Jun 16, 2013

ವಿದ್ಯಾರ್ಥಿ ನಾಯಕರ ಆಯ್ಕೆ

ನಮ್ಮ ವಿದ್ಯಾಪೀಠದ 2013-14ನೇ ಸಾಲಿನ ವಿದ್ಯಾರ್ಥಿ ನಾಯಕರ ಆಯ್ಕೆ ನಿನ್ನೆ 15.06.2013 ಶನಿವಾರ ನಡೆಯಿತು. ವಿದ್ಯಾರ್ಥಿ ನಾಯಕಿಯಾಗಿ ಹತ್ತನೇ ತರಗತಿಯ ಶ್ವೇತಾ.ಕೆ, ವಿದ್ಯಾರ್ಥಿ ಉಪನಾಯಕರಾಗಿ ಒಂಬತ್ತನೇ ತರಗತಿಯ ಪ್ರಜ್ವಲ್ ಆಯ್ಕೆಯಾಗಿದ್ದಾರೆ. ಇಬ್ಬರಿಗೂ ಶುಭಾಶಯಗಳು...

Jun 3, 2013

‘ಸ್ವಾಗತ ಭಾರತೀ’ 2013

  

  “ಬಾಲ್ಯ ಕಾಲದಲ್ಲಿ ದೊರೆಯುವ ನೈತಿಕ, ಶಿಸ್ತುಬದ್ಧವಾದ ಶಿಕ್ಷಣ ಸುಭದ್ರ ಸಮಾಜವನ್ನು ರೂಪಿಸುತ್ತದೆ. ಪ್ರಶಾಂತ ಪರಿಸರದಲ್ಲಿ, ಕ್ರೀಡಾಚಟುವಟಿಕೆಗಳಿಗೂ ಪ್ರೇರಣೆ ನೀಡುವಂತಹ ಈ ನೆಲದಲ್ಲಿ ಉತ್ತಮ ಗುಣಮಟ್ಟದ ಪಂಚಮುಖಿ ಶಿಕ್ಷಣ ದೊರೆಯುತ್ತಿರುವುದು ಸಮಾಜಕ್ಕೆ ಒದಗಿದ ಸುಯೋಗ. ಮೊದಲಿನ ಎರಡೂ ತಂಡಗಳ ಹತ್ತನೇ ತರಗತಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸಿ ಮುಜುಂಗಾವು ಶಿಕ್ಷಣ ಸಂಸ್ಥೆಗಳ ಕಡೆಗೆ ಸಮಾಜದ ಗಮನವನ್ನು ಸೆಳೆದಿದ್ದಾರೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಂಕಲ್ಪದಂತೆ ರೂಪುಗೊಂಡ ವಿದ್ಯಾಸಂಸ್ಥೆ ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿವೆ ಎನ್ನುವುದಕ್ಕೆ ಇದು ನೂತನ ನಿದರ್ಶನ” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಂ.ರಾಜೀವ ರಾವ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಸ್ವಾಗತ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ ನಾಣಿತ್ಲು, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಭಟ್ ಮಡ್ವ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಅರ್ಪಿಸಿದರು. ಹಿರಿಯ ಸಮಾಜ ಸೇವಕ ಪೋಳ್ಯ ಕೃಷ್ಣ ಭಟ್, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

    ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಶ್ವೇತ.ಕೆ ಸ್ವಾಗತಿಸಿ ಸುಧನ್ವ ಶಂಕರ ವಂದಿಸಿದರು. ರೇಶ್ಮಾ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

Jun 1, 2013

ವಸಂತ ವೇದ ಶಿಬಿರ ಸಮಾರೋಪ

 
   “ವೇದ ಅಧ್ಯಯನ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ವೇದ ಮತ್ತು ಶಾಸ್ತ್ರಗಳ ಅಧ್ಯಯನದ ಕಡೆಗೆ ಜನ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಅಪೇಕ್ಷೆಯಂತೆ ಮುಜುಂಗಾವಿನ ದೇವ-ವೈದ್ಯ-ವೇದಗಳ ಸಂಗಮ ಭೂಮಿಯಲ್ಲಿ ನಡೆದ ವಸಂತವೇದ ಶಿಬಿರ ಯಶಸ್ವಿಯಾಗಿದೆ ಎಂದು ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಹಿಳ್ಳೆಮನೆ ಅಭಿಪ್ರಾಯಪಟ್ಟರು. ಅವರು 19.05.2013 ಭಾನುವಾರ ನಮ್ಮ ವಿದ್ಯಾಪೀಠದಲ್ಲಿ ಕಳೆದ ಒಂದೂವರೆ ತಿಂಗಳು ಕಾಲ ವೇ|ಮೂ ಮಹಾದೇವ ಭಟ್ ಕೋಣಮ್ಮೆ ಇವರ ನೇತೃತ್ವದಲ್ಲಿ ಜರಗಿದ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಬೆಂಗಳೂರು ‘ಬೆಲ್’ ಸಂಸ್ಥೆಯ ಇಂಜಿನಿಯರ್ ರಾಮಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ವೇದ ಶಿಕ್ಷಣ ನೀಡಿದ ವೇ|ಮೂ ವಿಶ್ವೇಶ್ವರ ಭಟ್ ಮಣಿಮುಂಡ, ನಾರಾಯಣ.ಜಿ.ಹೆಗಡೆ ಮತ್ತು ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮನೀಶ ಅಮ್ಮಂಕಲ್ಲು ಸ್ವಾಗತಿಸಿ ಶಶಿಧರ ಪದ್ಯಾಣ ವಂದಿಸಿದರು. ಕೃಷ್ಣಕುಮಾರ ಕೋಣಮ್ಮೆ ಕಾರ್ಯಕ್ರಮ ನಿರೂಪಿಸಿದರು.