Feb 3, 2014

ವರ್ಧಂತ್ಯುತ್ಸವ - 2014

“ಪ್ರಾಥಮಿಕ ಹಂತದಲ್ಲಿ ಮಗುವಿಗೆ ದೊರಕುವ ಶಿಕ್ಷಣವು ಮಗುವಿನ ಭವಿಷ್ಯವನ್ನು ನಿರ್ಧರಿಸುತ್ತವೆ. ಬೆಳವಣಿಗೆಯ ಹಂತದಲ್ಲಿ ದೊರಕುವ ನೈತಿಕ, ಆಧ್ಯಾತ್ಮಿಕ, ಧಾರ್ಮಿಕ, ಶಾರೀರಿಕ ಶಿಕ್ಷಣಗಳು ಭವ್ಯ ಜೀವನವನ್ನು ಸಾಗಿಸಲು ಪೂರಕವಾಗುತ್ತವೆ. ಶಾಲಾ ಮಟ್ಟದಲ್ಲಿ ನೈತಿಕ ಶಿಕ್ಷಣವನ್ನು ನೀಡುವುದು ಇಂದಿನ ಜನಾಂಗಕ್ಕೆ ಅತೀ ಅಗತ್ಯವಾಗಿದೆ. ಆದ್ದರಿಂದ ಮನೆ ಮತ್ತು ಶಾಲೆಗಳಲ್ಲಿ ಮಗುವಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಮುಜುಂಗಾವಿನಲ್ಲಿ ಅಂತಹ ಸುಸಂಸ್ಕೃತ ವಾತಾವರಣವಿದೆ." ಎಂದು ಕೇರಳ ಗ್ರಾಮೀಣ ಬ್ಯಾಂಕ್ ರೀಜನಲ್ ಮೇನೇಜರ್ ದಾಮೋದರ.ಡಿ ಅಭಿಪ್ರಾಯಪಟ್ಟರು. ಅವರು ಮೊನ್ನೆ 01.02.2014 ಶನಿವಾರ ಮುಜುಂಗಾವಿನಲ್ಲಿ ನಡೆದ ನಮ್ಮ ಶ್ರೀ ಭಾರತೀ ವಿದ್ಯಾಪೀಠ ಮತ್ತು ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯಗಳ ವರ್ಧಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಜುಂಗಾವು ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಮದನಗುಳಿ ರಾಮಚಂದ್ರ ಭಟ್ ವಹಿಸಿದ್ದರು. ಅಭ್ಯಾಗತರಾಗಿ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಸದಾಶಿವ ನಾಯಕ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಳೀಯ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ. ವಿ.ಶೆಟ್ಟಿ ಭಾಗವಹಿಸಿದರು. ಶ್ರೀಭಾರತೀ ವಿದ್ಯಾಪೀಠದ ವರದಿಯನ್ನು ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ-ಮಾರ್ಗ ಹಾಗೂ ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವರದಿಯನ್ನು ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ವಾಚಿಸಿದರು.

ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ‘ಬೆಳಕು’, ‘ಜ್ಞಾನದೀಪ್ತಿ’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ‘ಬೆಳಗು’ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ವಿದ್ಯಾರ್ಥಿಗಳಾದ ತೀಕ್ಷಾ ಸ್ವಾಗತಿಸಿ, ದೀಪಕ್ ಶ್ರೀವತ್ಸ ವಂದಿಸಿದರು. ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ ಮತ್ತು ಶುಭಲಕ್ಷ್ಮಿ ಯಾಜಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈವಿಧ್ಯಗಳ ಜೊತೆಗೆ ಕರಾಟೆ ಮತ್ತು ಯೋಗ ಪ್ರದರ್ಶನವೂ ಜರಗಿತು.