Dec 16, 2014

ಕಾನೂನು ತಿಳುವಳಿಕೆ ಕಾರ್ಯಕ್ರಮ

“ಪ್ರಜಾಪ್ರಭುತ್ವದಲ್ಲಿ ಕಾನೂನು ಮತ್ತು ಅದರ ಸರಿಯಾದ ಆಚರಣೆಗೆ ವಿಶೇಷ ಮಹತ್ವ ಇದೆ. ಸುಸ್ಥಿರ ಜನಜೀವನಕ್ಕೆ ಕಾನೂನಿನ ಸರಿಯಾದ ಅಳವಡಿಕೆ ಅಗತ್ಯ. ತರಾತುರಿಯಲ್ಲಿ ಜ್ಯಾರಿಗೆ ತರುವ ಕಾನೂನುಗಳಿಂದ ಉಪಕಾರದ ಬದಲಾಗಿ ತೊಂದರೆಗಳೇ ಹೆಚ್ಚುತ್ತಿವೆ. ಆದ್ದರಿಂದ ಪೂರ್ಣ ವಿಮರ್ಶೆಯ ನಂತರ ಹೊಸ ಕಾನೂನುಗಳನ್ನು ಅಳವಡಿಸಬೇಕು. ಈ ಬಗ್ಗೆ ಎಲ್ಲರಿಗೂ ತಿಳುವಳಿಕೆ ಅಗತ್ಯ. ಎಂದು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಇ. ಚಂದ್ರಶೇಖರನ್ ನಾಯರ್ ಅಭಿಪ್ರಾಯಪಟ್ಟರು. ಅವರು ಗ್ರಾಮೋತ್ಥಾನ ಕೇಂದ್ರದ ಆಶ್ರಯದಲ್ಲಿ 13.12.2014 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಕಾನೂನು ತಿಳುವಳಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ಮದನಗುಳಿ, ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಿಕ್ಷಕ ದೇವಿಪ್ರಸಾದ ಶೆಟ್ಟಿ ಸ್ವಾಗತಿಸಿ, ಉಮಾಮಹೇಶ್ವರಿ ವಂದಿಸಿದರು.

Dec 12, 2014

ಶಿಕ್ಷಕ ಹುದ್ದೆಗೆ ಸಂದರ್ಶನ


ನಮ್ಮ ವಿದ್ಯಾಪೀಠದ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ತರಬೇತಿ ಮತ್ತು ಇತರ ವಿಷಯಗಳಿಗೆ  ಶಿಕ್ಷಕರ ಹುದ್ದೆಯನ್ನು ಭರ್ತಿಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 19.12.2014 ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಂಸ್ಥೆಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬೇಕೆಂದು ಶಾಲಾ ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ ಮಾರ್ಗ ಇವರನ್ನು (9446283049) ಸಂಪರ್ಕಿಸಬಹುದು.

Nov 20, 2014

‘ಪ್ರತಿಭಾ ಭಾರತೀ - ನವೆಂಬರ್’



“ಪ್ರತಿಭಾ ಭಾರತೀ ಉತ್ತಮವಾಗಿ ಮೂಡಿ ಬರುತ್ತಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವ ತುಡಿತವನ್ನು ಹೊಂದಿರಬೇಕು. ಜನ್ಮಜಾತವಾದ ಪ್ರತಿಭೆಯನ್ನು ಇಂತಹ ವೇದಿಕೆಗಳಲ್ಲಿ ಬೆಳಗಿಸಬೇಕು. ಉತ್ತಮ ಪ್ರತಿಭೆಗಳನ್ನು ಬೆಳೆಸಿಕೊಂಡಾಗ ಕೆಟ್ಟ ಹವ್ಯಾಸಗಳು ದೂರವಾಗುತ್ತವೆ. ಆದ್ದರಿಂದ ಎಳವೆಯಲ್ಲಿಯೇ ಪ್ರತಿಭೆ ಮತ್ತು ಮಾನವೀಯ ಮೌಲ್ಯಗಳನ್ನು ವಿಕಾಸಗೊಳಿಸಿಕೊಳ್ಳಬೇಕು” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಚ್. ರಾಮ ಭಟ್ ಕಾರಿಂಜ ಹಳೆಮನೆ ಅಭಿಪ್ರಾಯಪಟ್ಟರು. ಅವರು ನಿನ್ನೆ 19.11.2014 ಬುಧವಾರ ನಮ್ಮ ವಿದ್ಯಾಪೀಠದಲ್ಲಿ ನಡೆದ ತಿಂಗಳ ’ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಲಕ್ಷ್ಮಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಜಾ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಅನನ್ಯ ಸ್ವಾಗತಿಸಿ ರಜಿತ್ ವಂದಿಸಿದರು. ಕೌಶಿಕ್ ಸಿ.ಆರ್ ಮತ್ತು ಆದಿತ್ಯ ಕಾರ್ಯಕ್ರಮ ನಿರೂಪಿಸಿದರು.

Nov 18, 2014

ಬೆಂಗಳೂರಿನಲ್ಲಿ ವಿವಿಧ ಬಹುಮಾನಗಳು


ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಾದ ತೀಕ್ಷಾ, ಕೃಷ್ಣ ಶೌರಿ, ಶ್ರೀಶ, ಆಶ್ರಿತ್ ನಾರಾಯಣ, ಅನನ್ಯ ಮತ್ತು ಸಂಯುಕ್ತ ದಿನಾಂಕ 15.11.2014 ಶನಿವಾರ ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಭಾರತೀ ವಿದ್ಯಾಲಯದಲ್ಲಿ ಜರಗಿದ ಧರ್ಮಚಕ್ರ ಸಂಸ್ಥೆಯ ಅಧೀನದಲ್ಲಿರುವ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದರು. ಬಹುಮಾನ ವಿಜೇತರಿಗೆ ಶುಭಾಶಯಗಳು...

Nov 13, 2014

ಪೀಠೋಪಕರಣಗಳ ಕೊಡುಗೆ


ನಮ್ಮ ವಿದ್ಯಾಪೀಠಕ್ಕೆ ನಿನ್ನೆ, ಶ್ರೀ ಮುನ್ನಿಪ್ಪಾಡಿ ಶಂಕರನಾರಾಯಣ ರಾವ್ ಅವರು ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾ ಸಮಿತಿಯ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

Nov 5, 2014

ಜಾದೂ ಪ್ರದರ್ಶನ

                ಜಾದೂಗಾರ ಪಾಂಗಾಳ ಗೋಪಾಲಕೃಷ್ಣ ಶೆಣೈ ಉಡುಪಿ ಇವರಿಂದ ನಮ್ಮ ವಿದ್ಯಾಪೀಠದಲ್ಲಿ 24.10.2014 ಶುಕ್ರವಾರ ಜಾದೂ ಪ್ರದರ್ಶನ ನಡೆಯಿತು. ಸುಮಾರು 2 ಗಂಟೆಗಳ ಕಾಲ ಜರಗಿದ ಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಂಬಂಧಿಸಿದ ಜಾದೂಗಳನ್ನು ಪ್ರದರ್ಶಿಸಲಾಯಿತು. ದೇವಿಪ್ರಸಾದ ಶೆಟ್ಟಿ ಸ್ವಾಗತಿಸಿ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆಮಾರ್ಗ ಧನ್ಯವಾದ ಸಮರ್ಪಿಸಿದರು.

Oct 29, 2014

“ಬಾಳೆಕಾಯಿಯಿಂದ ಮೌಲ್ಯವರ್ಧಿತ ಉತ್ಪನ್ನ: ಡಾ|ಸರಿತಾ ಹೆಗ್ಡೆ''

                ಬಾಳೆಕಾಯಿಯನ್ನು ಬೇಯಿಸಿ ತಯಾರಿಸುವ ಸೇಮಗೆಯು ಮೌಲ್ಯವರ್ಧಿತ ಉತ್ಪನ್ನವಾಗಿದ್ದು ಬಹುಕಾಲ ಬಾಳ್ವಿಕೆ ಬರುತ್ತದೆ. ಹಣ್ಣಾದರೆ ಬಹುಬೇಗನೆ ಕೊಳೆತು ಹೋಗುವ ತಳಿಯ ಬಾಳೆಕಾಯಿಗಳನ್ನು ರೀತಿ ಸಂರಕ್ಷಿಸಿ ವಿವಿಧ ರೂಪಗಳಲ್ಲಿ ಬಳಸಬಹುದು. ಜನಸಾಮಾನ್ಯರಿಗೆ ಬಗ್ಗೆ ತಿಳುವಳಿಕೆಯನ್ನು ನೀಡಲು ಕೃಷಿ ವಿಜ್ಞಾನ ಕೇಂದ್ರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆಎಂದು ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಡಾ|ಸರಿತಾ ಹೆಗ್ಡೆ ಅಭಿಪ್ರಾಯಪಟ್ಟರು. ಅವರು 13.10.2014 ಸೋಮವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಮೌಲ್ಯಯುತ ಬಾಳೆಕಾಯಿಯ ಕುರಿತ ಪರಿಚಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಕ್ರಂ ಸ್ವಾಗತಿಸಿ ನಿಶಿತಾ.ಎನ್ ವಂದಿಸಿದರು. ಶ್ರೀಜಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.

Oct 14, 2014

’ಪ್ರತಿಭಾ ಭಾರತೀ - ಅಕ್ಟೋಬರ್ 2014’



ವೇದಿಕೆಯ ಮೇಲೆ ನಿಂತು ಮಾತನಾಡುವುದು ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯವನ್ನು ತಂದುಕೊಡುತ್ತದೆ, ಹೆಚ್ಚಿದ ಆತ್ಮವಿಶ್ವಾಸ ಹಲವು ಸಾಧನೆಗಳಿಗೆ ನಾಂದಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕುಎಂದು ಕೃಷಿಕ ಪಂಜೆ ದಯಾನಂದ ಭಟ್ ಅಭಿಪ್ರಾಯಪಟ್ಟರು. ಅವರು 09.10.2014 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ನಡೆದ ತಿಂಗಳಪ್ರತಿಭಾ ಭಾರತೀಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಪುನೀತ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಕ್ಷಾ.ಎಸ್ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ನವ್ಯಶ್ರೀ ಸ್ವಾಗತಿಸಿ ಜಯಶ್ರೀ ವಂದಿಸಿದರು. ಭಾವನಾ ಮತ್ತು ಶಿಲ್ಪ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾ ದಶಮಿ



04.10.2014 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರು ಶಾರದಾಪೂಜೆಯನ್ನು ನೆರವೇರಿಸಿ ಪುಟಾಣಿಗಳಿಗೆ ಅಕ್ಷರಾಭ್ಯಾಸ ಮಾಡಿಸಿದರು.

ಗಣೇಶ ಚತುರ್ಥಿ

ಈ ಬಾರಿ ಗಣೇಶ ಚತುರ್ಥಿ ಕಾರ್ಯಕ್ರಮದ ಆಚರಣೆ ಅಗೋಸ್ತು ತಿಂಗಳ 29ನೇ ತಾರೀಕಿನಂದು ನಮ್ಮ ವಿದ್ಯಾಪೀಠದಲ್ಲಿ ಜರಗಿತು. ವೇದಮೂರ್ತಿ ಬ್ರಹ್ಮಶ್ರೀ ಕೋಣಮ್ಮೆ ಮಹಾದೇವ ಭಟ್ಟರು ಪೌರೋಹಿತ್ಯವನ್ನು ನಡೆಸಿದರು, ಶಾಲಾ ಸಮಿತಿಯ ಅಧ್ಯಕ್ಷ ಮದನಗುಳಿ ರಾಮಚಂದ್ರ ಭಟ್ ಉಪಸ್ಥಿತರಿದ್ದರು.

Aug 25, 2014

ಪರಿಸರ ಮಾಹಿತಿ ಕಾರ್ಯಕ್ರಮ - 2014

``ಕಲ್ಪವೃಕ್ಷ ಕಾಮಧೇನುಗಳು ಸಮಾಜಕ್ಕೆ ಅತ್ಯಂತ ಆವಶ್ಯಕವಾದವುಗಳು. ಇವುಗಳ ಉಳಿವು ಪರಿಸರ ಸಂರಕ್ಷಣೆಯ ದ್ಯೋತಕ. ಆತ್ಮ, ಮಹಾತ್ಮ ಮತ್ತು ಪರಮಾತ್ಮನ ಮೇಲಿನ ಭಕ್ತಿ ಪರಿಸರ ಸಂರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಮಾನವನಿಗೆ ಸಹಜೀವಿಗಳ ಮೇಲೆ ಪ್ರೀತಿ ಇರಬೇಕು. ಆದರೆ ಪ್ರಸ್ತುತ ನಾವು ಸೇವಿಸುವ ಆಹಾರವೇ ವಿಷಮಯವಾಗುತ್ತಿದೆ. ಉಪ್ಪು, ಮೈದಾ, ಸಕ್ಕರೆಗಳಲ್ಲಿ ಕಲಬೆರಕೆ ಕಂಡುಬರುತ್ತಿದೆ. ಮಾನವನು ಸ್ವಂತಲಾಭಕ್ಕಾಗಿ ಸಮಾಜವನ್ನೇ ಬಲಿಕೊಡುವ ಹಂತಕ್ಕೆ ತಲಪಿದ್ದಾನೆ. ನಾವು ಈ ದುರಭ್ಯಾಸದಿಂದ ವಿಮುಖರಾಗಿ ಸನ್ಮಾರ್ಗದಲ್ಲಿ ನಡೆಯಬೇಕು” ಎಂದು ನಿವೃತ್ತ ಪ್ರಾಂಶುಪಾಲ ಪಿ.ಎನ್. ಮೂಡಿತ್ತಾಯ ಅಭಿಪ್ರಾಯಪಟ್ಟರು. ಅವರು ಮೊನನೆ 22.08.2014 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ  ಜರಗಿದ ‘ಪರಿಸರ ಮಾಹಿತಿ ಕಾರ್ಯಕ್ರಮ’ದಲ್ಲಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜಕ ಸತೀಶ್ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಾದ ದೀಕ್ಷಾ ಸ್ವಾಗತಿಸಿ ಪುನೀತ್ ಕುಮಾರ್ ವಂದಿಸಿದರು. ನಿಶಿತಾ. ಎನ್ ಕಾರ್ಯಕ್ರಮ ನಿರೂಪಿಸಿದರು.

Aug 16, 2014

ಶ್ರೀಕೃಷ್ಣ ಜಯಂತಿ ಉತ್ಸವ _ ಜಯ ಸಂವತ್ಸರ


``ಧರ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಎಳವೆಯಲ್ಲಿಯೇ ಅರಿವು ಮೂಡಿಸಬೇಕು. ಈ ಹಂತದಲ್ಲಿ ನಮ್ಮ ಸಂಸ್ಕೃತಿಯ ವೈವಿಧ್ಯದ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳು ಅಗತ್ಯವಾಗಿ ಏರ್ಪಾಡಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಧೈರ್ಯ ಮತ್ತು ನಿರ್ಭಯದಿಂದ ಭಾಗವಹಿಸಬೇಕು." ಎಂದು ‘ಬೆಣ್ಣೆ’ ಮಾಸ ಪತ್ರಿಕೆಯ ಗೌರವ ಸಂಪಾದಕ ಮಧುರಕಾನನ ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ಶ್ರೀಕೃಷ್ಣ ಜಯಂತಿ ಉತ್ಸವ ಮತ್ತು ರಾಮಾಯಣ ಮಾಸಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್, ಜ್ಯೋತಿಷಿ ಎಂ.ಚಂದ್ರಶೇಖರ ಭಟ್ ಮಡ್ವ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಶ್ರೀರಾಮ ಪಟ್ಟಾಭಿಷೇಕ ರೂಪಕ ಜರಗಿತು. ವಿದ್ಯಾರ್ಥಿಗಳಾದ ಚೈತ್ರಶ್ರೀ ಎ.ಪಿ ಸ್ವಾಗತಿಸಿ ಶ್ರೀಜಾ ಗಿರೀಶ್ ವಂದಿಸಿದರು. ಕೌಶಿಕ್ ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Aug 15, 2014

‘ಸತ್-ಲೈಟ್’ ಉದ್ಘಾಟನೆ - ಸ್ವಾತಂತ್ರ್ಯೋತ್ಸವ



ಉತ್ತಮವಾದುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರ ಬಲಿದಾನ ಮತ್ತು ಜೀವನ ಸಾರ್ಥಕತೆಯ ಆದರ್ಶವನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಪ್ರಧಾನಮಂತ್ರಿಯವರ ಆದರ್ಶದಂತೆ ಸ್ವಚ್ಚವಾದ ಭಾರತ ನಿರ್ಮಾಣಕ್ಕಾಗಿ ನಾವೆಲ್ಲ ಪ್ರಯತ್ನಿಸಬೇಕು” ಎಂದು ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ್ ನಾಣಿತ್ಲು ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಕಲಿಕೆಗಾಗಿ ‘ಸತ್-ಲೈಟ್’ ವ್ಯವಸ್ಥೆಯ ಉದ್ಘಾಟನೆಯೂ ಜರಗಿತು.

ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಎಂ.ಚಂದ್ರಶೇಖರ ಭಟ್ ಮಡ್ವ, ಮುಳ್ಳೇರಿಯಾ ಮಂಡಲ ವಿದ್ಯಾ ಪ್ರಧಾನ ಬಾಲಕೃಷ್ಣ ಶರ್ಮ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಂಜನಾ ಸ್ವಾಗತಿಸಿ ಸ್ಕಂದ ಮುರಳಿ ವಂದಿಸಿದರು. ಪ್ರಶಾಂತ್.ಎಂ ಕಾರ್ಯಕ್ರಮ ನಿರೂಪಿಸಿದರು.

Aug 11, 2014

ರಕ್ಷಾ ಬಂಧನ – ಜಯ ಸಂವತ್ಸರ

-->

ಎಲ್ಲ ಜೀವಿಗಳನ್ನು ತನ್ನಂತೆ ಕಾಣಬೇಕು. ಎಲ್ಲ ಜೀವಿಗಳಿಗೂ ನೋವಾಗದಂತೆ ನೋಡಿಕೊಳ್ಳಬೇಕು. ಮಹಿಳೆಯರನ್ನು ಎಲ್ಲಿ ಗೌರವದಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ಸಾಕ್ಷಾತ್ಕರಿಸುತ್ತಾರೆ. ಅಂತಹ ಸುಂದರ ಭೂಮಿ ನಮ್ಮದಾಗಬೇಕು. ಪರಿಪೂರ್ಣತೆಯ ಸಂಕೇತವಾದ ಶ್ರಾವಣಪೂರ್ಣಿಮೆಯನ್ನು ಈ ಹಿನ್ನೆಲೆಯಲ್ಲಿ ರಕ್ಷಾ ಬಂಧನ ಹಬ್ಬವಾಗಿ ಆಚರಿಸುತ್ತೇವೆ. ಎಂದು ನಿವೃತ್ತ ಸಂಸ್ಕೃತ ಶಿಕ್ಷಕ ಬಾಲಕೃಷ್ಣ ಶರ್ಮ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಕುಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಸ್ವಾಗತಿಸಿ ವಿದ್ಯಾರ್ಥಿನಿ ಅನನ್ಯ ವಂದಿಸಿದರು. ವಿಕ್ರಂ ಕಾರ್ಯಕ್ರಮ ನಿರೂಪಿಸಿದರು.

Jul 29, 2014

ಹಲಸು ಮತ್ತು ಮಾತೃಭೂಮಿ


ಇತ್ತೀಚೆಗೆ ನಮ್ಮ ವಿದ್ಯಾಪೀಠದಲ್ಲಿ ಗ್ರಾಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ನಡೆದ ಹಲಸು ಮಾಹಿತಿ ಶಿಬಿರದ ಬಗ್ಗೆ ನೀವು ಓದಿದ್ದೀರಿ. ಈ ಕಾರ್ಯಕ್ರಮದ ಪತ್ರಿಕಾ ವರದಿಗಳನ್ನು ಗಮನಿಸಿದ ಮಾತೃಭೂಮಿ ಮಲಯಾಳಂ ಚಾನಲ್ ವರದಿಗಾರರು ಕ್ಯಾಮೆರಾ ಸಹಿತ ಮೊನ್ನೆ ವಿದ್ಯಾಪೀಠಕ್ಕೆ ಬಂದಿದ್ದರು. ಹಿಂದೆ ಸಹಕಾರ ನೀಡಿದಂತೆಯೇ ಹೆಚ್ಚು ಸ್ಪೂರ್ತಿಯುತವಾಗಿ ಮಹಿಳೆಯರು ಸಹಕಾರ ನೀಡಿದರು...

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದಿಂದ ಕಲಿಕೋಪಕರಣಗಳ ಕೊಡುಗೆ


               

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಅನ್ಯರ ಸಹಕಾರ ಹೆಚ್ಚು ಅಪೇಕ್ಷಣೀಯ. ಬಡ ವಿದ್ಯಾರ್ಥಿಗಳಿಗೆ ಕಲಿಕೆಯ ಸಂಪನ್ಮೂಲಗಳ ಕ್ರೋಡೀಕರಣಕ್ಕಾಗಿ ಸ್ವಯಂಸೇವಾ ಸಂಸ್ಥೆಗಳು ಸಹಕಾರಿಗಳಾಗಬೇಕು. ದೇವರ ಭಯವೇ ಜ್ಞಾನದ ಆರಂಭವಾದುದರಿಂದ ಜನತಾ ಜನಾರ್ದನರ ಸೇವೆ ಈ ನಿಟ್ಟಿನಲ್ಲಿ ಅಗತ್ಯ. ಪರಿಣಾಮವಾಗಿ ಸಮಾಜದ ಬೆಳಕಿನಲ್ಲಿ ಬೆಳೆಯುವ ವಿದ್ಯಾರ್ಥಿಗಳು ಹೆಚ್ಚು ಪ್ರಗತಿ ಹೊಂದಬೇಕು ಹಾಗೂ ತನ್ಮೂಲಕ ಸಹಕರಿಸಿದ ಸಂಸ್ಥೆಗಳಿಗೆ ಕೀರ್ತಿ ತರಬೇಕುಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಉಡುಪುಮೂಲೆ ರಘುರಾಮ ಭಟ್ ಅಭಿಪ್ರಾಯಪಟ್ಟರು. ಅವರು 25.07.2014 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಹವ್ಯಕ ಭಾಷೆಯ ಬೆಳವಣಿಗೆಗಾಗಿ ಅಂತರ್ಜಾಲದಲ್ಲಿ ರೂಪುಗೊಂಡಿರುವ ಒಪ್ಪಣ್ಣ ಡಾಟ್ ಕಾಮ್, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ವಿದ್ಯಾರ್ಥಿಗಳಿಗಾಗಿ ಕೊಡಮಾಡಿದ ಕಲಿಕೋಪಕರಣಗಳ ವಿತರಣೆ ಮತ್ತು ತಿಂಗಳ ಪ್ರತಿಭಾ ಭಾರತೀಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಆದಿತ್ಯ ಶರವಣ ಹಿಳ್ಳೆಮನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿ.ಕೃಷ್ಣ ಭಟ್ ಕುಂಚಿನಡ್ಕ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಭರತನಾಟ್ಯ ಕಲಾವಿದೆ ಅನುಪಮಾ ರಾಘವೇಂದ್ರ ಉಡುಪುಮೂಲೆ, ಛಾಯಾಗ್ರಾಹಕ ಹರೀಶ್ ಹಳೆಮನೆ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಜಾ ಗಿರೀಶ್ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಸಂಯುಕ್ತ.ಎಂ ಸ್ವಾಗತಿಸಿ ವಿಕ್ರಮ್ ವಂದಿಸಿದರು. ರೇಶ್ಮಾ ರಾಮಚಂದ್ರ ಹಾಗೂ ತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.