Aug 31, 2013

ಗಮಕ ವಾಚನ - ಪ್ರವಚನ

     

  “ಪುರಾಣ ಪ್ರವಚನಗಳನ್ನು ಕೇಳುವ ಮೂಲಕ ನಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುವ ಅವಕಾಸವಿದೆ. ಈ ನಿಟ್ಟಿನಲ್ಲಿ ಅಪೂರ್ವವಾಗುತ್ತಿರುವ ಗಮಕ ಕಲೆಯನ್ನು ಉಳಿಸಿಕೊಳ್ಳಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಈ ಉದ್ದೇಶದಿಂದ ಕುಶಲವರ ಜನ್ಮಮಾಸ ಶ್ರಾವಣವನ್ನು ಗಮಕ ಮಾಸವಾಗಿ ಆಚರಿಸಲಾಗುತ್ತಿದೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತು, ಕೇರಳ ಗಡಿನಾಡು ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಯಣ ಭಟ್ ಹೇಳಿದರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು, ಕೇರಳ ಗಡಿನಾಡು ಘಟಕ ಆಯೋಜಿಸಿದ ‘ಗಮಕ ವಾಚನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಾಲಾ ಸಮಿತಿಯ ಅಧ್ಯಕ್ಷ ಡಾ|ಡಿ.ಪಿ.ಭಟ್, ಸಾಹಿತಿ ವಿ.ಬಿ.ಕುಳಮರ್ವ ಉಪಸ್ಥಿತರಿದ್ದರು. ಇಚ್ಲಂಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಭಾರತಿ ಗಮಕ ವಾಚನ ನಡೆಸಿದರು.  ಇಚ್ಲಂಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ನರಹರಿ.ಪಿ ಪ್ರವಚನ ನೀಡಿದರು.
    ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ದೀಕ್ಷಿತಾ.ಬಿ ಸ್ವಾಗತಿಸಿ ಕಾರ್ತಿಕ್.ಎಸ್ ವಂದಿಸಿದರು. ಶುಭಲಕ್ಷ್ಮಿ ಯಾಜಿ ಕಾರ್ಯಕ್ರಮ ನಿರೂಪಿಸಿದರು.

Aug 28, 2013

ಶ್ರೀಕೃಷ್ಣ ಜಯಂತಿ - 2013

  
“ಲೋಕದಲ್ಲಿ ಅನಾಚಾರಗಳು ಮೈತಳೆದಾಗ ಭಗವಾನ್ ವಿಷ್ಣು ಶ್ರೀಕೃಷ್ಣನಾಗಿ ಅವತಾರ ತಳೆದ. ನಾಡಿನ ಉನ್ನತಿಗೆ ಕಾರಣನಾದ. ಬಾಲಕರಿಗೆ ಪ್ರೀತಿಯ ಗೆಳೆಯನಾಗಿ, ಪಾಂಡವರ ಅಭ್ಯುದಯಕ್ಕಾಗಿ, ಲೋಕದ ಒಳಿತಿಗಾಗಿ ಹಲವಾರು ಕಾರ್ಯಗಳನ್ನು ಕೈಗೊಂಡು ನಮ್ಮೆಲ್ಲರ ಆತ್ಮೀಯ ದೇವರಾದ. ಅವನ ಜನ್ಮದಿನವನ್ನು ಆಚರಿಸುವುದು ಸನ್ಮಾರ್ಗದ ಕಡೆಗೆ ನಮ್ಮನ್ನು ಪ್ರೇರೇಪಿಸಲು ಸಹಾಯಕರವಾಗಲಿ" ಎಂದು ಪುತ್ತಿಗೆ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ಹರಿಣಿ.ಜಿ.ಕೆ.ನಾಯಕ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ಶ್ರೀಕೃಷ್ಣ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಹೋಲಿ ಫ್ಯಾಮಿಲಿ ಹಿರಿಯ ಬುನಾದಿ ಶಾಲೆಯ ಸಂಸ್ಕೃತ ಶಿಕ್ಷಕ ಬಾಲಕೃಷ್ಣ ಶರ್ಮ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಭಟ್ ಮಡ್ವ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ  ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ಕಂದಮುರಳಿ ಸ್ವಾಗತಿಸಿ ಪ್ರಶಾಂತ.ಎಂ ವಂದಿಸಿದರು. ಕೃಷ್ಣಶೌರಿ ಡಿ.ಎಸ್ ಪ್ರಾರ್ಥಿಸಿದರು.  ಸ್ಮಿತಾ ಆಳ್ವ ಮತ್ತು ಸುಮೇಘ ಕಾರ್ಯಕ್ರಮ ನಿರೂಪಿಸಿದರು.

Aug 26, 2013

ರಕ್ಷಾಬಂಧನ 2013


  
“ಜಗತ್ತು ಹೊಸ ಅಭ್ಯಾಸಗಳ ಕಡೆಗೆ ಹೊರಳುತ್ತಿದೆ. ಜನರಲ್ಲಿ ಪರಸ್ಪರ ಅಸೂಯೆ, ದ್ವೇಷ ಹೆಚ್ಚುತ್ತಿದೆ. ಭಾರತ ಮಾತ್ರವಲ್ಲ, ಶಾಂತಿಪ್ರಿಯವಾದ ಅನೇಕ ದೇಶಗಳು ಯುದ್ಧ ಭೀತಿಯನ್ನು ಎದುರಿಸುತ್ತಿವೆ. ಈ ಸಂದರ್ಭದಲ್ಲಿ ರಕ್ಷಾಬಂಧನದ ಮಹತ್ವ ನಮಗೆ ಸುಲಭವಾಗಿ ಅರ್ಥವಾಗುತ್ತದೆ. ರಕ್ಷಾಬಂಧನದ ಮೂಲಕ ವಸುಧೈವ ಕುಟುಂಬಕಂ, ನಾವೆಲ್ಲ ಸಹೋದರರು ಎಂಬ ಭಾವನೆ ಬೆಳಗಬೇಕಿದೆ." ಎಂದು ಕುಂಬಳೆ ಹೋಲಿ ಫ್ಯಾಮಿಲಿ ಹಿರಿಯ ಬುನಾದಿ ಶಾಲೆಯ ಸಂಸ್ಕೃತ ಶಿಕ್ಷಕ ಬಾಲಕೃಷ್ಣ ಶರ್ಮ ಅಭಿಪ್ರಾಯಪಟ್ಟರು. ಅವರು 20.08.2013 ಮಂಗಳವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ  ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಧನ್ವ ಶಂಕರ ಸ್ವಾಗತಿಸಿ ಶ್ವೇತಾ ವಂದಿಸಿದರು. ವಿದ್ಯಾಲಕ್ಷ್ಮಿ. ಎಸ್ ಕಾರ್ಯಕ್ರಮ ನಿರೂಪಿಸಿದರು.

Aug 15, 2013

ಸ್ವಾತಂತ್ರ್ಯ ದಿನಾಚರಣೆ 2013


“ಭಾರತದ ಸ್ವಾತಂತ್ರ್ಯ ವಿಭಿನ್ನ ರೀತಿಯ ಹೋರಾಟದಿಂದ ವಿಶ್ವದ ಗಮನವನ್ನು ಸೆಳೆದಿದೆ. ನಮ್ಮ ಹಿರಿಯರ ಕೆಚ್ಚೆದೆಯ ಪರಿಶ್ರಮದಿಂದ ಆಂಗ್ಲರ ಬಳಿಯಲ್ಲಿದ್ದ ಅಧಿಕಾರವನ್ನು ಪಡೆದುಕೊಳ್ಳಲು ನಮಗೆ ಸಾಧ್ಯವಾಯಿತು. ವಿದ್ಯಾರ್ಥಿಗಳು ಹಿರಿಯರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ ಭವ್ಯ ಭಾರತದ ನಿರ್ಮಾಣಕ್ಕೆ ಪ್ರಯತ್ನಿಸಬೇಕು.” ಎಂದು ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ಲು ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶ್ರೀ ಭಾರತೀ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎಚ್.ಶಂಕರನಾರಾಯಣ ಭಟ್, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಾದ ದೀಪಕ್ ಶ್ರೀವತ್ಸ ಸ್ವಾಗತಿಸಿ ಗೌರೀಶ ವಿಶ್ವಾಮಿತ್ರ ವಂದಿಸಿದರು. ಸ್ವಾತಿ ಘಾಟೆ ಕಾರ್ಯಕ್ರಮ ನಿರೂಪಿಸಿದರು.

Aug 14, 2013

ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’


“ಮಹಾತ್ಮರ ಜೀವನ ಚರಿತ್ರೆ ವಿದ್ಯಾರ್ಥಿಗಳಿಗೆ ಬದುಕಿನ ಪಾಠವನ್ನು ಹೇಳಿಕೊಡುತ್ತವೆ. ನಮ್ಮ ಜೀವನದ ಹಾದಿ ಮುಂದಿನ ದಿನಗಳಲ್ಲಿ ಇಂತಹ ಮಹತ್ವದ ಘಟ್ಟವನ್ನು ಹಾದು ಹೋಗುತ್ತವೆ. ಆದ್ದರಿಂದ ನಮ್ಮ ದಿನಚರಿಯನ್ನು ಬರೆದಿಡುವುದು ತುಂಬ ಅಗತ್ಯ. ಗತ, ವರ್ತಮಾನ ಕಾಲಗಳಲ್ಲಿ ಮಾಡಿದ ತಪ್ಪನ್ನು ಭವಿಷ್ಯದಲ್ಲಿ ತಿದ್ದಿಕೊಳ್ಳಲು ಈ ವಿಧಾನ ನಮಗೆ ಸಹಾಯಕಾರಿ. ಮನದಲ್ಲಿ ತಲೆ ಎತ್ತುವ ಸಂದೇಹಗಳನ್ನು ಈ ಪುಸ್ತಕದ ಬದಿಯಲ್ಲಿ ಬರೆದಿಟ್ಟು ಹಿರಿಯರಿಂದ ಉತ್ತರವನ್ನು ಕೇಳಿ ಬರೆದಿಟ್ಟುಕೊಳ್ಳಿ. ಇದು ನಮಗೆ ಬದುಕಿನ ಪಾಠವನ್ನು ಹೇಳುತ್ತವೆ. ” ಎಂದು ಕಥೆಗಾರ್ತಿ ಅನುಪಮಾ ಪ್ರಸಾದ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಪ್ರಜ್ವಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ನಾಯಕಿ ಶ್ವೇತಾ.ಕೆ ಪ್ರಾಸ್ತಾವಿಕ ಭಾಷಣ ಮಾಡಿದರು. ಗೌರೀಶ ವಿಶ್ವಾಮಿತ್ರ ಗತವರ್ಷದ ವರದಿಯನ್ನು ಮಂಡಿಸಿದರು.

    ವಿದ್ಯಾರ್ಥಿಗಳಾದ ತೀಕ್ಷಾ ಸ್ವಾಗತಿಸಿ ವಿಕ್ರಮ್ ವಂದಿಸಿದರು. ದೀಪಕ್ ಶ್ರೀವತ್ಸ ಮತ್ತು ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು.