Dec 12, 2011

ಶಾಲಾ ಕ್ರೀಡಾಕೂಟ


ನಮ್ಮ ವಿದ್ಯಾಪೀಠ ವಿದ್ಯಾರ್ಥಿಗಳ ಶಾಲಾ ಕ್ರೀಡಾಕೂಟ ಕಳೆದ ಗುರುವಾರ ೦೮.೧೨.೨೦೧೧ ರಂದು ಜರಗಿತು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ರಸಾದ ಕುಂಚಿನಡ್ಕ ಧ್ವಜವಂದನೆ ಸ್ವೀಕರಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು.

Dec 6, 2011

ಜ್ಞಾನ ಭಾರತೀ

ಕಳೆದ ವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಜ್ಞಾನ ಭಾರತೀ ಕಾರ್ಯಕ್ರಮದಲ್ಲಿ ನಿವೃತ್ತ ಜೈಲು ಸೂಪರಿಟೆಂಡೆಂಟ್ ಡಿ.ಪಿ.ಪರಮೇಶ್ವರ ಹೆಬ್ಬಾರ್ ಕುದ್ರೆಪ್ಪಾಡಿ ವಿದ್ಯಾರ್ಥಿಗಳಿಗೆ ‘ಹಿರಿಯರೊಂದಿಗೆ ಮಾತುಕತೆ’ಯ ಅನುಭವವನ್ನು ಕಟ್ಟಿಕೊಟ್ಟರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು.

Oct 29, 2011

ಅಕ್ಟೋಬರ್ ತಿಂಗಳ ‘ಪ್ರತಿಭಾ ಭಾರತೀ’



“ಮುಜುಂಗಾವಿನ ಪ್ರಶಾಂತ ಪರಿಸರ, ದೇವಾಲಯದ ಸನಿಹದಲ್ಲಿ ವಿದ್ಯಾರ್ಜನೆ ಮಾಡುವುದು ಒಂದು ಸುಯೋಗ. ಆಧುನಿಕತೆಯ ಕಡೆಗೆ ಪೂರ್ತಿಯಾಗಿ ಮುಖ ಮಾಡದೆ ಇನ್ನೂ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಿದ ವಿದ್ಯಾಭ್ಯಾಸ ನೀಡುತ್ತಿರುವ ಶ್ರೀ ಭಾರತೀ ವಿದ್ಯಾಪೀಠ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ದಾರಿಯನ್ನು ನಿರಂತರವಾಗಿ ತೋರುತ್ತಿದೆ. ಇದು ವಿದ್ಯಾರ್ಥಿಗಳ ಬಹುಮುಖಿ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ." ಎಂದು ಸಾಹಿತಿ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಅಕ್ಟೋಬರ್ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಜೀವಿತ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸುಪ್ರೀತಾ ಸ್ವಾಗತಿಸಿ, ದೀಪಕ್ ಶ್ರೀವತ್ಸ ವಂದಿಸಿದರು. ಕಾರ್ತಿಕ್. ಎಸ್ ಮತ್ತು ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.

Oct 10, 2011

ಶ್ರೀ ಶಾರದಾ ಪೂಜೆ

ಮೊನ್ನೆ ೦೬.೧೦.೨೦೧೧ ಗುರುವಾರ ವಿಜಯ ದಶಮಿಯ ದಿನ ನಮ್ಮ ವಿದ್ಯಾಪೀಠದಲ್ಲಿ ವೇದಮೂರ್ತಿ ಶ್ರೀ ಮಹಾದೇವ ಭಟ್ಟ ಕೋಣಮ್ಮೆ ಇವರು ಶ್ರೀ ಶಾರದಾ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪುಟಾಣಿಗಳಿಗೆ ಅಕ್ಷರಾಭ್ಯಾಸವನ್ನೂ ಅವರು ನೆರವೇರಿಸಿಕೊಟ್ಟರು.

Oct 3, 2011

ಪೊಸಡಿ ಗುಂಪೆ ಬೆಟ್ಟ ನೋಡು...




ನಿನ್ನೆ ಗಾಂಧಿ ಜಯಂತಿ ರಜೆ. ರಜಾ ದಿನವಾದ್ದರಿಂದ ನಮ್ಮ ಶಾಲಾ ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯ ಉನ್ನತ ಶಿಖರಗಳಲ್ಲಿ ಒಂದಾದ ಪೊಸಡಿ ಗುಂಪೆಗೆ ಚಾರಣವನ್ನು ಮಾಡಿದರು. ವಿದ್ಯಾರ್ಥಿಗಳಿಗೆ ಚಾರಣದ ವಿಶಿಷ್ಟ ಅನುಭೂತಿಯನ್ನು ಪೊಸಡಿ ಗುಂಪೆ ನೀಡಿತು. 8,9,10 ತರಗತಿಯ ವಿದ್ಯಾರ್ಥಿಗಳು ಗುಡ್ಡ ತುದಿಯಲ್ಲಿರುವ ಅಕ್ಕ ತಂಗಿಯರ ಬಾವಿ, ಅಕ್ಕ ತಂಗಿಯರ ಹೂಗಳನ್ನು ವೀಕ್ಷಿಸಿದರು. ಶ್ರೀರಾಮಚಂದ್ರಾಪುರ ಮಠದ ಉದ್ದೇಶಿತ ಶ್ರೀ ಶಂಕರ ಧ್ಯಾನ ಮಂದಿರ ನಿರ್ಮಾಣದ ಉದ್ದೇಶಿತ ಸ್ಥಳವನ್ನು ನೋಡಿ, ಸೂರ್ಯಾಸ್ತದ ಸೊಬಗನ್ನು ನೋಡುತ್ತಾ ಮರಳಿ ಮನೆಯ ದಾರಿ ಹಿಡಿದರು.

Oct 1, 2011

ಪ್ರತಿಭಾ ಭಾರತೀ - ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮ



29.09.2011 ಗುರುವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿದ ಸೆಪ್ಟೆಂಬರ್ ತಿಂಗಳ ಪ್ರತಿಭಾ ಭಾರತೀ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಬಿ.ರಾವ್ ಪ್ರಧಾನ ಭಾಷಣ ಮಾಡಿದರು. ವಿದ್ಯಾರ್ಥಿನಿ ಶ್ವೇತಾ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಸುಹಾಸ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ವೈಶಾಲಿ ಮತ್ತು ಕವಿತಾ ಕಾರ್ಯಕ್ರಮ ನಿರೂಪಿಸಿದರು. ಗೌರೀಶ ವಿಶ್ವಾಮಿತ್ರ ಧನ್ಯವಾದ ಸಮರ್ಪಿಸಿದರು.

ನಮನಗಳು ನಿಮಗೆ...

ಮುಜುಂಗಾವು ಶ್ರೀಭಾರತೀ ವಿದ್ಯಾಸಂಸ್ಥೆಗಳಲ್ಲಿ ಹತ್ತು ದಿನಗಳ ವಿಶೇಷ ಇಂಗ್ಲೀಷ್ ತರಬೇತಿ ಶಿಬಿರ ನಡೆಸಿಕೊಟ್ಟ ಚಂದ್ರಪ್ರಭಾ ಬಿ.ರಾವ್ ಮತ್ತು ಮಲಯಾಳ ಭಾಷಾ ತರಬೇತಿ ಶಿಬಿರವನ್ನು ನಡೆಸಿಕೊಟ್ಟ ಕೆ.ವೆಂಕಟ್ರಮಣ ಭಟ್ ಅವರನ್ನು ಶ್ರೀ ಬಾರತೀ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ೩೦.೦೯.೨೦೧೧ ಶುಕ್ರವಾರದಂದು ಸನ್ಮಾನಿಸಿದರು.

Sep 26, 2011

ಚಿನ್ಮಯ ವಿದ್ಯಾಲಯದಲ್ಲಿ ಭಗವದ್ಗೀತೆ

ಸೆಪ್ಟೆಂಬರ್ ೨೧ರಂದು ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಆಯೋಜಿಸಲ್ಪಟ್ಟ ಭಗವದ್ಗೀತಾ ಕಂಠಪಾಠ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಇಂದಿರಾ. ಯಂ, ಕಿರಣ್ ಮಹೇಶ್, ಚೈತ್ರಾ, ಮನೀಶ್, ಕೃಷ್ಣ ಶೌರಿ. ಡಿ.ಎಸ್, ಚಿನ್ಮಯಿ. ಎಂ, ಗೌರೀಶ ವಿಶ್ವಾಮಿತ್ರ ಮತ್ತು ಅರುಣ ಶಂಕರ ಪ್ರತ್ಯೇಕ ವಿಭಾಗಗಳಲ್ಲಿ ಭಾಗಹಿಸಿದ್ದರು. ಆಯ್ದ ಕೆಲವೇ ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದ ಪ್ರೋತ್ಸಾಹಕ ಬಹುಮಾನ ನಮ್ಮ ವಿದ್ಯಾಪೀಠದ ಇಂದಿರಾ. ಎಂ, ಕಿರಣ್ ಮಹೇಶ್, ಕೃಷ್ಣ ಶೌರಿ. ಡಿ.ಎಸ್ ಮತ್ತು ಚಿನ್ಮಯಿ. ಎಂ ಇವರಿಗೆ ದೊರೆತಿದೆ. ಎಲ್ಲರಿಗೂ ಶುಭಾಶಯಗಳು...

ನಮ್ಮ ಬೆಂಗಳೂರು ಪ್ರಯಾಣ...




 ಈ ತಿಂಗಳ ಆರಂಭದಲ್ಲಿ ದೊರೆತ ಓಣಂ ರಜಾ ದಿನಗಳನ್ನು ನಮ್ಮ ಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಬೆಂಗಳೂರು ವಿಹಾರದಲ್ಲಿ ಕಳೆದರು. ಹೊಸ ಅನುಭವಗಳನ್ನು ಆ ಮೂಲಕ ಪಡೆದುಕೊಂಡರು. ವಿಧಾನಸೌಧದ ಒಳಗಿನ ದೃಶ್ಯಗಳನ್ನೂ ವೀಕ್ಷಿಸಲು ದೊರೆತದ್ದು ನಮ್ಮ ವಿದ್ಯಾರ್ಥಿಗಳ ಸಂತೋಷಕ್ಕೆ ಮುಕುಟಪ್ರಾಯವಾಗಿತ್ತು. ಇನ್ನಷ್ಟು ದೃಶ್ಯಗಳು ನಿಮಗಾಗಿ...

ಮನಸೆಳೆದ ಓಣಂ ಹೂರಂಗವಲ್ಲಿಗಳು...

ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳು ಬಿಡಿಸಿದ ಹೂರಂಗವಲ್ಲಿಯ ವೈವಿಧ್ಯಗಳು...


Aug 24, 2011

ಸರ್ವಾಂತರ್ಯಾಮಿ ಜಗದ್ರಕ್ಷಕ ಶ್ರೀಕೃಷ್ಣ



೨೦.೦೮.೨೦೧೧ ಶನಿವಾರ ನಮ್ಮ ಸಂಸ್ಥೆಯಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಉತ್ಸವ ಮತ್ತು ಮಹಾನಂದಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಾಹಿತಿ ವಿ.ಬಿ.ಕುಳಮರ್ವ,ಕುಂಬಳೆ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್, ಶಾಲಾ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

Aug 19, 2011

'ರಾಮಾಯಣ ಮಾಸಾಚರಣೆ’ ಸಮಾರೋಪ

ನಮ್ಮ ವಿದ್ಯಾಪೀಠದಲ್ಲಿ ೧೮.೦೮.೨೦೧೧ ಗುರುವಾರ ಜರಗಿದ ‘ರಾಮಾಯಣ ಮಾಸಾಚರಣೆ’ಯ ಸಮಾರೋಪ ಮತ್ತು ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಉಂಡೆಮನೆ ಗಣಪತಿ ಭಟ್ಟ ಮುಖ್ಯ ಭಾಷಣ ಮಾಡಿದರು. ಶಾಲಾ ವಿದ್ಯಾರ್ಥಿ ನಿಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.
ಶಾಲಾ ನಾಯಕ ಸುಹಾಸ್ ಕಾಕತ್ಕರ್ ಸ್ವಾಗತಿಸಿ, ವಿದ್ಯಾರ್ಥಿನಿ ಅಶ್ವತಿ ವಂದಿಸಿದರು. ಕೃಷ್ಣ ಕಿರಣ ವರದಿ ವಾಚಿಸಿದರು. ಅನುಷ ಮತ್ತು ಅರ್ಪಿತ ಕಾರ್ಯಕ್ರಮ ನಿರೂಪಿಸಿದರು.

Aug 16, 2011

ಸ್ವಾತಂತ್ರ್ಯ ದಿನಾಚರಣೆ

ನಿನ್ನೆ ನಮ್ಮ ಸಂಸ್ಥೆಗಳಲ್ಲಿ ಜರಗಿದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು  ಸ್ವಾತಂತ್ರ್ಯ ಕುರಿತಾದ ಭಾಷಣಗಳನ್ನು ಮಾಡಿದರು. ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿಹಿತ್ತಿಲು, ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ್ ನಾಣಿಹಿತ್ತಿಲು, ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಭಟ್ ಅಮ್ಮಂಕಲ್ಲು,  ಶಾಲಾ ಆಡಳಿತ ಮಂಡಳಿ ಸದಸ್ಯ ಶಾಮರಾಜ್ ದೊಡ್ಡಮಾಣಿ, ಕೃಷ್ಣಮೂರ್ತಿ ಪುದುಕೋಳಿ, ನಮ್ಮ ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದರು.
    ವಿದ್ಯಾರ್ಥಿನಿ ಸ್ಮಿತಾ ಜಿ.ಎಲ್ ಸ್ವಾಗತಿಸಿ, ವಿದ್ಯಾರ್ಥಿ ಶ್ರೀಹರಿಶಂಕರ ಶರ್ಮ ಧನ್ಯವಾದ ಸಮರ್ಪಿಸಿದರು. ಮಹೇಶಕೃಷ್ಣ ತೇಜಸ್ವಿ.ಕೆ ಕರ್ಯಕ್ರಮ ನಿರೂಪಿಸಿದರು.

Aug 15, 2011

ರಕ್ಷಾಬಂಧನ

ಸಹೋದರತ್ವ ಮತ್ತು ಭಾವೈಕ್ಯತೆಯ ಸಂಕೇತವಾಗಿ ರಕ್ಷಾಬಂಧನ ಕಾರ್ಯಕ್ರಮವನ್ನು ೧೩.೦೮.೨೦೧೧ ಶನಿವಾರ ನಮ್ಮ ಸಂಸ್ಥೆಯಲ್ಲಿ ಆಚರಿಸಿದೆವು. ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ಪರಸ್ಪರ ರಾಖಿಗಳನ್ನು ಕಟ್ಟಿ  ಕಾರ್ಯಕ್ರಮವನ್ನು ಆರಂಭಿಸಿದರು.
ಕಿರಣ್ ಮಹೇಶ್ ಸ್ವಾಗತಿಸಿ ಶ್ರೀವಲ್ಲಿ ಧನ್ಯವಾದ ಸಮರ್ಪಿಸಿದರು. ಶುಭಲಕ್ಷ್ಮಿ ಯಾಜಿ ಕಾರ್ಯಕ್ರಮ ನಿರೂಪಿಸಿದರು.

Aug 5, 2011

ಚಿಂತನ ಭಾರತೀ

ಮೊನ್ನೆ ಜುಲೈ ೨೯ಕ್ಕೆ ನಮ್ಮಲ್ಲಿ ಅಧ್ಯಾಪಕರಿಗಾಗಿ ವಿಶೇಷ ಕಾರ್ಯಕ್ರಮ ’ಚಿಂತನ ಭಾರತೀ’. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಅನಂತಪುರ ಇವರಿಂದ ಅಧ್ಯಾಪಕರಿಗಾಗಿ ವಿಶೇಷ ತರಬೇತಿ ಏರ್ಪಡಿಸಲಾಗಿತ್ತು. ಬದಿಯಡ್ಕ ಮತ್ತು ನಮ್ಮ ಮುಜುಂಗಾವು ವಿದ್ಯಾಪೀಠಗಳ ಅಧ್ಯಾಪಕರು ತರಬೇತಿಯಲ್ಲಿ ಪಾಲ್ಗೊಂಡರು. ನಿವೃತ್ತ ಶಿಕ್ಷಕ ಕೃಷ್ಣ ಭಟ್ ಉದ್ಘಾಟಿಸಿದರು. ಬದಿಯಡ್ಕ ಭಾರತೀ ವಿದ್ಯಾಪೀಠದ ಪ್ರಧಾನಾಚಾರ್ಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮತ್ತು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಅಧ್ಯಾಪಕರು ಕಾರ್ಯಕ್ರಮದ ಗುಣಾತ್ಮಕ ಫಲಗಳನ್ನು ಪಡೆದುಕೊಂಡರು.

Jul 29, 2011

ಪ್ರತಿಭಾ ಭಾರತೀ

“ಬೆಳೆಯುವ ಹಂತದಲ್ಲಿ ಗುರಿಯ ಕಡೆಗೆ ಅಚಲವಾಗಿ ಸಾಗುವುದು ಮುಖ್ಯ. ಆ ನಿಟ್ಟಿನಲ್ಲಿ ಸಾಗಲು ವಿದ್ಯಾರ್ಥಿಗಳಿಗೆ ಹಲವಾರು ವೇದಿಕೆಗಳಿವೆ. ಹೊಸ ಕಲಿಕಾ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಅವಕಾಶ ಇನ್ನಷ್ಟು ವಿಶಾಲವಾಗಿ ಬೆಳೆಯುತ್ತಿದೆ. ಅವುಗಳನ್ನು ಅನುಕೂಲಕರವಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು” ಎಂದು ಕಣಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ನಾ.ಚಂಬಲ್ತಿಮಾರ್ ಅಭಿಪ್ರಾಯಪಟ್ಟರು. ಅವರು ೨೮.೦೭.೨೦೧೧ ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ವಿದ್ಯಾರ್ಥಿನಿ ಶಿಲ್ಪಾ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವೈಶಾಲಿ ಸ್ವಾಗತಿಸಿ ಕವಿತಾ ವಂದಿಸಿದರು. ಸಂಕೇತ ಮತ್ತು ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರಗಿದವು.

Jul 21, 2011

ಡಾ| ವಾರುಣಿ ಶ್ರೀರಾಮ್ ಅವರೊಂದಿಗೆ ಮಾತುಕತೆ

ಕಾಸರಗೋಡಿನ ಖ್ಯಾತ ವೈದ್ಯೆ ಡಾ| ವಾರುಣಿ ಶ್ರೀರಾಮ್ ಇಂದು ನಮ್ಮ ವಿದ್ಯಾರ್ಥಿಗಳೊಂದಿಗೆ ‘ವೈದ್ಯರೊಂದಿಗೆ ಮಾತುಕತೆ’ ಕಾರ್ಯಕ್ರಮದ ಅಂಗವಾಗಿ ಉಪನ್ಯಾಸ ನೀಡಿ ಸಂವಾದ ನಡೆಸಿದರು. ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಸರಳ ಪರಿಹಾರ ನೀಡಿ ಮೆಚ್ಚುಗೆಗೆ ಪಾತ್ರರಾದರು.

ಗುರುಪೂರ್ಣಿಮಾ...

ವಿಶಿಷ್ಟವಾಗಿ ಗುರುಪೂರ್ಣಿಮೆಯನ್ನು ಆಚರಿಸುವ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸಿದ್ದೇವೆ. ಮೊನ್ನೆ ಜುಲೈ ೧೫ರಂದು ವಿದ್ಯಾರ್ಥಿಗಳು ಶ್ರೀ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಹಿರಿಯರ, ರಕ್ಷಕರ, ಶಿಕ್ಷಕರ ಕಾಲಿಗೆರಗಿ ನಮಸ್ಕರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ, ಆಡಳಿತ ಮಂಡಳಿ ಸದಸ್ಯರಾದ ಕೆ.ವೆಂಕಟ್ರಮಣ ಭಟ್ ಮತ್ತು ಶ್ಯಾಮರಾಜ್ ದೊಡ್ಡಮಾಣಿ ಮತ್ತಿತರರು ಉಪಸ್ಥಿತರಿದ್ದರು.

Jul 5, 2011

ಪ್ರತಿಭಾ ಭಾರತೀ ಉದ್ಘಾಟನೆ

ನಿವೃತ್ತ ಶಿಕ್ಷಕ, ಸಾಹಿತಿ, ಪುಟಾಣಿಗಳ ಪ್ರೀತಿಯ ಬಳ್ಳಮೂಲೆ ‘ಗೋವಿಂದಣ್ಣ" ನಮ್ಮ ಶಾಲೆಯ ಪ್ರತಿಭಾ ಭಾರತೀ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ಮೊನ್ನೆ ಜುಲೈ ಮೊದಲ ತಾರೀಕಿನಂದು ನೆರವೇರಿಸಿದರು. ವಿದ್ಯಾರ್ಥಿಗಳ ಚಟುವಟಿಕೆಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಪ್ರೀತಾ.ಎಂ ಅಧ್ಯಕ್ಷತೆ ವಹಿಸಿದ್ದರು. ಅಶ್ವತಿ ಸ್ವಾಗತಿಸಿ ಗೌರೀಶ ವಿಶ್ವಾಮಿತ್ರ ವಂದಿಸಿದರು. ಶ್ವೇತಾ.ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರಗಿದವು.

Jun 17, 2011

ಮೊನ್ನೆ ಚುನಾವಣೆ ನಮ್ಮ ಶಾಲಾ ಮಟ್ಟದ್ದು. ವಿದ್ಯಾರ್ಥಿ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ನಡೆದ ಸ್ಪರ್ಧೆಗೆ ಐದು ಮಂದಿ ಅಭ್ಯರ್ಥಿಗಳು ಸ್ಪರ್ಧೆ ಒಡ್ಡಿದ್ದರು. ಫಲಿತಾಂಶದಲ್ಲಿ ಅತ್ಯಧಿಕ ಮತ ಪಡೆದ ಹತ್ತನೇ ತರಗತಿ ವಿದ್ಯಾರ್ಥಿ ಬೆಂಗಳೂರಿನ ಸುಹಾಸ್ ಜಿ.ಕಾಕತ್ಕರ್ ವಿದ್ಯಾರ್ಥಿ ನಾಯಕನಾಗಿಯೂ, ದ್ವಿತೀಯ ಸ್ಥಾನ ಪಡೆದ ಕಿರಣ್ ಮಹೇಶ್ ವಿದ್ಯಾರ್ಥಿ ಉಪನಾಯಕನಾಗಿಯೂ ಆಯ್ಕೆಯಾಗಿದ್ದಾರೆ. ಈ ವರ್ಷದ ಶಾಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುಂದಕ್ಕೊಯ್ಯಲು ಅವರ ಜೊತೆ ಹತ್ತು ಮಂದಿ ವಿದ್ಯಾರ್ಥಿಗಳ ಮಂತ್ರಿ ಮಂಡಲವೂ ಕಾರ್ಯ ನಿರ್ವಹಿಸಲಿದೆ. ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದೇವೆ.

Jun 7, 2011

ವಿಶ್ವ ಪರಿಸರ ದಿನ


ಮೊನ್ನೆ ವಿಶ್ವ ಪರಿಸರ ದಿನ. ಆದರೆ ಭಾನುವಾರವಾದ್ದರಿಂದ ತಾಂತ್ರಿಕ ಕಾರಣಗಳಿಂದಾಗಿ ಆ ದಿನವೇ ಕಾರ್ಯಕ್ರಮ ಆಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ವಿದ್ಯಾರ್ಥಿಗಳೆಲ್ಲ ಆಸಕ್ತಿಯಿಂದ ತಂದ ವಿವಿಧ ಗಿಡಗಳನ್ನು ಪರಸ್ಪರ ಹಂಚಿ ಕಾರ್ಯಕ್ರಮವನ್ನು ಆಚರಿಸಿಕೊಂಡೆವು. ಆಡಳಿತ ಮಂಡಳಿ ಕಾರ್ಯದರ್ಶಿ ಎಚ್.ಎಸ್.ಪ್ರಸಾದ್, ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶಿಕ್ಷಕಿ ಶಿವಕುಮಾರಿ ವೃಕ್ಷಾರೋಪಣಗೈದರು. ಚಿತ್ರಾ ಮಾತಾಶ್ರೀ ಮತ್ತು ಗಾಯತ್ರಿ ಮಾತಾಶ್ರೀ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Jun 1, 2011

ಸ್ವಾಗತ ಭಾರತೀ...

ಹೊಸ ಅಧ್ಯಯನ ವರ್ಷಕ್ಕೆ ಕಾಲಿರಿಸಿದ್ದೇವೆ. ಇಂದು ಶುಭಾರಂಭ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ಲು ಅವರಿಂದ. ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್ ಅಧ್ಯಕ್ಷತೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್,  ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ-ಮಾರ್ಗ ಇವರ ಉಪಸ್ಥಿತಿ ಕಾರ್ಯಕ್ರಮದಲ್ಲಿತ್ತು.
ಕುಮಾರಿ ಸುಧಾ ಮತ್ತು ತಂಡದವರಿಂದ ಪ್ರಾರ್ಥನೆ. ಅನುಷಾ ಸ್ವಾಗತ, ಶ್ರೀವಲ್ಲಿ ವಂದನಾರ್ಪಣೆ, ಸುಪ್ರೀತಾ.ಎಂ ಕಾರ್ಯಕ್ರಮ ನಿರೂಪಣೆ ಕಾರ್ಯಕ್ರಮದ ಔಪಚಾರಿಕ ಭಾಗ.
ಮುಂದಿನದ್ದು ಏನಿದ್ದರೂ ಹತ್ತಕ್ಕೆ ಏರುವ ಹೊತ್ತಿನ ಕಾರ್ಯಕ್ರಮಗಳು. ಈ ನಿಟ್ಟಿನಲ್ಲಿ ಶಾಲಾರಂಭವಾಗಿದೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ನಮ್ಮ ಮೊದಲ ತಂಡದ ವಿದ್ಯಾರ್ಥಿಗಳಿಗೆ ಶುಭಾಶಯಗಳು...

May 15, 2011

ಶ್ರೀ ಶಂಕರ ವಸಂತ ವೇದಪಾಠ ಶಿಬಿರ ಸಮಾರೋಪ...


ವೇದ ಮೂರ್ತಿ ಶ್ರೀ ಮಣಿಮುಂಡ ವಿಶ್ವೇಶ್ವರ ಶಾಸ್ತ್ರಿಗಳ ನೇತೃತ್ವದಲ್ಲಿ ಕಳೆದ ಎಪ್ರಿಲ್ ತಿಂಗಳಿನಲ್ಲಿ ಆರಂಭವಾದ ಶ್ರೀ ಶಂಕರ ವಸಂತವೇದ ಪಾಠ ಶಿಬಿರದ ಸಮಾರೋಪ ಕಾರ್ಯಕ್ರಮ ನಿನ್ನೆ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಿತು. ಮುಜುಂಗಾವು ಶ್ರೀ ಕ್ಷೇತ್ರದ ಆಡಳಿತ ಕಾರ್ಯದರ್ಶಿ ಎಂ.ಸುಬ್ರಾಯ ಭಟ್, ಕಾನ-ಮೂಡಕರೆ ಇವರು ವಿಶ್ವೇಶ್ವರ ಶಾಸ್ತ್ರಿಗಳನ್ನು ಗೌರವಿಸಿದರು. ಸಂಸ್ಕೃತ ತರಗತಿಗಳನ್ನು ನಡೆಸಿಕೊಟ್ಟ ಮಂಜೇಶ್ವರ ಶ್ರೀಅನಂತೇಶ್ವರ ದೇವಳದ ಪ್ರೌಢಶಾಲಾ ವಿಭಾಗದ ಸಂಸ್ಕೃತ ಶಿಕ್ಷಕ ನಾರಾಯಣ ಜಿ.ಹೆಗಡೆ ಇವರನ್ನು ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಹಿಳ್ಳೆಮನೆ ಸನ್ಮಾನಿಸಿದರು. ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು.

Mar 31, 2011

ಪ್ರತಿಭಾ ಭಾರತೀ ವಾರ್ಷಿಕ ಕಾರ್ಯಕ್ರಮಗಳ ಸಮಾರೋಪ

ಇಂದು ನಮ್ಮ ಪುಟಾಣಿ ವಿದ್ಯಾರ್ಥಿಗಳಿಗೆ ೨೦೧೦-೧೧ ಅಧ್ಯಯನ ವರ್ಷದ ಕೊನೆಯ ದಿನ. ಪರೀಕ್ಷೆಗಳ ನಂತರ ದೊರೆತ ಅವಿಸ್ಮರಣೀಯ ಕ್ಷಣ. ಈ ನಿಟ್ಟಿನಲ್ಲಿ ಆಯೋಜಿಸಲಾದ ಪ್ರತಿಭಾ ಭಾರತೀ ವಾರ್ಷಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ದೊರೆತ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡರು. ಜೊತೆಯಲ್ಲಿ ಹಿರಿಯರಾದ ಡಾ| ಹರಿಕೃಷ್ಣ ಭರಣ್ಯ, ಮುಖ್ಯೋಪಾಧ್ಯಾಯ ಶಾಮ ಭಟ್, ಆಡಳಿತ ಮಂಡಳಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಇವರಿಂದ ಹಿತವಚನಗಳ ನುಡಿ. ಮುಂದಿನ ಅಧ್ಯಯನ ವರ್ಷಕ್ಕೆ ಹೊಸ ಉತ್ಸಾಹದಿಂದ ಬರುತ್ತೇವೆ ಎಂಬ ವಿಶ್ವಾಸದೊಂದಿಗೆ ವಿದ್ಯಾರ್ಥಿಗಳು ಮನೆ, ಅಜ್ಜನಮನೆಗಳ ಕಡೆಗೆ ಹೊರಟಿದ್ದಾರೆ, ಮುಂದಿನ ದಿನಗಳನ್ನು ಮಾವಿನ ಮರದ ಅಡಿಯಲ್ಲಿ, ಗೇರು ಹಣ್ಣಿನ ತೋಪಿನಲ್ಲಿ... ಆಟವಾಡುತ್ತಾ ಕಳೆಯುವುದಕ್ಕಾಗಿ, ಅವರಿಗೆಲ್ಲ ನಮ್ಮ ಶುಭಾಶಯಗಳು.
ಈ ನಡುವೆ ಪುಟ್ಟ ಕಿವಿ ಮಾತು, ಮುಂದಿನ ವರ್ಷದ ತಯಾರಿಗಾಗಿ ನಡುನಡುವೆ ನಾವು ಪೂರ್ವ ತಯಾರಿ ತರಗತಿಗಳನ್ನು ಇಟ್ಟುಕೊಳ್ಳುವವರಿದ್ದೇವೆ, ನೆನಪಿರಲಿ. ಮುಂದಿನ ವರ್ಷ ನಾವೂ ಕೂಡಾ ಹತ್ತರ ಕಡೆಗೆ ಹತ್ತುವವರು...

Mar 2, 2011

ಯಕ್ಷಗಾನ - ಭರಪೂರ ಮನರಂಜನೆ

ನಿನ್ನೆ ರಾತ್ರಿ ವಿದ್ಯಾಲಯ ಪರಿಸರದಲ್ಲಿ ನಡೆದ ಗಜೇಂದ್ರ ಮೋಕ್ಷ - ಶ್ರೀನಿವಾಸ ಕಲ್ಯಾಣ ನೆರೆದ ಸಭಿಕರಿಗೆ ಭರಪೂರ ಮನರಂಜನೆ ಒದಗಿಸಿತು. ಶ್ರೀ ರಾಮಚಂದ್ರಕೃಪಾಪೋಷಿತ ಯಕ್ಷಗಾನ ಮಂಡಳಿ, ಹೊಸನಗರ ನಡೆಸಿದ ಈ ಬಯಲಾಟಕ್ಕೆ ಸಾವಿರಕ್ಕೂ ಮಿಕ್ಕಿ ಸಭ್ಯ ಜನರು ಸೇರಿದ್ದು ಮುಜುಂಗಾವು ಪರಿಸರದಲ್ಲಿ ಹೊಸ ದಾಖಲೆ. ಗಜೇಂದ್ರ, ಮಕರ ಪ್ರವೇಶ, ಪದ್ಮಾವತಿಯ ಶೃಂಗಾರ ಲಾಸ್ಯ, ಕಿರಾತ-ಸುದೇವರ ಸಂಭಾಷಣೆ ಸೇರಿದ್ದ ಆಸ್ವಾದಕರ ಮನಸೂರೆಗೊಂಡಿತು. ಪ್ರತಿಭಾ ಭಾರತಿಗೆ ಫೋಟೋ ಒದಗಿಸಿಕೊಟ್ಟ ಹರೀಶ್ ಹಳೆಮನೆ ಇವರಿಗೆ ಧನ್ಯವಾದಗಳು.

Feb 28, 2011

ರಕ್ಷಕ ಶಿಕ್ಷಕ ಸಂಘದ ಸಭೆ

ನಮ್ಮ ವಿದ್ಯಾಪೀಠದಲ್ಲಿ ಇಂದು ರಕ್ಷಕ ಶಿಕ್ಷಕ ಸಂಘದ ಸಭೆ. ವಿದ್ಯಾಪೀಠದ ಪ್ರಗತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ವಿದ್ಯಾರ್ಥಿಗಳಿಂದ ವಿಸ್ಮಯ ಪ್ರವಾಸದ ಅನುಭವ ಕಥನ, ವಿಸ್ಮಯ ಪ್ರವಾಸದ ಖರ್ಚು ವೆಚ್ಚ, ವಾರ್ಷಿಕೋತ್ಸವದ ಆಯ ವ್ಯಯ ಮಂಡನೆಗಳು ನಡೆದವು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ, ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ-ಮಾರ್ಗ ಮತ್ತಿತರರು ಉಪಸ್ಥಿತರಿದರು. ಮಾತಾಶ್ರೀ ಶಾಂಭವಿ ಸ್ವಾಗತಿಸಿ, ಮಾತಾಶ್ರೀ ಲಾವಣ್ಯ ಧನ್ಯವಾದ ಸಮರ್ಪಿಸಿದರು.

Feb 24, 2011

ಗಜೇಂದ್ರ ಮೋಕ್ಷ - ಶ್ರೀನಿವಾಸ ಕಲ್ಯಾಣ

ಶ್ರೀ ಭಾರತೀ ಸಮೂಹ ವಿದ್ಯಾಸಂಸ್ಥೆಗಳ ಸಹಾಯಾರ್ಥ ಶ್ರೀರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ದಿನಾಂಕ 01.03.2011 ಮಂಗಳವಾರ ಸಂಜೆ ಗಂಟೆ 6.30 ರಿಂದ 10.30 ರ ತನಕ ವಿದ್ಯಾಲಯದ ವಠಾರದಲ್ಲಿ ಗಜೇಂದ್ರ ಮೋಕ್ಷ - ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪದ್ಯಾಣ ಗಣಪತಿ ಭಟ್ ಮತ್ತು ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತರಾಗಿಯೂ ಹೆಸರಾಂತ ಕಲಾವಿದರು ವೇಷಧಾರಿಗಳಾಗಿಯೂ ಭಾಗವಹಿಸಲಿದ್ದಾರೆ. ಎಲ್ಲ ಕಲಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಯಲಾಟವನ್ನು ಯಶಸ್ವಿಗೊಳಿಸಬೇಕಾಗಿ ಅಪೇಕ್ಷೆ.

Feb 13, 2011

ವಿಸ್ಮಯದಲ್ಲಿ ನಾವು...


ಕಣ್ಣೂರು ಜಿಲ್ಲೆಯ ಹೆಸರಾಂತ ಪರಶ್ಶಿನಿಕ್ಕಡವು ಉರಗೋದ್ಯಾನ, ಮುತ್ತಪ್ಪನ್ ಕ್ಷೇತ್ರ ಮತ್ತು ವಿಸ್ಮಯ ವಾಟರ್ ಪಾರ್ಕ್ ಸಂದರ್ಶಿಸಿ ಬಂದೆವು ನಿನ್ನೆ. ವಿದ್ಯಾರ್ಥಿಗಳಿಗೆ ಈ ಪ್ರಯಾಣ ಅವಿಸ್ಮರಣೀಯ ಅನುಭವ ನೀಡಿದೆ. ಕೆಲ ಕ್ಷಣಗಳ ಚಿತ್ರ ನಿಮ್ಮ ಮುಂದೆ ಇರಿಸುತ್ತಿದ್ದೇವೆ. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಭೆ-ಮಾರ್ಗ ಹಾಗೂ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ ನೇತೃತ್ವ ವಹಿಸಿದ್ದರು.

Feb 1, 2011

ಮೊನ್ನೆ, ವರ್ಧಂತ್ಯುತ್ಸವ

“ಶಾಲಾ ಮಟ್ಟದಲ್ಲಿ ನೈತಿಕ ಶಿಕ್ಷಣವನ್ನು ನೀಡುವುದು ಇಂದಿನ ಜನಾಂಗಕ್ಕೆ ಅತೀ ಅಗತ್ಯವಾಗಿದೆ. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಬೆಳಗಿಸಿ ಅವರ ನೈತಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ವಾರ್ಷಿಕೋತ್ಸವಗಳು ಗಣನೀಯ ಸೇವೆ ಸಲ್ಲಿಸುತ್ತವೆ. ಇಂತಹ ವರ್ಧಂತ್ಯುತ್ಸವದ ಸಂಭ್ರಮದಲ್ಲಿರುವ ಈ ವಿದ್ಯಾಸಂಸ್ಥೆಗಳು ಕೆಲವೇ ವರ್ಷಗಳಲ್ಲಿ ಬೆಳೆದು ನಾಡಿನಾದ್ಯಂತ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ವಿಚಾರ” ಎಂದು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಭಿಪ್ರಾಯಪಟ್ಟರು. ಅವರು ದಿನಾಂಕ ೨೮.೦೧.೨೦೧೧ ಶುಕ್ರವಾರ ನಡೆದ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯಗಳ ವರ್ಧಂತ್ಯುತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮುಜುಂಗಾವು ಶ್ರೀಭಾರತೀ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಡಾ|ಡಿ.ಪಿ.ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ತಿಲು, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕರುಣಾಕರ ಅನಂತಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎ.ಕೃಷ್ಣ ಭಟ್ ಶುಭ ಹಾರೈಸಿದರು. ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಭಾರತೀ ವಿದ್ಯಾಪೀಠದ ವರದಿಯನ್ನು ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಭೆ-ಮಾರ್ಗ ಹಾಗೂ ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವರದಿಯನ್ನು ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ವಾಚಿಸಿದರು.

ಈ ಸಂದರ್ಭದಲ್ಲಿ ಶ್ರೀಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ‘ಬೆಳಕು’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ‘ಬೆಳಗು’ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಸುಪ್ರೀತಾ. ಎಂ ಸ್ವಾಗತಿಸಿ, ಶ್ರೀಹರಿಶಂಕರ ಶರ್ಮ ವಂದಿಸಿದರು. ಈಶ್ವರಚಂದ್ರ ಜೋಯಿಸ ಕಾರ್ಯಕ್ರಮ ನಿರೂಪಿಸಿದರು.








ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈವಿಧ್ಯಗಳ ಜೊತೆಗೆ ಶ್ರೀಭಾರತೀ ವಿದ್ಯಾಪೀಠ ದ ವಿದ್ಯಾರ್ಥಿಗಳಿಂದ ‘ವೀರಮಣಿ’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ‘ನರಕಾಸುರ ವಧೆ’ ಯಕ್ಷಗಾನ ಬಯಲಾಟ ಜರಗಿತು.

Jan 29, 2011

ವಾರ್ಷಿಕ ವರದಿ:-೨೦೧೦-೧೧

ನಿನ್ನೆ ನಮ್ಮ ಸಂಸ್ಥೆಗಳ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರಗಿತು. ಸಂಸ್ಥೆಯ ವಾರ್ಷಿಕ ವರದಿಯನ್ನು ಇಲ್ಲಿ ನೀಡಿದ್ದೇವೆ. ಒಮ್ಮೆ ಗಮನ ಹರಿಸಿ, ನಿಮ್ಮ ಸಲಹೆ ಸೂಚನೆಗಳನ್ನು ನೀಡಿ. ಕಾರ್ಯಕ್ರಮದ ಫೋಟೋ, ವರದಿಗಳ ಜೊತೆ ಮತ್ತೆ ಬರುತ್ತೇವೆ.

      ||ಹರೇರಾಮ||
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ
ಶ್ರೀ ಸಂಸ್ಥಾನ ಗೋಕರ್ಣ-ಶ್ರೀರಾಮಚಂದ್ರಾಪುರಮಠ
ಶ್ರೀ ಭಾರತೀ ವಿದ್ಯಾಪೀಠ, ಮುಜುಂಗಾವು.
ಎಡನಾಡು-ಕುಂಬಳೆ, ಕಾಸರಗೋಡು-೬೭೧೩೨೧


ಪರಮಪೂಜ್ಯ ಶ್ರೀಗುರುಗಳ ದಿವ್ಯಚರಣಾರವಿಂದಗಳಿಗೆ ಮನಸಾ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ, ಸನಿಹಸ್ಥಿತನಾದ ಪಾರ್ಥಸಾರಥಿಯನ್ನು ಸ್ಮರಿಸುತ್ತಾ, ವೇದಿಕೆಯಲ್ಲಿರುವ ಗಣ್ಯರಿಗೆ ಹಾಗೂ ಸಭೆಯಲ್ಲಿ ಆಸೀನರಾದ ಎಲ್ಲಾ ಸಹೃದಯ ಬಂಧುಗಳಿಗೆ ವಂದಿಸಿ, ಶ್ರೀ ಭಾರತೀ ವಿದ್ಯಾಪೀಠದ ವಾರ್ಷಿಕ ವರದಿಯನ್ನು ತಮ್ಮ ಮುಂದಿಡಲು ಸಂತಸಪಡುತ್ತೇನೆ.

ಈ ಶೈಕ್ಷಣಿಕ ವರ್ಷದಲ್ಲಿ ೯ನೇ ತರಗತಿಯನ್ನು ಪ್ರಾರಂಭಿಸಲಾಗಿದ್ದು, ಶಿಶುಮಂದಿರದಿಂದ ೯ನೇ ತರಗತಿಯವರೆಗೆ ಒಟ್ಟು ೧೬೪ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ೧೧ಜನ ಅಧ್ಯಾಪಕರು, ಒಬ್ಬರು ಅಧ್ಯಾಪಕೇತರ ಮತ್ತು ಮುಖ್ಯೋಪಾಧ್ಯಾಯರು ಪೂರ್ಣವಾಗಿಯೂ, ಸಂಗೀತದ ಅಧ್ಯಾಪಿಕೆ, ನೃತ್ಯದ ಅಧ್ಯಾಪಿಕೆ, ಯೋಗ ಮತ್ತು ಚಿತ್ರಕಲಾ ಅಧ್ಯಾಪಕರು ಅರೆಕಾಲಿಕವಾಗಿಯೂ ವಿದ್ಯಾಲಯದಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ.

ಕೇಂದ್ರ ಮಾನವಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್‍ನ ನೇರ ಅಂಗೀಕಾರವನ್ನು ಪಡೆದ ಶ್ರೀ ಭಾರತೀ ವಿದ್ಯಾಪೀಠ, ಬದಿಯಡ್ಕ ಇದರ ಪ್ರಥಮ ಅಂಗಸಂಸ್ಥೆಯಾಗಿ ನಮ್ಮ ವಿದ್ಯಾಲಯವು ಮಾನ್ಯತೆಯನ್ನು ಪಡೆದಿದೆ.

ವಿದ್ಯಾಲಯದಲ್ಲಿ ಶಿಶುಮಂದಿರದಿಂದಲೇ ಕನ್ನಡ ಮತ್ತು ಆಂಗ್ಲಭಾಷೆಯ ಪರಿಚಯವನ್ನು ಮಾಡಿಕೊಡುತ್ತಿದ್ದು ೨ನೇ ತರಗತಿಯಿಂದ ಸಂಸ್ಕೃತ, ೩ನೇ ತರಗತಿಯಿಂದ ಹಿಂದಿಭಾಷೆಯನ್ನು ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ದೃಷ್ಠಿಯಲ್ಲಿಟ್ಟು ನೈತಿಕ, ಯೋಗ, ನೃತ್ಯ, ಸಂಗೀತ, ಚಿತ್ರಕಲೆ, ಯಕ್ಷಗಾನವೇ ಮೊದಲಾದ ಶಿಕ್ಷಣವನ್ನು ಅನುಷ್ಠಾನಗೊಳಿಸಲಾಗಿದೆ. ೫ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುತ್ತಿದೆ. ಶಿಶುಮಂದಿರದಿಂದ ೪ನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಶಿಕ್ಷಣವನ್ನು ನೀಡಬೇಕೆನ್ನುವ ಉದ್ದೇಶದಿಂದ ಕನ್ನಡಮಾಧ್ಯಮ ಮತ್ತು ೫ ಮತ್ತು ಮೇಲ್ಪಟ್ಟ ತರಗತಿಗಳು ಆಂಗ್ಲಮಾಧ್ಯಮದಲ್ಲಿ ನಡೆಸಲಾಗುತ್ತಿದೆ.

ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮಗಳು:

ಕಳೆದ ಫೆಬ್ರವರಿ ತಿಂಗಳ ೨೬ ಮತ್ತು ೨೭ ಶುಕ್ರವಾರ ಮತ್ತು ಶನಿವಾರಗಳಂದು ಸಮೂಹವಿದ್ಯಾಸಂಸ್ಥೆಗಳಲ್ಲಿ ಮಹಾವಿದ್ಯಾಲಯದ ದಶಮಾನೋತ್ಸವ ಮತ್ತು ವಿದ್ಯಾಪೀಠದ ವರ್ಧಂತ್ಯುತ್ಸವವು ಶ್ರೀ ಗುರುಗಳ ದಿವ್ಯಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಸಭಾಕಾರ್ಯಕ್ರಮಗಳಲ್ಲಿ ಜಿಲ್ಲೆಯ, ಹೊರರಾಜ್ಯಗಳ ಗಣ್ಯ ಅತಿಥಿಗಳು ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ದಿನಾಂಕ ೨೬ರಂದು ಸಾಯಂಕಾಲ ೫ಗಂಟೆಗೆ ಶ್ರೀಗುರುಗಳು ವಿದ್ಯಾಲಯಕ್ಕೆ ಆಗಮಿಸಿ, ರಾತ್ರಿ ಶ್ರೀರಾಮದೇವರಿಗೆ ಪೂಜೆಯನ್ನು ನೆರವೇರಿಸಿದರು. ದಿನಾಂಕ ೨೭ರಂದು ಬೆಳಗ್ಗೆ ಶ್ರೀಶ್ರೀಗಳಿಂದ ರಾಮದೇವರ ಪೂಜೆ, ಶ್ರೀಗುರುಗಳಿಗೆ ಭಿಕ್ಷಾಸೇವೆ, ಪಾದುಕಾಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಸಾಯಂಕಾಲ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀಗುರುಗಳು ದಿವ್ಯಸಾನ್ನಿಧ್ಯವನ್ನು ವಹಿಸಿದರು. ಈ ಸಂದರ್ಭದಲ್ಲಿ ಶ್ರೀಗುರುಗಳಿಂದ ವಿದ್ಯಾಸಂಸ್ಥೆಗಳ ಹಸ್ತಪ್ರತಿ ಬಿಡುಗಡೆ ಮತ್ತು ವಿದ್ಯಾಲಯಮಟ್ಟದಲ್ಲಿ ನಡೆದ ಬೌದ್ಧಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಶೀರ್ಮಂತ್ರಾಕ್ಷತೆಯನ್ನು ನೀಡಿ ಅನುಗ್ರಹಿಸಿದರು. ವಿದ್ಯಾಲಯದ ಚಟುವಟಿಕೆಗಳ ಬಗ್ಗೆ ಶ್ರೀಶ್ರೀಗಳು ತಮ್ಮ ಆಶೀರ್ವಚನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಗುರುಗಳು ಆಗಮಿಸಿದ ಎಲ್ಲರಿಗೂ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.

ದಿನಾಂಕ ೧೫-೦೩-೨೦೧೦ ನೇ ಸೋಮವಾರದಂದು ಕಳೆದ ಶೈಕ್ಷಣಿಕ ವರ್ಷದ ’ಜ್ಞಾನದೀಪ್ತಿ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು. ಹಿಂದಿಭಾಷೆಯ ಮುಖ್ಯ ಕಾರ್ಯಕ್ರಮದೊಂದಿಗೆ ಉಳಿದೆಲ್ಲಾ ವಿಷಯಗಳಿಗೂ ಪ್ರಾಧಾನ್ಯತೆಯನ್ನು ನೀಡಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಮಹಾಲಿಂಗಯ್ಯ, ಅಧಿಕಾರಿಮನೆ, ಎಡನಾಡು ಇವರು ಕಾರ್ಯಕ್ರಮವನ್ನು ಮೆಚ್ಚಿಕೊಂಡು ಶುಭಹಾರೈಸಿದರು.

ದಿನಾಂಕ ೧೬-೦೩-೨೦೧೦ನೇ ಮಂಗಳವಾರದಂದು ಚಾಂದ್ರಮಾನ ಯುಗಾದಿ ಪ್ರಯುಕ್ತ ಬೇವು-ಬೆಲ್ಲ ಹಂಚುವುದರ ಮೂಲಕ ಯುಗಾದಿಯನ್ನು ಆಚರಿಸಲಾಯಿತು. ಈ ದಿನ ನಮ್ಮ ವಿದ್ಯಾಲಯದ ಬ್ಲಾಗ್-ಪ್ರತಿಭಾಭಾರತಿಯನ್ನು ಶ್ರೀಗುರುಗಳು ತಮ್ಮ ದಿವ್ಯಹಸ್ತದಿಂದ ಗಿರಿನಗರದ ಶ್ರೀಮಠದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀಗುರುಗಳು ’ಬ್ಲಾಗ್’ನ್ನು ವೀಕ್ಷಿಸಿ ಮೆಚ್ಚಿಕೊಂಡು ಹರಸಿದರು.

ದಿನಾಂಕ ೩೧-೦೩-೨೦೧೦ ಬುಧವಾರದಂದು ೨೦೦೯-೧೦ನೇ ಸಾಲಿನ ಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭವನ್ನು ಪ್ರತಿಭಾಭಾರತೀ ಕಾರ್ಯಕ್ರಮ ನಡೆಸುವುದರ ಮೂಲಕ ನಡೆಸಲಾಯಿತು. ಅತಿಥಿಗಳಾಗಿ ಶ್ರೀಯುತ ಥೋಮಸ್ ಡಿ.ಸೋಜ(ಅಧ್ಯಕ್ಷರು, ಪುತ್ತಿಗೆ ಗ್ರಾಮಪಂಚಾಯತು) ಆಗಮಿಸಿ ವಿದ್ಯಾಲಯದ ಚಟುವಟಿಕೆಗಳನ್ನು ಮೆಚ್ಚಿಕೊಂಡರು.
೨೦೦೯-೧೦ನೇ ಶೈಕ್ಷಣಿಕ ವರ್ಷದಲ್ಲಿ ೨೧೯ ಶಾಲಾದಿನಗಳು ನಡೆದಿದ್ದು ಈ ಸಂದರ್ಭದಲ್ಲಿ ಗರಿಷ್ಠ ಹಾಜರಾತಿ(೨೧೯)ಯನ್ನು ಪಡೆದ ೧೮ ವಿದ್ಯಾರ್ಥಿಗಳನ್ನು ಅಗ್ರೇಸರ ಪ್ರಶಸ್ತಿಯನ್ನು ನೀಡಿ ಗುರುತಿಸಲಾಯಿತು.
ದಿನಾಂಕ ೧-೦೬-೨೦೧೦ನೇ ಮಂಗಳವಾರದಂದು ಪ್ರಸಕ್ತ ಶೈಕ್ಷಣಿಕ ವರ್ಷದ ಉದ್ಘಾಟನೆಯನ್ನು ಶ್ರೀಯುತ ಜಯಂತ ಪಾಟಾಳಿ ಸೀತಾಂಗೋಳಿ(ಉಪಾಧ್ಯಕ್ಷರು, ಪುತ್ತಿಗೆ ಗ್ರಾಮಪಂಚಾಯತು) ದೀಪ ಬೆಳಗುವುದರ ಮೂಲಕ ಚಾಲನೆಗೊಳಿಸಿದರು. ಈ ಸಂದರ್ಭದಲ್ಲಿ ಧರ್ಮತ್ತಡ್ಕ ದುರ್ಗಾಪರಮೇಶ್ವರೀ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ರಾಮಚಂದ್ರ ಭಟ್ ಉಳುವಾನ ಉಪಸ್ಥಿತರಿದ್ದು ಶುಭ ಹಾರೈಸಿದರು.

ದಿನಾಂಕ ೧೭-೦೭-೨೦೧೦ ಶನಿವಾರದಿಂದ ಕರ್ಕಾಟಕ ಮಾಸದಲ್ಲಿ ನಡೆಸುವ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಒಂದು ತಿಂಗಳ ಕಾಲ ಪ್ರಾರ್ಥನಾ ಅವಧಿಯ ನಂತರ ರಾಮಯಣ ವಾಚನ ಕಾರ್ಯಕ್ರಮವನ್ನೂ ನಡೆಸಲಾಯಿತು.
ದಿನಾಂಕ ೨೧-೦೭-೨೦೧೦ನೇ ಬುಧವಾರದಂದು ಶ್ರೀಗುರುಗಳ ಯೋಜನೆಯಾದ ವನಜೀವನಯಜ್ಞ ಕಾರ್ಯಕ್ರಮವನ್ನು ಗಿಡಗಳನ್ನು ನೆಡುವ ಮತ್ತು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ನಡೆಸಲಾಯಿತು. ಸಸಿಗಳನ್ನು ಪುತ್ತಿಗೆ ಗ್ರಾಮಪಂಚಾಯತು ವಿದ್ಯಾಲಯಕ್ಕೆ ಒದಗಿಸಿದ್ದು, ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಪುತ್ತಿಗೆ ಗ್ರಾಮಪಂಚಾಯತು ಉಪಾಧ್ಯಕ್ಷರಾದ ಶ್ರೀಯುತ ಜಯಂತ ಪಾಟಾಳಿ ಆಗಮಿಸಿ ಸಾಂಕೇತಿಕವಾಗಿ ಗಿಡ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ದಿನಾಂಕ ೨೬-೦೭-೨೦೧೦ನೇ ಸೋಮವಾರದಂದು ಗುರುಪೂರ್ಣಿಮೆಯ ನಿಮಿತ್ತ ಶ್ರೀಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಗುರುಹಿರಿಯರಿಗೆ ವಂದಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.
ದಿನಾಂಕ ೧೫-೦೮-೨೦೧೦ನೇ ರವಿವಾರದಂದು ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ವಿದ್ಯಾಲಯದಲ್ಲಿ ರಾಷ್ಟ್ರಧ್ವಜಾರೋಹಣವನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ದೇಶಭಕ್ತಿಗೀತೆ, ಭಾಷಣ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದರು.
ದಿನಾಂಕ ೨೦-೦೮-೨೦೧೦ನೇ ಶುಕ್ರವಾರದಂದು ಈ ಶೈಕ್ಷಣಿಕ ವರ್ಷದ ವಿಶೇಷ ಕಾರ್ಯಕ್ರಮವಾದ ’ಹಿರಿಯರೊಂದಿಗೆ ಮಾತುಕತೆ’ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಹಿರಿಯ ಅಭ್ಯಾಗತರಾಗಿ ಶ್ರೀಯುತ ಅಡ್ಕ ಗೋಪಾಲಕೃಷ್ಣ ಭಟ್ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ನಂಬಿಕೆ ಇತ್ಯಾದಿ ವಿಚಾರಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ದಿನಾಂಕ ೨೧-೦೮-೨೦೧೦ನೇ ಶನಿವಾರದಂದು ಓಣಂ ಹಬ್ಬದ ಸಲುವಾಗಿ ಹೂವಿನ ರಂಗವಲ್ಲಿ ಮತ್ತು ಓಣಂ ಹಬ್ಬದ ವಿಶೇಷ ಊಟವನ್ನು ನಡೆಸಲಾಯಿತು. ಈ ಕಾರ್ಯಕ್ರಮದೊಂದಿಗೆ ರಕ್ಷಾಬಂಧನ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಓಣಂ ಊಟದ ಬಗ್ಗೆ ರಕ್ಷಕರು ನಮ್ಮೊಂದಿಗೆ ಸಹಕರಿಸಿದ್ದರು.

ದಿನಾಂಕ ೧-೦೯-೨೦೧೦ನೇ ಬುಧವಾರದಂದು ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಮತ್ತು ಮುದ್ದುಕೃಷ್ಣವೇಷ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದಿನಾಂಕ ೭-೦೯-೨೦೧೦ನೇ ಮಂಗಳವಾರದಂದು ಶ್ರೀಕ್ಷೇತ್ರ ಗೋಕರ್ಣದ ಅಶೋಕವನದಲ್ಲಿ ಚಾತುರ್ಮಾಸ್ಯ ವ್ರತದಲ್ಲಿದ್ದ ಶ್ರೀಗುರುಗಳನ್ನು ಅಧ್ಯಾಪಕವೃಂದ ಭೇಟಿಮಾಡಿ ಶೈಕ್ಷಣಿಕ ಮಾರ್ಗದರ್ಶನದೊಂದಿಗೆ ಆಶೀರ್ಮಂತ್ರಾಕ್ಷತೆಯನ್ನೂ ಪಡೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀಗುರುಗಳು ವಿದ್ಯಾರ್ಥಿಗಳ ಪ್ರಗತಿಗೆ ಅಧ್ಯಾಪಕರು ಶೈಕ್ಷಣಿಕವಾಗಿ ನೀಡಬೇಕಾದ ಅಮೂಲ್ಯ ಮಾಹಿತಿಗಳನ್ನು ನೀಡಿದರು.

ದಿನಾಂಕ ೧೦-೦೯-೨೦೧೦ನೇ ಶುಕ್ರವಾರದಂದು ಗಣೇಶ ಚತುರ್ಥಿಯ ಅಂಗವಾಗಿ ವಿದ್ಯಾಸಂಸ್ಥೆಗಳಲ್ಲಿ ಗಣಪತಿ ಹವನವನ್ನು ನಡೆಸಲಾಯಿತು.

ದಿನಾಂಕ ೧೭-೧೦-೨೦೧೦ ರವಿವಾರದಂದು ವಿದ್ಯಾದಶಮಿ ಪ್ರಯುಕ್ತ ಶಾರದಾ ಪೂಜೆಯನ್ನು ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.

ದಿನಾಂಕ ೮-೧೧-೨೦೧೦ನೇ ಸೋಮವಾರದಿಂದ ೧೨-೧೧-೨೦೧೦ನೇ ಶುಕ್ರವಾರದವರೆಗೆ ಮೈತ್ರೇಯಿ ಗುರುಕುಲದ ಶ್ರದ್ಧಾಗಣದ ವಿದ್ಯಾರ್ಥಿನಿಯಾದ ಕುಮಾರಿ ಪಾರ್ವತಿ ಎಡಪ್ಪಾಡಿ ಇವಳು ಶಿಶುಮಂದಿರ, ೧ ಮತ್ತು ೨ನೇ ತರಗತಿ ವಿದ್ಯಾರ್ಥಿಗಳಿಗೆ ಬಾಲಗೋಕುಲ ಕಾರ್ಯಕ್ರಮವನ್ನು ನಡೆಸಿಕೊಟ್ಟಳು.

ದಿನಾಂಕ ೧೩-೧೨-೨೦೧೦ನೇ ಸೋಮವಾರದಿಂದ ವಿದ್ಯಾಲಯಮಟ್ಟದ ಬೌದ್ಧಿಕ ಸ್ಪರ್ಧೆಗಳನ್ನು ವಿವಿಧ ಹಂತಗಳಲ್ಲಿ ನಡೆಸಲಾಯಿತು. ಇದೇ ದಿನ ಮಧ್ಯಾಹ್ನ ೨-೩೦ರಿಂದ ಪಾಂಗಾಳ ಗೋಪಾಲಕೃಷ್ಣ ಶೆಣೈ ಇವರಿಂದ ವಿಶೇಷ ಜಾದೂ ಕಾರ್ಯಕ್ರಮವು ನಡೆಯಿತು.

ದಿನಾಂಕ ೭-೦೧-೨೦೧೧ನೇ ಶುಕ್ರವಾರ ಮತ್ತು ೮-೧೧-೨೦೧೧ನೇ ಶನಿವಾರಗಳಂದು ವಿದ್ಯಾಲಯ ಮಟ್ಟದ ಕ್ರೀಡೋತ್ಸವ ೨೦೧೦-೨೦೧೧ನ್ನು ನಡೆಸಲಾಯಿತು. ಕ್ರೀಡೋತ್ಸವಕ್ಕೆ   ಅತಿಥಿಗಳಾಗಿ ಶ್ರೀಯುತ ಶಂಕರಪ್ರಸಾದ ಕುಂಚಿನಡ್ಕ (ನಿವೃತ್ತ ಶಾರೀರಿಕ ಶಿಕ್ಷಕರು) ಆಗಮಿಸಿ ಕ್ರೀಡಾಕೂತಕ್ಕೆ ಚಾಲನೆಯನ್ನು ನೀಡಿ, ಸೂಕ್ತ ಮಾರ್ಗದರ್ಶನ ನೀಡಿದರು.

ಶೈಕ್ಷಣಿಕಪ್ರವಾಸ
ದಿನಾಂಕ ೧೯-೭-೨೦೧೦ನೇ ಸೋಮವಾರದಂದು ೭, ೮ ಮತ್ತು೯ನೇ ತರಗತಿ ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಯನ್ವಯ ಕೃಷಿಕ್ಷೇತ್ರ ಸಂದರ್ಶನಕ್ಕೆ ಶ್ರೀಯುತ ಚಂದ್ರಶೇಖರ ಭಟ್ಟ ಎಯ್ಯೂರು ಇವರ ಗದ್ದೆಕೃಷಿ ವೀಕ್ಷಣೆಗೆ ಕರೆದೊಯ್ಯಲಾಯಿತು. ದಿನಾಂಕ ೨೧-೭-೨೦೧೦ನೇ ಬುಧವಾರದಂದು ೫ ಮತ್ತು ೬ನೇ ತರಗತಿ ವಿದ್ಯಾರ್ಥಿಗಳನ್ನು ಸನಿಹದ ಶ್ರೀಯುತ ಉಮೇಶ್ ಮುಜುಂಗಾವು ಇವರ ಕೃಷಿಕ್ಷೇತ್ರಕ್ಕೆ ಕರೆದೊಯ್ಯಲಾಯಿತು. ವಿದ್ಯಾರ್ಥಿಗಳು ಈ ಪ್ರವಾಸದಲ್ಲಿ ಉತ್ಸಾಹದಿಂದ ಭಾಗವಹಿಸಿ ಮಾಹಿತಿಗಳನ್ನು ಪಡೆದುಕೊಂಡರು.

ಪರೀಕ್ಷೆಗಳು-ಸ್ಪರ್ಧೆಗಳು-ಮತ್ತು ಪ್ರಶಸ್ತಿಗಳು
ದಿನಾಂಕ ೨೪-೦೭-೨೦೧೦ನೇ ಶನಿವಾರದಂದು ಕೊಡ್ಲಮೊಗರು ವಾಣೀವಿಜಯ ವಿದ್ಯಾಲಂiiದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಹಮ್ಮಿಕೊಂಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾಲಯದ ೧೪ ವಿದ್ಯಾರ್ಥಿಗಳು ಭಾಗವಹಿಸಿ, ಉತ್ತಮ ನಿರ್ವಹಣೆ ತೋರಿದರು. ಈ ಸ್ಪರ್ಧೆಗಳಲ್ಲಿ U.P ವಿಭಾಗದ ಸಮೂಹಗಾನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವು ನಮ್ಮ ವಿದ್ಯಾಲಯಕ್ಕೆ ದೊರೆತಿರುತ್ತದೆ.

ದಿನಾಂಕ ೯-೧೦-೨೦೧೦ನೇ ಶನಿವಾರದಂದು ಚಿನ್ಮಯ ವಿದ್ಯಾಲಯ ಕಾಸರಗೋಡು ಇವರು ಜಿಲ್ಲಾಮಟ್ಟದಲ್ಲಿ ಆಯೋಜಿಸಿದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ನಮ್ಮ ವಿದ್ಯಾಲಯದ ೭ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ಶಾಸ್ತ್ರಪ್ರತಿಭಾ ಪರಿಷತ್ತು ಕೇರಳ ಘಟಕ ಇದರ ವತಿಯಿಂದ ದಿನಾಂಕ ೧೩-೧೧-೨೦೧೦ನೇ ಶನಿವಾರದಂದು ಜಿಲ್ಲಾ ಮಟ್ಟದಲ್ಲಿ ನಡೆಸಿದ ವಿಜ್ಞಾನ ಪರೀಕ್ಷೆಯಲ್ಲಿ ವಿದ್ಯಾಲಯದ ೩೯ ವಿದ್ಯಾರ್ಥಿಗಳು ಭಾಗವಹಿಸಿ ೨೭ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ದ್ವಿತೀಯ ಹಂತದ ಪರೀಕ್ಷೆಯಲ್ಲಿ ಭಾಗವಹಿಸಿರುತ್ತಾರೆ.

ತರಬೇತಿಗಳು ಮತ್ತು ಉಪನ್ಯಾಸಗಳು

ದಿನಾಂಕ ೪-೦೫-೨೦೧೦ ರಿಂದ ೬-೦೫-೨೦೧೦ರವರೆಗೆ ಮೂರು ದಿನಗಳ ಕಾಲ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು ಮತ್ತು ಬದಿಯಡ್ಕ ಜಂಟಿಯಾಗಿ ಅಧ್ಯಾಪಕರಿಗೆ ತರಬೇತಿ ಶಿಬಿರವನ್ನು ಆಯೋಜಿಸಿ ಪಾಠ್ಯಕ್ರಮಗಳ ತರಬೇತಿಯನ್ನು ನೀಡಲಾಯಿತು.

ದಿನಾಂಕ ೧೭-೦೫-೨೦೧೦ರಿಂದ ಹತ್ತು ದಿನಗಳ ಕಾಲ ೫ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಿಶೇಷ ಇಂಗ್ಲೀಷ್ ತರಬೇತಿ ಮತ್ತು ಶಾರೀರಿಕ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಚಂದ್ರಪ್ರಭಾ ಬಿ ರಾವ್ ಮುಂಬೈ ಮತ್ತು ಶ್ರೀಯುತ ಶಂಕರಪ್ರಸಾದ್ ಕುಂಚಿನಡ್ಕ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ದಿನಾಂಕ ೨೨-೦೧-೨೦೧೧ನೇ ಶನಿವಾರದಂದು ಶ್ರೀಯುತ ಗಣಪತಿ ಭಟ್ ಮಧುರಕಾನನ (ಭೂಗರ್ಭಶಾಸ್ತ್ರಜ್ಞರು) ಇವರಿಂದ ೭, ೮ ಮತ್ತು ೯ನೇ ತರಗತಿ ವಿದ್ಯಾರ್ಥಿಗಳಿಗೆ ಭೂಮಿಯ ಶಿಲಾರಚನೆ, ಅಂತರ್ಜಲದಂತಹ ವಿಶೇಷ ಮಾಹಿತಿ ಕಾರ್ಯಕ್ರಮ ನಡೆಯಿತು.

ಈ ಶೈಕ್ಷಣಿಕ ವರ್ಷದ ವಿಶೇಷ ಕಾರ್ಯಕ್ರಮವಾದ ’ವೈದ್ಯರ ಮಾತುಗಳು’ ಪ್ರಥಮ ಕಾರ್ಯಕ್ರಮವನ್ನು ದಿನಾಂಕ ೧೨-೦೮-೨೦೧೦ನೇ ಗುರುವಾರದಂದು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಡಾ|| ಮಾಲತೀ ಪ್ರಕಾಶ್ ನೀರ್ಚಾಲ್ ಇವರು ಆಗಮಿಸಿ ಶುಚಿತ್ವ, ಆರೋಗ್ಯ ಮತ್ತು ಜೀವನ ಎಂಬ ವಿಷಯಗಳ  ಬಗ್ಗೆ ಉಪನ್ಯಾಸವನ್ನು ನೀಡಿದರು.
ದಿನಾಂಕ ೨೪-೦೯-೨೦೧೦ನೇ ಶುಕ್ರವಾರದಂದು ಇಂಡಿಯನ್ ಡೆಂಟಲ್ ಎಸೋಸಿಯೇಷನ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಡಾ|| ಡಿ.ಪಿ ಭಟ್ ಕುಂಬಳೆ ಇವರು ದಂತ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ನೀಡಿದರು.

ಈ ಶೈಕ್ಷಣಿಕ ವರ್ಷದ ಓಣಂ ವಿರಾಮದಲ್ಲಿ ೧೦ ದಿನಗಳ ಕಾಲ ವಿದ್ಯಾರ್ಥಿಗಳಿಗೆ ’ರಂಗಶಿಕ್ಷಣ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ರಂಗನಿರ್ದೇಶಕರಾದ ಶ್ರೀಯೂತ ಮೂರ್ತಿ ದೇರಾಜೆ ಮತ್ತು ಬಳಗದವರು ವಿದ್ಯಾರ್ಥಿಗಳಿಗೆ ರಂಗ ತರಬೇತಿಯನ್ನು ನೀಡಿದರು.

ವಿದ್ಯಾರ್ಥಿವೇತನ ಮತ್ತು ವಿದ್ಯಾನಿಧಿ ಯೋಜನೆ
ಕೇರಳ ಸರಕಾರದಿಂದ ಬೀಡಿ ಕಾರ್ಮಿಕರ ಮಕ್ಕಳಿಗೆ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿವೇತನ ನಮ್ಮ ವಿದ್ಯಾಲಯದಲ್ಲಿಯೂ ದೊರೆಯುತ್ತಿದ್ದು ೨೦೧೦-೧೧ನೇ ಶೈಕ್ಷಣಿಕ ವರ್ಷದಲ್ಲಿ ದೊರಕಿದ ಮೊತ್ತವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.

ವಿದ್ಯಾಸಂಸ್ಥೆಯ ಶೈಕ್ಷಣಿಕ ಖರ್ಚುವೆಚ್ಚಗಳನ್ನು ಸರಿದೂಗಿಸಲು ’ವಿದ್ಯಾನಿಧಿ ಯೋಜನೆ’ ಎನ್ನುವ ಹೆಸರಿನ ದೂರಗಾಮೀ ಯೋಜನೆಯನ್ನು ರೂಪೀಕರಿಸಿದ್ದು ಈ ಯೋಜನೆಗೆ ವಾರ್ಷಿಕ ೫೦೦೦/- ರೂ.ಗಳನ್ನು ನಿಗದಿಪಡಿಸಲಾಗಿದೆ. ಹಣವನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಖರ್ಚುವೆಚ್ಚಗಳಿಗೆ ಅಳವಡಿಸಿಕೊಂಡು ಅಂತಹ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇದನ್ನು ವಿನಿಯೋಗಿಸಲಾಗುವುದು. ಈ ಯೋಜನೆಯಲ್ಲಿ ಇದುವರೆಗೆ ೧೯ ಜನ ವಿದ್ಯಾಭಿಮಾನಿಗಳು ನಮ್ಮೊಂದಿಗೆ ಕೈಜೋಡಿಸಿದ್ದು, ವಿದ್ಯಾಭಿಮಾನಿಗಳಾದ ತಮ್ಮೆಲ್ಲರ ಸಹಾಯಹಸ್ತವನ್ನು ಈ ಸಂದರ್ಭದಲ್ಲಿ ಬಯಸುತ್ತೇನೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.

ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಲಯಕ್ಕೆ ಶ್ರೀ ಮಠದ ವತಿಯಿಂದ ೪ ಮತ್ತು ಶ್ರೀ ಸುರೇಶ್ ದೊಡ್ಡಮಾಣಿ ಮತ್ತು ಮನೆಯವರು ೨ ಕಂಪ್ಯೂಟರ್ ಗಳನ್ನು ನೀಡಿ ಸಹಕರಿಸಿದ್ದಾರೆಂದು ತಿಳಿಸಲು ಸಂತೋಷವಾಗುತ್ತಿದೆ. ಇದಕ್ಕೆ ಪೂರಕವಾಗಿ ದಾನಿಗಳಿಂದ ರೂ.೧೨,೦೦೦/- ಮೌಲ್ಯದ UPS ವಿದ್ಯಾಲಯಕ್ಕೆ ದೊರಕಿರುತ್ತದೆ.
 
ಪ್ರತಿಭಾ ಭಾರತಿ - ಜ್ಞಾನದೀಪ್ತಿ ಮತ್ತು ಮಾಹಿತಿ ತಂತ್ರಜ್ಞಾನ ಸಂಘಗಳು:

ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕಾಗಿ ವಿದ್ಯಾರ್ಥಿಗಳೇ ನಿರೂಪಿಸಿ, ನಿರ್ವಹಿಸುವ ಸಭಾಕಾರ್ಯಕ್ರಮ ’ಪ್ರತಿಭಾಭಾರತೀ’ ಪ್ರತೀ ತಿಂಗಳೂ ನಡೆಯುತ್ತಿದೆ. ವಿದ್ಯಾರ್ಥಿಗಳು ತಮ್ಮದೇ ಶೈಲಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು ಆಗಮಿಸಿದ  ಅತಿಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿವಿಧ ಪಠ್ಯ ವಿಷಯಗಳಿಗೆ ಸಂಬಂಧಪಟ್ಟಂತೆ ’ಜ್ಞಾನದೀಪ್ತಿ ಸಂಗಮ’ ಎಂದು ಹೆಸರಿಸಲಾದ ಸಂಘವೊಂದು ನಮ್ಮ ವಿದ್ಯಾಲಯದಲ್ಲಿದ್ದು ಪ್ರಭೋದನ, ವಿಕಸನ, ಚಿಂತನವೆನ್ನುವ ಧ್ಯೇಯದೊಂದಿಗೆ ಪ್ರತಿತಿಂಗಳೂ ಈ ಸಂಘದ ಅಡಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಕ್ಕೆ ಸಂಬಂಧಪಟ್ಟು ವಿಚಾರಗೋಷ್ಠಿಗಳನ್ನು ನಡೆಸುತ್ತಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಮಾಹಿತಿ ತಂತ್ರಜ್ಞಾನ ಸಂಘವನ್ನು ರೂಪಿಸಿದ್ದು ವಿದ್ಯಾರ್ಥಿಗಳು ಈ ಸಂಘದ ಅಡಿಯಲ್ಲಿ ಪ್ರೋಜೆಕ್ಟ್‌ಗಳೊಂದಿಗೆ ಸೆಮಿನಾರ್‌ಗಳನ್ನು ನಡೆಸುತ್ತಿದ್ದಾರೆ.

ಇದಲ್ಲದೇ ವಿದ್ಯಾರ್ಜನೆಯೊಂದಿಗೆ ಆಧ್ಯಾತ್ಮಿಕವಾಗಿಯೂ ವಿದ್ಯಾರ್ಥಿಗಳು ಬೆಳವಣಿಗೆ ಹೊಂದುವ ದೃಷ್ಠಿಯಿಂದ ಗುರುವಾರಗಳಂದು ಭಜನಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿರಿಸಿ ಪ್ರತೀ ೧೫ ದಿನಗಳಿಗೊಮ್ಮೆ ಅಧ್ಯಾಪಕರ ಸಭೆ ನಡೆಯುತ್ತಿದೆ. ರಕ್ಷಕ-ಶಿಕ್ಷಕ ಸಂಘದ ಸಭೆ ಮತ್ತು ಆಡಳಿತಮಂಡಳಿ ಸಭೆಗಳು ನಡೆಯುತ್ತಿದ್ದು ವಿದ್ಯಾಲಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.

ವಿದ್ಯಾಲಯದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ರಕ್ಷಕರು ಧನಸಹಾಯಗಳೊಂದಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದು ಈ ಸಂದರ್ಭದಲ್ಲಿ ರಕ್ಷಕರನ್ನು ಸ್ಮರಿಸುತ್ತೇನೆ.

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯು ಮುಷ್ಠಿಭಿಕ್ಷಾ ಯೋಜನೆಯನ್ವಯ ನಡೆಯುತ್ತಿದ್ದು ಊರಿನಿಂದಲ್ಲದೇ ಪರವೂರಿನಿಂದಲೂ ಅಕ್ಕಿ ನಮ್ಮಲ್ಲಿಗೆ ಬರುತ್ತಿದೆ. ವಿದ್ಯಾರ್ಥಿಗಳ ಮನೆಯಿಂದಲೂ ಈ ಯೋಜನೆಗೆ ಸ್ಪಂದನ ದೊರೆತಿದ್ದು ಮಧ್ಯಾಹ್ನದ ಊಟದ ಯೋಜನೆಗೆ ತಮ್ಮೆಲ್ಲರ ಸಹಾಯವನ್ನೂ ಬಯಸುತ್ತೇನೆ.

ಶ್ರೀಗುರುಗಳ ದಿವ್ಯಸಂಕಲ್ಪವನ್ನು ಈಡೇರಿಸುವ ಉದ್ದೇಶದಿಂದ ಆಡಳಿತಮಂಡಳಿ, ಅಧ್ಯಾಪಕವೃಂದ, ರಕ್ಷಕ-ಶಿಕ್ಷಕ ಸಂಘ ನಿರಂತರ ಶ್ರಮಿಸುತ್ತಿದ್ದು ವಿದ್ಯಾಭಿಮಾನಿಗಳ ಸಹಾಯ ಸಹಕಾರಗಳು ದೊರಕುತ್ತಿದೆ. ವಿದ್ಯಾಲಯದ ಪ್ರಗತಿಯಲ್ಲಿ ಸಹಕರಿಸಿದ ದಾನಿಗಳನ್ನು ಮತ್ತು ಸಲಹೆಗಳನ್ನು ನೀಡಿದ ಹಿರಿಯರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ವಿದ್ಯಾಲಯದ ಇನ್ನೂ ಹೆಚ್ಚಿನ ಪ್ರಗತಿಗಾಗಿ ತಮ್ಮೆಲ್ಲರ ಸಹಾಯ-ಸಹಕಾರಗಳನ್ನು ಬಯಸುತ್ತಾ ಶ್ರೀಶ್ರಿಗಳವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತಾ ಈ ವರದಿಯನ್ನು ಶ್ರೀಗುರುಗಳ ಚರಣಾರವಿಂದಗಳಿಗೆ ಸಮರ್ಪಿಸುತ್ತಿದ್ದೇನೆ.

ಅಧ್ಯಕ್ಷರು/ಕಾರ್ಯದರ್ಶಿ                                                                            ಮುಖ್ಯೋಪಾಧ್ಯಾಯರು        
ಆಡಳಿತ ಮಂಡಳಿ


Jan 24, 2011

ಭೂಗರ್ಭ ತಜ್ಞರಿಂದ ಉಪನ್ಯಾಸ

ಖ್ಯಾತ ಅಂತರ್ಜಲ ಸಂಶೋಧಕ, ಭೂಗರ್ಭ ತಜ್ಞ ಮಧುರಕಾನನ ಗಣಪತಿ ಭಟ್ ಮೊನ್ನೆ ನಮ್ಮ ಶಾಲೆಗೆ ಭೇಟಿ ನೀಡಿದ್ದರು. ಭೂಮಿಯಲ್ಲಿರುವ ಪದರುಗಳು ಮತ್ತು ಅಂತರ್ಜಲದ ಕುರಿತಾದ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಸಂಶಯವನ್ನು ದೂರೀಕರಿಸಿದರು.
ನಾಡಿದ್ದು 28 ರಂದು ನಮ್ಮ ಶಾಲಾ ವರ್ಧಂತ್ಯುತ್ಸವ ನಡೆಯಲಿದೆ. ನಿಮ್ಮೆಲ್ಲರ ಉಪಸ್ಥಿತಿ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಲಿದೆ. ಬನ್ನಿ, ಇದು ನಿಮ್ಮೆಲ್ಲರಿಗೆ ನಮ್ಮ ಪ್ರೀತಿಪೂರ್ವಕ ಆಮಂತ್ರಣ.