Jan 23, 2013

“ವಾರ್ಷಿಕೋತ್ಸವಗಳು ವಿದ್ಯಾರ್ಥಿಗಳ ಪ್ರತಿಭೆಯ ಪ್ರತಿಬಿಂಬ” :- ಹಿಲರಿ ಡಿ’ ಸೋಜ



     “ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ವಿಕಾಸಕ್ಕೆ ಶಾಲೆಯ ವಾರ್ಷಿಕೋತ್ಸವಗಳು ಸಹಕಾರಿ. ಮುಜುಂಗಾವಿನ ಪ್ರಶಾಂತ ಪರಿಸರದಲ್ಲಿ ಪ್ರತಿಭೆಗಳು ಅರಳುವುದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ದಾರಿದೀಪ. ಅಂತಹ ಬಹುಮುಖಿ ಕಲಿಕೆಗೆ ಇಲ್ಲಿ ಅವಕಾಶ ದೊರೆತಿರುವುದು ವಿದ್ಯಾರ್ಥಿಗಳ ಸುಯೋಗ ಎಂದು ಸಮಾಜ ಸೇವಕ ಹಿಲರಿ ಡಿ’ ಸೋಜ, ಶಾಂತಿಪಳ್ಳ ಅಭಿಪ್ರಾಯಪಟ್ಟರು. ಅವರು ದಿನಾಂಕ ೨೦.೦೧.೨೦೧೩ ಭಾನುವಾರ ಮುಜುಂಗಾವಿನಲ್ಲಿ ನಡೆದ ನಮ್ಮ ಶ್ರೀ ಭಾರತೀ ವಿದ್ಯಾಪೀಠ ಮತ್ತು ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯಗಳ ವರ್ಧಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಂಗಳೂರು ಎನ್.ಎಂ.ಪಿ.ಟಿ ಯ ನಿವೃತ್ತ ಅಧಿಕಾರಿ ಕೆ. ರಾಮ ಕಾರಂತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಜುಂಗಾವು ಶ್ರೀಭಾರತೀ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ|ಡಿ.ಪಿ.ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ನಿವೃತ್ತ ಕೆ.ಎಸ್.ಇ.ಬಿ ಅಧಿಕಾರಿ ಡಿ. ಗೋಪಾಲಕೃಷ್ಣ ಭಟ್, ಕೇರಳ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಮಹಾಲಿಂಗೇಶ್ವರ ಭಟ್ ಎಂ.ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಶ್ರೀ ಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ ಭಟ್. ಎಂ ಶುಭ ಹಾರೈಸಿದರು. ಆಡಳಿತ ಮಂಡಳಿಯ ಶ್ಯಾಮರಾಜ ದೊಡ್ಡಮಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಭಾರತೀ ವಿದ್ಯಾಪೀಠದ ವರದಿಯನ್ನು ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ-ಮಾರ್ಗ ಹಾಗೂ ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವರದಿಯನ್ನು ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ವಾಚಿಸಿದರು.

ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ‘ಬೆಳಕು’, ‘ಜ್ಞಾನದೀಪ್ತಿ’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ‘ಬೆಳಗು’ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ವಿದ್ಯಾರ್ಥಿನಿಯರಾದ ವೈಶಾಲಿ ಸ್ವಾಗತಿಸಿ, ಶುಭಾ ಜಿ. ಯಾಜಿ ವಂದಿಸಿದರು. ವಿದ್ಯಾರ್ಥಿ ಶ್ರೀನಿಧಿ. ಎಸ್ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈವಿಧ್ಯಗಳ ಜೊತೆಗೆ ಶ್ರೀಭಾರತೀ ವಿದ್ಯಾಪೀಠ ದ ವಿದ್ಯಾರ್ಥಿಗಳಿಂದ ‘ಲವಣಾಸುರ ಕಾಳಗ’, ‘ಲವ-ಕುಶ’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ‘ವೀರಮಣಿ ಕಾಳಗ’ ಯಕ್ಷಗಾನ ಬಯಲಾಟ ಜರಗಿತು.

No comments:

Post a Comment