Dec 10, 2012

ಕ್ರೀಡೋತ್ಸವ 2012

ನಮ್ಮ ವಿದ್ಯಾಪೀಠದಲ್ಲಿ ಮೊನ್ನೆ 08.12.2012 ಶನಿವಾರ ಜರಗಿದ ‘ಕ್ರೀಡೋತ್ಸವ’ವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ರಸಾದ್ ಕುಂಚಿನಡ್ಕ ಧ್ವಜಾರೋಹಣಗೈದು ಉದ್ಘಾಟಿಸಿದರು. ವಿದ್ಯಾರ್ಥಿಗಳು ಮತ್ತು ಪೂರ್ವ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು. ಬೆಳಗ್ಗೆ 10 ಗಂಟೆಗೆ ಧ್ವಜವಂದನೆಯೊಂದಿಗೆ ಆರಂಭವಾದ ಸ್ಪರ್ಧೆಗಳು ಸಾಯಂಕಾಲ 4 ಗಂಟೆಯ ತನಕ ಜರಗಿದವು.

Dec 4, 2012

ಎಸ್.ಆರ್. ಪಾಟೀಲ್ ಭೇಟಿ

ಕರ್ನಾಟಕ ರಾಜ್ಯ ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಇವರು ೦೧.೧೨.೨೦೧೨ ಶನಿವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠವನ್ನು ಸಂದರ್ಶಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಇವರನ್ನು ಶಾಲು ಹೊದೆಸಿ ಸ್ವಾಗತಿಸಿದರು. ನಂತರ ಅವರು ಶಾಲಾ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಜರಗಿದ ‘ಜಾನಪದ ಸಂಧ್ಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕರಾಟೆ ಪಂದ್ಯಾಟದಲ್ಲಿ ಪ್ರಶಸ್ತಿ

24.11.2012 ಮತ್ತು 25.11.2012 ರಂದು ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಜರಗಿದ ಅಂತರ್ ಜಿಲ್ಲಾ ಡೋಜೋ -ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಾದ ಆಶ್ರಿತ್ ನಾರಾಯಣ. ಕೆ, ಯಜ್ಞೇಶ, ವೈಶಾಕ್. ಎಸ್, ಮನೀಶ್.ಎ, ಆದಿತ್ಯ ಶರವಣ. ಎಚ್, ಪ್ರಶಾಂತ. ಎಂ, ಅನ್ವಿತ್ ಶರ್ಮ. ಎಚ್, ಸುಧನ್ವ ಶಂಕರ. ಎಂ, ಕಾರ್ತಿಕ್. ಎಸ್, ದೀಪಕ್ ಶ್ರೀವತ್ಸ. ಎಂ, ಸಂಕೇತ.ಎಂ, ಶ್ವೇತಾ. ಎಸ್, ಕಿರಣ್ ಮಹೇಶ. ಎಸ್, ನಿಕ್ಷಿತ್ ಎಸ್.ಶೆಟ್ಟಿ, ಸಚಿನ್.ಎ.ಎಸ್ ಪ್ರಶಸ್ತಿ ಗಳಿಸಿದ್ದಾರೆ.

Nov 16, 2012

ಮಕ್ಕಳ ದಿನಾಚರಣೆ - 2012

ಮೊನ್ನೆ 14 ರಂದು ನಮ್ಮ ವಿದ್ಯಾರ್ಥಿಗಳು ‘ಮಕ್ಕಳ ದಿನಾಚರಣೆ’ಯನ್ನು ಆಚರಿಸಿಕೊಂಡರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವೈಶಾಲಿ ಸ್ವಾಗತಿಸಿ, ಕಿರಣ್ ಮಹೇಶ್ ವಂದಿಸಿದರು. ನಿಕ್ಷಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವನ್ನು ವೈವಿಧ್ಯಮಯವಾಗಿ ವಿದ್ಯಾರ್ಥಿಗಳು ಆಚರಿಸಿಕೊಂಡರು.

Nov 13, 2012

ಅಡುಗೆ ತಯಾರಿ ಪ್ರಾತ್ಯಕ್ಷಿಕೆ

ನಿನ್ನೆ ನಮ್ಮ ಶಾಲೆಯಲ್ಲಿ ದೀಪಾವಳಿಯ ಸಡಗರ. ಶಾಲಾ ಸೇವಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಇವರ ಪತ್ನಿ ಶ್ರೀಮತಿ ಆಶಾ ಶಾರದಾ ಇವರಿಂದ ವಿದ್ಯಾರ್ಥಿನಿಯರಿಗೆ ಸಿಹಿ ತಿಂಡಿ ತಯಾರಿಯ ಬಗ್ಗೆ ತರಬೇತಿ. ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಿ ಸ್ವತ: ಮೈಸೂರು ಪಾಕು ತಯಾರಿಸಿ ಖುಷಿಪಟ್ಟುಕೊಂಡರು. ನಂತರ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು.

Oct 31, 2012

ಪ್ರತಿಭಾ ಭಾರತೀ - ಅಕ್ಟೋಬರ್ 2012

ಅಕ್ಟೋಬರ್ ತಿಂಗಳ ಪ್ರತಿಭಾ ಭಾರತೀ ಕಾರ್ಯಕ್ರಮವು ನಿನ್ನೆ, 30.10.2012 ಮಂಗಳವಾರ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕ ಕೇಶವ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವಿದ್ಯಾರ್ಥಿ ಕುಮಾರ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕವಿತಾ ಸ್ವಾಗತಿಸಿ ವೈಶಾಲಿ ವಂದಿಸಿದರು. ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ ಪ್ರಾರ್ಥನೆ ಸಲ್ಲಿಸಿದರು. ವಿದ್ಯಾರ್ಥಿಗಳಾದ ಶ್ರೀಜಾ ಹಾಗೂ ಲಕ್ಷ್ಮಣ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಜೊತೆಯಲ್ಲಿ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳೂ ಜರಗಿದವು.

Oct 24, 2012

ಶ್ರೀ ಶಾರದಾ ಪೂಜಾ - 2012

ನಮ್ಮ ವಿದ್ಯಾಪೀಠದಲ್ಲಿ  ಇಂದು (24.10.2012 ಬುಧವಾರ) ಜರಗಿದ ‘ಶ್ರೀ ಶಾರದಾ ಪೂಜಾ’ ಕಾರ್ಯಕ್ರಮದಲ್ಲಿ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ ಪೂಜೆ ನೆರವೇರಿಸಿ ಪುಟಾಣಿಗಳಿಗೆ ಅಕ್ಷರಾಭ್ಯಾಸ ನೆರವೇರಿಸಿದರು.

‘ಶಿಕ್ಷಕರ ವಿಶೇಷ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರ’

ನಮ್ಮ ವಿದ್ಯಾಪೀಠದಲ್ಲಿ 21.10.2012 ಭಾನುವಾರ ಜರಗಿದ ‘ಶಿಕ್ಷಕರ ವಿಶೇಷ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರ’ದಲ್ಲಿ ಬೆಂಗಳೂರಿನ ಶಿಕ್ಷಕ ಸುನಿಲ್ ಮತ್ತು ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ದರ್ಬೆ-ಮಾರ್ಗ ಶಿಕ್ಷಕರಿಗೆ ತರಬೇತಿ ನೀಡಿದರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು. ಭಾನುವಾರದ ವಿರಾಮವನ್ನು ಬದಿಗಿರಿಸಿ ಶಿಕ್ಷಕರು ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಬದಿಯಡ್ಕ ಭಾರತೀ ವಿದ್ಯಾಪೀಠದಿಂದಲೂ ಶಿಕ್ಷಕರು ಆಗಮಿಸಿದ್ದುದರಿಂದ ಕಾರ್ಯಕ್ರಮವು ಹೆಚ್ಚು ಮಹತ್ವ ಪಡೆದುಕೊಂಡಿತು.

Oct 4, 2012

ಸೇವನಾ ದಿನ

ಮೊನ್ನೆ ಗಾಂಧಿ ಜಯಂತಿಯನ್ನು ‘ಸೇವನಾ ದಿನ’ವಾಗಿ ಆಚರಿಸಿದೆವು. ಶಾಲಾ ವಿದ್ಯಾರ್ಥಿಗಳ ಜೊತೆ, ಅವರ ಹೆತ್ತವರು ಮತ್ತು ಶಿಕ್ಷಕರು ಸೇರಿ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಮಧ್ಯಾಹ್ನ ಭೋಜನವನ್ನು ತಯಾರಿಸಿ ಉಳಿದವರಿಗೆಲ್ಲ ಬಡಿಸಿದರು. ಅರ್ಥಪೂರ್ಣವಾಗಿ ಗಾಂಧೀ ಜಯಂತಿಯನ್ನು ಆಚರಿಸಿದ ಸಂತಸ ಸದ್ಯಕ್ಕೆ ನಮ್ಮನ್ನು ಆವರಿಸಿದೆ.

ಸೆಪ್ಟೆಂಬರ್ ತಿಂಗಳ ‘ಪ್ರತಿಭಾ ಭಾರತೀ’


ಕಳೆದ 28.09.2012 ಶುಕ್ರವಾರದಂದು ನಮ್ಮ ವಿದ್ಯಾಪೀಠದಲ್ಲಿ ಸೆಪ್ಟೆಂಬರ್ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮ ಜರಗಿತು. ಸಮಾಜ ಸೇವಕಿ, ನಿವೃತ್ತ ಶಿಕ್ಷಕಿ ಜಯಲಕ್ಷ್ಮಿ ಕಾರಂತ್ ವಿಶೇಷ ‘ರಸಪ್ರಶ್ನೆ’ ನಡೆಸುವ ಮೂಲಕ  ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ನಡೆಸಿದರು.ಶಾಲಾ ವಿದ್ಯಾರ್ಥಿ ಅರುಣ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ-ಮಾರ್ಗ ಉಪಸ್ಥಿತರಿದ್ದರು.

Sep 22, 2012

ಚಿನ್ಮಯಾ ವಿದ್ಯಾಲಯದಲ್ಲಿ ನಮಗೆ ಬಹುಮಾನ

ಕಾಸರಗೋಡು ಚಿನ್ಮಯಾ ವಿದ್ಯಾಲಯವು ಶ್ರೀ ಕೃಷ್ಣ ಜಯಂತಿ ಉತ್ಸವದ ಅಂಗವಾಗಿ 21.09.2012 ಶುಕ್ರವಾರ ಆಯೋಜಿಸಿದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಚಿನ್ಮಯಿ.ಎಂ, ಭೂಮಿಕಾ, ಕೃಷ್ಣಶೌರಿ. ಡಿ.ಎಸ್, ಶ್ರೀಶ, ಮನೀಷ.ಎ, ಚೈತ್ರಾ. ಎ.ಪಿ, ಗೌರೀಶ ವಿಶ್ವಾಮಿತ್ರ ಹಾಗೂ ಶ್ರೀಸುಧಾ.ಎಂ ಭಾಗವಹಿಸಿದರು. ಚಿನ್ಮಯಾ ವಿದ್ಯಾಲಯವು ನಡೆಸುವ ಸ್ಪರ್ಧೆಗಳಲ್ಲಿ ಗೀತಾ ಕಂಠಪಾಠ ಗಾಯನಕ್ಕೆ ಒಂದು ಪ್ರತ್ಯೇಕ ಶೈಲಿ ಇದೆ. ಆ ಶೈಲಿಯನ್ನು ಅಭ್ಯಾಸ ಮಾಡಿ ವಿದ್ಯಾರ್ಥಿಗಳು ಈ ಬಾರಿ ಭಾಗವಹಿಸಿದ್ದರಿಂದ ಪ್ರುಢಶಾಲಾ ವಿಭಾಗದಲ್ಲಿ ಗೌರೀಶ ವಿಶ್ವಾಮಿತ್ರ ಪ್ರಥಮ ಹಾಗೂ ಶ್ರೀಸುಧಾ.ಎಂ ತೃತೀಯ ಬಹುಮಾನ ಪಡೆದಿದ್ದಾರೆ.

Aug 30, 2012

ಓಣಂ ಆಚರಣೆ

ಓಣಂ ಹಬ್ಬವನ್ನು ಮೊನ್ನೆ 25, ಶನಿವಾರದಂದು ಶಾಲೆಯಲ್ಲಿ ಆಚರಿಸಿದೆವು. ವಿದ್ಯಾರ್ಥಿಗಳು ಎಲ್ಲ ತರಗತಿಗಳಲ್ಲೂ ಪ್ರತ್ಯೇಕ ಪ್ರತ್ಯೇಕವಾಗಿ ಆಕರ್ಷಕ ಹೂ ರಂಗವಲ್ಲಿಗಳನ್ನು ಬಿಡಿಸಿದರು. ಮಧ್ಯಾಹ್ನಕ್ಕೆ ‘ಓಣಂ ಊಟ’ ವನ್ನೂ ಆಯೋಜಿಸಲಾಯಿತು.

Aug 18, 2012

ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’


    “ಶಿಸ್ತು, ಸಂಯಮ ನಮ್ಮ ಜೀವನದ ಅವಿಭಾಜ್ಯ ಘಟಕಗಳಾಗಿರಬೇಕು. ಅವುಗಳು ಜೀವನದ ಪರಿಪೂರ್ಣತೆಯ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ. ಅಂತಹ ಮೌಲ್ಯಾಧಾರಿತ ಶಿಕ್ಷಣ ಇಲ್ಲಿ ದೊರೆಯುತ್ತಿರುವುದು ತುಂಬ ಸಂತಸ ತಂದಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಭದ್ರ ತಳಪಾಯವನ್ನು ಕಟ್ಟಿಕೊಡಲಿದೆ" ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಸ್.ವೆಂಕಟ್ರಮಣ ಭಟ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮ ಮತ್ತು ರಾಮಾಯಣ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಸಚಿನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಶ್ರೀಜಾ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿದರು. ರೇಶ್ಮಾ. ಆರ್ ಮತ್ತು ಕುಮಾರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

Aug 15, 2012

ಧ್ವನಿ ವರ್ಧಕ ಮತ್ತು ಆಟೋಟ ಸಾಮಗ್ರಿಗಳ ಕೊಡುಗೆ

ವಿದ್ಯಾಪೀಠದ ಪೂರ್ವ ವಿದ್ಯಾರ್ಥಿ, ಶಾಲಾ ನಾಯಕನ ಕರ್ತವ್ಯವನ್ನೂ ಕಳೆದ ವರ್ಷ ಸಕ್ಷಮವಾಗಿ ನಿರ್ವಹಿಸಿದ್ದ ಸುಹಾಸ್ ಜಿ.ಕಾಕತ್ಕರ್ ಅವರ ತಂದೆ ಬೆಂಗಳೂರಿನ ಗೋಪಾಲ್. ಜಿ.ಕಾಕತ್ಕರ್ ಶಾಲಾ ವಿದ್ಯಾರ್ಥಿಗಳಿಗಾಗಿ ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಆಟೋಟ ಸಾಮಗ್ರಿಗಳು ಮತ್ತು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಧ್ವನಿವರ್ಧಕವನ್ನು ಇಂದು ಕೊಡುಗೆಯಾಗಿ ನೀಡಿದ್ದಾರೆ. ಶಾಲಾ ಸೇವಾ ಸಮಿತಿ ಅಧ್ಯಕ್ಷ ಡಾ|ಡಿ.ಪಿ.ಭಟ್ ಈ ಕೊಡುಗೆಗಳನ್ನು ಸ್ವೀಕರಿಸಿದರು.

ಸ್ವಾತಂತ್ರ್ಯ ದಿನಾಚರಣೆ

“ ಹಿರಿಯರ ತ್ಯಾಗ, ಬಲಿದಾನಗಳಿಂದ ಭಾರತವು ಸ್ವಾತಂತ್ರ್ಯ ಗಳಿಸಿತು. ಈ ಸಂಸ್ಥೆಯಲ್ಲಿಯೂ ವಿದ್ಯಾರ್ಥಿಗಳಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿರುವುದನ್ನು ನಾನು ಕಂಡಿದ್ದೇನೆ. ಆದ್ದರಿಂದ ಸ್ವಾತಂತ್ರ್ಯದ ಮಹತ್ವ ನಿಮಗೆ ತಿಳಿದಿದೆ. ಅಂತಹ ಸ್ವಾತಂತ್ರ್ಯವನ್ನು ಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸ್ವಾತಂತ್ರ್ಯ ದೊರೆತ ಸಂಭ್ರಮದ ನೆನಪಿನ ಈ ಸಂದರ್ಭದಲ್ಲಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಯ ನಾಯಕರನ್ನು ಗೌರವಿಸುವುದು ನಮ್ಮ ಕರ್ತವ್ಯ" ಎಂದು ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಭಿಪ್ರಾಯಪಟ್ಟರು. ಅವರು ಇಂದು ಶ್ರೀ ಭಾರತೀ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಶಾಲಾ ಸೇವಾ ಸಮಿತಿ ಅಧ್ಯಕ್ಷ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಗೋಪಾಲ್.ಜಿ.ಕಾಕತ್ಕರ್, ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶ್ರೀ ಭಾರತೀ ಸಂಸ್ಕೃತ ಮಹಾ ವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿ ಶಿಕ್ಷಕ ಕಿಶನ್‌ರಾಜ್ ವಂದಿಸಿದರು. ವಿದ್ಯಾರ್ಥಿನಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.

Aug 10, 2012

ಶ್ರೀಕೃಷ್ಣ ಜಯಂತಿ

“ಕೃಷ್ಣನ ಲೀಲೆಗಳು ಸಮಾಜದ ಪ್ರಗತಿಗೆ ಕಾರಣವಾಗಿದೆ, ಧರ್ಮದ ಪುನರುತ್ಥಾನ ಅವನು ನಡೆಸಿದ ಮಹಾನ್ ಕಾರ್ಯ.  ಶ್ರೀಕೃಷ್ಣನ ಜನ್ಮ ದಿನದ ಆಚರಣೆ ವಿದ್ಯಾರ್ಥಿಗಳಿಗೆ ಅವನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೆರವಾಗುವುದು" ಎಂದು ಕೆ.ವೆಂಕಟ್ರಮಣ ಭಟ್, ಕುದ್ರೆಪ್ಪಾಡಿ ಹೇಳಿದರು. ಅವರು 09.08.2012 ಗುರುವಾರ ವಿದ್ಯಾಪೀಠದಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ವಿದ್ಯಾಸಂಸ್ಥೆಗಳ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶ್ರೀ ಭಾರತೀ ವಿದ್ಯಾಪೀಠ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸ್ಮಿತಾ ಸ್ವಾಗತಿಸಿ, ಗಾಯತ್ರಿ.ಎಸ್.ಕಾರಂತ್ ವಂದಿಸಿದರು. ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ ಪ್ರಾರ್ಥಿಸಿದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಮುದ್ದುಕೃಷ್ಣ ವೇಷ ಪ್ರದರ್ಶನ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ರಕ್ಷಾ ಬಂಧನ

ಕೇರಳದಲ್ಲಿ ನಡೆದ ಹರತಾಳ ಇತ್ಯಾದಿಗಳ ಕಾರಣದಿಂದಾಗಿ ಮುಂದೂಡಲ್ಪಟ್ಟ ‘ರಕ್ಷಾ ಬಂಧನ’ ಕಾರ್ಯಕ್ರಮವು ನಮ್ಮ ವಿದ್ಯಾಪೀಠದಲ್ಲಿ 06.08.2012 ಸೋಮವಾರ ಜರಗಿತು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪರಸ್ಪರ ರಾಖಿಗಳನ್ನು ಕಟ್ಟಿ ಸಹೋದರತೆಯನ್ನು ಮೆರೆದರು.

ಮಾತೃಮಂಡಳಿ

26.07.2012 ಗುರುವಾರ ಜರಗಿದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ನೂತನವಾಗಿ ಮಾತೃ ಮಂಡಳಿಯನ್ನು ರೂಪಿಸಲಾಯಿತು. ಪ್ರಥಮ ಮಾತೃಮಂಡಳಿ ಸಮಿತಿಯ ಅಧ್ಯಕ್ಷರನ್ನಾಗಿ ಕಮಲಾಕ್ಷಿ ಸೂರಂಬೈಲು ಅವರನ್ನು ಆರಿಸಲಾಯಿತು. ಉಪಾಧ್ಯಕ್ಷರನ್ನಾಗಿ ಮಾಧುರಿ ನಾಯ್ಕಾಪು ಮತ್ತು ವೀಣಾ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳಾಗಿ ಶಿಕ್ಷಕಿ ಚಿತ್ರಾ ಸರಸ್ವತಿ.ಕೆ ಇವರಿಗೆ ಜವಾಬ್ದಾರಿ ನೀಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಶಾ ಕುಳ, ಉಮಾಶಂಕರಿ.ಕೆ, ಶಾರದಾ, ಶ್ರೀದೇವಿ, ಯಮುನಾ, ಚಿತ್ರಾ ನಾಯ್ಕಾಪು, ಮಮತಾ ನಂದಗೋಕುಲ, ಶೋಭಾ ನಾಯ್ಕಾಪು, ನಾಗವೇಣಿ ಹಾಗೂ ವಿದ್ಯಾಪೀಠದ ಶಿಕ್ಷಕಿಯರನ್ನು ಆಯ್ಕೆ ಮಾಡಲಾಯಿತು.

ರಕ್ಷಕ ಶಿಕ್ಷಕ ಸಂಘ ಮಹಾಸಭೆ

ನಮ್ಮ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು 26.07.2012 ಗುರುವಾರ ಜರಗಿತು. ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ವರದಿ ವಾಚಿಸಿದರು. ರಕ್ಷಕ ಶಿಕ್ಷಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು. ಸಂಘದ ನೂತನ ಅಧ್ಯಕ್ಷರನ್ನಾಗಿ ಎಂ.ಚಂದ್ರಶೇಖರ ಭಟ್, ಬೆಜ್ಪೆ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ನೂತನ ಸಮಿತಿಯ ಉಪಾಧ್ಯಕ್ಷರನ್ನಾಗಿ ಎಚ್.ಶಂಕರನಾರಾಯಣ ಭಟ್ ಎಡನಾಡು, ಚಿತ್ರಾ ನಾಯ್ಕಾಪು ಇವರನ್ನು ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಎ.ಕೃಷ್ಣ ಭಟ್ ಅಮ್ಮಂಕಲ್ಲು, ಸುಬ್ರಾಯ ಹೇರಳ, ಡಿ.ಕೃಷ್ಣಮೂರ್ತಿ ಪಾಡಿ, ಪುರುಷೋತ್ತಮ ಆಚಾರ್ಯ ಸೂರಂಬೈಲು, ಮಮತಾ ನಂದಗೋಕುಲ, ಕಮಲಾಕ್ಷಿ ಸೂರಂಬೈಲು, ಶೋಭಾ ನಾಯ್ಕಾಪು, ನಾಗವೇಣಿ ಯವರ ಜೊತೆ ಅಧ್ಯಾಪಕ ವೃಂದವನ್ನು ಆಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳಾಗಿ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ಅವರನ್ನು ಆರಿಸಲಾಯಿತು.

Jul 7, 2012

ಶಾಲಾ ಚುನಾವಣೆ

ಶಾಲಾ ಚುನಾವಣೆ ಕಳೆದಿದೆ. ವಿದ್ಯಾರ್ಥಿ ನಾಯಕ ಸ್ಥಾನಕ್ಕೆ 6 ಮಂದಿ ಮತ್ತು ಉಪನಾಯಕ ಸ್ಥಾನಕ್ಕೆ ನಡೆದ ಸ್ಪರ್ಧೆಗೆ 7 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಒಡ್ಡಿದ್ದರು. ಫಲಿತಾಂಶದಲ್ಲಿ ಅತ್ಯಧಿಕ ಮತ ಪಡೆದ ಹತ್ತನೇ ತರಗತಿ ವಿದ್ಯಾರ್ಥಿನಿ ವೈಶಾಲಿ. ಎಂ ವಿದ್ಯಾರ್ಥಿ ನಾಯಕಿಯಾಗಿಯೂ, ವಿದ್ಯಾರ್ಥಿ ಉಪನಾಯಕನಾಗಿ ಕುಮಾರ ಸುಬ್ರಹ್ಮಣ್ಯನೂ ಆಯ್ಕೆಯಾಗಿದ್ದಾರೆ. ಈ ವರ್ಷದ ಶಾಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುಂದಕ್ಕೊಯ್ಯಲು ಅವರ ಜೊತೆ ವಿದ್ಯಾರ್ಥಿಗಳ ಮಂತ್ರಿ ಮಂಡಲವೂ ಕಾರ್ಯ ನಿರ್ವಹಿಸಲಿದೆ. ಅವರಿಗೆ ಶುಭಾಶಯಗಳು.

Jul 6, 2012

ಪ್ರತಿಭಾ ಭಾರತೀ

“ಮುಜುಂಗಾವು ವಿದ್ಯಾಪೀಠದ ವಿದ್ಯಾರ್ಥಿಗಳ ಶಿಸ್ತು ಇತರರಿಗೆ ಮಾದರಿ. ಉತ್ತಮ ಮಟ್ಟದ ಶಿಕ್ಷಣ ಇಲ್ಲಿ ನೀಡಲಾಗುತ್ತಿರುವುದರ ಅಭಿವ್ಯಕ್ತಿ ಅದು. ವಿದ್ಯಾರ್ಥಿಗಳಿಗೆ ಇಲ್ಲಿ ದೊರೆಯುವ ಉತ್ತಮ ಶಿಕ್ಷಣ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ" ಎಂದು ಕೇಂದ್ರ ಮಹಿಳಾ ಪರಿಷತ್ತು ಸಂಚಾಲಕಿ ಈಶ್ವರಿ ಎಸ್. ಬೇರ್ಕಡವು ಅಭಿಪ್ರಾಯಪಟ್ಟರು. ಅವರು ನಮ್ಮ ವಿದ್ಯಾಪೀಠದಲ್ಲಿ ೦೪.೦೭.೨೦೧೨ ಬುಧವಾರ ಜರಗಿದ ಹೊಸ ಅಧ್ಯಯನ ವರ್ಷದ ಪ್ರಥಮ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ದೀಪಕ್ ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಕವಿತಾ ಸ್ವಾಗತಿಸಿ, ವೈಶಾಲಿ ವಂದಿಸಿದರು. ಶ್ವೇತಾ ಮತ್ತು ನವನೀತ ಕಾರ್ಯಕ್ರಮ ನಿರೂಪಿಸಿದರು.

ಗುರುಪೂರ್ಣಿಮಾ

03.07.2012 ಮಂಗಳವಾರದಂದು ಜರಗಿದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮಭಟ್ ದರ್ಭೆಮಾರ್ಗ ವಿದ್ಯಾರ್ಥಿಗಳಿಗೆ ವ್ಯಾಸಪೂರ್ಣಿಮೆಯ ವಿಶೇಷ ಮಹತ್ವಗಳ ಕುರಿತು ಉಪನ್ಯಾಸ ನೀಡಿದರು. ಎಡನಾಡು ವಲಯ ಗುರಿಕಾರ ಕೆ.ಎಸ್.ಶಂಕರ ಭಟ್ ಕಾವೇರಿಕಾನ ಮತ್ತು ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು.

Jun 14, 2012

ವಸಂತ ವೇದ ಶಿಬಿರ ಸಮಾರೋಪ

19.05.2012 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಶ್ರೀ ಶಂಕರ ವಸಂತ ವೇದ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಅಧ್ಯಕ್ಷ ಭಾಷಣ ಮಾಡಿದರು. ವೇದಮೂರ್ತಿ ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಮತ್ತು ವೇದಮೂರ್ತಿ ಮಣಿಮುಂಡ ವಿಶ್ವೇಶ್ವರ ಶಾಸ್ತ್ರಿಗಳು ಉಪಸ್ಥಿತರಿದ್ದರು.

ವಸಂತ ವೇದ ಶಿಬಿರ


ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬೇಸಿಗೆ ರಜಾ ಕಾಲದ ‘ಶ್ರೀ ಶಂಕರ ವಸಂತ ವೇದ ಶಿಬಿರ’ ದ್ವಿತೀಯ ವರ್ಷಕ್ಕೆ ಕಾಲಿರಿಸಿದೆ. ಮುಜುಂಗಾವಿನ ಗ್ರಾಮೀಣ ಪರಿಸರದಲ್ಲಿ, ದೇವಾಲಯ, ನೇತ್ರಾಲಯ ಮತ್ತು ವಿದ್ಯಾಲಯಗಳ ಸಂಗಮ ಭೂಮಿಯಲ್ಲಿನ ಪ್ರಶಾಂತ ವಾತಾವರಣದಲ್ಲಿ ಪ್ರಸ್ತುತ ೨೫ ಮಂದಿ ವಿದ್ಯಾರ್ಥಿಗಳು ವೇದಾಧ್ಯಯನ ನಿರತರಾಗಿದ್ದಾರೆ. ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರ ಮಾರ್ಗದರ್ಶನದಲ್ಲಿ ಮಣಿಮುಂಡ ವಿಶ್ವೇಶ್ವರ ಶಾಸ್ತ್ರಿಗಳು ರಜಾಕಾಲದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ.
ಸಂಧ್ಯಾವಂದನಂ, ಶ್ರೀ ರುದ್ರಪ್ರಶ್ನ, ಚಮಕ, ಪಂಚಾಯತನ ಪೂಜೆ ಇತ್ಯಾದಿಗಳ ಮಂತ್ರಗಳನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ ಮಾರ್ಗ ಇವರು ಶಿಬಿರದ ಯಶಸ್ಸಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮಂಜೇಶ್ವರ ಎಸ್.ಎ.ಟಿ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕ ನಾರಾಯಣ ಜಿ.ಹೆಗಡೆ ವಿದ್ಯಾರ್ಥಿಗಳಿಗೆ ಸಂಸ್ಕೃತ ತರಗತಿ ಮತ್ತು ಸುಭಾಷಿತ ಶಿಕ್ಷಣವನ್ನೂ ವಿವರಣೆಯನ್ನು ನೀಡುತ್ತಿದ್ದಾರೆ. ಎರಡು ತಿಂಗಳ ಬೇಸಿಗೆ ರಜಾಕಾಲದ ವೇದಾಧ್ಯಯನಕ್ಕಾಗಿ ದೂರದ ಊರನ್ನು ತಲಪಬೇಕಾದ ವಿದ್ಯಾರ್ಥಿಗಳಿಗೆ ಈ ಸೌಕರ್ಯವು ಪಕ್ಕದ ಮುಜುಂಗಾವಿನಲ್ಲಿಯೇ ದೊರೆತಿರುವುದು ಸಂತಸ ತಂದಿದೆ.

“ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ: ಡಿ.ರಾಮ ಭಟ್"


    “ಶಾಲೆಯಲ್ಲಿ ತಿಳಿದುಕೊಳ್ಳಲು ಸೌಕರ್ಯವಿಲ್ಲದ ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳಿಗೆ ಬೇಸಗೆ ರಜೆಯನ್ನು ನೀಡಲಾಗುವುದು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮಗಿಷ್ಟವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಕಲಿಯುವಿಕೆ ನಿರಂತರ. ಗುರುಗಳ ಮೂಲಕ, ಸಹಪಾಠಿಗಳ ಮೂಲಕ ಹಾಗೂ ಸ್ವಂತ ಪರಿಶ್ರಮದ ಮೂಲಕ ಕಾಲಾನುಕ್ರಮದಲ್ಲಿ ಕಲಿತ ವಿಚಾರಗಳನ್ನು ಮೈಗೂಡಿಸಿಕೊಂಡು ನಾವು ರಾಮರಾಜ್ಯದ ಕನಸನ್ನು ನನಸು ಮಾಡಲು ಸಾಧ್ಯವಿರುವ ಶಕ್ತಿವಂತರಾಗಬೇಕು" ಎಂದು ನಿವೃತ್ತ ಮುಖ್ಯೋಪಾಧ್ಯಾಯ ದೊಡ್ಡಮಾಣಿ ರಾಮ ಭಟ್ ಅಭಿಪ್ರಾಯಪಟ್ಟರು. ಅವರು ೩೧.೦೩.೨೦೧೨ ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಪ್ರತಿಭಾ ಭಾರತೀ’ ಕಾರ್ಯಕ್ರಮದ ವಾರ್ಷಿಕ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

    ಎಂಟನೇ ತರಗತಿ ವಿದ್ಯಾರ್ಥಿ ಕಾರ್ತಿಕ್. ಎಸ್ ಅಧ್ಯಕ್ಷತೆ ವಹಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಶ್ವತಿ ಸ್ವಾಗತಿಸಿ ಕವಿತಾ.ಕೆ ವಂದಿಸಿದರು. ಗೌರೀಶ್ ವಿಶ್ವಾಮಿತ್ರ ಮತ್ತು ದೀಪಕ್ ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿದರು. ೨೧೪ ಶಾಲಾ ದಿನಗಳಲ್ಲಿ ಪೂರ್ಣ ಹಾಜರಾತಿಯನ್ನು ಪಡೆದ ೨೭ ಮಂದಿ ವಿದ್ಯಾರ್ಥಿಗಳಿಗೆ ‘ಅಗ್ರೇಸರ’ ಪ್ರಶಸ್ತಿ ನೀಡಲಾಯಿತು.

ಕಲಿಕೋಪರಣಗಳ ವಿತರಣೆ

ಶ್ರೀ ಷಣ್ಮುಖ ಜ್ಯೌತಿಷ ಪ್ರತಿಷ್ಠಾನದ ಡಿ.ಶ್ಯಾಮಪ್ರಸಾದ ಶಾಸ್ತ್ರಿ ಆಯ್ದ ವಿದ್ಯಾರ್ಥಿಗಳಿಗಾಗಿಕೊಡಮಾಡಿದ ಕಲಿಕೋಪರಣಗಳನ್ನು 04.06.2012 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ|ಡಿ.ಪಿ.ಭಟ್ ವಿತರಿಸಿದರು. ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ ಮಾರ್ಗ ಉಪಸ್ಥಿತರಿದ್ದರು.

Jun 7, 2012

‘ಸ್ವಾಗತ ಭಾರತೀ’

“ಪ್ರಥಮ ತಂಡದ ಹತ್ತನೇ ತರಗತಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸಿ ಮುಜುಂಗಾವು ಶಿಕ್ಷಣ ಸಂಸ್ಥೆಗಳ ಕಡೆಗೆ ಸಮಾಜದ ಗಮನವನ್ನು ಸೆಳೆದಿದ್ದಾರೆ. ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಂಕಲ್ಪದಂತೆ ರೂಪುಗೊಂಡ ವಿದ್ಯಾಸಂಸ್ಥೆ ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿವೆ ಎನ್ನುವುದಕ್ಕೆ ಇದು ನೂತನ ನಿದರ್ಶನ. ಇಂತಹ ವಿದ್ಯಾಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ಬೆಂಗಳೂರಿನ ದಾನಿಗಳ ನೆರವಿನಿಂದ ಈಗಾಗಲೇ ಸ್ಟೀಮ್ ಬಾಯ್ಲರ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಸದ್ಯದಲ್ಲೇ ನೂತನ ಭೋಜನ ಶಾಲೆಯನ್ನು ನಿರ್ಮಿಸಲಾಗುವುದು” ಎಂದು ಬೆಂಗಳೂರಿನ ಗೋಪಾಲ.ಜಿ.ಕಾಕತ್ಕರ್ ಅಭಿಪ್ರಾಯಪಟ್ಟರು. ಅವರು ೦೪.೦೬.೨೦೧೨ ಸೋಮವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಸ್ವಾಗತ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
    ಮುಜುಂಗಾವು ಶ್ರೀ ಭಾರತೀ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ ನಾಣಿತ್ಲು, ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್, ಬೆಂಗಳೂರಿನ ಉದ್ಯಮಿ ರವಿಚಂದ್ರ, ಹಿರಿಯ ಸಮಾಜ ಸೇವಕ ಪೋಳ್ಯ ಕೃಷ್ಣ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಅರ್ಪಿಸಿದರು.
    ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಗೌರೀಶ ವಿಶ್ವಾಮಿತ್ರ ಸ್ವಾಗತಿಸಿ ಕಿರಣ ಮಹೇಶ ವಂದಿಸಿದರು. ಶಿಕ್ಷಕಿ ಗಾಯತ್ರಿ ಎಸ್.ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

‘ಸ್ಪಂದನ-2012’


ನಮ್ಮ ವಿದ್ಯಾಪೀಠದಿಂದ ಎಸ್.ಎಸ್.ಎಲ್.ಸಿ ಪೂರೈಸುತ್ತಿರುವ ಪ್ರಥಮ ತಂಡ ಹೊರ ಜಗತ್ತಿಗೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳು ಲೋಕವನ್ನು ಬೆಳಗಲೆಂಬ ಸದಾಶಯದೊಂದಿಗೆ ಅಡಳಿತ ಮಂಡಳಿ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ದೀಪಗಳನ್ನು ವಿತರಿಸಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕ ಬೀಚಿತ್ಲು ಶಂಕರನಾರಾಯಣ ಭಟ್ ಹಿತವಚನಗಳನ್ನು ಹೇಳಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಸ್ಪಂದನ-2012’ನ್ನು ಅರ್ಥಪೂರ್ಣವಾಗಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು.

May 7, 2012

ಯಶಸ್ವಿಯಾದ ಅವಲಂಬನದ ಭವಿಷ್ಯ ಕಾರ್ಯಕ್ರಮ

    “ಬೆಂಗಳೂರಿನ ಉತ್ಸಾಹಿ ಯುವಕರ ತಂಡ ಅವಲಂಬನವು ನಿಸ್ವಾರ್ಥವಾಗಿ ಹಾಗೂ ಉಚಿತವಾಗಿ ನಡೆಸಿಕೊಡುವ ‘ಭವಿಷ್ಯ’ ಕಾರ್ಯಕ್ರಮವು ತುಂಬ ಅರ್ಥಪೂರ್ಣವಾಗಿ, ಉಪಯುಕ್ತವಾಗಿ ನಡೆದಿದೆ.  ಕಾರ್ಯಕ್ರಮದ ಬಗೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದ್ದು ಅವಲಂಬನ ತಂಡದ ಈ ಭವಿಷ್ಯ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳು ಸ್ವಾವಲಂಬನೆಯ ಕಡೆಗೆ ಬೆಳೆಯಲಿ” ಎಂದು ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್. ಸತ್ಯಶಂಕರ ಭಟ್ ಹಿಳ್ಳೆಮನೆ ಅಭಿಪ್ರಾಯಪಟ್ಟರು. ಅವರು ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬೆಂಗಳೂರಿನ ಯುವಕರ "ಅವಲಂಬನ" ತಂಡವು ಮೇ ೫ ಮತ್ತು ೬ ರಂದು ಆಯೋಜಿಸಿದ ’ಭವಿಷ್ಯ-೨೦೧೨’ ಕಾರ್ಯಕ್ರಮದ ಸಮಾರೋಪ ಭಾಷಣವನ್ನು ನಡೆಸುತ್ತಾ ಮಾತನಾಡುತ್ತಿದ್ದರು.

೦೫.೦೫.೨೦೧೨ ಶನಿವಾರ ೧೦ ಘಂಟೆಗೆ ಸರಿಯಾಗಿ ’ಭವಿಷ್ಯ-೨೦೧೨’ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಪ್ರಾರಂಭವಾಯಿತು. ಸಮಾರಂಭದಲ್ಲಿ, ಸೀತಂಗೋಳಿ ವಲಯ ಅಧ್ಯಕ್ಷ ಕೃಷ್ಣಮೋಹನ ಭಟ್, ಕಾರ್ಯದರ್ಶಿ ಎಚ್. ಸತ್ಯಶಂಕರ ಭಟ್, ಶ್ರೀ ರಾಮಚಂದ್ರಾಪುರ ಮಠದ ಜ್ಞಾನವಿಭಾಗದ ಕಾರ್ಯದರ್ಶಿಗಳಾದ ವಿದ್ವಾನ್ ಜಗದೀಶ ಶರ್ಮಾ, ಮಹಾಮಂಡಲ ವಿದ್ಯಾವಿಭಾಗದ ಪ್ರಧಾನರಾದ ಪ್ರಮೋದ್ ಪಂಡಿತ್, ಎಡನಾಡು ವಲಯ ಕಾರ್ಯದರ್ಶಿಗಳಾದ ಕೇಶವ ಪ್ರಸಾದ್ ಎಡಕ್ಕಾನ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ,  ಕೃಷ್ಣಪ್ರಸಾದ ಎಡಪ್ಪಾಡಿ, ತಜ್ಞ ಡಾ.ಯು.ಬಿ.ಪವನಜ ಪಾಲ್ಗೊಂಡಿದ್ದರು. ಮಹೇಶ್ ಎಲ್ಲ್ಯಡ್ಕ ಸ್ವಾಗತಿಸಿದರು.

’ನಾವು ಏನಾಗೋಣ’ ಎಂಬ ಬಗ್ಗೆ ವಿದ್ವಾನ್ ಜಗದೀಶ ಶರ್ಮಾ, ’ನೈಜ ಇತಿಹಾಸ’ ಎಂಬುದರ ಬಗ್ಗೆ ರಾಜು ಎಮ್.ಬಿ, ’ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳು’ ಎಂಬ ಕುರಿತಾಗಿ ಶ್ಯಾಮಪ್ರಸಾದ್, ವೇದಗಣಿತ ಕುರಿತು ಪ್ರಮೋದ್ ಪಂಡಿತ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿಶಿಷ್ಟ ರೀತಿಯ ಸಂಸ್ಕೃತಿ ಕುರಿತಾದ ಪ್ರಶ್ನೋತ್ತರವನ್ನು ವಿದ್ವಾನ್ ಜಗದೀಶ ಶರ್ಮಾ ನಡೆಸಿಕೊಟ್ಟರು, ಅವರಿಂದ ’ನಿರ್ವಿಷಯ ಧ್ಯಾನ’ ತರಬೇತಿಯೂ ನಡೆಯಿತು.

೦೬.೦೫.೨೦೧೨ ಭಾನುವಾರದಂದು, ಖ್ಯಾತ ವಿದ್ಯಾರ್ಥಿ ತರಬೇತುದಾರ ಉಂಡೆಮನೆ ವಿಶ್ವೇಶ್ವರ ಭಟ್ ನಡೆಸಿಕೊಟ್ಟ ಮನೋವೈಜ್ಞಾನಿಕ ಪರೀಕ್ಷೆಯ ತರಬೇತಿ, ಅದರ ವಿಶ್ಲೇಷಣೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವೃದ್ಧಿಯ ದಿಸೆಯಲ್ಲಿ ಹೊಸಬೆಳಕು ಕೊಟ್ಟವು.  ’ಆಡಳಿತಾತ್ಮಕ ಹುದ್ದೆಗಳಲ್ಲಿನ ಅವಕಾಶಗಳ ಬಗ್ಗೆ ಶ್ರೀ ಗೋಪಾಲ ಭಟ್, ಪತ್ರಿಕೋದ್ಯಮ, ಸಂಗೀತ, ಸಾಹಿತ್ಯ ಇತ್ಯಾದಿಗಳನ್ನು ವೃತ್ತಿಯಾಗಿ ಸ್ವೀಕರಿಸುವುದರ ಸಾಧ್ಯತೆಗಳ ಕುರಿತು ’ಹೊಸದಿಗಂತ’ ಪತ್ರಿಕೆಯ ಸ್ಥಾನೀಯ ಉಪಸಂಪಾದಕ ಶಿವಪ್ರಸಾದ್ ತಿಳಿಸಿಕೊಟ್ಟರು. ’ಕೃಷಿ’ಯಲ್ಲಿನ ಅವಕಾಶಗಳ ಬಗೆಗೆ ಪ್ರಗತಿಪರ ಕೃಷಿಕ ಶ್ಯಾಮ ಭಟ್ ಗೊರಗೋಡು ತಿಳಿಸಿದರೆ, ಡಾ.ಯು.ಬಿ. ಪವನಜ ವಿಜ್ಞಾನ-ತಂತ್ರಜ್ಞಾನಕ್ಷೇತ್ರದ ವೃತ್ತಿಸಾಧ್ಯತೆಗಳನ್ನು ವಿವರಿಸಿದರು. ವೈದ್ಯಕೀಯ ಕ್ಷೇತ್ರದ ಬಗ್ಗೆ ತಿಳಿಸಿದ್ದು ಖ್ಯಾತ ವೈದ್ಯ ಪಿ.ಸತೀಶ್ ಭಟ್. ಇದಲ್ಲದೇ ’ಭವಿಷ್ಯ-೨೦೧೨’ ಸಂಸ್ಕೃತ-ಸಂಸ್ಕೃತಿಯ ಕ್ಷೇತ್ರದಲ್ಲಿನ ಅವಕಾಶಗಳ ಕುರಿತಾಗಿ ಕೃಷ್ಣಾನಂದ  ವಿವರವಾಗಿ ತಿಳಿಸಿದರು.

ಎಡನಾಡು ವಲಯ ಕಾರ್ಯದರ್ಶಿ ಕೇಶವಪ್ರಸಾದ್ ಎಡಕ್ಕಾನ, ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಯು.ಬಿ.ಪವನಜ, ಉಂಡೆಮನೆ ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮದ ಬಗೆಗಿನ ಅನಿಸಿಕೆ ಹಂಚಿಕೊಂಡರು. ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ರಾಮಚಂದ್ರ ಅಜ್ಜಕಾನ ವಂದಿಸಿದರು. ಕಾರ್ಯಕ್ರಮದಲ್ಲಿ  ಅವಲಂಬನ ಕಾರ್ಯಕರ್ತರಾದ ಮಧು ದೊಡ್ಡೇರಿ, ನಿಖಿಲಾ ದೊಡ್ಡೇರಿ, ಮಹೇಶ ಎಲ್ಲ್ಯಡ್ಕ, ಶ್ವೇತಾ ಎಲ್ಲ್ಯಡ್ಕ, ಶ್ರೀದೇವಿ, ನಿನಾದ, ರವಿನಾರಾಯಣ ಭಾಗವಹಿಸಿದ್ದರು.

May 2, 2012

‘ಭವಿಷ್ಯ - 2012’ : ಅವಲಂಬನದ ಕಾರ್ಯಾಗಾರ

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವೀಜಿಯವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಆಸಕ್ತ ಯುವಕರ ‘ಅವಲಂಬನ’ ತಂಡ ಪ್ರೌಢಶಾಲೆ ಮತ್ತು ಪಿ. ಯು.. ಸಿ. ಹಂತದ ವಿದ್ಯಾರ್ಥಿಗಳಿಗೂ ರಕ್ಷಕರಿಗೂ ಬದಲಾಗುತ್ತಿರುವ ಜಗತ್ತಿನ ನೂತನ ಅವಕಾಶಗಳನ್ನು ಪರಿಚಯಿಸುವ ದೃಷ್ಟಿಯಿಂದ ‘ಭವಿಷ್ಯ - 2012’ ಕಾರ್ಯಾಗಾರವನ್ನು 05 ಮೇ 2012 ಶನಿವಾರ ಮತ್ತು 06 ಮೇ 2012 ಭಾನುವಾರ, 9.30 ರಿಂದ ಸಂಜೆಯ ತನಕ ನಮ್ಮ ವಿದ್ಯಾಪೀಠದಲ್ಲಿ ಆಯೋಜಿಸಿದೆ.

    ಹವ್ಯಕರಿಂದ ಹವ್ಯಕರಿಗಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಆಧಾರಿತ ವ್ಯಕ್ತಿತ್ವ ವಿಕಸನ, ವಿದ್ಯಾರ್ಥಿಗಳ ನೈಜ ಆಸಕ್ತಿ ಅರಿವಿಗೆ ಮನೋವೈಜ್ನಾನಿಕಪರೀಕ್ಷೆ  ಮತ್ತು ಅದರ ವಿಶ್ಲೇಷಣೆ,  ಮಹತ್ಸಾಧನೆಗೆ ಬೇಕಾದ ಮಾನಸಿಕ ಮತ್ತು ದೈಹಿಕ ಸಿದ್ಧತೆಗಳು, ಎಂಜಿನೀಯರಿಂಗ್ ವಿಭಾಗದ ಅವಕಾಶ ಮತ್ತು ಅದರ ತಯಾರಿ, ಐ.ಪಿ.ಎಸ್, ಐ.. ಏ. ಎಸ್ ಇತ್ಯಾದಿ ಆಡಳಿತಾತ್ಮಕ ಸೇವೆಗಳು, ಮೂಲಭೂತ ವಿಜ್ಞಾನ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು ಮತ್ತು ವಿದ್ಯಾರ್ಥಿಗಳಿಗೆ ದೊರೆಯುವ ವಿವಿಧ ವಿದ್ಯಾರ್ಥಿವೇತನಗಳು ಹಾಗೂ ಸಂಗೀತ/ಲಲಿತಕಲೆ/ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗುವುದು.

Jan 16, 2012

ವಾರ್ಷಿಕೋತ್ಸವದ ಚಿತ್ರಗಳು...

ಕಳೆದ ಭಾನುವಾರ ಅಂದರೆ ಜನವರಿ ೮ ರಂದು ಜರಗಿದ ನಮ್ಮ ವಿದ್ಯಾಪೀಠದ ದಶಮಾನೋತ್ಸವ ಕಾರ್ಯಕ್ರಮದ ವಿವಿಧ ದೃಶ್ಯಾವಳಿಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಅವರಿಂದ ಉದ್ಘಾಟಿಸಲ್ಪಟ್ಟ ಈ ಕಾರ್ಯಕ್ರಮ ತುಂಬ ಚೆನ್ನಾಗಿ ಜರಗಿತೆಂಬ ವಿಶ್ವಾಸ ನಮಗಿದೆ. ದೃಶ್ಯಾವಳಿಗಳ ಕಡೆಗೆ ಒಮ್ಮೆ ನಿಮ್ಮ ದೃಷ್ಟಿ ಹಾಯಿಸಿ...











Jan 15, 2012

ವಾರ್ಷಿಕೋತ್ಸವ


“ಮಗುವಿನ ಶಿಕ್ಷಣ ಮನೆಯಿಂದ ಆರಂಭವಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಮಗುವಿಗೆ ದೊರಕುವ ಶಿಕ್ಷಣಕ್ಕೆ ಮನೆಯ ಕಲಿಕೆ ಬಾಲಪಾಠಗಳಾಗುತ್ತವೆ. ಬೆಳವಣಿಗೆಯ ಹಂತದಲ್ಲಿ ದೊರಕುವ ನೈತಿಕ, ಆಧ್ಯಾತ್ಮಿಕ, ಧಾರ್ಮಿಕ, ಶಾರೀರಿಕ ಶಿಕ್ಷಣಗಳು ಭವ್ಯ ಜೀವನವನ್ನು ಸಾಗಿಸಲು ಪೂರಕವಾಗುತ್ತವೆ. ಆದ್ದರಿಂದ ಮನೆ ಮತ್ತು ಶಾಲೆಗಳಲ್ಲಿ ಮಗುವಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಮುಜುಂಗಾವಿನಲ್ಲಿ ಅಂತಹ ಸುಸಂಸ್ಕೃತ ವಾತಾವರಣವಿದೆ.” ಎಂದು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕರುಣಾಕರ ಅನಂತಪುರ ಅಭಿಪ್ರಾಯಪಟ್ಟರು. ಅವರು ದಿನಾಂಕ ೮.೦೧.೨೦೧೨ ಭಾನುವಾರ ನಡೆದ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ದಶಮಾನೋತ್ಸವ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯಗಳ ವರ್ಧಂತ್ಯುತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮುಜುಂಗಾವು ಶ್ರೀಭಾರತೀ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಡಾ|ಡಿ.ಪಿ.ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕೆ.ಎಫ್.ಡಿ.ಸಿಯ ಎಕೌಂಟ್ ಓಫೀಸರ್ ಎ.ಕೆ.ಹರಿದಾಸ್ ಮತ್ತು ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ತಿಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎ.ಕೃಷ್ಣ ಭಟ್ ಶುಭ ಹಾರೈಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ್ ಹಿಳ್ಳೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಭಾರತೀ ವಿದ್ಯಾಪೀಠದ ವರದಿಯನ್ನು ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ-ಮಾರ್ಗ ಹಾಗೂ ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವರದಿಯನ್ನು ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ವಾಚಿಸಿದರು.

 ಈ ಸಂದರ್ಭದಲ್ಲಿ ತಿರುಪತಿ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ರೇಂಕ್ ವಿಜೇತ ವಿದ್ಯಾರ್ಥಿನಿ ಪ್ರತಿಮಾ ಡಿ.ಕೆ. ಇವರನ್ನು ಅಶ್ವಿನಿ ನಾಣಿತ್ತಿಲು ಸನ್ಮಾನಿಸಿದರು. ಶ್ರೀಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ‘ಬೆಳಕು’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ‘ಬೆಳಗು’ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ವಿದ್ಯಾರ್ಥಿನಿಯರಾದ ಸುಪ್ರೀತಾ. ಎಂ ಸ್ವಾಗತಿಸಿ, ದೀಪಿಕಾ ವಂದಿಸಿದರು. ವಿದ್ಯಾರ್ಥಿ ಶ್ರೀಹರಿಶಂಕರ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈವಿಧ್ಯಗಳ ಜೊತೆಗೆ ಶ್ರೀಭಾರತೀ ವಿದ್ಯಾಪೀಠ ದ ವಿದ್ಯಾರ್ಥಿಗಳಿಂದ ‘ಗುರುದಕ್ಷಿಣೆ’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ‘ಮಕರಾಕ್ಷ ಕಾಳಗ’ ಯಕ್ಷಗಾನ ಬಯಲಾಟ ಜರಗಿತು.

Jan 7, 2012

ನಾಳೆ ವಾರ್ಷಿಕೋತ್ಸವ, ಬನ್ನಿ...

ನಮ್ಮ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮವು ಶ್ರೀ ಭಾರತೀ ವಿದ್ಯಾಪೀಠದ ದಶಮಾನೋತ್ಸವದ ಸಂಭ್ರಮದ ಜೊತೆ ನಾಳೆ ಮುಜುಂಗಾವಿನಲ್ಲಿ ನಡೆಯಲಿದೆ. ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಸೀತಾಂಗೋಳಿ ವಲಯ ಪರಿಷತ್ತು ಕಾರ್ಯದರ್ಶಿ ಶ್ರೀ ಎಚ್.ಸತ್ಯಶಂಕರ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ನೃತ್ಯ ಕಾರ್ಯಕ್ರಮಗಳು, ನಾಟಕ-ಹಾಡು ಇತ್ಯಾದಿ ಮನರಂಜನಾ ಕಾರ್ಯಕ್ರಮಗಳು ನಾಲ್ಕು ಘಂಟೆಯ ಇಳಿಹಗಲು ತನಕ ಮುಂದುವರಿಯಲಿವೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಉಪಸಭಾಪತಿಗಳಾದ ಸನ್ಮಾನ್ಯ ಎನ್.ಯೋಗೀಶ ಭಟ್,ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿಹಿತ್ತಿಲು, ಕೆ.ಎಫ್.ಡಿ.ಸಿ ಮಂಗಳೂರಿನ ಎಕೌಂಟ್ ಓಫೀಸರ್ ಹರಿದಾಸ್.ಎ.ಕೆ  ಮತ್ತು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕರುಣಾಕರ ಅನಂತಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ‘ಗುರುದಕ್ಷಿಣೆ’ ಮತ್ತು ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳಿಂದ ‘ವೀರಮಣಿ ಕಾಳಗ’ ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ತಮ್ಮೆಲ್ಲರನ್ನೂ ಈ ಕಾರ್ಯಕ್ರಮಕ್ಕೆ ಆದರಪೂರ್ವಕವಾಗಿ ಆಮಂತ್ರಿಸುತ್ತೇವೆ.