Apr 2, 2013

ಸ್ಪಂದನ 2013

 
 “ಶಾಲೆ ವಿದ್ಯಾರ್ಥಿಗಳಿಗೆ ಬದುಕಿನ ಬುನಾದಿಯನ್ನು ಕಟ್ಟಿಕೊಡುತ್ತದೆ. ಶಾಲೆಯಲ್ಲಿ ಕಲಿತ ವಿಚಾರಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ ಬೆಳೆಯುತ್ತಾನೆ. ಶಾಲೆಯಿಂದ ತೇರ್ಗಡೆ ಹೊಂದಿ, ಬೀಳ್ಕೊಡುವ ಹಂತದಲ್ಲಿ ವಿದ್ಯಾರ್ಥಿಯು ಮಾತೃ ಶಾಲೆಯ ಸ್ಮರಣೆ ಮಾಡುತ್ತಿದ್ದಾನೆಂದರೆ ಆತನಿಗೆ ಶಾಲೆ ಉತ್ತಮ ಸೇವೆ ನೀಡಿದೆ ಎಂದರ್ಥ. ಈ ಕಾರ್ಯಕ್ರಮ ಉತ್ತಮ ವಿದ್ಯಾರ್ಥಿ ಮತ್ತು ಶಾಲೆಯ ನೈತಿಕ ಹಿನ್ನೆಲೆಯನ್ನು ಪ್ರದರ್ಶಿಸುತ್ತದೆ" ಎಂದು ಕಾಸರಗೋಡಿನ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀಮತಿ ತಾರಾ ಜಗದೀಶ್ ಅಭಿಪ್ರಾಯಪಟ್ಟರು. ಅವರು 27.03.2013 ಬುಧವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಬೀಳ್ಕೊಡುವ ‘ಸ್ಪಂದನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

   ಶಾಲಾ ಸಮಿತಿಯ ಅಧ್ಯಕ್ಷ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಭಟ್, ಶಾಲಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವೈಶಾಲಿ ಸ್ವಾಗತಿಸಿ ಸುಧಾ.ಎಂ ವಂದಿಸಿದರು. ನಿಕ್ಷಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ವತಿಯಿಂದ ಬೆಳಕಿನ ಸಂಕೇತವಾಗಿ ವಿದ್ಯಾರ್ಥಿಗಳಿಗೆ ಪ್ರಜ್ವಲಿಸುತ್ತಿರುವ ದೀಪವನ್ನು ನೀಡಲಾಯಿತು. ವಿದ್ಯಾರ್ಥಿಗಳು ಶಾಲೆಗೆ ಸ್ಮರಣಿಕೆಯಾಗಿ ನಿತ್ಯೋಪಯೋಗಿ ವಸ್ತುಗಳನ್ನು ಸಮರ್ಪಿಸಿದರು.