Jun 25, 2014

ವಿದ್ಯಾರ್ಥಿ ನಾಯಕರು



ನಮ್ಮ ವಿದ್ಯಾಪೀಠದ 2014-15ನೇ ಸಾಲಿನ ವಿದ್ಯಾರ್ಥಿ ನಾಯಕನಾಗಿ ಕೌಶಿಕ್ ರಾಮಕೃಷ್ಣ ಮತ್ತು ಉಪನಾಯಕಿಯಾಗಿ ಶ್ರಾವ್ಯ.ಕೆ ಆಯ್ಕೆಯಾಗಿದ್ದಾರೆ.

ಶಾಲೆ ಸೇರ್ಪಡೆಗೆ ಕೊನೆಯ ದಿನಾಂಕ ಜುಲೈ 31



               

ಪ್ರಾಥಮಿಕ ಹಂತದಿಂದಲೇ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಮತ್ತು ಜೀವನ ಮೌಲ್ಯಗಳನ್ನು ಉದ್ದೀಪನಗೊಳಿಸುವ ದೃಷ್ಟಿಯಿಂದ ವಿಶಿಷ್ಟ ರೀತಿಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ  ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠವು ಪ್ರಸ್ತುತ ನವೀಕರಣಗೊಂಡು ಜನಾಕರ್ಷಣೆಯ ಕೇಂದ್ರವಾಗಿದೆ. ಸಂಸ್ಕೃತ - ಆಂಗ್ಲ ಮಾಧ್ಯಮ ಶಿಕ್ಷಣ ರಂಗದಲ್ಲಿ ಸಂಸ್ಥೆ ಉತ್ತಮ ಪ್ರಗತಿಯನ್ನು ಸಾಧಿಸಿ ತೋರಿಸುತ್ತಿದೆ. ಪಂಚಮುಖಿ ಶಿಕ್ಷಣಕ್ಕೆ ಒತ್ತು ನೀಡಿ ಇಲ್ಲಿನ ವಿದ್ಯಾರ್ಥಿಗಳು ಬಹುಮುಖಿಯಾಗಿ ಅಭಿವೃದ್ಧಿಗೊಳ್ಳಬೇಕು ಎಂಬ ಜನಮಾನಸದ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಶ್ರೀ ಭಾರತೀ ವಿದ್ಯಾಪೀಠವು ಆಂಗ್ಲ ಮಾಧ್ಯಮ ಶಿಕ್ಷಣದ ಕಡೆಗೆ ಮುಖಮಾಡಿ ನಿಂತಿದೆ. ಆಧುನಿಕ ಶಿಕ್ಷಣ ವಿಧಾನದೊಂದಿಗೆ ಬಹುಬೇಗ ಹೊಂದಿಕೊಳ್ಳುವ ಉದ್ದೇಶದಿಂದ ಪ್ರಸ್ತುತ ಕೇರಳ ಸರಕಾರದ ಪಠ್ಯಪದ್ಧತಿಯನ್ನು ಇಲ್ಲಿ ಅನುಸರಿಸಲಾಗುತ್ತಿದೆ.
                ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸೇವಾ ಯೋಜನೆಯಲ್ಲಿ ಒಳಪಟ್ಟ ವಿದ್ಯಾಸಂಸ್ಥೆಗಳ ಮೇಲ್ನೋಟವನ್ನು ಸ್ವತಃ ಶ್ರೀಗಳವರೇ ಕೈಗೊಳ್ಳುತ್ತಿದ್ದಾರೆ. ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಕ್ರೀಡಾ ಸಲಕರಣೆಗಳನ್ನು ಅಳವಡಿಸಲಾಗುತ್ತಿದೆ. ಹೀಗೆ ಪ್ರಸ್ತುತ ಆಡಳಿತದಲ್ಲಿರುವ ನೂತನ ಶಾಲಾ ಸಮಿತಿಯು ಶಾಲೆಯ ಅಭಿವೃದ್ಧಿಗಾಗಿ ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ನಿಟ್ಟಿನಲ್ಲಿ ನೂತನವಾಗಿ ಶಾಲೆಗೆ ಸೇರಲು ಇಚ್ಛಿಸುವವರಿಗಾಗಿ ಸೇರ್ಪಡೆಯ ಕೊನೆಯ ದಿನಾಂಕವನ್ನು ಜುಲೈ 31, 2014 ತನಕ ಮುಂದೂಡಲಾಗಿದೆ.

Jun 16, 2014

‘ಸ್ವಾಗತ ಭಾರತೀ - 2014’




                ಒಬ್ಬ ವಿದ್ಯಾರ್ಥಿಯು ಸ್ವಹಿತಕ್ಕಾಗಿ ಕಲಿತರೆ ಅದರ ಶ್ರೇಯಸ್ಸು ಮೊದಲು ಆತನಿಗೆ, ನಂತರ ಆತನ ತಂದೆ ತಾಯಂದಿರಿಗೆ, ಹಿರಿಯರಿಗೆ, ಶಾಲೆಗೆ, ಗುರುಗಳಿಗೆ ಮತ್ತು ನಾಡಿನ ಜನತೆಗೆ ದೊರೆಯುತ್ತದೆ. ಪಠ್ಯೇತರ ಚಟುವಟಿಕೆಗಳ ಭಾಗವಾಗಿ ವಿದ್ಯಾರ್ಥಿಗಳು ಕರಕುಶಲ ಕಲೆಗಳ ಕಡೆಗೂ ಗಮನ ನೀಡಬೇಕು. ಇವುಗಳೆಲ್ಲವೂ ವೈವಿಧ್ಯತೆಯಲ್ಲಿ ಏಕತೆ ಎಂಬಂತೆ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿರಬೇಕು. ಮನಸ್ಸಿನಲ್ಲಿ ಸಂಶಯಗಳು ಮೂಡಿದ ತಕ್ಷಣ ವಿದ್ಯಾರ್ಥಿಗಳಲ್ಲಿ ಚಿಂತನಾ ಮನೋಭಾವ ಬೆಳೆಯಬೇಕು ಮತ್ತು ಅಗತ್ಯ ಸಂದರ್ಭಗಳಲ್ಲಿ ಅವುಗಳನ್ನು ಪ್ರಶ್ನಿಸುವ ಸಾಮರ್ಥ್ಯವನ್ನೂ ಗಳಿಸಿಕೊಳ್ಳಬೇಕು. ಹತ್ತನೇ ತರಗತಿ ವಿದ್ಯಾರ್ಥಿಗಳ ಸತತ ಮೂರನೇ ತಂಡವು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸಿ ಮುಜುಂಗಾವು ಶಿಕ್ಷಣ ಸಂಸ್ಥೆಗಳ ಕಡೆಗೆ ಸಮಾಜದ ಗಮನವನ್ನು ಸೆಳೆದಿದ್ದಾರೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಂಕಲ್ಪದಂತೆ ರೂಪುಗೊಂಡ ವಿದ್ಯಾಸಂಸ್ಥೆ ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿವೆ ಎನ್ನುವುದಕ್ಕೆ ಇದು ನೂತನ ನಿದರ್ಶನಎಂದು ನಿವೃತ್ತ ಮುಖ್ಯೋಪಾಧ್ಯಾಯ ಕೈಲಂಕಜೆ ವೆಂಕಟ್ರಮಣ ಭಟ್ ಅಭಿಪ್ರಾಯಪಟ್ಟರು. ಅವರು 02.06.2014 ಸೋಮವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದಸ್ವಾಗತ ಭಾರತೀಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಜಾ ಗಿರೀಶ್ ಸ್ವಾಗತಿಸಿ ಚೈತ್ರಶ್ರೀ ವಂದಿಸಿದರು. ರೇಶ್ಮಾ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

ಯೋಗ ಶಿಬಿರ 2014



ಮುಜುಂಗಾವು ಗ್ರಾಮೋತ್ಥಾನ ಸೇವಾ ಕೇಂದ್ರದ ಆಶ್ರಯದಲ್ಲಿ 31.05.2014 ಶನಿವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರಿಂದ ಉತ್ತಮ ಜೀವನ ಶೈಲಿಗಾಗಿ ಯೋಗ ವಿಚಾರ ಸಂಕಿರಣ ಮತ್ತು ಯೋಗಾಭ್ಯಾಸ ಕಾರ್ಯಕ್ರಮ ಜರಗಿತು.