Aug 25, 2014

ಪರಿಸರ ಮಾಹಿತಿ ಕಾರ್ಯಕ್ರಮ - 2014

``ಕಲ್ಪವೃಕ್ಷ ಕಾಮಧೇನುಗಳು ಸಮಾಜಕ್ಕೆ ಅತ್ಯಂತ ಆವಶ್ಯಕವಾದವುಗಳು. ಇವುಗಳ ಉಳಿವು ಪರಿಸರ ಸಂರಕ್ಷಣೆಯ ದ್ಯೋತಕ. ಆತ್ಮ, ಮಹಾತ್ಮ ಮತ್ತು ಪರಮಾತ್ಮನ ಮೇಲಿನ ಭಕ್ತಿ ಪರಿಸರ ಸಂರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಮಾನವನಿಗೆ ಸಹಜೀವಿಗಳ ಮೇಲೆ ಪ್ರೀತಿ ಇರಬೇಕು. ಆದರೆ ಪ್ರಸ್ತುತ ನಾವು ಸೇವಿಸುವ ಆಹಾರವೇ ವಿಷಮಯವಾಗುತ್ತಿದೆ. ಉಪ್ಪು, ಮೈದಾ, ಸಕ್ಕರೆಗಳಲ್ಲಿ ಕಲಬೆರಕೆ ಕಂಡುಬರುತ್ತಿದೆ. ಮಾನವನು ಸ್ವಂತಲಾಭಕ್ಕಾಗಿ ಸಮಾಜವನ್ನೇ ಬಲಿಕೊಡುವ ಹಂತಕ್ಕೆ ತಲಪಿದ್ದಾನೆ. ನಾವು ಈ ದುರಭ್ಯಾಸದಿಂದ ವಿಮುಖರಾಗಿ ಸನ್ಮಾರ್ಗದಲ್ಲಿ ನಡೆಯಬೇಕು” ಎಂದು ನಿವೃತ್ತ ಪ್ರಾಂಶುಪಾಲ ಪಿ.ಎನ್. ಮೂಡಿತ್ತಾಯ ಅಭಿಪ್ರಾಯಪಟ್ಟರು. ಅವರು ಮೊನನೆ 22.08.2014 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ  ಜರಗಿದ ‘ಪರಿಸರ ಮಾಹಿತಿ ಕಾರ್ಯಕ್ರಮ’ದಲ್ಲಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜಕ ಸತೀಶ್ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಾದ ದೀಕ್ಷಾ ಸ್ವಾಗತಿಸಿ ಪುನೀತ್ ಕುಮಾರ್ ವಂದಿಸಿದರು. ನಿಶಿತಾ. ಎನ್ ಕಾರ್ಯಕ್ರಮ ನಿರೂಪಿಸಿದರು.

Aug 16, 2014

ಶ್ರೀಕೃಷ್ಣ ಜಯಂತಿ ಉತ್ಸವ _ ಜಯ ಸಂವತ್ಸರ


``ಧರ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಎಳವೆಯಲ್ಲಿಯೇ ಅರಿವು ಮೂಡಿಸಬೇಕು. ಈ ಹಂತದಲ್ಲಿ ನಮ್ಮ ಸಂಸ್ಕೃತಿಯ ವೈವಿಧ್ಯದ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳು ಅಗತ್ಯವಾಗಿ ಏರ್ಪಾಡಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಧೈರ್ಯ ಮತ್ತು ನಿರ್ಭಯದಿಂದ ಭಾಗವಹಿಸಬೇಕು." ಎಂದು ‘ಬೆಣ್ಣೆ’ ಮಾಸ ಪತ್ರಿಕೆಯ ಗೌರವ ಸಂಪಾದಕ ಮಧುರಕಾನನ ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ಶ್ರೀಕೃಷ್ಣ ಜಯಂತಿ ಉತ್ಸವ ಮತ್ತು ರಾಮಾಯಣ ಮಾಸಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್, ಜ್ಯೋತಿಷಿ ಎಂ.ಚಂದ್ರಶೇಖರ ಭಟ್ ಮಡ್ವ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಶ್ರೀರಾಮ ಪಟ್ಟಾಭಿಷೇಕ ರೂಪಕ ಜರಗಿತು. ವಿದ್ಯಾರ್ಥಿಗಳಾದ ಚೈತ್ರಶ್ರೀ ಎ.ಪಿ ಸ್ವಾಗತಿಸಿ ಶ್ರೀಜಾ ಗಿರೀಶ್ ವಂದಿಸಿದರು. ಕೌಶಿಕ್ ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Aug 15, 2014

‘ಸತ್-ಲೈಟ್’ ಉದ್ಘಾಟನೆ - ಸ್ವಾತಂತ್ರ್ಯೋತ್ಸವ



ಉತ್ತಮವಾದುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರ ಬಲಿದಾನ ಮತ್ತು ಜೀವನ ಸಾರ್ಥಕತೆಯ ಆದರ್ಶವನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಪ್ರಧಾನಮಂತ್ರಿಯವರ ಆದರ್ಶದಂತೆ ಸ್ವಚ್ಚವಾದ ಭಾರತ ನಿರ್ಮಾಣಕ್ಕಾಗಿ ನಾವೆಲ್ಲ ಪ್ರಯತ್ನಿಸಬೇಕು” ಎಂದು ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ್ ನಾಣಿತ್ಲು ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಕಲಿಕೆಗಾಗಿ ‘ಸತ್-ಲೈಟ್’ ವ್ಯವಸ್ಥೆಯ ಉದ್ಘಾಟನೆಯೂ ಜರಗಿತು.

ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಎಂ.ಚಂದ್ರಶೇಖರ ಭಟ್ ಮಡ್ವ, ಮುಳ್ಳೇರಿಯಾ ಮಂಡಲ ವಿದ್ಯಾ ಪ್ರಧಾನ ಬಾಲಕೃಷ್ಣ ಶರ್ಮ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಂಜನಾ ಸ್ವಾಗತಿಸಿ ಸ್ಕಂದ ಮುರಳಿ ವಂದಿಸಿದರು. ಪ್ರಶಾಂತ್.ಎಂ ಕಾರ್ಯಕ್ರಮ ನಿರೂಪಿಸಿದರು.

Aug 11, 2014

ರಕ್ಷಾ ಬಂಧನ – ಜಯ ಸಂವತ್ಸರ

-->

ಎಲ್ಲ ಜೀವಿಗಳನ್ನು ತನ್ನಂತೆ ಕಾಣಬೇಕು. ಎಲ್ಲ ಜೀವಿಗಳಿಗೂ ನೋವಾಗದಂತೆ ನೋಡಿಕೊಳ್ಳಬೇಕು. ಮಹಿಳೆಯರನ್ನು ಎಲ್ಲಿ ಗೌರವದಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ಸಾಕ್ಷಾತ್ಕರಿಸುತ್ತಾರೆ. ಅಂತಹ ಸುಂದರ ಭೂಮಿ ನಮ್ಮದಾಗಬೇಕು. ಪರಿಪೂರ್ಣತೆಯ ಸಂಕೇತವಾದ ಶ್ರಾವಣಪೂರ್ಣಿಮೆಯನ್ನು ಈ ಹಿನ್ನೆಲೆಯಲ್ಲಿ ರಕ್ಷಾ ಬಂಧನ ಹಬ್ಬವಾಗಿ ಆಚರಿಸುತ್ತೇವೆ. ಎಂದು ನಿವೃತ್ತ ಸಂಸ್ಕೃತ ಶಿಕ್ಷಕ ಬಾಲಕೃಷ್ಣ ಶರ್ಮ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಕುಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಸ್ವಾಗತಿಸಿ ವಿದ್ಯಾರ್ಥಿನಿ ಅನನ್ಯ ವಂದಿಸಿದರು. ವಿಕ್ರಂ ಕಾರ್ಯಕ್ರಮ ನಿರೂಪಿಸಿದರು.