Jun 7, 2012

‘ಸ್ವಾಗತ ಭಾರತೀ’

“ಪ್ರಥಮ ತಂಡದ ಹತ್ತನೇ ತರಗತಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸಿ ಮುಜುಂಗಾವು ಶಿಕ್ಷಣ ಸಂಸ್ಥೆಗಳ ಕಡೆಗೆ ಸಮಾಜದ ಗಮನವನ್ನು ಸೆಳೆದಿದ್ದಾರೆ. ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಂಕಲ್ಪದಂತೆ ರೂಪುಗೊಂಡ ವಿದ್ಯಾಸಂಸ್ಥೆ ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿವೆ ಎನ್ನುವುದಕ್ಕೆ ಇದು ನೂತನ ನಿದರ್ಶನ. ಇಂತಹ ವಿದ್ಯಾಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ಬೆಂಗಳೂರಿನ ದಾನಿಗಳ ನೆರವಿನಿಂದ ಈಗಾಗಲೇ ಸ್ಟೀಮ್ ಬಾಯ್ಲರ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಸದ್ಯದಲ್ಲೇ ನೂತನ ಭೋಜನ ಶಾಲೆಯನ್ನು ನಿರ್ಮಿಸಲಾಗುವುದು” ಎಂದು ಬೆಂಗಳೂರಿನ ಗೋಪಾಲ.ಜಿ.ಕಾಕತ್ಕರ್ ಅಭಿಪ್ರಾಯಪಟ್ಟರು. ಅವರು ೦೪.೦೬.೨೦೧೨ ಸೋಮವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಸ್ವಾಗತ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
    ಮುಜುಂಗಾವು ಶ್ರೀ ಭಾರತೀ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ ನಾಣಿತ್ಲು, ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್, ಬೆಂಗಳೂರಿನ ಉದ್ಯಮಿ ರವಿಚಂದ್ರ, ಹಿರಿಯ ಸಮಾಜ ಸೇವಕ ಪೋಳ್ಯ ಕೃಷ್ಣ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಅರ್ಪಿಸಿದರು.
    ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಗೌರೀಶ ವಿಶ್ವಾಮಿತ್ರ ಸ್ವಾಗತಿಸಿ ಕಿರಣ ಮಹೇಶ ವಂದಿಸಿದರು. ಶಿಕ್ಷಕಿ ಗಾಯತ್ರಿ ಎಸ್.ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment