Jul 17, 2013

‘ವನಜೀವನ ಯಜ್ಞ-2013’

 


  “ಅರಣ್ಯ ಸಂರಕ್ಷಣೆಯು ನಮ್ಮೆಲ್ಲರ ಗುರಿ. ಸ್ವಚ್ಛ ಸಮಾಜದಲ್ಲಿ ಸುಂದರ ಪ್ರಕೃತಿಯ ಪಾತ್ರವೂ ಪ್ರಧಾನವಾದುದು. ನಾಡಿನಾದ್ಯಂತ ಸ್ವಾಭಾವಿಕ ಕಾಡುಗಳು ಮರೆಯಾಗಿ ಕಾಂಕ್ರೀಟ್ ಕಾಡುಗಳು ಏಳುತ್ತಿರುವುದು ಭವಿಷ್ಯದಲ್ಲಿ ಎದುರಾಗಬಲ್ಲ ಬರಗಾಲಕ್ಕೆ ಮುನ್ನುಡಿಯಾಗಿದೆ. ಅಂತಹ ಸಂಭವನೀಯ ಬರಗಾಲವನ್ನು ತಡೆಗಟ್ಟಲು ನಾವು ಈಗಲೇ ಜಾಗೃತರಾಗಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಹಸಿರಿನ ಕಡೆಗಿನ ಪ್ರೀತಿಯನ್ನು ಬೆಳೆಸಿ ಭವಿಷ್ಯವನ್ನು ಹಸನುಗೊಳಿಸಬೇಕಾಗಿದೆ.” ಎಂದು ಕಾಸರಗೋಡು ಜಿಲ್ಲಾ ಅರಣ್ಯಾಧಿಕಾರಿ ಜಯಮಾಧವನ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ವನಜೀವನ ಯಜ್ಞ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಅಧ್ಯಕ್ಷ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವಪ್ರಸಾದ ನಾಣಿತ್ತಿಲು, ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ಸಹ ಅರಣ್ಯಾಧಿಕಾರಿ ಜೇಮ್ಸ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಾದ ವಿಕ್ರಮ್ ಸ್ವಾಗತಿಸಿ ಪ್ರಜ್ವಲ್ ವಂದಿಸಿದರು. ಗೌರೀಶ ವಿಶ್ವಾಮಿತ್ರ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment