Jun 14, 2012

ವಸಂತ ವೇದ ಶಿಬಿರ ಸಮಾರೋಪ

19.05.2012 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಶ್ರೀ ಶಂಕರ ವಸಂತ ವೇದ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಅಧ್ಯಕ್ಷ ಭಾಷಣ ಮಾಡಿದರು. ವೇದಮೂರ್ತಿ ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಮತ್ತು ವೇದಮೂರ್ತಿ ಮಣಿಮುಂಡ ವಿಶ್ವೇಶ್ವರ ಶಾಸ್ತ್ರಿಗಳು ಉಪಸ್ಥಿತರಿದ್ದರು.

ವಸಂತ ವೇದ ಶಿಬಿರ


ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬೇಸಿಗೆ ರಜಾ ಕಾಲದ ‘ಶ್ರೀ ಶಂಕರ ವಸಂತ ವೇದ ಶಿಬಿರ’ ದ್ವಿತೀಯ ವರ್ಷಕ್ಕೆ ಕಾಲಿರಿಸಿದೆ. ಮುಜುಂಗಾವಿನ ಗ್ರಾಮೀಣ ಪರಿಸರದಲ್ಲಿ, ದೇವಾಲಯ, ನೇತ್ರಾಲಯ ಮತ್ತು ವಿದ್ಯಾಲಯಗಳ ಸಂಗಮ ಭೂಮಿಯಲ್ಲಿನ ಪ್ರಶಾಂತ ವಾತಾವರಣದಲ್ಲಿ ಪ್ರಸ್ತುತ ೨೫ ಮಂದಿ ವಿದ್ಯಾರ್ಥಿಗಳು ವೇದಾಧ್ಯಯನ ನಿರತರಾಗಿದ್ದಾರೆ. ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರ ಮಾರ್ಗದರ್ಶನದಲ್ಲಿ ಮಣಿಮುಂಡ ವಿಶ್ವೇಶ್ವರ ಶಾಸ್ತ್ರಿಗಳು ರಜಾಕಾಲದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ.
ಸಂಧ್ಯಾವಂದನಂ, ಶ್ರೀ ರುದ್ರಪ್ರಶ್ನ, ಚಮಕ, ಪಂಚಾಯತನ ಪೂಜೆ ಇತ್ಯಾದಿಗಳ ಮಂತ್ರಗಳನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ ಮಾರ್ಗ ಇವರು ಶಿಬಿರದ ಯಶಸ್ಸಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮಂಜೇಶ್ವರ ಎಸ್.ಎ.ಟಿ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕ ನಾರಾಯಣ ಜಿ.ಹೆಗಡೆ ವಿದ್ಯಾರ್ಥಿಗಳಿಗೆ ಸಂಸ್ಕೃತ ತರಗತಿ ಮತ್ತು ಸುಭಾಷಿತ ಶಿಕ್ಷಣವನ್ನೂ ವಿವರಣೆಯನ್ನು ನೀಡುತ್ತಿದ್ದಾರೆ. ಎರಡು ತಿಂಗಳ ಬೇಸಿಗೆ ರಜಾಕಾಲದ ವೇದಾಧ್ಯಯನಕ್ಕಾಗಿ ದೂರದ ಊರನ್ನು ತಲಪಬೇಕಾದ ವಿದ್ಯಾರ್ಥಿಗಳಿಗೆ ಈ ಸೌಕರ್ಯವು ಪಕ್ಕದ ಮುಜುಂಗಾವಿನಲ್ಲಿಯೇ ದೊರೆತಿರುವುದು ಸಂತಸ ತಂದಿದೆ.

“ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ: ಡಿ.ರಾಮ ಭಟ್"


    “ಶಾಲೆಯಲ್ಲಿ ತಿಳಿದುಕೊಳ್ಳಲು ಸೌಕರ್ಯವಿಲ್ಲದ ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳಿಗೆ ಬೇಸಗೆ ರಜೆಯನ್ನು ನೀಡಲಾಗುವುದು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮಗಿಷ್ಟವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಕಲಿಯುವಿಕೆ ನಿರಂತರ. ಗುರುಗಳ ಮೂಲಕ, ಸಹಪಾಠಿಗಳ ಮೂಲಕ ಹಾಗೂ ಸ್ವಂತ ಪರಿಶ್ರಮದ ಮೂಲಕ ಕಾಲಾನುಕ್ರಮದಲ್ಲಿ ಕಲಿತ ವಿಚಾರಗಳನ್ನು ಮೈಗೂಡಿಸಿಕೊಂಡು ನಾವು ರಾಮರಾಜ್ಯದ ಕನಸನ್ನು ನನಸು ಮಾಡಲು ಸಾಧ್ಯವಿರುವ ಶಕ್ತಿವಂತರಾಗಬೇಕು" ಎಂದು ನಿವೃತ್ತ ಮುಖ್ಯೋಪಾಧ್ಯಾಯ ದೊಡ್ಡಮಾಣಿ ರಾಮ ಭಟ್ ಅಭಿಪ್ರಾಯಪಟ್ಟರು. ಅವರು ೩೧.೦೩.೨೦೧೨ ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಪ್ರತಿಭಾ ಭಾರತೀ’ ಕಾರ್ಯಕ್ರಮದ ವಾರ್ಷಿಕ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

    ಎಂಟನೇ ತರಗತಿ ವಿದ್ಯಾರ್ಥಿ ಕಾರ್ತಿಕ್. ಎಸ್ ಅಧ್ಯಕ್ಷತೆ ವಹಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಶ್ವತಿ ಸ್ವಾಗತಿಸಿ ಕವಿತಾ.ಕೆ ವಂದಿಸಿದರು. ಗೌರೀಶ್ ವಿಶ್ವಾಮಿತ್ರ ಮತ್ತು ದೀಪಕ್ ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿದರು. ೨೧೪ ಶಾಲಾ ದಿನಗಳಲ್ಲಿ ಪೂರ್ಣ ಹಾಜರಾತಿಯನ್ನು ಪಡೆದ ೨೭ ಮಂದಿ ವಿದ್ಯಾರ್ಥಿಗಳಿಗೆ ‘ಅಗ್ರೇಸರ’ ಪ್ರಶಸ್ತಿ ನೀಡಲಾಯಿತು.

ಕಲಿಕೋಪರಣಗಳ ವಿತರಣೆ

ಶ್ರೀ ಷಣ್ಮುಖ ಜ್ಯೌತಿಷ ಪ್ರತಿಷ್ಠಾನದ ಡಿ.ಶ್ಯಾಮಪ್ರಸಾದ ಶಾಸ್ತ್ರಿ ಆಯ್ದ ವಿದ್ಯಾರ್ಥಿಗಳಿಗಾಗಿಕೊಡಮಾಡಿದ ಕಲಿಕೋಪರಣಗಳನ್ನು 04.06.2012 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ|ಡಿ.ಪಿ.ಭಟ್ ವಿತರಿಸಿದರು. ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ ಮಾರ್ಗ ಉಪಸ್ಥಿತರಿದ್ದರು.

Jun 7, 2012

‘ಸ್ವಾಗತ ಭಾರತೀ’

“ಪ್ರಥಮ ತಂಡದ ಹತ್ತನೇ ತರಗತಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸಿ ಮುಜುಂಗಾವು ಶಿಕ್ಷಣ ಸಂಸ್ಥೆಗಳ ಕಡೆಗೆ ಸಮಾಜದ ಗಮನವನ್ನು ಸೆಳೆದಿದ್ದಾರೆ. ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಂಕಲ್ಪದಂತೆ ರೂಪುಗೊಂಡ ವಿದ್ಯಾಸಂಸ್ಥೆ ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿವೆ ಎನ್ನುವುದಕ್ಕೆ ಇದು ನೂತನ ನಿದರ್ಶನ. ಇಂತಹ ವಿದ್ಯಾಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ಬೆಂಗಳೂರಿನ ದಾನಿಗಳ ನೆರವಿನಿಂದ ಈಗಾಗಲೇ ಸ್ಟೀಮ್ ಬಾಯ್ಲರ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಸದ್ಯದಲ್ಲೇ ನೂತನ ಭೋಜನ ಶಾಲೆಯನ್ನು ನಿರ್ಮಿಸಲಾಗುವುದು” ಎಂದು ಬೆಂಗಳೂರಿನ ಗೋಪಾಲ.ಜಿ.ಕಾಕತ್ಕರ್ ಅಭಿಪ್ರಾಯಪಟ್ಟರು. ಅವರು ೦೪.೦೬.೨೦೧೨ ಸೋಮವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಸ್ವಾಗತ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
    ಮುಜುಂಗಾವು ಶ್ರೀ ಭಾರತೀ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ ನಾಣಿತ್ಲು, ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್, ಬೆಂಗಳೂರಿನ ಉದ್ಯಮಿ ರವಿಚಂದ್ರ, ಹಿರಿಯ ಸಮಾಜ ಸೇವಕ ಪೋಳ್ಯ ಕೃಷ್ಣ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಅರ್ಪಿಸಿದರು.
    ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಗೌರೀಶ ವಿಶ್ವಾಮಿತ್ರ ಸ್ವಾಗತಿಸಿ ಕಿರಣ ಮಹೇಶ ವಂದಿಸಿದರು. ಶಿಕ್ಷಕಿ ಗಾಯತ್ರಿ ಎಸ್.ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

‘ಸ್ಪಂದನ-2012’


ನಮ್ಮ ವಿದ್ಯಾಪೀಠದಿಂದ ಎಸ್.ಎಸ್.ಎಲ್.ಸಿ ಪೂರೈಸುತ್ತಿರುವ ಪ್ರಥಮ ತಂಡ ಹೊರ ಜಗತ್ತಿಗೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳು ಲೋಕವನ್ನು ಬೆಳಗಲೆಂಬ ಸದಾಶಯದೊಂದಿಗೆ ಅಡಳಿತ ಮಂಡಳಿ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ದೀಪಗಳನ್ನು ವಿತರಿಸಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕ ಬೀಚಿತ್ಲು ಶಂಕರನಾರಾಯಣ ಭಟ್ ಹಿತವಚನಗಳನ್ನು ಹೇಳಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಸ್ಪಂದನ-2012’ನ್ನು ಅರ್ಥಪೂರ್ಣವಾಗಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು.