Aug 30, 2012

ಓಣಂ ಆಚರಣೆ

ಓಣಂ ಹಬ್ಬವನ್ನು ಮೊನ್ನೆ 25, ಶನಿವಾರದಂದು ಶಾಲೆಯಲ್ಲಿ ಆಚರಿಸಿದೆವು. ವಿದ್ಯಾರ್ಥಿಗಳು ಎಲ್ಲ ತರಗತಿಗಳಲ್ಲೂ ಪ್ರತ್ಯೇಕ ಪ್ರತ್ಯೇಕವಾಗಿ ಆಕರ್ಷಕ ಹೂ ರಂಗವಲ್ಲಿಗಳನ್ನು ಬಿಡಿಸಿದರು. ಮಧ್ಯಾಹ್ನಕ್ಕೆ ‘ಓಣಂ ಊಟ’ ವನ್ನೂ ಆಯೋಜಿಸಲಾಯಿತು.

Aug 18, 2012

ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’


    “ಶಿಸ್ತು, ಸಂಯಮ ನಮ್ಮ ಜೀವನದ ಅವಿಭಾಜ್ಯ ಘಟಕಗಳಾಗಿರಬೇಕು. ಅವುಗಳು ಜೀವನದ ಪರಿಪೂರ್ಣತೆಯ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ. ಅಂತಹ ಮೌಲ್ಯಾಧಾರಿತ ಶಿಕ್ಷಣ ಇಲ್ಲಿ ದೊರೆಯುತ್ತಿರುವುದು ತುಂಬ ಸಂತಸ ತಂದಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಭದ್ರ ತಳಪಾಯವನ್ನು ಕಟ್ಟಿಕೊಡಲಿದೆ" ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಸ್.ವೆಂಕಟ್ರಮಣ ಭಟ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮ ಮತ್ತು ರಾಮಾಯಣ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಸಚಿನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಶ್ರೀಜಾ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿದರು. ರೇಶ್ಮಾ. ಆರ್ ಮತ್ತು ಕುಮಾರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

Aug 15, 2012

ಧ್ವನಿ ವರ್ಧಕ ಮತ್ತು ಆಟೋಟ ಸಾಮಗ್ರಿಗಳ ಕೊಡುಗೆ

ವಿದ್ಯಾಪೀಠದ ಪೂರ್ವ ವಿದ್ಯಾರ್ಥಿ, ಶಾಲಾ ನಾಯಕನ ಕರ್ತವ್ಯವನ್ನೂ ಕಳೆದ ವರ್ಷ ಸಕ್ಷಮವಾಗಿ ನಿರ್ವಹಿಸಿದ್ದ ಸುಹಾಸ್ ಜಿ.ಕಾಕತ್ಕರ್ ಅವರ ತಂದೆ ಬೆಂಗಳೂರಿನ ಗೋಪಾಲ್. ಜಿ.ಕಾಕತ್ಕರ್ ಶಾಲಾ ವಿದ್ಯಾರ್ಥಿಗಳಿಗಾಗಿ ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಆಟೋಟ ಸಾಮಗ್ರಿಗಳು ಮತ್ತು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಧ್ವನಿವರ್ಧಕವನ್ನು ಇಂದು ಕೊಡುಗೆಯಾಗಿ ನೀಡಿದ್ದಾರೆ. ಶಾಲಾ ಸೇವಾ ಸಮಿತಿ ಅಧ್ಯಕ್ಷ ಡಾ|ಡಿ.ಪಿ.ಭಟ್ ಈ ಕೊಡುಗೆಗಳನ್ನು ಸ್ವೀಕರಿಸಿದರು.

ಸ್ವಾತಂತ್ರ್ಯ ದಿನಾಚರಣೆ

“ ಹಿರಿಯರ ತ್ಯಾಗ, ಬಲಿದಾನಗಳಿಂದ ಭಾರತವು ಸ್ವಾತಂತ್ರ್ಯ ಗಳಿಸಿತು. ಈ ಸಂಸ್ಥೆಯಲ್ಲಿಯೂ ವಿದ್ಯಾರ್ಥಿಗಳಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿರುವುದನ್ನು ನಾನು ಕಂಡಿದ್ದೇನೆ. ಆದ್ದರಿಂದ ಸ್ವಾತಂತ್ರ್ಯದ ಮಹತ್ವ ನಿಮಗೆ ತಿಳಿದಿದೆ. ಅಂತಹ ಸ್ವಾತಂತ್ರ್ಯವನ್ನು ಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸ್ವಾತಂತ್ರ್ಯ ದೊರೆತ ಸಂಭ್ರಮದ ನೆನಪಿನ ಈ ಸಂದರ್ಭದಲ್ಲಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಯ ನಾಯಕರನ್ನು ಗೌರವಿಸುವುದು ನಮ್ಮ ಕರ್ತವ್ಯ" ಎಂದು ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಭಿಪ್ರಾಯಪಟ್ಟರು. ಅವರು ಇಂದು ಶ್ರೀ ಭಾರತೀ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಶಾಲಾ ಸೇವಾ ಸಮಿತಿ ಅಧ್ಯಕ್ಷ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಗೋಪಾಲ್.ಜಿ.ಕಾಕತ್ಕರ್, ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶ್ರೀ ಭಾರತೀ ಸಂಸ್ಕೃತ ಮಹಾ ವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿ ಶಿಕ್ಷಕ ಕಿಶನ್‌ರಾಜ್ ವಂದಿಸಿದರು. ವಿದ್ಯಾರ್ಥಿನಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.

Aug 10, 2012

ಶ್ರೀಕೃಷ್ಣ ಜಯಂತಿ

“ಕೃಷ್ಣನ ಲೀಲೆಗಳು ಸಮಾಜದ ಪ್ರಗತಿಗೆ ಕಾರಣವಾಗಿದೆ, ಧರ್ಮದ ಪುನರುತ್ಥಾನ ಅವನು ನಡೆಸಿದ ಮಹಾನ್ ಕಾರ್ಯ.  ಶ್ರೀಕೃಷ್ಣನ ಜನ್ಮ ದಿನದ ಆಚರಣೆ ವಿದ್ಯಾರ್ಥಿಗಳಿಗೆ ಅವನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೆರವಾಗುವುದು" ಎಂದು ಕೆ.ವೆಂಕಟ್ರಮಣ ಭಟ್, ಕುದ್ರೆಪ್ಪಾಡಿ ಹೇಳಿದರು. ಅವರು 09.08.2012 ಗುರುವಾರ ವಿದ್ಯಾಪೀಠದಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ವಿದ್ಯಾಸಂಸ್ಥೆಗಳ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶ್ರೀ ಭಾರತೀ ವಿದ್ಯಾಪೀಠ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸ್ಮಿತಾ ಸ್ವಾಗತಿಸಿ, ಗಾಯತ್ರಿ.ಎಸ್.ಕಾರಂತ್ ವಂದಿಸಿದರು. ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ ಪ್ರಾರ್ಥಿಸಿದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಮುದ್ದುಕೃಷ್ಣ ವೇಷ ಪ್ರದರ್ಶನ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ರಕ್ಷಾ ಬಂಧನ

ಕೇರಳದಲ್ಲಿ ನಡೆದ ಹರತಾಳ ಇತ್ಯಾದಿಗಳ ಕಾರಣದಿಂದಾಗಿ ಮುಂದೂಡಲ್ಪಟ್ಟ ‘ರಕ್ಷಾ ಬಂಧನ’ ಕಾರ್ಯಕ್ರಮವು ನಮ್ಮ ವಿದ್ಯಾಪೀಠದಲ್ಲಿ 06.08.2012 ಸೋಮವಾರ ಜರಗಿತು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪರಸ್ಪರ ರಾಖಿಗಳನ್ನು ಕಟ್ಟಿ ಸಹೋದರತೆಯನ್ನು ಮೆರೆದರು.

ಮಾತೃಮಂಡಳಿ

26.07.2012 ಗುರುವಾರ ಜರಗಿದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ನೂತನವಾಗಿ ಮಾತೃ ಮಂಡಳಿಯನ್ನು ರೂಪಿಸಲಾಯಿತು. ಪ್ರಥಮ ಮಾತೃಮಂಡಳಿ ಸಮಿತಿಯ ಅಧ್ಯಕ್ಷರನ್ನಾಗಿ ಕಮಲಾಕ್ಷಿ ಸೂರಂಬೈಲು ಅವರನ್ನು ಆರಿಸಲಾಯಿತು. ಉಪಾಧ್ಯಕ್ಷರನ್ನಾಗಿ ಮಾಧುರಿ ನಾಯ್ಕಾಪು ಮತ್ತು ವೀಣಾ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳಾಗಿ ಶಿಕ್ಷಕಿ ಚಿತ್ರಾ ಸರಸ್ವತಿ.ಕೆ ಇವರಿಗೆ ಜವಾಬ್ದಾರಿ ನೀಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಶಾ ಕುಳ, ಉಮಾಶಂಕರಿ.ಕೆ, ಶಾರದಾ, ಶ್ರೀದೇವಿ, ಯಮುನಾ, ಚಿತ್ರಾ ನಾಯ್ಕಾಪು, ಮಮತಾ ನಂದಗೋಕುಲ, ಶೋಭಾ ನಾಯ್ಕಾಪು, ನಾಗವೇಣಿ ಹಾಗೂ ವಿದ್ಯಾಪೀಠದ ಶಿಕ್ಷಕಿಯರನ್ನು ಆಯ್ಕೆ ಮಾಡಲಾಯಿತು.

ರಕ್ಷಕ ಶಿಕ್ಷಕ ಸಂಘ ಮಹಾಸಭೆ

ನಮ್ಮ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು 26.07.2012 ಗುರುವಾರ ಜರಗಿತು. ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ವರದಿ ವಾಚಿಸಿದರು. ರಕ್ಷಕ ಶಿಕ್ಷಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು. ಸಂಘದ ನೂತನ ಅಧ್ಯಕ್ಷರನ್ನಾಗಿ ಎಂ.ಚಂದ್ರಶೇಖರ ಭಟ್, ಬೆಜ್ಪೆ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ನೂತನ ಸಮಿತಿಯ ಉಪಾಧ್ಯಕ್ಷರನ್ನಾಗಿ ಎಚ್.ಶಂಕರನಾರಾಯಣ ಭಟ್ ಎಡನಾಡು, ಚಿತ್ರಾ ನಾಯ್ಕಾಪು ಇವರನ್ನು ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಎ.ಕೃಷ್ಣ ಭಟ್ ಅಮ್ಮಂಕಲ್ಲು, ಸುಬ್ರಾಯ ಹೇರಳ, ಡಿ.ಕೃಷ್ಣಮೂರ್ತಿ ಪಾಡಿ, ಪುರುಷೋತ್ತಮ ಆಚಾರ್ಯ ಸೂರಂಬೈಲು, ಮಮತಾ ನಂದಗೋಕುಲ, ಕಮಲಾಕ್ಷಿ ಸೂರಂಬೈಲು, ಶೋಭಾ ನಾಯ್ಕಾಪು, ನಾಗವೇಣಿ ಯವರ ಜೊತೆ ಅಧ್ಯಾಪಕ ವೃಂದವನ್ನು ಆಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳಾಗಿ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ಅವರನ್ನು ಆರಿಸಲಾಯಿತು.