May 7, 2012

ಯಶಸ್ವಿಯಾದ ಅವಲಂಬನದ ಭವಿಷ್ಯ ಕಾರ್ಯಕ್ರಮ

    “ಬೆಂಗಳೂರಿನ ಉತ್ಸಾಹಿ ಯುವಕರ ತಂಡ ಅವಲಂಬನವು ನಿಸ್ವಾರ್ಥವಾಗಿ ಹಾಗೂ ಉಚಿತವಾಗಿ ನಡೆಸಿಕೊಡುವ ‘ಭವಿಷ್ಯ’ ಕಾರ್ಯಕ್ರಮವು ತುಂಬ ಅರ್ಥಪೂರ್ಣವಾಗಿ, ಉಪಯುಕ್ತವಾಗಿ ನಡೆದಿದೆ.  ಕಾರ್ಯಕ್ರಮದ ಬಗೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದ್ದು ಅವಲಂಬನ ತಂಡದ ಈ ಭವಿಷ್ಯ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳು ಸ್ವಾವಲಂಬನೆಯ ಕಡೆಗೆ ಬೆಳೆಯಲಿ” ಎಂದು ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್. ಸತ್ಯಶಂಕರ ಭಟ್ ಹಿಳ್ಳೆಮನೆ ಅಭಿಪ್ರಾಯಪಟ್ಟರು. ಅವರು ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬೆಂಗಳೂರಿನ ಯುವಕರ "ಅವಲಂಬನ" ತಂಡವು ಮೇ ೫ ಮತ್ತು ೬ ರಂದು ಆಯೋಜಿಸಿದ ’ಭವಿಷ್ಯ-೨೦೧೨’ ಕಾರ್ಯಕ್ರಮದ ಸಮಾರೋಪ ಭಾಷಣವನ್ನು ನಡೆಸುತ್ತಾ ಮಾತನಾಡುತ್ತಿದ್ದರು.

೦೫.೦೫.೨೦೧೨ ಶನಿವಾರ ೧೦ ಘಂಟೆಗೆ ಸರಿಯಾಗಿ ’ಭವಿಷ್ಯ-೨೦೧೨’ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಪ್ರಾರಂಭವಾಯಿತು. ಸಮಾರಂಭದಲ್ಲಿ, ಸೀತಂಗೋಳಿ ವಲಯ ಅಧ್ಯಕ್ಷ ಕೃಷ್ಣಮೋಹನ ಭಟ್, ಕಾರ್ಯದರ್ಶಿ ಎಚ್. ಸತ್ಯಶಂಕರ ಭಟ್, ಶ್ರೀ ರಾಮಚಂದ್ರಾಪುರ ಮಠದ ಜ್ಞಾನವಿಭಾಗದ ಕಾರ್ಯದರ್ಶಿಗಳಾದ ವಿದ್ವಾನ್ ಜಗದೀಶ ಶರ್ಮಾ, ಮಹಾಮಂಡಲ ವಿದ್ಯಾವಿಭಾಗದ ಪ್ರಧಾನರಾದ ಪ್ರಮೋದ್ ಪಂಡಿತ್, ಎಡನಾಡು ವಲಯ ಕಾರ್ಯದರ್ಶಿಗಳಾದ ಕೇಶವ ಪ್ರಸಾದ್ ಎಡಕ್ಕಾನ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ,  ಕೃಷ್ಣಪ್ರಸಾದ ಎಡಪ್ಪಾಡಿ, ತಜ್ಞ ಡಾ.ಯು.ಬಿ.ಪವನಜ ಪಾಲ್ಗೊಂಡಿದ್ದರು. ಮಹೇಶ್ ಎಲ್ಲ್ಯಡ್ಕ ಸ್ವಾಗತಿಸಿದರು.

’ನಾವು ಏನಾಗೋಣ’ ಎಂಬ ಬಗ್ಗೆ ವಿದ್ವಾನ್ ಜಗದೀಶ ಶರ್ಮಾ, ’ನೈಜ ಇತಿಹಾಸ’ ಎಂಬುದರ ಬಗ್ಗೆ ರಾಜು ಎಮ್.ಬಿ, ’ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳು’ ಎಂಬ ಕುರಿತಾಗಿ ಶ್ಯಾಮಪ್ರಸಾದ್, ವೇದಗಣಿತ ಕುರಿತು ಪ್ರಮೋದ್ ಪಂಡಿತ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿಶಿಷ್ಟ ರೀತಿಯ ಸಂಸ್ಕೃತಿ ಕುರಿತಾದ ಪ್ರಶ್ನೋತ್ತರವನ್ನು ವಿದ್ವಾನ್ ಜಗದೀಶ ಶರ್ಮಾ ನಡೆಸಿಕೊಟ್ಟರು, ಅವರಿಂದ ’ನಿರ್ವಿಷಯ ಧ್ಯಾನ’ ತರಬೇತಿಯೂ ನಡೆಯಿತು.

೦೬.೦೫.೨೦೧೨ ಭಾನುವಾರದಂದು, ಖ್ಯಾತ ವಿದ್ಯಾರ್ಥಿ ತರಬೇತುದಾರ ಉಂಡೆಮನೆ ವಿಶ್ವೇಶ್ವರ ಭಟ್ ನಡೆಸಿಕೊಟ್ಟ ಮನೋವೈಜ್ಞಾನಿಕ ಪರೀಕ್ಷೆಯ ತರಬೇತಿ, ಅದರ ವಿಶ್ಲೇಷಣೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವೃದ್ಧಿಯ ದಿಸೆಯಲ್ಲಿ ಹೊಸಬೆಳಕು ಕೊಟ್ಟವು.  ’ಆಡಳಿತಾತ್ಮಕ ಹುದ್ದೆಗಳಲ್ಲಿನ ಅವಕಾಶಗಳ ಬಗ್ಗೆ ಶ್ರೀ ಗೋಪಾಲ ಭಟ್, ಪತ್ರಿಕೋದ್ಯಮ, ಸಂಗೀತ, ಸಾಹಿತ್ಯ ಇತ್ಯಾದಿಗಳನ್ನು ವೃತ್ತಿಯಾಗಿ ಸ್ವೀಕರಿಸುವುದರ ಸಾಧ್ಯತೆಗಳ ಕುರಿತು ’ಹೊಸದಿಗಂತ’ ಪತ್ರಿಕೆಯ ಸ್ಥಾನೀಯ ಉಪಸಂಪಾದಕ ಶಿವಪ್ರಸಾದ್ ತಿಳಿಸಿಕೊಟ್ಟರು. ’ಕೃಷಿ’ಯಲ್ಲಿನ ಅವಕಾಶಗಳ ಬಗೆಗೆ ಪ್ರಗತಿಪರ ಕೃಷಿಕ ಶ್ಯಾಮ ಭಟ್ ಗೊರಗೋಡು ತಿಳಿಸಿದರೆ, ಡಾ.ಯು.ಬಿ. ಪವನಜ ವಿಜ್ಞಾನ-ತಂತ್ರಜ್ಞಾನಕ್ಷೇತ್ರದ ವೃತ್ತಿಸಾಧ್ಯತೆಗಳನ್ನು ವಿವರಿಸಿದರು. ವೈದ್ಯಕೀಯ ಕ್ಷೇತ್ರದ ಬಗ್ಗೆ ತಿಳಿಸಿದ್ದು ಖ್ಯಾತ ವೈದ್ಯ ಪಿ.ಸತೀಶ್ ಭಟ್. ಇದಲ್ಲದೇ ’ಭವಿಷ್ಯ-೨೦೧೨’ ಸಂಸ್ಕೃತ-ಸಂಸ್ಕೃತಿಯ ಕ್ಷೇತ್ರದಲ್ಲಿನ ಅವಕಾಶಗಳ ಕುರಿತಾಗಿ ಕೃಷ್ಣಾನಂದ  ವಿವರವಾಗಿ ತಿಳಿಸಿದರು.

ಎಡನಾಡು ವಲಯ ಕಾರ್ಯದರ್ಶಿ ಕೇಶವಪ್ರಸಾದ್ ಎಡಕ್ಕಾನ, ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಯು.ಬಿ.ಪವನಜ, ಉಂಡೆಮನೆ ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮದ ಬಗೆಗಿನ ಅನಿಸಿಕೆ ಹಂಚಿಕೊಂಡರು. ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ರಾಮಚಂದ್ರ ಅಜ್ಜಕಾನ ವಂದಿಸಿದರು. ಕಾರ್ಯಕ್ರಮದಲ್ಲಿ  ಅವಲಂಬನ ಕಾರ್ಯಕರ್ತರಾದ ಮಧು ದೊಡ್ಡೇರಿ, ನಿಖಿಲಾ ದೊಡ್ಡೇರಿ, ಮಹೇಶ ಎಲ್ಲ್ಯಡ್ಕ, ಶ್ವೇತಾ ಎಲ್ಲ್ಯಡ್ಕ, ಶ್ರೀದೇವಿ, ನಿನಾದ, ರವಿನಾರಾಯಣ ಭಾಗವಹಿಸಿದ್ದರು.

No comments:

Post a Comment