ ಇಂದಿನ ಆಧುನಿಕ ಯುಗಕ್ಕೆ ಹೇಳಿದ್ದಲ್ಲ ಎನ್ನುವ ಅಭಿಪ್ರಾಯ ಈಗಲೂ ಹಲವರ ಮನಸ್ಸಿನಲ್ಲಿದೆ. ಇಂತಹ ಅನಾನುಕೂಲಕರ ಪರಿಸ್ಥಿತಿಯಲ್ಲೂ ನಮ್ಮ ಸಂಸ್ಕೃತಿಗೆ ಉತ್ತಮ ಭವಿಷ್ಯವಿದೆ ಎನ್ನುವುದನ್ನು ಸಾಬೀತುಪಡಿಸಲು ಕಾಸರಗೋಡಿನಿಂದ ಹದಿನೈದು ಕಿಲೋ ಮೀಟರು ದೂರದಲ್ಲಿ ಅಂದರೆ ಕುಂಬಳೆಯ ಸನಿಹದ ಮುಜುಂಗಾವಿನಲ್ಲಿ ಶ್ರೀ ಭಾರತೀ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ಪ್ರಾಥಮಿಕ ಹಂತದಿಂದಲೇ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಮತ್ತು ಜೀವನ ಮೌಲ್ಯಗಳನ್ನು ಉದ್ದೀಪನಗೊಳಿಸುವ ದೃಷ್ಟಿಯಿಂದ ವಿಶಿಷ್ಟ ರೀತಿಯ ಕನ್ನಡ ಮಾಧ್ಯಮ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವಿನಲ್ಲಿದೆ. ಸಂಸ್ಕೃತ - ಕನ್ನಡ ಮಾಧ್ಯಮ ಶಿಕ್ಷಣ ರಂಗದಲ್ಲಿ ಈ ಸಂಸ್ಥೆ ಉತ್ತಮ ಪ್ರಗತಿಯನ್ನು ಸಾಧಿಸಿ ತೋರಿಸುತ್ತಿವೆ. ಪಂಚಮುಖಿ ಶಿಕ್ಷಣಕ್ಕೆ ಒತ್ತು ನೀಡಿ ಇಲ್ಲಿನ ವಿದ್ಯಾರ್ಥಿಗಳು ಬಹುಮುಖಿಯಾಗಿ ಅಭಿವೃದ್ಧಿಗೊಳ್ಳಬೇಕು ಎಂಬ ಜನಮಾನಸದ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಶ್ರೀ ಭಾರತೀ ವಿದ್ಯಾಪೀಠವು ಆಂಗ್ಲ ಮಾಧ್ಯಮ ಶಿಕ್ಷಣದ ಕಡೆಗೆ ಮುಖಮಾಡಿ ನಿಂತಿದೆ. ಶೈಕ್ಷಣಿಕ ವಿಕಾಸದ ಈ ಮಜಲಿಗೆ ಹಿರಿಯ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಎನ್ನುವ ವಿಚಾರವು ಹೊಸ ಗರಿಯನ್ನು ಮೂಡಿಸಿದೆ. ಆಧುನಿಕ ಶಿಕ್ಷಣ ವಿಧಾನದೊಂದಿಗೆ ಬಹುಬೇಗ ಹೊಂದಿಕೊಳ್ಳುವ ಉದ್ದೇಶದಿಂದ ಪ್ರಸ್ತುತ ಎಂಟನೇ ತರಗತಿಯ ತನಕ ಇಲ್ಲಿ ಕೇಂದ್ರೀಯ (ಸಿಬಿಎಸ್‌ಇ) ಪಾಠ್ಯ ಪದ್ಧತಿಯ ಪ್ರಕಾರ ಐದನೇ ತರಗತಿಯಿಂದ ಇಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಲಾಗುತ್ತಿದೆ.

Contact Information:
EMail: mujungavu@gmail.com