Jun 22, 2015

ಯೋಗ ದಿನಾಚರಣೆ



ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತಿರುವ ಯೋಗ ದಿನಾಚರಣೆಯನ್ನು ನಮ್ಮ ಶಾಲೆಯಲ್ಲೂ ಹಮ್ಮಿಕೊಳ್ಳಲಾಯಿತು. ಹಿರಿಯ ಯೋಗಶಿಕ್ಷಕ ಎಚ್.ಶಂಕರನಾರಾಯಣ ಭಟ್ಟ ಮತ್ತು ಸೀತಾಂಗೋಳಿ ರಾಮಕೃಷ್ಣ ಹೆಬ್ಬಾರ್ ಸೂಕ್ತ ಮಾರ್ಗದರ್ಶನ ನೀಡಿದರು. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು...

Jun 6, 2015

ವಿಶ್ವ ಪರಿಸರ ದಿನಾಚರಣೆ


ನಮ್ಮ ವಿದ್ಯಾಪೀಠದಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವು ನಿನ್ನೆ 05.06.2015 ಶುಕ್ರವಾರ ಜರಗಿತು. ನಿವೃತ್ತ ಶಿಕ್ಷಕ ಡಾ|ಸದಾಶಿವ ಭಟ್ ಪೆರ್ಲ, ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ಲು, ಕೇಶವ ಪ್ರಸಾದ್ ನಾಣಿತ್ಲು ವಿವಿಧ ಸಸಿಗಳನ್ನು ನೆಡುವ ಮೂಲಕ ಮಕ್ಕಳ ಜೊತೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಿದರು.

‘ಸ್ವಾಗತ ಭಾರತೀ - 2015’

 ಹಿಂದಿನ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶಗಳು ಇರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಕಲಿಯುವಿಕೆಗೆ ಅಗತ್ಯವಾದ ಮತ್ತು ಪೂರಕವಾದ ವ್ಯವಸ್ಥೆಗಳು ಹಲವಾರು ಇವೆ. ವಿದ್ಯಾರ್ಥಿಗಳು ಮತ್ತು ರಕ್ಷಕರು ಈ ವ್ಯವಸ್ಥೆಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಶ್ರೀಗುರುಗಳ ಆಶೀರ್ವಾದ ಇಲ್ಲಿನ ವಿದ್ಯಾರ್ಥಿಗಳ ಮೇಲಿರುವುದು ವಿದ್ಯಾರ್ಥಿಗಳ ಸೌಭಾಗ್ಯ. ಕಲಿಕೆಯೊಂದಿಗೆ ಸಂಸ್ಕೃತಿ, ಪುರಾಣದ ಮಹತ್ವದ ಅಂಶಗಳನ್ನು ಕಲಿಸುತ್ತಿರುವುದು ಸಂತಸದ ವಿಚಾರ. ಇಂತಹ ಅವಕಾಶ ಎಲ್ಲ ಆಂಗ್ಲಮಾಧ್ಯಮ ಶಾಲೆಗಳಲ್ಲಿ ದೊರಕಲಾರದು. ಹತ್ತನೇ ತರಗತಿ ವಿದ್ಯಾರ್ಥಿಗಳ ಸತತ ನಾಲ್ಕನೇ ತಂಡವು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸಿ ಮುಜುಂಗಾವು ಶಿಕ್ಷಣ ಸಂಸ್ಥೆಗಳ ಕಡೆಗೆ ಸಮಾಜದ ಗಮನವನ್ನು ಸೆಳೆದಿದೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಂಕಲ್ಪದಂತೆ ರೂಪುಗೊಂಡ ವಿದ್ಯಾಸಂಸ್ಥೆ ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿವೆ ಎನ್ನುವುದಕ್ಕೆ ಇದು ನೂತನ ನಿದರ್ಶನ ಎಂದು ಸಮಾಜ ಸೇವಕ ಯೋಗೀಶ ಕಡಮಣ್ಣಾಯ ಅಭಿಪ್ರಾಯಪಟ್ಟರು. ಅವರು ಮೊನ್ನೆ 01.06.2015 ಸೋಮವಾರ ನಮ್ಮ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿದ ಸ್ವಾಗತ ಭಾರತೀ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಧ್ಯಾ. ವಿ.ಶೆಟ್ಟಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ವಿದ್ಯಾಲಯಗಳಿಗೂ ಸಹಾಯ ಹಸ್ತ ನೀಡಲಾಗುತ್ತಿದೆ. ಈ ವಿದ್ಯಾಲಯದಲ್ಲಿ ತರಕಾರಿ ತೋಟವನ್ನು ಮಾಡಲು ನಾವು ಸಹಾಯ ಮಾಡುತ್ತೇವೆ. ಈ ವಿದ್ಯಾಲಯದ ಪರಿಸರವನ್ನು ಹಚ್ಚಹಸಿರಾಗಿರಿಸೋಣ ಎಂದು ಅಭಿಪ್ರಾಯಪಟ್ಟರು.

ಶಾಲಾ ಸಮಿತಿಯ ಕಾರ್ಯದರ್ಶಿ ಸತ್ಯಶಂಕರ ಭಟ್ ಹಿಳ್ಳೆಮನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾ ಸರಸ್ವತಿ ಉಪಸ್ಥಿತರಿದ್ದರು. ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶ್ರೀಜಾ ಗಿರೀಶ್‌ರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಜಯಶ್ರೀ ಸ್ವಾಗತಿಸಿ ಸುಧನ್ವ ವಂದಿಸಿದರು. ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು.