Feb 11, 2013

“ಪರೀಕ್ಷಾ ಭಯದಿಂದ ವಿದ್ಯಾರ್ಥಿಗಳು ದೂರವಾಗಲಿ: ಡಾ| ವೈ.ವಿ. ಕೃಷ್ಣಮೂರ್ತಿ”

    “ಮುಂದಿನ ತಿಂಗಳು ಪರೀಕ್ಷೆಗಳು ಆರಂಭವಾಗುತ್ತವೆ ಎನ್ನುವಾಗ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಆವರಿಸುತ್ತದೆ. ನೆನಪಿನ ಶಕ್ತಿಯ ಮೇಲಿರುವ ಅವರ ಹಿಡಿತ ಕಡಿಮೆಯಾಗುತ್ತದೆ. ಪರಿಣಾಮವಾಗಿ ಪರೀಕ್ಷೆಯಲ್ಲಿ ಅಂಕಗಳು ಕಡಿಮೆಯಾಗುತ್ತವೆ. ಈಗಲೂ ವ್ಯಾವಹಾರಿಕ ಜಗತ್ತಿನಲ್ಲಿ ಅಂಕಗಳೇ ಪ್ರಧಾನವಾಗಿರುವುದರಿಂದ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಲು ನಾವು ಪ್ರಯತ್ನಿಸಬೇಕು” ಎಂದು ಬದಿಯಡ್ಕದ ಪಶುವೈದ್ಯ ಡಾ| ವೈ.ವಿ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಅವರು ೦೩.೦೨.೨೦೧೩ ಆದಿತ್ಯವಾರ ನಮ್ಮ ವಿದ್ಯಾಪೀಠದಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ‘ಅವಲಂಬನ’ ತಂಡ ಆಯೋಜಿಸಿದ ‘ಅಧ್ಯಯನ ಶೈಲಿ ಹಾಗೂ ಪರೀಕ್ಷಾ ತಯಾರಿ ಮಾರ್ಗದರ್ಶನ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ಮುಜುಂಗಾವು ಶ್ರೀಭಾರತೀ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ| ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯಾ ಮಂಡಲದ ವಿದ್ಯಾಪ್ರಧಾನ ದೇವಕಿ ಪನ್ನೆ, ಸೀತಾಂಗೋಳಿ ವಲಯ ಅಧ್ಯಕ್ಷ ಇ.ಕೃಷ್ಣಮೋಹನ ಭಟ್, ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್. ಸತ್ಯಶಂಕರ ಭಟ್, ‘ಅವಲಂಬನ’ ತಂಡದ ಅಜ್ಜಕಾನ ರಾಮಚಂದ್ರ ಉಪಸ್ಥಿತರಿದ್ದರು. ಶ್ರೀ ರಾಮಚಂದ್ರಾಪುರ ಮಠದ ಕೃಷ್ಣಪ್ರಸಾದ್ ಎಡಪ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಜುಂಗಾವು ಶ್ರೀಭಾರತೀ ವಿದ್ಯಾಸಂಸ್ಥೆಗಳ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಸ್ವಾಗತಿಸಿದರು. ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮಭಟ್ ದರ್ಬೆ-ಮಾರ್ಗ ಧನ್ಯವಾದ ಸಮರ್ಪಿಸಿದರು.

    ಸಂಪನ್ಮೂಲ ವ್ಯಕ್ತಿಗಳಾದ ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ವಿಶ್ವೇಶ್ವರ ಭಟ್ ಉಂಡೆಮನೆ ಮತ್ತು ನಿವೃತ್ತ ಶಿಕ್ಷಕ ಗೋವಿಂದ ಭಟ್ ಬಳ್ಳಮೂಲೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.