Dec 12, 2013

ಪತ್ರಿಕಾ ವರದಿ ರಚನಾ ಕಾರ್ಯಾಗಾರ

“ಶತಮಾನಗಳ ಹಿಂದೆಯೇ ಆರಂಭವಾದ ಪತ್ರಿಕಾ ಮಾಧ್ಯಮ ಈಗಲೂ ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳು ಸಮಾಜದೊಳಗಿನ ಸಂವಹನ ಸೇತುವೆಯಾಗಿ ಬೆಳೆಯುತ್ತಿವೆ. ಪುಟಾಣಿಗಳಿಂದ ಆರಂಭಿಸಿ ವೃದ್ಧರ ತನಕ ಆಯಾ ವಯೋಮಾನದವರಿಗಾಗಿ ಮೀಸಲಾದ ಅಂಕಣಗಳನ್ನು ಹೊತ್ತಿರುವ ಪತ್ರಿಕೆಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಬೇರೂರುತ್ತಿವೆ. ಹೀಗೆ ಜನರಿಗೆ ಅಗತ್ಯವಾದ ವೈವಿಧ್ಯವನ್ನು ನೀಡಲು ಪತ್ರಿಕಾ ಮಾಧ್ಯಮವು ಸಹಕಾರಿಯಾಗಿದೆ. ಆದ್ದರಿಂದ ಈ ಮಾಧ್ಯಮದ ಸದುಪಯೋಗವನ್ನು ಪಡೆದುಕೊಳ್ಳಲು ಪತ್ರಿಕಾ ವರದಿಯನ್ನು ಬರೆಯುವ ಕಲೆಯನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಎಂದು ಸಿರಿಗನ್ನಡ ವೇದಿಕೆ ಕಾಸರಗೋಡು ಘಟಕದ ಅಧ್ಯಕ್ಷ, ಸಾಹಿತಿ ವಿ.ಬಿ.ಕುಳಮರ್ವ ಅಭಿಪ್ರಾಯಪಟ್ಟರು. ಅವರು 30.11.2013 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಸಿರಿಗನ್ನಡ ವೇದಿಕೆಯ ಕಾಸರಗೋಡು ಗಡಿನಾಡ ಘಟಕದ ಆಶ್ರಯದಲ್ಲಿ ಜರಗಿದ ‘ಜ್ಞಾನ ಭಾರತೀ-ಪತ್ರಿಕಾ ವರದಿ ರಚನಾ ಕಾರ್ಯಾಗಾರ’ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಪ್ರಬಂಧ ರಚನೆಯ ವೈವಿಧ್ಯಗಳ ಕುರಿತು ಚುಟುಕು ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಮಾಹಿತಿ ನೀಡಿದರು. ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ,  ಸಿರಿಗನ್ನಡ ವೇದಿಕೆಯ ಕಾಸರಗೋಡು ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಶ್ವೇತಾ. ಕೆ ಸ್ವಾಗತಿಸಿ ಗೌರೀಶ ವಿಶ್ವಾಮಿತ್ರ ವಂದಿಸಿದರು. ಶುಭಲಕ್ಷ್ಮಿ ಯಾಜಿ ಕಾರ್ಯಕ್ರಮ ನಿರೂಪಿಸಿದರು.

Dec 7, 2013

ಜ್ಞಾನಭಾರತೀ - 2013

“ಹದಿಹರೆಯದ ಮಕ್ಕಳು ಸಮಾಜದ ಸೊತ್ತು. ಅವುಗಳನ್ನು ಹಾಳುಗೆಡವಬಾರದು. ಬೆಳೆಯುತ್ತಿರುವ ಗಿಡವನ್ನು ಚಿವುಟಿದರೆ ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಬೆಳೆಯಬೇಕು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು." ಎಂದು ಕಾಸರಗೋಡಿನ ಖ್ಯಾತ ವೈದ್ಯೆ ಡಾ|ವಾರುಣಿ ಶ್ರೀರಾಮ್ ಅಭಿಪ್ರಾಯಪಟ್ಟರು. ಅವರು ಮೊನ್ನೆ 05.12.2013 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಜ್ಞಾನ ಭಾರತೀ’ ಕಾರ್ಯಕ್ರಮ ಸರಣಿಯ ‘ವೈದ್ಯರೊಂದಿಗೆ ಮಾತುಕತೆ’ಯಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದರು.

ಶಾಲಾ ವಿದ್ಯಾರ್ಥಿ ನಾಯಕಿ ಶ್ವೇತಾ ಸ್ವಾಗತಿಸಿ ಮಾನಸ ವಂದಿಸಿದರು.

Nov 28, 2013

ಅಡುಗೆ ತಯಾರಿ ತರಬೇತಿ

ಮೊನ್ನೆ ಸೋಮವಾರ ನವೆಂಬರ್ 25ರಂದು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಒಂದು ವಿಶಿಷ್ಠ ಅನುಭವ. ಹತ್ತನೇ ತರಗತಿಯ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಅವರಿಗೋಸ್ಕರ ಏರ್ಪಡಿಸಿದ ‘ಅಡುಗೆ ತರಗತಿ’ ಯಶಸ್ವಿಯಾಯಿತು. ತರಬೇತಿ ನೀಡಿದ ಆಶಾಶಾರದಾ ದೊಡ್ಡಮಾಣಿ ಇವರಿಗೆ ಅಭಿನಂದನೆಗಳು. ನಿಮ್ಮೆಲ್ಲರ ಪ್ರೋತ್ಸಾಹದೊಂದಿಗೆ ಇಂತಹ ಇನ್ನಷ್ಟು ತರಗತಿಗಳನ್ನು ನಡೆಸಬೇಕೆಂಬ ಹಂಬಲ ನಮಗಿದೆ. ನಿಮ್ಮ ಅಮೂಲ್ಯ ಸಮಯವನ್ನು ನಮ್ಮ ಜೊತೆ, ವಿದ್ಯಾರ್ಥಿಗಳ ಜೊತೆ ಹಂಚಿಕೊಳ್ಳಿ...

Nov 15, 2013

ಪ್ರತಿಭಾ ಭಾರತೀ - ನವೆಂಬರ್



“ಮಕ್ಕಳು ನಾಡಿನ ಸಂಪತ್ತು. ಅವರ ಜೊತೆಗಿನ ಬಾಂಧವ್ಯ ವೃದ್ಧಿಗಾಗಿ ಹಿರಿಯರು ಕಂಡ ದಾರಿ ಮಕ್ಕಳ ದಿನಾಚರಣೆ. ಪಂಡಿತ್ ಜವಹರಲಾಲ್ ನೆಹರೂ ಅವರಿಗೆ ಪುಟಾಣಿಗಳ ಮೇಲಿದ್ದ ಪ್ರೀತಿ ವ್ಯಕ್ತವಾದ ಈ ಪರಿ ಮಕ್ಕಳ ದಿನದ ಆಚರಣೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡುವ ಮಕ್ಕಳು ತಮ್ಮ ಪ್ರತಿಭೆಯನ್ನು ಬಹುಮುಖಿಯಾಗಿಸುತ್ತಾರೆ. ಅನುಭವಿಸುತ್ತಾ ನೀಡುವ ಈ ಕಾರ್ಯಕ್ರಮಗಳು ಆನಂದದಾಯಕವಾಗಿರುತ್ತವೆ.” ಎಂದು ಕುಂಬಳೆ ವಲಯ ಅಧ್ಯಕ್ಷ ಇ. ಕೃಷ್ಣಮೋಹನ ಭಟ್ ಅಭಿಪ್ರಾಯಪಟ್ಟರು. ಅವರು ನಿನ್ನೆ 14.11.2013 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ನವೆಂಬರ್ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಶ್ರೀವತ್ಸ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ ಗತ ಕಾರ್ಯಕ್ರಮದ ವರದಿಯನ್ನು ಮಂಡಿಸಿದರು.

    ವಿದ್ಯಾರ್ಥಿಗಳಾದ ನಿಶಿತಾ ಸ್ವಾಗತಿಸಿ ಮಾನಸ ವಂದಿಸಿದರು. ಭಾವನಾ ಮತ್ತು ಚೈತ್ರ ಕಾರ್ಯಕ್ರಮ ನಿರೂಪಿಸಿದರು.

Oct 27, 2013

ಚಿನ್ಮಯದಲ್ಲಿ ಭಗವದ್ಗೀತೆ - 2013



ಕಾಸರಗೋಡು ಚಿನ್ಮಯಾ ವಿದ್ಯಾಲಯದಲ್ಲಿ ನಡೆದ ಭಗವದ್ಗೀತಾ-2013 ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಾದ ಕೃಷ್ಣಶೌರಿ.ಡಿ.ಎಸ್, ಮನೀಶ, ಅರುಣಶಂಕರ, ಚಿನ್ಮಯಿ ಬಹುಮಾನ ಗಳಿಸಿದರು.

ಶಾರದಾ ಪೂಜಾ - 2013



ನಮ್ಮ ವಿದ್ಯಾಪೀಠದಲ್ಲಿ 14.10.2013ರಂದು ಜರಗಿದ ವಿಜಯದಶಮಿ ಕಾರ್ಯಕ್ರಮದಲ್ಲಿ ವೇದಮೂರ್ತಿ ಮಹಾದೇವ ಭಟ್ಟ ಕೋಣಮ್ಮೆ ಶಾರದಾ ಪೂಜೆ ನೆರವೇರಿಸಿದರು.

Oct 10, 2013

ಬ್ಯಾಂಕಿಂಗ್ ಮಾಹಿತಿ ಶಿಬಿರ

   “ಜೀವನದ ಭದ್ರತೆಗೆ ಬ್ಯಾಂಕಿಂಗ್ ಅಗತ್ಯ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಉಳಿತಾಯದ ಮಹತ್ವವನ್ನು ಮನಗ೦ಡು ಅಭ್ಯಾಸ ಮಾಡಿಕೊಳ್ಳಬೇಕು. ನಾಳೆಗಾಗಿ ಹಣವನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ಮತ್ತು ಅಗತ್ಯಗಳಿಗಾಗಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಬ್ಯಾಂಕಿಂಗ್ ಉತ್ತಮ ವ್ಯವಸ್ಥೆಯಾಗಿದೆ  ಎಂದು ನಬಾರ್ಡ್ ಸಂಸ್ಥೆಯ ಫಿನಾನ್ಶಿಯಲ್ ಲಿಟರಸಿ ಏಜೆನ್ಸಿಯ ಜಗನ್ನಾಥ ಶೆಟ್ಟಿ ಕುಂಬಳೆ ಅಭಿಪ್ರಾಯಪಟ್ಟರು. ಅವರು ನಿನ್ನೆ 09.10.2013 ಮಂಗಳವಾರ ನಮ್ಮ ವಿದ್ಯಾಪೀಠದಲ್ಲಿ ನಡೆದ ಬ್ಯಾಂಕಿಂಗ್ ಮಾಹಿತಿ ಶಿಬಿರದಲ್ಲ್ಲಿ ಮಾತನಾಡುತ್ತಿದ್ದರು.
        ಶಾಲಾ ಸಮಿತಿಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸ್ಮಿತಾ ಆಳ್ವ ಸ್ವಾಗತಿಸಿ ವಂದಿಸಿದರು.

Oct 3, 2013

ಸೇವನಾ ದಿನ 2013

02.10.2013 ಬುಧವಾರ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಸೇವನಾ ದಿನದ ಅಂಗವಾಗಿ ಪರಿಸರ ಶುಚೀಕರಣ ಕಾರ್ಯಕ್ರಮ ನಡೆಯಿತು.

Sep 26, 2013

ಓಣಂ - 2013

ಪರೀಕ್ಷೆಗಳು ಮತ್ತು ಓಣಂ ರಜಾ ಕಳೆದು ಮತ್ತೆ ಶಾಲೆ ಆರಂಭವಾಗಿದೆ. ಈ ಸಂದರ್ಭದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ರಚಿಸಿದ ಹೂ ರಂಗವಲ್ಲಿ...


Aug 31, 2013

ಗಮಕ ವಾಚನ - ಪ್ರವಚನ

     

  “ಪುರಾಣ ಪ್ರವಚನಗಳನ್ನು ಕೇಳುವ ಮೂಲಕ ನಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುವ ಅವಕಾಸವಿದೆ. ಈ ನಿಟ್ಟಿನಲ್ಲಿ ಅಪೂರ್ವವಾಗುತ್ತಿರುವ ಗಮಕ ಕಲೆಯನ್ನು ಉಳಿಸಿಕೊಳ್ಳಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಈ ಉದ್ದೇಶದಿಂದ ಕುಶಲವರ ಜನ್ಮಮಾಸ ಶ್ರಾವಣವನ್ನು ಗಮಕ ಮಾಸವಾಗಿ ಆಚರಿಸಲಾಗುತ್ತಿದೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತು, ಕೇರಳ ಗಡಿನಾಡು ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಯಣ ಭಟ್ ಹೇಳಿದರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು, ಕೇರಳ ಗಡಿನಾಡು ಘಟಕ ಆಯೋಜಿಸಿದ ‘ಗಮಕ ವಾಚನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಾಲಾ ಸಮಿತಿಯ ಅಧ್ಯಕ್ಷ ಡಾ|ಡಿ.ಪಿ.ಭಟ್, ಸಾಹಿತಿ ವಿ.ಬಿ.ಕುಳಮರ್ವ ಉಪಸ್ಥಿತರಿದ್ದರು. ಇಚ್ಲಂಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಭಾರತಿ ಗಮಕ ವಾಚನ ನಡೆಸಿದರು.  ಇಚ್ಲಂಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ನರಹರಿ.ಪಿ ಪ್ರವಚನ ನೀಡಿದರು.
    ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ದೀಕ್ಷಿತಾ.ಬಿ ಸ್ವಾಗತಿಸಿ ಕಾರ್ತಿಕ್.ಎಸ್ ವಂದಿಸಿದರು. ಶುಭಲಕ್ಷ್ಮಿ ಯಾಜಿ ಕಾರ್ಯಕ್ರಮ ನಿರೂಪಿಸಿದರು.

Aug 28, 2013

ಶ್ರೀಕೃಷ್ಣ ಜಯಂತಿ - 2013

  
“ಲೋಕದಲ್ಲಿ ಅನಾಚಾರಗಳು ಮೈತಳೆದಾಗ ಭಗವಾನ್ ವಿಷ್ಣು ಶ್ರೀಕೃಷ್ಣನಾಗಿ ಅವತಾರ ತಳೆದ. ನಾಡಿನ ಉನ್ನತಿಗೆ ಕಾರಣನಾದ. ಬಾಲಕರಿಗೆ ಪ್ರೀತಿಯ ಗೆಳೆಯನಾಗಿ, ಪಾಂಡವರ ಅಭ್ಯುದಯಕ್ಕಾಗಿ, ಲೋಕದ ಒಳಿತಿಗಾಗಿ ಹಲವಾರು ಕಾರ್ಯಗಳನ್ನು ಕೈಗೊಂಡು ನಮ್ಮೆಲ್ಲರ ಆತ್ಮೀಯ ದೇವರಾದ. ಅವನ ಜನ್ಮದಿನವನ್ನು ಆಚರಿಸುವುದು ಸನ್ಮಾರ್ಗದ ಕಡೆಗೆ ನಮ್ಮನ್ನು ಪ್ರೇರೇಪಿಸಲು ಸಹಾಯಕರವಾಗಲಿ" ಎಂದು ಪುತ್ತಿಗೆ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ಹರಿಣಿ.ಜಿ.ಕೆ.ನಾಯಕ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ಶ್ರೀಕೃಷ್ಣ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಹೋಲಿ ಫ್ಯಾಮಿಲಿ ಹಿರಿಯ ಬುನಾದಿ ಶಾಲೆಯ ಸಂಸ್ಕೃತ ಶಿಕ್ಷಕ ಬಾಲಕೃಷ್ಣ ಶರ್ಮ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಭಟ್ ಮಡ್ವ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ  ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ಕಂದಮುರಳಿ ಸ್ವಾಗತಿಸಿ ಪ್ರಶಾಂತ.ಎಂ ವಂದಿಸಿದರು. ಕೃಷ್ಣಶೌರಿ ಡಿ.ಎಸ್ ಪ್ರಾರ್ಥಿಸಿದರು.  ಸ್ಮಿತಾ ಆಳ್ವ ಮತ್ತು ಸುಮೇಘ ಕಾರ್ಯಕ್ರಮ ನಿರೂಪಿಸಿದರು.

Aug 26, 2013

ರಕ್ಷಾಬಂಧನ 2013


  
“ಜಗತ್ತು ಹೊಸ ಅಭ್ಯಾಸಗಳ ಕಡೆಗೆ ಹೊರಳುತ್ತಿದೆ. ಜನರಲ್ಲಿ ಪರಸ್ಪರ ಅಸೂಯೆ, ದ್ವೇಷ ಹೆಚ್ಚುತ್ತಿದೆ. ಭಾರತ ಮಾತ್ರವಲ್ಲ, ಶಾಂತಿಪ್ರಿಯವಾದ ಅನೇಕ ದೇಶಗಳು ಯುದ್ಧ ಭೀತಿಯನ್ನು ಎದುರಿಸುತ್ತಿವೆ. ಈ ಸಂದರ್ಭದಲ್ಲಿ ರಕ್ಷಾಬಂಧನದ ಮಹತ್ವ ನಮಗೆ ಸುಲಭವಾಗಿ ಅರ್ಥವಾಗುತ್ತದೆ. ರಕ್ಷಾಬಂಧನದ ಮೂಲಕ ವಸುಧೈವ ಕುಟುಂಬಕಂ, ನಾವೆಲ್ಲ ಸಹೋದರರು ಎಂಬ ಭಾವನೆ ಬೆಳಗಬೇಕಿದೆ." ಎಂದು ಕುಂಬಳೆ ಹೋಲಿ ಫ್ಯಾಮಿಲಿ ಹಿರಿಯ ಬುನಾದಿ ಶಾಲೆಯ ಸಂಸ್ಕೃತ ಶಿಕ್ಷಕ ಬಾಲಕೃಷ್ಣ ಶರ್ಮ ಅಭಿಪ್ರಾಯಪಟ್ಟರು. ಅವರು 20.08.2013 ಮಂಗಳವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ  ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಧನ್ವ ಶಂಕರ ಸ್ವಾಗತಿಸಿ ಶ್ವೇತಾ ವಂದಿಸಿದರು. ವಿದ್ಯಾಲಕ್ಷ್ಮಿ. ಎಸ್ ಕಾರ್ಯಕ್ರಮ ನಿರೂಪಿಸಿದರು.

Aug 15, 2013

ಸ್ವಾತಂತ್ರ್ಯ ದಿನಾಚರಣೆ 2013


“ಭಾರತದ ಸ್ವಾತಂತ್ರ್ಯ ವಿಭಿನ್ನ ರೀತಿಯ ಹೋರಾಟದಿಂದ ವಿಶ್ವದ ಗಮನವನ್ನು ಸೆಳೆದಿದೆ. ನಮ್ಮ ಹಿರಿಯರ ಕೆಚ್ಚೆದೆಯ ಪರಿಶ್ರಮದಿಂದ ಆಂಗ್ಲರ ಬಳಿಯಲ್ಲಿದ್ದ ಅಧಿಕಾರವನ್ನು ಪಡೆದುಕೊಳ್ಳಲು ನಮಗೆ ಸಾಧ್ಯವಾಯಿತು. ವಿದ್ಯಾರ್ಥಿಗಳು ಹಿರಿಯರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ ಭವ್ಯ ಭಾರತದ ನಿರ್ಮಾಣಕ್ಕೆ ಪ್ರಯತ್ನಿಸಬೇಕು.” ಎಂದು ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ಲು ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶ್ರೀ ಭಾರತೀ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎಚ್.ಶಂಕರನಾರಾಯಣ ಭಟ್, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಾದ ದೀಪಕ್ ಶ್ರೀವತ್ಸ ಸ್ವಾಗತಿಸಿ ಗೌರೀಶ ವಿಶ್ವಾಮಿತ್ರ ವಂದಿಸಿದರು. ಸ್ವಾತಿ ಘಾಟೆ ಕಾರ್ಯಕ್ರಮ ನಿರೂಪಿಸಿದರು.

Aug 14, 2013

ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’


“ಮಹಾತ್ಮರ ಜೀವನ ಚರಿತ್ರೆ ವಿದ್ಯಾರ್ಥಿಗಳಿಗೆ ಬದುಕಿನ ಪಾಠವನ್ನು ಹೇಳಿಕೊಡುತ್ತವೆ. ನಮ್ಮ ಜೀವನದ ಹಾದಿ ಮುಂದಿನ ದಿನಗಳಲ್ಲಿ ಇಂತಹ ಮಹತ್ವದ ಘಟ್ಟವನ್ನು ಹಾದು ಹೋಗುತ್ತವೆ. ಆದ್ದರಿಂದ ನಮ್ಮ ದಿನಚರಿಯನ್ನು ಬರೆದಿಡುವುದು ತುಂಬ ಅಗತ್ಯ. ಗತ, ವರ್ತಮಾನ ಕಾಲಗಳಲ್ಲಿ ಮಾಡಿದ ತಪ್ಪನ್ನು ಭವಿಷ್ಯದಲ್ಲಿ ತಿದ್ದಿಕೊಳ್ಳಲು ಈ ವಿಧಾನ ನಮಗೆ ಸಹಾಯಕಾರಿ. ಮನದಲ್ಲಿ ತಲೆ ಎತ್ತುವ ಸಂದೇಹಗಳನ್ನು ಈ ಪುಸ್ತಕದ ಬದಿಯಲ್ಲಿ ಬರೆದಿಟ್ಟು ಹಿರಿಯರಿಂದ ಉತ್ತರವನ್ನು ಕೇಳಿ ಬರೆದಿಟ್ಟುಕೊಳ್ಳಿ. ಇದು ನಮಗೆ ಬದುಕಿನ ಪಾಠವನ್ನು ಹೇಳುತ್ತವೆ. ” ಎಂದು ಕಥೆಗಾರ್ತಿ ಅನುಪಮಾ ಪ್ರಸಾದ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಪ್ರಜ್ವಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ನಾಯಕಿ ಶ್ವೇತಾ.ಕೆ ಪ್ರಾಸ್ತಾವಿಕ ಭಾಷಣ ಮಾಡಿದರು. ಗೌರೀಶ ವಿಶ್ವಾಮಿತ್ರ ಗತವರ್ಷದ ವರದಿಯನ್ನು ಮಂಡಿಸಿದರು.

    ವಿದ್ಯಾರ್ಥಿಗಳಾದ ತೀಕ್ಷಾ ಸ್ವಾಗತಿಸಿ ವಿಕ್ರಮ್ ವಂದಿಸಿದರು. ದೀಪಕ್ ಶ್ರೀವತ್ಸ ಮತ್ತು ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು.

Jul 22, 2013

ಗುರುಪೂರ್ಣಿಮಾ

   
“ಗುರುಪೂರ್ಣಿಮೆಯ ದಿನ ವ್ರತಾನುಷ್ಠಾನ ಆರಂಭಿಸುವ ಸನ್ಯಾಸಿಗಳು ಆತ್ಮಜ್ಞಾನದ ವೃದ್ಧಿಯ ಕಡೆಗೆ ಮುನ್ನಡೆಯುತ್ತಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೂ ಕೂಡಾ ಗುರುಪೂರ್ಣಿಮೆಯನ್ನು ಆಚರಿಸಿ ತಮ್ಮ ಮೇಧಾಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಪ್ರತಿನಿಧಿ ಕೆ.ಎಸ್.ಶಂಕರ ಭಟ್ ಕಾವೇರಿಕಾನ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಹಿರಿಯ ಶಿಕ್ಷಕ ಕೃಷ್ಣ ಭಟ್ ಉಪಸ್ಥಿತರಿದ್ದರು. ಶಿಕ್ಷಕಿ ಚಿತ್ರಾ ಸರಸ್ವತಿ ಸ್ವಾಗತಿಸಿ ವಂದಿಸಿದರು.

Jul 21, 2013

ರಕ್ಷಕ ಶಿಕ್ಷಕ ಸಂಘದ ಮಹಾಸಭೆ - 2013


  “ಮನೆಯೇ ಮೊದಲ ಪಾಠಶಾಲೆ ಎನ್ನುವುದು ಸಾರ್ವಕಾಲಿಕ ಸತ್ಯ. ಶಾಲೆ, ಸಮಾಜ, ಪರಿಸ್ಥಿತಿಗಳು ಎಷ್ಟು ಬದಲಾದರೂ ವಿದ್ಯಾರ್ಥಿಗಳ ಕಡೆಗಿನ ಹೆಚ್ಚಿನ ಗಮನವನ್ನು ಹೆತ್ತವರೇ ಹೊತ್ತುಕೊಳ್ಳಬೇಕು, ಶಿಕ್ಷಕರು ಈ ನಿಟ್ಟಿನಲ್ಲಿ ಸಹಕಾರಿಗಳಾಗಿರಬೇಕು. ರಕ್ಷಕ ಮತ್ತು ಶಿಕ್ಷಕರ ಉತ್ತಮ ಬಾಂಧವ್ಯ ಶಾಲೆಯ ಬೆಳವಣಿಗೆಗೆ ಅತ್ಯಂತ ಅಪೇಕ್ಷಣೀಯ ಎಂದು ನಮ್ಮ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಭಟ್, ಬೆಜ್ಪೆ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಜರಗಿದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

   ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ವರದಿ ವಾಚಿಸಿದರು. ಶಾಲಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಮಾತೃಮಂಡಳಿಯ ಅಧ್ಯಕ್ಷೆ ಕಮಲಾಕ್ಷಿ ಸೂರಂಬೈಲು ಉಪಸ್ಥಿತರಿದ್ದರು. ಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿ ವಿದ್ಯಾ.ಎನ್ ಹೆಗಡೆ ವಂದಿಸಿದರು.

Jul 17, 2013

‘ವನಜೀವನ ಯಜ್ಞ-2013’

 


  “ಅರಣ್ಯ ಸಂರಕ್ಷಣೆಯು ನಮ್ಮೆಲ್ಲರ ಗುರಿ. ಸ್ವಚ್ಛ ಸಮಾಜದಲ್ಲಿ ಸುಂದರ ಪ್ರಕೃತಿಯ ಪಾತ್ರವೂ ಪ್ರಧಾನವಾದುದು. ನಾಡಿನಾದ್ಯಂತ ಸ್ವಾಭಾವಿಕ ಕಾಡುಗಳು ಮರೆಯಾಗಿ ಕಾಂಕ್ರೀಟ್ ಕಾಡುಗಳು ಏಳುತ್ತಿರುವುದು ಭವಿಷ್ಯದಲ್ಲಿ ಎದುರಾಗಬಲ್ಲ ಬರಗಾಲಕ್ಕೆ ಮುನ್ನುಡಿಯಾಗಿದೆ. ಅಂತಹ ಸಂಭವನೀಯ ಬರಗಾಲವನ್ನು ತಡೆಗಟ್ಟಲು ನಾವು ಈಗಲೇ ಜಾಗೃತರಾಗಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಹಸಿರಿನ ಕಡೆಗಿನ ಪ್ರೀತಿಯನ್ನು ಬೆಳೆಸಿ ಭವಿಷ್ಯವನ್ನು ಹಸನುಗೊಳಿಸಬೇಕಾಗಿದೆ.” ಎಂದು ಕಾಸರಗೋಡು ಜಿಲ್ಲಾ ಅರಣ್ಯಾಧಿಕಾರಿ ಜಯಮಾಧವನ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ವನಜೀವನ ಯಜ್ಞ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಅಧ್ಯಕ್ಷ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವಪ್ರಸಾದ ನಾಣಿತ್ತಿಲು, ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ಸಹ ಅರಣ್ಯಾಧಿಕಾರಿ ಜೇಮ್ಸ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಾದ ವಿಕ್ರಮ್ ಸ್ವಾಗತಿಸಿ ಪ್ರಜ್ವಲ್ ವಂದಿಸಿದರು. ಗೌರೀಶ ವಿಶ್ವಾಮಿತ್ರ ಕಾರ್ಯಕ್ರಮ ನಿರೂಪಿಸಿದರು.

Jul 13, 2013

ಪರಿಸರ ಮಾಹಿತಿ ಕಾರ್ಯಕ್ರಮ


   
“ಪರಿಸರ ಜನಜೀವನದ ಅವಿಭಾಜ್ಯ ಘಟಕ. ಶಾಂತ ಮತ್ತು ಸುಂದರ ಪರಿಸರ ಬದುಕಿಗೆ ಪೂರಕ ವಾತಾವರಣವನ್ನು ಕಟ್ಟಿಕೊಡುತ್ತವೆ. ಅಂತಹ ಪ್ರಕೃತಿ ನಮ್ಮ ಉಸಿರಾಗಬೇಕು. ಆ ಮೂಲಕ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗಬೇಕು” ಎಂದು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಅಭಿಪ್ರಾಯಪಟ್ಟರು. ಅವರು 09.07.2013 ಮಂಗಳವಾರ ನಮ್ಮ ವಿದ್ಯಾಪೀಠದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ  ಜರಗಿದ ‘ಪರಿಸರ ಮಾಹಿತಿ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ನಿವೃತ್ತ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಿ.ವಿಘ್ನೇಶ್ವರ ಭಟ್ ಮುಖ್ಯ ಅತಿಥಿಗಳಾಗಿದ್ದರು. ದಿ|ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯ ಸಂಚಾಲಕಿ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಾದ ಜಯಶ್ರೀ.ಎಂ.ಸಿ ಸ್ವಾಗತಿಸಿ ಶ್ರಾವ್ಯ.ಕೆ ವಂದಿಸಿದರು. ಚೈತ್ರ.ಕೆ ಮತ್ತು ತಂಡ ಪ್ರಾರ್ಥನೆ ಮಾಡಿದರು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜಕ ವಿನಾಯಕ ಕಾರ್ಯಕ್ರಮ ನಿರೂಪಿಸಿದರು.