Mar 12, 2010

ಸಂಸ್ಕೃತದಿಂದ ಸುಸಂಸ್ಕೃತಿ: ಶ್ರೀ ಶ್ರೀ ರಾಘವೇಶ್ವರ ಭಾರತೀ

“ ನಮ್ಮ ದೇಶ ಸಂಸ್ಕೃತ ಮತ್ತು ಸಂಸ್ಕೃತಿಯಿಂದ ಬೆಳೆಯಬೇಕಾಗಿದೆ. ಭಾರತದ ಹೆಚ್ಚಿನೆಲ್ಲಾ ರಾಜ್ಯಭಾಷೆಗಳು ಸಂಸ್ಕೃತದ ರೂಪಾಂತರವಾಗಿದೆ. ಪ್ರಸ್ತುತ ನಾವು ಸಂಸ್ಕೃತವನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಹತ್ತು ವರ್ಷಗಳ ಹಿಂದೆ ನಾವು ಬಿತ್ತಿದ ಬೀಜ ಈಗ ಕಲ್ಪವೃಕ್ಷವಾಗಿ ಬೆಳೆದಿದೆ. ವಿದ್ಯಾಸಂಸ್ಥೆಯ ಮೂಲಕ ಸಾವಿರಾರು ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಾರೆ. ನವೀನ, ಪ್ರಾಚೀನಗಳ ಸಂಗಮವಾಗಿರುವ ಸಂಸ್ಕೃತ, ಪುರಾತನ ಜ್ಯೋತಿಷ, ವಾಸ್ತು ಆಧುನಿಕ ಶಿಕ್ಷಣವನ್ನು ಹೊಂದಿರುವ ಭೂತ ಭವಿಷ್ಯಗಳ ಸಂಗಮ ಸಂಸ್ಥೆಯಾಗಿದೆ. ಭಾರತ ಅಮೂಲ್ಯ ರತ್ನಗಳನ್ನು ಹುದುಗಿಸಿಕೊಂಡಿರುವ ಪುಣ್ಯಭೂಮಿ, ಆದರೆ ಮುತ್ತುರತ್ನಗಳನ್ನು ಗುರುತಿಸುವವರಿಲ್ಲದಾಗಿದ್ದಾರೆ, ವಿನಾಶದಂಚಿನಲ್ಲಿರುವ ಸಂಸ್ಕೃತ, ಸಂಸ್ಕೃತಿ, ಜ್ಯೋತಿಷ ಇತ್ಯಾದಿಗಳನ್ನು ನಾವು ಮಕ್ಕಳಿಗೆ ತಿಳಿಸಬೇಕಾಗಿದೆ.”ಎಂದು ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಆಶೀರ್ವದಿಸಿದರು. 
ಅವರು ೨೭.೦೨.೨೦೧೦ ಶನಿವಾರ ಮುಜುಂಗಾವು ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯದ ದಶಮಾನೋತ್ಸವ ಮತ್ತು ಶ್ರೀ ಭಾರತೀ ವಿದ್ಯಾಪೀಠದ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು.

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಚ್.ಕುಞ್ಞಂಬು, ಭಾರತೀಯ ಜನತಾ ಪಕ್ಷದ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ನಿವೃತ್ತ ಪ್ರಾಚಾರ್ಯ ಖಂಡಿಗೆ ಶಾಮ ಭಟ್ಟ, ಮಾನ್ಯ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ ಮಾನ್ಯ, ಶಿವಶಂಕರ ಕಿದೂರು, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಡಿಡಿಇ ವಿಭಾಗದ ನಿರ್ದೇಶಕ ಸಿ.ಎಚ್.ಪಿ. ಸತ್ಯನಾರಾಯಣ, ಆರಿಕ್ಕಾಡಿ ಶ್ರೀ ವೀರಾಂಜನೇಯ ಹಾಗೂ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾಕಾಂತ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜ್ಯೋತಿಷಿ ಕುಂಬಳೆ ಗೋಪಾಲಕೃಷ್ಣ ಅಡಿಗ, ಖಂಡಿಗೆ ಶಾಮ ಭಟ್, ವೇಮೂ ಪಳ್ಳತ್ತಡ್ಕ ಪರಮೇಶ್ವರ ಭಟ್, ಪಾಲಕ್ಕಾಡ್ ವೆಂಕಟೇಶ್ವರ ಭಟ್, ಹಿರಣ್ಯ ವೆಂಕಟೇಶ್ವರ ಭಟ್, ಕಾನ ಸುಬ್ರಾಯ ಭಟ್, ಮಿತ್ತೂರು ಕೇಶವ ಭಟ್, ಉಡುಪುಮೂಲೆ ಗೋಪಾಲಕೃಷ್ಣ ಭಟ್ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ರೂಪಿಸಿದ ಹಸ್ತಪ್ರತಿ ‘ಬೆಳಕು’ ಮತ್ತು ‘ಬೆಳಗು’ ಇವುಗಳನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಜ್ಞಾನದಾಯಿನೀ ಸಭಾ ಪರೀಕ್ಷೆಗಳಲ್ಲಿ, ವಿದ್ಯಾಲಯ ಚಟುವಟಿಕೆಗಳಲ್ಲಿ ಶ್ರೇಷ್ಟ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೇಶವಪ್ರಸಾದ ನಾಣಿತ್ತಿಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಗಳ ಪ್ರಧಾನ ಆಚಾರ್ಯರು ವರದಿ ವಾಚಿಸಿದರು. ಡಾಡಿ.ಪಿ.ಭಟ್ ಸಂಸ್ಥೆಗಳ ಪರಿಚಯವನ್ನು ಮಾಡಿದರು. ಶಿಕ್ಷಕಿ ಪಿ.ಶಿವಕುಮಾರಿ ಸಂದೇಶ ವಾಚಿಸಿದರು. ವಿದ್ಯಾರ್ಥಿ ಶ್ರೀಹರಿಶಂಕರ ಶರ್ಮಾ ಸ್ವಾಗತಿಸಿ ಈಶ್ವರಚಂದ್ರ ಜೋಯ್ಸ ವಂದಿಸಿದರು. ಮುರಳಿಕೃಷ್ಣ.ಟಿ ಕಾರ್ಯಕ್ರಮ ನಿರೂಪಿಸಿದರು.

ದಶಮಾನೋತ್ಸವ ಸ್ಮರಣ ಸಂಚಿಕೆ ‘ಜ್ಞಾನ ಭಾನು’ ಮತ್ತು ನಕ್ಷತ್ರ, ರಾಶಿ, ಗ್ರಹವನಗಳ ಸಾಮಾನ್ಯ ಪರಿಚಯವನ್ನು ಹೊತ್ತ ‘ಋಕ್ಷವನ’ ಸಿಡಿಗಳನ್ನು ಶ್ರೀಗುರುಗಳು ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ‘ರೇಣುಕಾ ಸ್ವಯಂವರ ಮತ್ತು ಭಾರ್ಗವ ವಿಜಯ’ ಯಕ್ಷಗಾನ ಜರಗಿತು.

೨೬.೦೨.೨೦೧೦ ರಂದು ೨೦೦೯ನೇ ಸಾಲಿನ ದಿಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ ಪ್ರದಾನ ಮಾಡಲಾಯಿತು. ಗೋವು ಮತ್ತು ಸಂಸ್ಕೃತ ಎಂಬ ವಿಚಾರದಲ್ಲಿ ಸದಾಶಿವ ಮೋಂತಿಮಾರ್, ವಿದ್ಯೆ ಮತ್ತು ಸಮಾಜ ಎಂಬ ವಿಚಾರದಲ್ಲಿ ಹಿರಣ್ಯ ವೆಂಕಟೇಶ್ವರ ಭಟ್ ಜ್ಯೋತಿಷ ಉಪನ್ಯಾಸಗಳನ್ನು ನೀಡಿದರು. ಗೋಷ್ಟಿಗಳಲ್ಲಿ ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ ವಿರೂಪಾಕ್ಷ ಜಡ್ಡೀಪಾಲ ಹಾಗೂ ನವದೆಹಲಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವಿದ್ವಾನ್ ವೆಂಕಟೇಶಮೂರ್ತಿ ಉಪಸ್ಥಿತರಿದ್ದರು.

೨೬.೦೨.೨೦೧೦ ರಂದು ಬೆಳಗ್ಗೆ ಗಣಪತಿ ಹವನ, ರುದ್ರಪಾರಾಯಣ, ನವಗ್ರಹ ಹವನ, ಚಂಡಿಕಾ ಹವನದೊಂದಿಗೆ ಎರಡು ದಿನಗಳ ಕಾರ್ಯಕ್ರಮ ಆರಂಭಗೊಂಡಿತು. ಖಂಡಿಗೆ ಶಾಮ ಭಟ್ ಉದ್ಘಾಟಿಸಿದರು. ಖ್ಯಾತ ನ್ಯಾಯವಾದಿ ಐ.ವಿ.ಭಟ್ ಅಧ್ಯಕ್ಷತೆ ವಹಿಸಿದರು. ಉದ್ಯಮಿ ವಸಂತ ಪೈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನದಾಸ್, ನ್ಯಾಯವಾದಿ ಎಂ.ನಾರಾಯಣ ಭಟ್, ಅಂಬಾರು ಶ್ರೀಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಮೀನಾರು ಪದ್ಮನಾಭ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದರು. ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಎಂ.ಶಾಮ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಸುಪ್ರೀತಾ.ಎಂ ಸ್ವಾಗತಿಸಿ ಜ್ಯೋತಿ.ಕೆ ವಂದಿಸಿದರು. ಸಂಜಯ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment