Sep 8, 2015

ಶ್ರೀಕೃಷ್ಣ ಜಯಂತಿ ಉತ್ಸವ 2015



“ಯಾವುದು ಮಹಾಭಾರತದಲ್ಲಿ ಇಲ್ಲವೋ ಅದು ನಮ್ಮ ಭರತ ಭೂಮಿಯಲ್ಲಿ ಇಲ್ಲ. ಯಾವುದು ಕೃಷ್ಣನಲ್ಲಿ ಇಲ್ಲವೋ ಅದು ನಮ್ಮಲ್ಲಿಲ್ಲ. ಕೃಷ್ಣ ನಿರಾಯುಧನಾಗಿ ಯುದ್ಧ ಭೂಮಿಯಲ್ಲಿ ನಿಂತ, ಭಗವದ್ಗೀತೆಯನ್ನು ಬೋಧಿಸಿದ. ಗೀತೆ ಜೀವನದ ಕನ್ನಡಿ. ನಮಗೆ ಏನು ಬೇಕೋ ಅದಕ್ಕೆ ಉತ್ತರ ಗೀತೆಯಲ್ಲಿದೆ. ಭಾರತದ ಎರಡನೆಯ ರಾಷ್ಟ್ರಪತಿ, ಶಿಕ್ಷಣ ಪ್ರೇಮಿ ಡಾ|ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಶ್ರೀಕೃಷ್ಣ ಪರಮಾತ್ಮನ ಜನ್ಮದಿನಗಳು ಒಂದೇ ದಿನ ಬಂದಿರುವುದು ಹಬ್ಬಗಳ ಸಂತಸವನ್ನು ಹೆಚ್ಚಿಸಿದೆ." ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪಠ್ಯಪುಸ್ತಕ ನಿರ್ದೇಶಕ ಶಂಕರನಾರಾಯಣ ಹೊಳ್ಳ ಅಭಿಪ್ರಾಯಪಟ್ಟರು. ಅವರು ಕಳೆದ 05.09.2015 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಶ್ರೀಕೃಷ್ಣ ಜಯಂತಿ ಉತ್ಸವ ಮತ್ತು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶಾಲಾ ಸಮಿತಿಯ ಸದಸ್ಯ ಕೆ.ವೆಂಕಟ್ರಮಣ ಭಟ್ ಸೂರಂಬೈಲು, ವೇದಮೂರ್ತಿ ಕಿಳಿಂಗಾರು ನಡುಮನೆ ಸುಬ್ರಾಯ ಭಟ್, ಗ್ರಾಮೋತ್ಥಾನ ಸಮಿತಿಯ ಅಧ್ಯಕ್ಷ ಶಂಕರನಾರಾಯಣ ರಾವ್ ಮುನ್ನಿಪ್ಪಾಡಿ, ಶ್ರೀ ಭಾರತೀ ವಿದ್ಯಾಪೀಠದ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆಮಾರ್ಗ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯ ಶಿಕ್ಷಕಿ ಚಿತ್ರಾ ಸರಸ್ವತಿ ಪೆರಡಾನ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ‘ಮುದ್ದು ಕೃಷ್ಣ’ ವೇಷ ಪ್ರದರ್ಶನ ಜರಗಿತು. ವಿದ್ಯಾರ್ಥಿಗಳಾದ ಕಾವ್ಯಶ್ರೀ ಸ್ವಾಗತಿಸಿ ಪ್ರೇಮಲತ ವಂದಿಸಿದರು. ವಿದ್ಯಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment