Apr 2, 2013

ಸ್ಪಂದನ 2013

 
 “ಶಾಲೆ ವಿದ್ಯಾರ್ಥಿಗಳಿಗೆ ಬದುಕಿನ ಬುನಾದಿಯನ್ನು ಕಟ್ಟಿಕೊಡುತ್ತದೆ. ಶಾಲೆಯಲ್ಲಿ ಕಲಿತ ವಿಚಾರಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ ಬೆಳೆಯುತ್ತಾನೆ. ಶಾಲೆಯಿಂದ ತೇರ್ಗಡೆ ಹೊಂದಿ, ಬೀಳ್ಕೊಡುವ ಹಂತದಲ್ಲಿ ವಿದ್ಯಾರ್ಥಿಯು ಮಾತೃ ಶಾಲೆಯ ಸ್ಮರಣೆ ಮಾಡುತ್ತಿದ್ದಾನೆಂದರೆ ಆತನಿಗೆ ಶಾಲೆ ಉತ್ತಮ ಸೇವೆ ನೀಡಿದೆ ಎಂದರ್ಥ. ಈ ಕಾರ್ಯಕ್ರಮ ಉತ್ತಮ ವಿದ್ಯಾರ್ಥಿ ಮತ್ತು ಶಾಲೆಯ ನೈತಿಕ ಹಿನ್ನೆಲೆಯನ್ನು ಪ್ರದರ್ಶಿಸುತ್ತದೆ" ಎಂದು ಕಾಸರಗೋಡಿನ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀಮತಿ ತಾರಾ ಜಗದೀಶ್ ಅಭಿಪ್ರಾಯಪಟ್ಟರು. ಅವರು 27.03.2013 ಬುಧವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಬೀಳ್ಕೊಡುವ ‘ಸ್ಪಂದನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

   ಶಾಲಾ ಸಮಿತಿಯ ಅಧ್ಯಕ್ಷ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಭಟ್, ಶಾಲಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವೈಶಾಲಿ ಸ್ವಾಗತಿಸಿ ಸುಧಾ.ಎಂ ವಂದಿಸಿದರು. ನಿಕ್ಷಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ವತಿಯಿಂದ ಬೆಳಕಿನ ಸಂಕೇತವಾಗಿ ವಿದ್ಯಾರ್ಥಿಗಳಿಗೆ ಪ್ರಜ್ವಲಿಸುತ್ತಿರುವ ದೀಪವನ್ನು ನೀಡಲಾಯಿತು. ವಿದ್ಯಾರ್ಥಿಗಳು ಶಾಲೆಗೆ ಸ್ಮರಣಿಕೆಯಾಗಿ ನಿತ್ಯೋಪಯೋಗಿ ವಸ್ತುಗಳನ್ನು ಸಮರ್ಪಿಸಿದರು.

Mar 20, 2013

ಎರಡನೇ SSLC ತಂಡ

SSLC ಪರೀಕ್ಷೆಗಳು ನಾಳೆ ಕೊನೆಗೊಳ್ಳುತ್ತವೆ. ವಿದ್ಯಾರ್ಥಿಗಳೆಲ್ಲ ಕೊನೆಯ ಹಂತದ ತಯಾರಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ವಿದ್ಯಾಪೀಠದ ಎರಡನೇ SSLC ತಂಡದ ಫೋಟೋವನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಮತ್ತು ಶಾಲಾ ಸಮಿತಿಯ ಶ್ಯಾಮರಾಜ್ ದೊಡ್ಡಮಾಣಿ ಇವರ ಜೊತೆ ಶಿಕ್ಷಕ ವೃಂದವನ್ನೂ ಚಿತ್ರದಲ್ಲಿ ನೋಡಬಹುದು.

Feb 11, 2013

“ಪರೀಕ್ಷಾ ಭಯದಿಂದ ವಿದ್ಯಾರ್ಥಿಗಳು ದೂರವಾಗಲಿ: ಡಾ| ವೈ.ವಿ. ಕೃಷ್ಣಮೂರ್ತಿ”

    “ಮುಂದಿನ ತಿಂಗಳು ಪರೀಕ್ಷೆಗಳು ಆರಂಭವಾಗುತ್ತವೆ ಎನ್ನುವಾಗ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಆವರಿಸುತ್ತದೆ. ನೆನಪಿನ ಶಕ್ತಿಯ ಮೇಲಿರುವ ಅವರ ಹಿಡಿತ ಕಡಿಮೆಯಾಗುತ್ತದೆ. ಪರಿಣಾಮವಾಗಿ ಪರೀಕ್ಷೆಯಲ್ಲಿ ಅಂಕಗಳು ಕಡಿಮೆಯಾಗುತ್ತವೆ. ಈಗಲೂ ವ್ಯಾವಹಾರಿಕ ಜಗತ್ತಿನಲ್ಲಿ ಅಂಕಗಳೇ ಪ್ರಧಾನವಾಗಿರುವುದರಿಂದ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಲು ನಾವು ಪ್ರಯತ್ನಿಸಬೇಕು” ಎಂದು ಬದಿಯಡ್ಕದ ಪಶುವೈದ್ಯ ಡಾ| ವೈ.ವಿ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಅವರು ೦೩.೦೨.೨೦೧೩ ಆದಿತ್ಯವಾರ ನಮ್ಮ ವಿದ್ಯಾಪೀಠದಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ‘ಅವಲಂಬನ’ ತಂಡ ಆಯೋಜಿಸಿದ ‘ಅಧ್ಯಯನ ಶೈಲಿ ಹಾಗೂ ಪರೀಕ್ಷಾ ತಯಾರಿ ಮಾರ್ಗದರ್ಶನ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ಮುಜುಂಗಾವು ಶ್ರೀಭಾರತೀ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ| ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯಾ ಮಂಡಲದ ವಿದ್ಯಾಪ್ರಧಾನ ದೇವಕಿ ಪನ್ನೆ, ಸೀತಾಂಗೋಳಿ ವಲಯ ಅಧ್ಯಕ್ಷ ಇ.ಕೃಷ್ಣಮೋಹನ ಭಟ್, ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್. ಸತ್ಯಶಂಕರ ಭಟ್, ‘ಅವಲಂಬನ’ ತಂಡದ ಅಜ್ಜಕಾನ ರಾಮಚಂದ್ರ ಉಪಸ್ಥಿತರಿದ್ದರು. ಶ್ರೀ ರಾಮಚಂದ್ರಾಪುರ ಮಠದ ಕೃಷ್ಣಪ್ರಸಾದ್ ಎಡಪ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಜುಂಗಾವು ಶ್ರೀಭಾರತೀ ವಿದ್ಯಾಸಂಸ್ಥೆಗಳ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಸ್ವಾಗತಿಸಿದರು. ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮಭಟ್ ದರ್ಬೆ-ಮಾರ್ಗ ಧನ್ಯವಾದ ಸಮರ್ಪಿಸಿದರು.

    ಸಂಪನ್ಮೂಲ ವ್ಯಕ್ತಿಗಳಾದ ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ವಿಶ್ವೇಶ್ವರ ಭಟ್ ಉಂಡೆಮನೆ ಮತ್ತು ನಿವೃತ್ತ ಶಿಕ್ಷಕ ಗೋವಿಂದ ಭಟ್ ಬಳ್ಳಮೂಲೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

Jan 23, 2013

“ವಾರ್ಷಿಕೋತ್ಸವಗಳು ವಿದ್ಯಾರ್ಥಿಗಳ ಪ್ರತಿಭೆಯ ಪ್ರತಿಬಿಂಬ” :- ಹಿಲರಿ ಡಿ’ ಸೋಜ



     “ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ವಿಕಾಸಕ್ಕೆ ಶಾಲೆಯ ವಾರ್ಷಿಕೋತ್ಸವಗಳು ಸಹಕಾರಿ. ಮುಜುಂಗಾವಿನ ಪ್ರಶಾಂತ ಪರಿಸರದಲ್ಲಿ ಪ್ರತಿಭೆಗಳು ಅರಳುವುದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ದಾರಿದೀಪ. ಅಂತಹ ಬಹುಮುಖಿ ಕಲಿಕೆಗೆ ಇಲ್ಲಿ ಅವಕಾಶ ದೊರೆತಿರುವುದು ವಿದ್ಯಾರ್ಥಿಗಳ ಸುಯೋಗ ಎಂದು ಸಮಾಜ ಸೇವಕ ಹಿಲರಿ ಡಿ’ ಸೋಜ, ಶಾಂತಿಪಳ್ಳ ಅಭಿಪ್ರಾಯಪಟ್ಟರು. ಅವರು ದಿನಾಂಕ ೨೦.೦೧.೨೦೧೩ ಭಾನುವಾರ ಮುಜುಂಗಾವಿನಲ್ಲಿ ನಡೆದ ನಮ್ಮ ಶ್ರೀ ಭಾರತೀ ವಿದ್ಯಾಪೀಠ ಮತ್ತು ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯಗಳ ವರ್ಧಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಂಗಳೂರು ಎನ್.ಎಂ.ಪಿ.ಟಿ ಯ ನಿವೃತ್ತ ಅಧಿಕಾರಿ ಕೆ. ರಾಮ ಕಾರಂತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಜುಂಗಾವು ಶ್ರೀಭಾರತೀ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ|ಡಿ.ಪಿ.ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ನಿವೃತ್ತ ಕೆ.ಎಸ್.ಇ.ಬಿ ಅಧಿಕಾರಿ ಡಿ. ಗೋಪಾಲಕೃಷ್ಣ ಭಟ್, ಕೇರಳ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಮಹಾಲಿಂಗೇಶ್ವರ ಭಟ್ ಎಂ.ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಶ್ರೀ ಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ ಭಟ್. ಎಂ ಶುಭ ಹಾರೈಸಿದರು. ಆಡಳಿತ ಮಂಡಳಿಯ ಶ್ಯಾಮರಾಜ ದೊಡ್ಡಮಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಭಾರತೀ ವಿದ್ಯಾಪೀಠದ ವರದಿಯನ್ನು ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ-ಮಾರ್ಗ ಹಾಗೂ ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವರದಿಯನ್ನು ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ವಾಚಿಸಿದರು.

ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ‘ಬೆಳಕು’, ‘ಜ್ಞಾನದೀಪ್ತಿ’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ‘ಬೆಳಗು’ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ವಿದ್ಯಾರ್ಥಿನಿಯರಾದ ವೈಶಾಲಿ ಸ್ವಾಗತಿಸಿ, ಶುಭಾ ಜಿ. ಯಾಜಿ ವಂದಿಸಿದರು. ವಿದ್ಯಾರ್ಥಿ ಶ್ರೀನಿಧಿ. ಎಸ್ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈವಿಧ್ಯಗಳ ಜೊತೆಗೆ ಶ್ರೀಭಾರತೀ ವಿದ್ಯಾಪೀಠ ದ ವಿದ್ಯಾರ್ಥಿಗಳಿಂದ ‘ಲವಣಾಸುರ ಕಾಳಗ’, ‘ಲವ-ಕುಶ’ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ‘ವೀರಮಣಿ ಕಾಳಗ’ ಯಕ್ಷಗಾನ ಬಯಲಾಟ ಜರಗಿತು.

Jan 19, 2013

ನಾಳೆ, ಶಾಲಾ ವರ್ಧಂತ್ಯುತ್ಸವ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀ ಭಾರತೀ ಸಮೂಹ ವಿದ್ಯಾ ಸಂಸ್ಥೆಗಳ ವರ್ಧಂತ್ಯುತ್ಸವವು ನಾಳೆ, ದಿನಾಂಕ ೨೦.೦೧.೨೦೧೩ ಭಾನುವಾರ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ ೯.೩೦ಕ್ಕೆ ಮಂಗಳೂರು ಎನ್.ಎಂ.ಪಿ.ಟಿ ಯ ನಿವೃತ್ತ ಅಧಿಕಾರಿ ಶ್ರೀ ಕೆ. ರಾಮ ಕಾರಂತ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
 ದಿನವಿಡೀ ವಿದ್ಯಾರ್ಥಿಗಳಿಂದ ನೃತ್ಯ, ಯಕ್ಷಗಾನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ೪ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ| ಡಿ.ಪಿ.ಭಟ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ನಿವೃತ್ತ ಕೆ.ಎಸ್.ಇ.ಬಿ ಅಧಿಕಾರಿ ಶ್ರೀ ಡಿ. ಗೋಪಾಲಕೃಷ್ಣ ಭಟ್, ಶಾಂತಿಪಳ್ಳದ ಶ್ರೀ ಹಿಲರಿ ಡಿ’ ಸೋಜ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕರುಣಾಕರ ಅನಂತಪುರ, ಕೇರಳ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಮಹಾಲಿಂಗೇಶ್ವರ ಭಟ್ ಎಂ.ವಿ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ನೀವೂ ಬನ್ನಿ...

Jan 7, 2013

ಮುಜುಂಗಾವಿನಲ್ಲಿ ಶ್ರೀ ಸಂಸ್ಥಾನ...

02.01.2013 ಬುಧವಾರ ನಮ್ಮ ವಿದ್ಯಾಪೀಠಕ್ಕೆ ಆಗಮಿಸಿದ ಶ್ರೀ ಸಂಸ್ಥಾನ ಗೋಕರ್ಣದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರನ್ನು ಶಾಲಾ ಸೇವಾ ಸಮಿತಿ ಅಧ್ಯಕ್ಷ ಡಾ| ಡಿ.ಪಿ.ಭಟ್ ಮತ್ತು ವಿದ್ಯಾರ್ಥಿಗಳು ಸ್ವಾಗತಿಸಿದರು. ಶ್ರೀ ಗುರುಗಳು ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆಶೀರ್ವಚನವನ್ನಿತ್ತು ಫಲ ಮಂತ್ರಾಕ್ಷತೆಗಳನ್ನು ನೀಡಿದರು.

Dec 10, 2012

ಕ್ರೀಡೋತ್ಸವ 2012

ನಮ್ಮ ವಿದ್ಯಾಪೀಠದಲ್ಲಿ ಮೊನ್ನೆ 08.12.2012 ಶನಿವಾರ ಜರಗಿದ ‘ಕ್ರೀಡೋತ್ಸವ’ವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ರಸಾದ್ ಕುಂಚಿನಡ್ಕ ಧ್ವಜಾರೋಹಣಗೈದು ಉದ್ಘಾಟಿಸಿದರು. ವಿದ್ಯಾರ್ಥಿಗಳು ಮತ್ತು ಪೂರ್ವ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು. ಬೆಳಗ್ಗೆ 10 ಗಂಟೆಗೆ ಧ್ವಜವಂದನೆಯೊಂದಿಗೆ ಆರಂಭವಾದ ಸ್ಪರ್ಧೆಗಳು ಸಾಯಂಕಾಲ 4 ಗಂಟೆಯ ತನಕ ಜರಗಿದವು.

Dec 4, 2012

ಎಸ್.ಆರ್. ಪಾಟೀಲ್ ಭೇಟಿ

ಕರ್ನಾಟಕ ರಾಜ್ಯ ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಇವರು ೦೧.೧೨.೨೦೧೨ ಶನಿವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠವನ್ನು ಸಂದರ್ಶಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಇವರನ್ನು ಶಾಲು ಹೊದೆಸಿ ಸ್ವಾಗತಿಸಿದರು. ನಂತರ ಅವರು ಶಾಲಾ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಜರಗಿದ ‘ಜಾನಪದ ಸಂಧ್ಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕರಾಟೆ ಪಂದ್ಯಾಟದಲ್ಲಿ ಪ್ರಶಸ್ತಿ

24.11.2012 ಮತ್ತು 25.11.2012 ರಂದು ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಜರಗಿದ ಅಂತರ್ ಜಿಲ್ಲಾ ಡೋಜೋ -ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಾದ ಆಶ್ರಿತ್ ನಾರಾಯಣ. ಕೆ, ಯಜ್ಞೇಶ, ವೈಶಾಕ್. ಎಸ್, ಮನೀಶ್.ಎ, ಆದಿತ್ಯ ಶರವಣ. ಎಚ್, ಪ್ರಶಾಂತ. ಎಂ, ಅನ್ವಿತ್ ಶರ್ಮ. ಎಚ್, ಸುಧನ್ವ ಶಂಕರ. ಎಂ, ಕಾರ್ತಿಕ್. ಎಸ್, ದೀಪಕ್ ಶ್ರೀವತ್ಸ. ಎಂ, ಸಂಕೇತ.ಎಂ, ಶ್ವೇತಾ. ಎಸ್, ಕಿರಣ್ ಮಹೇಶ. ಎಸ್, ನಿಕ್ಷಿತ್ ಎಸ್.ಶೆಟ್ಟಿ, ಸಚಿನ್.ಎ.ಎಸ್ ಪ್ರಶಸ್ತಿ ಗಳಿಸಿದ್ದಾರೆ.

Nov 16, 2012

ಮಕ್ಕಳ ದಿನಾಚರಣೆ - 2012

ಮೊನ್ನೆ 14 ರಂದು ನಮ್ಮ ವಿದ್ಯಾರ್ಥಿಗಳು ‘ಮಕ್ಕಳ ದಿನಾಚರಣೆ’ಯನ್ನು ಆಚರಿಸಿಕೊಂಡರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವೈಶಾಲಿ ಸ್ವಾಗತಿಸಿ, ಕಿರಣ್ ಮಹೇಶ್ ವಂದಿಸಿದರು. ನಿಕ್ಷಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವನ್ನು ವೈವಿಧ್ಯಮಯವಾಗಿ ವಿದ್ಯಾರ್ಥಿಗಳು ಆಚರಿಸಿಕೊಂಡರು.

Nov 13, 2012

ಅಡುಗೆ ತಯಾರಿ ಪ್ರಾತ್ಯಕ್ಷಿಕೆ

ನಿನ್ನೆ ನಮ್ಮ ಶಾಲೆಯಲ್ಲಿ ದೀಪಾವಳಿಯ ಸಡಗರ. ಶಾಲಾ ಸೇವಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಇವರ ಪತ್ನಿ ಶ್ರೀಮತಿ ಆಶಾ ಶಾರದಾ ಇವರಿಂದ ವಿದ್ಯಾರ್ಥಿನಿಯರಿಗೆ ಸಿಹಿ ತಿಂಡಿ ತಯಾರಿಯ ಬಗ್ಗೆ ತರಬೇತಿ. ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಿ ಸ್ವತ: ಮೈಸೂರು ಪಾಕು ತಯಾರಿಸಿ ಖುಷಿಪಟ್ಟುಕೊಂಡರು. ನಂತರ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು.

Oct 31, 2012

ಪ್ರತಿಭಾ ಭಾರತೀ - ಅಕ್ಟೋಬರ್ 2012

ಅಕ್ಟೋಬರ್ ತಿಂಗಳ ಪ್ರತಿಭಾ ಭಾರತೀ ಕಾರ್ಯಕ್ರಮವು ನಿನ್ನೆ, 30.10.2012 ಮಂಗಳವಾರ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕ ಕೇಶವ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವಿದ್ಯಾರ್ಥಿ ಕುಮಾರ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕವಿತಾ ಸ್ವಾಗತಿಸಿ ವೈಶಾಲಿ ವಂದಿಸಿದರು. ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ ಪ್ರಾರ್ಥನೆ ಸಲ್ಲಿಸಿದರು. ವಿದ್ಯಾರ್ಥಿಗಳಾದ ಶ್ರೀಜಾ ಹಾಗೂ ಲಕ್ಷ್ಮಣ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಜೊತೆಯಲ್ಲಿ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳೂ ಜರಗಿದವು.

Oct 24, 2012

ಶ್ರೀ ಶಾರದಾ ಪೂಜಾ - 2012

ನಮ್ಮ ವಿದ್ಯಾಪೀಠದಲ್ಲಿ  ಇಂದು (24.10.2012 ಬುಧವಾರ) ಜರಗಿದ ‘ಶ್ರೀ ಶಾರದಾ ಪೂಜಾ’ ಕಾರ್ಯಕ್ರಮದಲ್ಲಿ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ ಪೂಜೆ ನೆರವೇರಿಸಿ ಪುಟಾಣಿಗಳಿಗೆ ಅಕ್ಷರಾಭ್ಯಾಸ ನೆರವೇರಿಸಿದರು.

‘ಶಿಕ್ಷಕರ ವಿಶೇಷ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರ’

ನಮ್ಮ ವಿದ್ಯಾಪೀಠದಲ್ಲಿ 21.10.2012 ಭಾನುವಾರ ಜರಗಿದ ‘ಶಿಕ್ಷಕರ ವಿಶೇಷ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರ’ದಲ್ಲಿ ಬೆಂಗಳೂರಿನ ಶಿಕ್ಷಕ ಸುನಿಲ್ ಮತ್ತು ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ದರ್ಬೆ-ಮಾರ್ಗ ಶಿಕ್ಷಕರಿಗೆ ತರಬೇತಿ ನೀಡಿದರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು. ಭಾನುವಾರದ ವಿರಾಮವನ್ನು ಬದಿಗಿರಿಸಿ ಶಿಕ್ಷಕರು ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಬದಿಯಡ್ಕ ಭಾರತೀ ವಿದ್ಯಾಪೀಠದಿಂದಲೂ ಶಿಕ್ಷಕರು ಆಗಮಿಸಿದ್ದುದರಿಂದ ಕಾರ್ಯಕ್ರಮವು ಹೆಚ್ಚು ಮಹತ್ವ ಪಡೆದುಕೊಂಡಿತು.

Oct 4, 2012

ಸೇವನಾ ದಿನ

ಮೊನ್ನೆ ಗಾಂಧಿ ಜಯಂತಿಯನ್ನು ‘ಸೇವನಾ ದಿನ’ವಾಗಿ ಆಚರಿಸಿದೆವು. ಶಾಲಾ ವಿದ್ಯಾರ್ಥಿಗಳ ಜೊತೆ, ಅವರ ಹೆತ್ತವರು ಮತ್ತು ಶಿಕ್ಷಕರು ಸೇರಿ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಮಧ್ಯಾಹ್ನ ಭೋಜನವನ್ನು ತಯಾರಿಸಿ ಉಳಿದವರಿಗೆಲ್ಲ ಬಡಿಸಿದರು. ಅರ್ಥಪೂರ್ಣವಾಗಿ ಗಾಂಧೀ ಜಯಂತಿಯನ್ನು ಆಚರಿಸಿದ ಸಂತಸ ಸದ್ಯಕ್ಕೆ ನಮ್ಮನ್ನು ಆವರಿಸಿದೆ.

ಸೆಪ್ಟೆಂಬರ್ ತಿಂಗಳ ‘ಪ್ರತಿಭಾ ಭಾರತೀ’


ಕಳೆದ 28.09.2012 ಶುಕ್ರವಾರದಂದು ನಮ್ಮ ವಿದ್ಯಾಪೀಠದಲ್ಲಿ ಸೆಪ್ಟೆಂಬರ್ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮ ಜರಗಿತು. ಸಮಾಜ ಸೇವಕಿ, ನಿವೃತ್ತ ಶಿಕ್ಷಕಿ ಜಯಲಕ್ಷ್ಮಿ ಕಾರಂತ್ ವಿಶೇಷ ‘ರಸಪ್ರಶ್ನೆ’ ನಡೆಸುವ ಮೂಲಕ  ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ನಡೆಸಿದರು.ಶಾಲಾ ವಿದ್ಯಾರ್ಥಿ ಅರುಣ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ-ಮಾರ್ಗ ಉಪಸ್ಥಿತರಿದ್ದರು.

Sep 22, 2012

ಚಿನ್ಮಯಾ ವಿದ್ಯಾಲಯದಲ್ಲಿ ನಮಗೆ ಬಹುಮಾನ

ಕಾಸರಗೋಡು ಚಿನ್ಮಯಾ ವಿದ್ಯಾಲಯವು ಶ್ರೀ ಕೃಷ್ಣ ಜಯಂತಿ ಉತ್ಸವದ ಅಂಗವಾಗಿ 21.09.2012 ಶುಕ್ರವಾರ ಆಯೋಜಿಸಿದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಚಿನ್ಮಯಿ.ಎಂ, ಭೂಮಿಕಾ, ಕೃಷ್ಣಶೌರಿ. ಡಿ.ಎಸ್, ಶ್ರೀಶ, ಮನೀಷ.ಎ, ಚೈತ್ರಾ. ಎ.ಪಿ, ಗೌರೀಶ ವಿಶ್ವಾಮಿತ್ರ ಹಾಗೂ ಶ್ರೀಸುಧಾ.ಎಂ ಭಾಗವಹಿಸಿದರು. ಚಿನ್ಮಯಾ ವಿದ್ಯಾಲಯವು ನಡೆಸುವ ಸ್ಪರ್ಧೆಗಳಲ್ಲಿ ಗೀತಾ ಕಂಠಪಾಠ ಗಾಯನಕ್ಕೆ ಒಂದು ಪ್ರತ್ಯೇಕ ಶೈಲಿ ಇದೆ. ಆ ಶೈಲಿಯನ್ನು ಅಭ್ಯಾಸ ಮಾಡಿ ವಿದ್ಯಾರ್ಥಿಗಳು ಈ ಬಾರಿ ಭಾಗವಹಿಸಿದ್ದರಿಂದ ಪ್ರುಢಶಾಲಾ ವಿಭಾಗದಲ್ಲಿ ಗೌರೀಶ ವಿಶ್ವಾಮಿತ್ರ ಪ್ರಥಮ ಹಾಗೂ ಶ್ರೀಸುಧಾ.ಎಂ ತೃತೀಯ ಬಹುಮಾನ ಪಡೆದಿದ್ದಾರೆ.

Aug 30, 2012

ಓಣಂ ಆಚರಣೆ

ಓಣಂ ಹಬ್ಬವನ್ನು ಮೊನ್ನೆ 25, ಶನಿವಾರದಂದು ಶಾಲೆಯಲ್ಲಿ ಆಚರಿಸಿದೆವು. ವಿದ್ಯಾರ್ಥಿಗಳು ಎಲ್ಲ ತರಗತಿಗಳಲ್ಲೂ ಪ್ರತ್ಯೇಕ ಪ್ರತ್ಯೇಕವಾಗಿ ಆಕರ್ಷಕ ಹೂ ರಂಗವಲ್ಲಿಗಳನ್ನು ಬಿಡಿಸಿದರು. ಮಧ್ಯಾಹ್ನಕ್ಕೆ ‘ಓಣಂ ಊಟ’ ವನ್ನೂ ಆಯೋಜಿಸಲಾಯಿತು.

Aug 18, 2012

ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’


    “ಶಿಸ್ತು, ಸಂಯಮ ನಮ್ಮ ಜೀವನದ ಅವಿಭಾಜ್ಯ ಘಟಕಗಳಾಗಿರಬೇಕು. ಅವುಗಳು ಜೀವನದ ಪರಿಪೂರ್ಣತೆಯ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ. ಅಂತಹ ಮೌಲ್ಯಾಧಾರಿತ ಶಿಕ್ಷಣ ಇಲ್ಲಿ ದೊರೆಯುತ್ತಿರುವುದು ತುಂಬ ಸಂತಸ ತಂದಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಭದ್ರ ತಳಪಾಯವನ್ನು ಕಟ್ಟಿಕೊಡಲಿದೆ" ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಸ್.ವೆಂಕಟ್ರಮಣ ಭಟ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮ ಮತ್ತು ರಾಮಾಯಣ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಸಚಿನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಶ್ರೀಜಾ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿದರು. ರೇಶ್ಮಾ. ಆರ್ ಮತ್ತು ಕುಮಾರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

Aug 15, 2012

ಧ್ವನಿ ವರ್ಧಕ ಮತ್ತು ಆಟೋಟ ಸಾಮಗ್ರಿಗಳ ಕೊಡುಗೆ

ವಿದ್ಯಾಪೀಠದ ಪೂರ್ವ ವಿದ್ಯಾರ್ಥಿ, ಶಾಲಾ ನಾಯಕನ ಕರ್ತವ್ಯವನ್ನೂ ಕಳೆದ ವರ್ಷ ಸಕ್ಷಮವಾಗಿ ನಿರ್ವಹಿಸಿದ್ದ ಸುಹಾಸ್ ಜಿ.ಕಾಕತ್ಕರ್ ಅವರ ತಂದೆ ಬೆಂಗಳೂರಿನ ಗೋಪಾಲ್. ಜಿ.ಕಾಕತ್ಕರ್ ಶಾಲಾ ವಿದ್ಯಾರ್ಥಿಗಳಿಗಾಗಿ ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಆಟೋಟ ಸಾಮಗ್ರಿಗಳು ಮತ್ತು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಧ್ವನಿವರ್ಧಕವನ್ನು ಇಂದು ಕೊಡುಗೆಯಾಗಿ ನೀಡಿದ್ದಾರೆ. ಶಾಲಾ ಸೇವಾ ಸಮಿತಿ ಅಧ್ಯಕ್ಷ ಡಾ|ಡಿ.ಪಿ.ಭಟ್ ಈ ಕೊಡುಗೆಗಳನ್ನು ಸ್ವೀಕರಿಸಿದರು.

ಸ್ವಾತಂತ್ರ್ಯ ದಿನಾಚರಣೆ

“ ಹಿರಿಯರ ತ್ಯಾಗ, ಬಲಿದಾನಗಳಿಂದ ಭಾರತವು ಸ್ವಾತಂತ್ರ್ಯ ಗಳಿಸಿತು. ಈ ಸಂಸ್ಥೆಯಲ್ಲಿಯೂ ವಿದ್ಯಾರ್ಥಿಗಳಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿರುವುದನ್ನು ನಾನು ಕಂಡಿದ್ದೇನೆ. ಆದ್ದರಿಂದ ಸ್ವಾತಂತ್ರ್ಯದ ಮಹತ್ವ ನಿಮಗೆ ತಿಳಿದಿದೆ. ಅಂತಹ ಸ್ವಾತಂತ್ರ್ಯವನ್ನು ಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸ್ವಾತಂತ್ರ್ಯ ದೊರೆತ ಸಂಭ್ರಮದ ನೆನಪಿನ ಈ ಸಂದರ್ಭದಲ್ಲಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಯ ನಾಯಕರನ್ನು ಗೌರವಿಸುವುದು ನಮ್ಮ ಕರ್ತವ್ಯ" ಎಂದು ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಭಿಪ್ರಾಯಪಟ್ಟರು. ಅವರು ಇಂದು ಶ್ರೀ ಭಾರತೀ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಶಾಲಾ ಸೇವಾ ಸಮಿತಿ ಅಧ್ಯಕ್ಷ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಗೋಪಾಲ್.ಜಿ.ಕಾಕತ್ಕರ್, ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶ್ರೀ ಭಾರತೀ ಸಂಸ್ಕೃತ ಮಹಾ ವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿ ಶಿಕ್ಷಕ ಕಿಶನ್‌ರಾಜ್ ವಂದಿಸಿದರು. ವಿದ್ಯಾರ್ಥಿನಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.

Aug 10, 2012

ಶ್ರೀಕೃಷ್ಣ ಜಯಂತಿ

“ಕೃಷ್ಣನ ಲೀಲೆಗಳು ಸಮಾಜದ ಪ್ರಗತಿಗೆ ಕಾರಣವಾಗಿದೆ, ಧರ್ಮದ ಪುನರುತ್ಥಾನ ಅವನು ನಡೆಸಿದ ಮಹಾನ್ ಕಾರ್ಯ.  ಶ್ರೀಕೃಷ್ಣನ ಜನ್ಮ ದಿನದ ಆಚರಣೆ ವಿದ್ಯಾರ್ಥಿಗಳಿಗೆ ಅವನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೆರವಾಗುವುದು" ಎಂದು ಕೆ.ವೆಂಕಟ್ರಮಣ ಭಟ್, ಕುದ್ರೆಪ್ಪಾಡಿ ಹೇಳಿದರು. ಅವರು 09.08.2012 ಗುರುವಾರ ವಿದ್ಯಾಪೀಠದಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ವಿದ್ಯಾಸಂಸ್ಥೆಗಳ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶ್ರೀ ಭಾರತೀ ವಿದ್ಯಾಪೀಠ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸ್ಮಿತಾ ಸ್ವಾಗತಿಸಿ, ಗಾಯತ್ರಿ.ಎಸ್.ಕಾರಂತ್ ವಂದಿಸಿದರು. ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ ಪ್ರಾರ್ಥಿಸಿದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಮುದ್ದುಕೃಷ್ಣ ವೇಷ ಪ್ರದರ್ಶನ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ರಕ್ಷಾ ಬಂಧನ

ಕೇರಳದಲ್ಲಿ ನಡೆದ ಹರತಾಳ ಇತ್ಯಾದಿಗಳ ಕಾರಣದಿಂದಾಗಿ ಮುಂದೂಡಲ್ಪಟ್ಟ ‘ರಕ್ಷಾ ಬಂಧನ’ ಕಾರ್ಯಕ್ರಮವು ನಮ್ಮ ವಿದ್ಯಾಪೀಠದಲ್ಲಿ 06.08.2012 ಸೋಮವಾರ ಜರಗಿತು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪರಸ್ಪರ ರಾಖಿಗಳನ್ನು ಕಟ್ಟಿ ಸಹೋದರತೆಯನ್ನು ಮೆರೆದರು.

ಮಾತೃಮಂಡಳಿ

26.07.2012 ಗುರುವಾರ ಜರಗಿದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ನೂತನವಾಗಿ ಮಾತೃ ಮಂಡಳಿಯನ್ನು ರೂಪಿಸಲಾಯಿತು. ಪ್ರಥಮ ಮಾತೃಮಂಡಳಿ ಸಮಿತಿಯ ಅಧ್ಯಕ್ಷರನ್ನಾಗಿ ಕಮಲಾಕ್ಷಿ ಸೂರಂಬೈಲು ಅವರನ್ನು ಆರಿಸಲಾಯಿತು. ಉಪಾಧ್ಯಕ್ಷರನ್ನಾಗಿ ಮಾಧುರಿ ನಾಯ್ಕಾಪು ಮತ್ತು ವೀಣಾ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳಾಗಿ ಶಿಕ್ಷಕಿ ಚಿತ್ರಾ ಸರಸ್ವತಿ.ಕೆ ಇವರಿಗೆ ಜವಾಬ್ದಾರಿ ನೀಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಶಾ ಕುಳ, ಉಮಾಶಂಕರಿ.ಕೆ, ಶಾರದಾ, ಶ್ರೀದೇವಿ, ಯಮುನಾ, ಚಿತ್ರಾ ನಾಯ್ಕಾಪು, ಮಮತಾ ನಂದಗೋಕುಲ, ಶೋಭಾ ನಾಯ್ಕಾಪು, ನಾಗವೇಣಿ ಹಾಗೂ ವಿದ್ಯಾಪೀಠದ ಶಿಕ್ಷಕಿಯರನ್ನು ಆಯ್ಕೆ ಮಾಡಲಾಯಿತು.

ರಕ್ಷಕ ಶಿಕ್ಷಕ ಸಂಘ ಮಹಾಸಭೆ

ನಮ್ಮ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು 26.07.2012 ಗುರುವಾರ ಜರಗಿತು. ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ವರದಿ ವಾಚಿಸಿದರು. ರಕ್ಷಕ ಶಿಕ್ಷಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು. ಸಂಘದ ನೂತನ ಅಧ್ಯಕ್ಷರನ್ನಾಗಿ ಎಂ.ಚಂದ್ರಶೇಖರ ಭಟ್, ಬೆಜ್ಪೆ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ನೂತನ ಸಮಿತಿಯ ಉಪಾಧ್ಯಕ್ಷರನ್ನಾಗಿ ಎಚ್.ಶಂಕರನಾರಾಯಣ ಭಟ್ ಎಡನಾಡು, ಚಿತ್ರಾ ನಾಯ್ಕಾಪು ಇವರನ್ನು ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಎ.ಕೃಷ್ಣ ಭಟ್ ಅಮ್ಮಂಕಲ್ಲು, ಸುಬ್ರಾಯ ಹೇರಳ, ಡಿ.ಕೃಷ್ಣಮೂರ್ತಿ ಪಾಡಿ, ಪುರುಷೋತ್ತಮ ಆಚಾರ್ಯ ಸೂರಂಬೈಲು, ಮಮತಾ ನಂದಗೋಕುಲ, ಕಮಲಾಕ್ಷಿ ಸೂರಂಬೈಲು, ಶೋಭಾ ನಾಯ್ಕಾಪು, ನಾಗವೇಣಿ ಯವರ ಜೊತೆ ಅಧ್ಯಾಪಕ ವೃಂದವನ್ನು ಆಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳಾಗಿ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ಅವರನ್ನು ಆರಿಸಲಾಯಿತು.