Mar 31, 2011

ಪ್ರತಿಭಾ ಭಾರತೀ ವಾರ್ಷಿಕ ಕಾರ್ಯಕ್ರಮಗಳ ಸಮಾರೋಪ

ಇಂದು ನಮ್ಮ ಪುಟಾಣಿ ವಿದ್ಯಾರ್ಥಿಗಳಿಗೆ ೨೦೧೦-೧೧ ಅಧ್ಯಯನ ವರ್ಷದ ಕೊನೆಯ ದಿನ. ಪರೀಕ್ಷೆಗಳ ನಂತರ ದೊರೆತ ಅವಿಸ್ಮರಣೀಯ ಕ್ಷಣ. ಈ ನಿಟ್ಟಿನಲ್ಲಿ ಆಯೋಜಿಸಲಾದ ಪ್ರತಿಭಾ ಭಾರತೀ ವಾರ್ಷಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ದೊರೆತ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡರು. ಜೊತೆಯಲ್ಲಿ ಹಿರಿಯರಾದ ಡಾ| ಹರಿಕೃಷ್ಣ ಭರಣ್ಯ, ಮುಖ್ಯೋಪಾಧ್ಯಾಯ ಶಾಮ ಭಟ್, ಆಡಳಿತ ಮಂಡಳಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಇವರಿಂದ ಹಿತವಚನಗಳ ನುಡಿ. ಮುಂದಿನ ಅಧ್ಯಯನ ವರ್ಷಕ್ಕೆ ಹೊಸ ಉತ್ಸಾಹದಿಂದ ಬರುತ್ತೇವೆ ಎಂಬ ವಿಶ್ವಾಸದೊಂದಿಗೆ ವಿದ್ಯಾರ್ಥಿಗಳು ಮನೆ, ಅಜ್ಜನಮನೆಗಳ ಕಡೆಗೆ ಹೊರಟಿದ್ದಾರೆ, ಮುಂದಿನ ದಿನಗಳನ್ನು ಮಾವಿನ ಮರದ ಅಡಿಯಲ್ಲಿ, ಗೇರು ಹಣ್ಣಿನ ತೋಪಿನಲ್ಲಿ... ಆಟವಾಡುತ್ತಾ ಕಳೆಯುವುದಕ್ಕಾಗಿ, ಅವರಿಗೆಲ್ಲ ನಮ್ಮ ಶುಭಾಶಯಗಳು.
ಈ ನಡುವೆ ಪುಟ್ಟ ಕಿವಿ ಮಾತು, ಮುಂದಿನ ವರ್ಷದ ತಯಾರಿಗಾಗಿ ನಡುನಡುವೆ ನಾವು ಪೂರ್ವ ತಯಾರಿ ತರಗತಿಗಳನ್ನು ಇಟ್ಟುಕೊಳ್ಳುವವರಿದ್ದೇವೆ, ನೆನಪಿರಲಿ. ಮುಂದಿನ ವರ್ಷ ನಾವೂ ಕೂಡಾ ಹತ್ತರ ಕಡೆಗೆ ಹತ್ತುವವರು...

Mar 2, 2011

ಯಕ್ಷಗಾನ - ಭರಪೂರ ಮನರಂಜನೆ

ನಿನ್ನೆ ರಾತ್ರಿ ವಿದ್ಯಾಲಯ ಪರಿಸರದಲ್ಲಿ ನಡೆದ ಗಜೇಂದ್ರ ಮೋಕ್ಷ - ಶ್ರೀನಿವಾಸ ಕಲ್ಯಾಣ ನೆರೆದ ಸಭಿಕರಿಗೆ ಭರಪೂರ ಮನರಂಜನೆ ಒದಗಿಸಿತು. ಶ್ರೀ ರಾಮಚಂದ್ರಕೃಪಾಪೋಷಿತ ಯಕ್ಷಗಾನ ಮಂಡಳಿ, ಹೊಸನಗರ ನಡೆಸಿದ ಈ ಬಯಲಾಟಕ್ಕೆ ಸಾವಿರಕ್ಕೂ ಮಿಕ್ಕಿ ಸಭ್ಯ ಜನರು ಸೇರಿದ್ದು ಮುಜುಂಗಾವು ಪರಿಸರದಲ್ಲಿ ಹೊಸ ದಾಖಲೆ. ಗಜೇಂದ್ರ, ಮಕರ ಪ್ರವೇಶ, ಪದ್ಮಾವತಿಯ ಶೃಂಗಾರ ಲಾಸ್ಯ, ಕಿರಾತ-ಸುದೇವರ ಸಂಭಾಷಣೆ ಸೇರಿದ್ದ ಆಸ್ವಾದಕರ ಮನಸೂರೆಗೊಂಡಿತು. ಪ್ರತಿಭಾ ಭಾರತಿಗೆ ಫೋಟೋ ಒದಗಿಸಿಕೊಟ್ಟ ಹರೀಶ್ ಹಳೆಮನೆ ಇವರಿಗೆ ಧನ್ಯವಾದಗಳು.