Jan 29, 2011

ವಾರ್ಷಿಕ ವರದಿ:-೨೦೧೦-೧೧

ನಿನ್ನೆ ನಮ್ಮ ಸಂಸ್ಥೆಗಳ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರಗಿತು. ಸಂಸ್ಥೆಯ ವಾರ್ಷಿಕ ವರದಿಯನ್ನು ಇಲ್ಲಿ ನೀಡಿದ್ದೇವೆ. ಒಮ್ಮೆ ಗಮನ ಹರಿಸಿ, ನಿಮ್ಮ ಸಲಹೆ ಸೂಚನೆಗಳನ್ನು ನೀಡಿ. ಕಾರ್ಯಕ್ರಮದ ಫೋಟೋ, ವರದಿಗಳ ಜೊತೆ ಮತ್ತೆ ಬರುತ್ತೇವೆ.

      ||ಹರೇರಾಮ||
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ
ಶ್ರೀ ಸಂಸ್ಥಾನ ಗೋಕರ್ಣ-ಶ್ರೀರಾಮಚಂದ್ರಾಪುರಮಠ
ಶ್ರೀ ಭಾರತೀ ವಿದ್ಯಾಪೀಠ, ಮುಜುಂಗಾವು.
ಎಡನಾಡು-ಕುಂಬಳೆ, ಕಾಸರಗೋಡು-೬೭೧೩೨೧


ಪರಮಪೂಜ್ಯ ಶ್ರೀಗುರುಗಳ ದಿವ್ಯಚರಣಾರವಿಂದಗಳಿಗೆ ಮನಸಾ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ, ಸನಿಹಸ್ಥಿತನಾದ ಪಾರ್ಥಸಾರಥಿಯನ್ನು ಸ್ಮರಿಸುತ್ತಾ, ವೇದಿಕೆಯಲ್ಲಿರುವ ಗಣ್ಯರಿಗೆ ಹಾಗೂ ಸಭೆಯಲ್ಲಿ ಆಸೀನರಾದ ಎಲ್ಲಾ ಸಹೃದಯ ಬಂಧುಗಳಿಗೆ ವಂದಿಸಿ, ಶ್ರೀ ಭಾರತೀ ವಿದ್ಯಾಪೀಠದ ವಾರ್ಷಿಕ ವರದಿಯನ್ನು ತಮ್ಮ ಮುಂದಿಡಲು ಸಂತಸಪಡುತ್ತೇನೆ.

ಈ ಶೈಕ್ಷಣಿಕ ವರ್ಷದಲ್ಲಿ ೯ನೇ ತರಗತಿಯನ್ನು ಪ್ರಾರಂಭಿಸಲಾಗಿದ್ದು, ಶಿಶುಮಂದಿರದಿಂದ ೯ನೇ ತರಗತಿಯವರೆಗೆ ಒಟ್ಟು ೧೬೪ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ೧೧ಜನ ಅಧ್ಯಾಪಕರು, ಒಬ್ಬರು ಅಧ್ಯಾಪಕೇತರ ಮತ್ತು ಮುಖ್ಯೋಪಾಧ್ಯಾಯರು ಪೂರ್ಣವಾಗಿಯೂ, ಸಂಗೀತದ ಅಧ್ಯಾಪಿಕೆ, ನೃತ್ಯದ ಅಧ್ಯಾಪಿಕೆ, ಯೋಗ ಮತ್ತು ಚಿತ್ರಕಲಾ ಅಧ್ಯಾಪಕರು ಅರೆಕಾಲಿಕವಾಗಿಯೂ ವಿದ್ಯಾಲಯದಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ.

ಕೇಂದ್ರ ಮಾನವಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್‍ನ ನೇರ ಅಂಗೀಕಾರವನ್ನು ಪಡೆದ ಶ್ರೀ ಭಾರತೀ ವಿದ್ಯಾಪೀಠ, ಬದಿಯಡ್ಕ ಇದರ ಪ್ರಥಮ ಅಂಗಸಂಸ್ಥೆಯಾಗಿ ನಮ್ಮ ವಿದ್ಯಾಲಯವು ಮಾನ್ಯತೆಯನ್ನು ಪಡೆದಿದೆ.

ವಿದ್ಯಾಲಯದಲ್ಲಿ ಶಿಶುಮಂದಿರದಿಂದಲೇ ಕನ್ನಡ ಮತ್ತು ಆಂಗ್ಲಭಾಷೆಯ ಪರಿಚಯವನ್ನು ಮಾಡಿಕೊಡುತ್ತಿದ್ದು ೨ನೇ ತರಗತಿಯಿಂದ ಸಂಸ್ಕೃತ, ೩ನೇ ತರಗತಿಯಿಂದ ಹಿಂದಿಭಾಷೆಯನ್ನು ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ದೃಷ್ಠಿಯಲ್ಲಿಟ್ಟು ನೈತಿಕ, ಯೋಗ, ನೃತ್ಯ, ಸಂಗೀತ, ಚಿತ್ರಕಲೆ, ಯಕ್ಷಗಾನವೇ ಮೊದಲಾದ ಶಿಕ್ಷಣವನ್ನು ಅನುಷ್ಠಾನಗೊಳಿಸಲಾಗಿದೆ. ೫ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುತ್ತಿದೆ. ಶಿಶುಮಂದಿರದಿಂದ ೪ನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಶಿಕ್ಷಣವನ್ನು ನೀಡಬೇಕೆನ್ನುವ ಉದ್ದೇಶದಿಂದ ಕನ್ನಡಮಾಧ್ಯಮ ಮತ್ತು ೫ ಮತ್ತು ಮೇಲ್ಪಟ್ಟ ತರಗತಿಗಳು ಆಂಗ್ಲಮಾಧ್ಯಮದಲ್ಲಿ ನಡೆಸಲಾಗುತ್ತಿದೆ.

ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮಗಳು:

ಕಳೆದ ಫೆಬ್ರವರಿ ತಿಂಗಳ ೨೬ ಮತ್ತು ೨೭ ಶುಕ್ರವಾರ ಮತ್ತು ಶನಿವಾರಗಳಂದು ಸಮೂಹವಿದ್ಯಾಸಂಸ್ಥೆಗಳಲ್ಲಿ ಮಹಾವಿದ್ಯಾಲಯದ ದಶಮಾನೋತ್ಸವ ಮತ್ತು ವಿದ್ಯಾಪೀಠದ ವರ್ಧಂತ್ಯುತ್ಸವವು ಶ್ರೀ ಗುರುಗಳ ದಿವ್ಯಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಸಭಾಕಾರ್ಯಕ್ರಮಗಳಲ್ಲಿ ಜಿಲ್ಲೆಯ, ಹೊರರಾಜ್ಯಗಳ ಗಣ್ಯ ಅತಿಥಿಗಳು ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ದಿನಾಂಕ ೨೬ರಂದು ಸಾಯಂಕಾಲ ೫ಗಂಟೆಗೆ ಶ್ರೀಗುರುಗಳು ವಿದ್ಯಾಲಯಕ್ಕೆ ಆಗಮಿಸಿ, ರಾತ್ರಿ ಶ್ರೀರಾಮದೇವರಿಗೆ ಪೂಜೆಯನ್ನು ನೆರವೇರಿಸಿದರು. ದಿನಾಂಕ ೨೭ರಂದು ಬೆಳಗ್ಗೆ ಶ್ರೀಶ್ರೀಗಳಿಂದ ರಾಮದೇವರ ಪೂಜೆ, ಶ್ರೀಗುರುಗಳಿಗೆ ಭಿಕ್ಷಾಸೇವೆ, ಪಾದುಕಾಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಸಾಯಂಕಾಲ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀಗುರುಗಳು ದಿವ್ಯಸಾನ್ನಿಧ್ಯವನ್ನು ವಹಿಸಿದರು. ಈ ಸಂದರ್ಭದಲ್ಲಿ ಶ್ರೀಗುರುಗಳಿಂದ ವಿದ್ಯಾಸಂಸ್ಥೆಗಳ ಹಸ್ತಪ್ರತಿ ಬಿಡುಗಡೆ ಮತ್ತು ವಿದ್ಯಾಲಯಮಟ್ಟದಲ್ಲಿ ನಡೆದ ಬೌದ್ಧಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಶೀರ್ಮಂತ್ರಾಕ್ಷತೆಯನ್ನು ನೀಡಿ ಅನುಗ್ರಹಿಸಿದರು. ವಿದ್ಯಾಲಯದ ಚಟುವಟಿಕೆಗಳ ಬಗ್ಗೆ ಶ್ರೀಶ್ರೀಗಳು ತಮ್ಮ ಆಶೀರ್ವಚನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಗುರುಗಳು ಆಗಮಿಸಿದ ಎಲ್ಲರಿಗೂ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.

ದಿನಾಂಕ ೧೫-೦೩-೨೦೧೦ ನೇ ಸೋಮವಾರದಂದು ಕಳೆದ ಶೈಕ್ಷಣಿಕ ವರ್ಷದ ’ಜ್ಞಾನದೀಪ್ತಿ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು. ಹಿಂದಿಭಾಷೆಯ ಮುಖ್ಯ ಕಾರ್ಯಕ್ರಮದೊಂದಿಗೆ ಉಳಿದೆಲ್ಲಾ ವಿಷಯಗಳಿಗೂ ಪ್ರಾಧಾನ್ಯತೆಯನ್ನು ನೀಡಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಮಹಾಲಿಂಗಯ್ಯ, ಅಧಿಕಾರಿಮನೆ, ಎಡನಾಡು ಇವರು ಕಾರ್ಯಕ್ರಮವನ್ನು ಮೆಚ್ಚಿಕೊಂಡು ಶುಭಹಾರೈಸಿದರು.

ದಿನಾಂಕ ೧೬-೦೩-೨೦೧೦ನೇ ಮಂಗಳವಾರದಂದು ಚಾಂದ್ರಮಾನ ಯುಗಾದಿ ಪ್ರಯುಕ್ತ ಬೇವು-ಬೆಲ್ಲ ಹಂಚುವುದರ ಮೂಲಕ ಯುಗಾದಿಯನ್ನು ಆಚರಿಸಲಾಯಿತು. ಈ ದಿನ ನಮ್ಮ ವಿದ್ಯಾಲಯದ ಬ್ಲಾಗ್-ಪ್ರತಿಭಾಭಾರತಿಯನ್ನು ಶ್ರೀಗುರುಗಳು ತಮ್ಮ ದಿವ್ಯಹಸ್ತದಿಂದ ಗಿರಿನಗರದ ಶ್ರೀಮಠದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀಗುರುಗಳು ’ಬ್ಲಾಗ್’ನ್ನು ವೀಕ್ಷಿಸಿ ಮೆಚ್ಚಿಕೊಂಡು ಹರಸಿದರು.

ದಿನಾಂಕ ೩೧-೦೩-೨೦೧೦ ಬುಧವಾರದಂದು ೨೦೦೯-೧೦ನೇ ಸಾಲಿನ ಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭವನ್ನು ಪ್ರತಿಭಾಭಾರತೀ ಕಾರ್ಯಕ್ರಮ ನಡೆಸುವುದರ ಮೂಲಕ ನಡೆಸಲಾಯಿತು. ಅತಿಥಿಗಳಾಗಿ ಶ್ರೀಯುತ ಥೋಮಸ್ ಡಿ.ಸೋಜ(ಅಧ್ಯಕ್ಷರು, ಪುತ್ತಿಗೆ ಗ್ರಾಮಪಂಚಾಯತು) ಆಗಮಿಸಿ ವಿದ್ಯಾಲಯದ ಚಟುವಟಿಕೆಗಳನ್ನು ಮೆಚ್ಚಿಕೊಂಡರು.
೨೦೦೯-೧೦ನೇ ಶೈಕ್ಷಣಿಕ ವರ್ಷದಲ್ಲಿ ೨೧೯ ಶಾಲಾದಿನಗಳು ನಡೆದಿದ್ದು ಈ ಸಂದರ್ಭದಲ್ಲಿ ಗರಿಷ್ಠ ಹಾಜರಾತಿ(೨೧೯)ಯನ್ನು ಪಡೆದ ೧೮ ವಿದ್ಯಾರ್ಥಿಗಳನ್ನು ಅಗ್ರೇಸರ ಪ್ರಶಸ್ತಿಯನ್ನು ನೀಡಿ ಗುರುತಿಸಲಾಯಿತು.
ದಿನಾಂಕ ೧-೦೬-೨೦೧೦ನೇ ಮಂಗಳವಾರದಂದು ಪ್ರಸಕ್ತ ಶೈಕ್ಷಣಿಕ ವರ್ಷದ ಉದ್ಘಾಟನೆಯನ್ನು ಶ್ರೀಯುತ ಜಯಂತ ಪಾಟಾಳಿ ಸೀತಾಂಗೋಳಿ(ಉಪಾಧ್ಯಕ್ಷರು, ಪುತ್ತಿಗೆ ಗ್ರಾಮಪಂಚಾಯತು) ದೀಪ ಬೆಳಗುವುದರ ಮೂಲಕ ಚಾಲನೆಗೊಳಿಸಿದರು. ಈ ಸಂದರ್ಭದಲ್ಲಿ ಧರ್ಮತ್ತಡ್ಕ ದುರ್ಗಾಪರಮೇಶ್ವರೀ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ರಾಮಚಂದ್ರ ಭಟ್ ಉಳುವಾನ ಉಪಸ್ಥಿತರಿದ್ದು ಶುಭ ಹಾರೈಸಿದರು.

ದಿನಾಂಕ ೧೭-೦೭-೨೦೧೦ ಶನಿವಾರದಿಂದ ಕರ್ಕಾಟಕ ಮಾಸದಲ್ಲಿ ನಡೆಸುವ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಒಂದು ತಿಂಗಳ ಕಾಲ ಪ್ರಾರ್ಥನಾ ಅವಧಿಯ ನಂತರ ರಾಮಯಣ ವಾಚನ ಕಾರ್ಯಕ್ರಮವನ್ನೂ ನಡೆಸಲಾಯಿತು.
ದಿನಾಂಕ ೨೧-೦೭-೨೦೧೦ನೇ ಬುಧವಾರದಂದು ಶ್ರೀಗುರುಗಳ ಯೋಜನೆಯಾದ ವನಜೀವನಯಜ್ಞ ಕಾರ್ಯಕ್ರಮವನ್ನು ಗಿಡಗಳನ್ನು ನೆಡುವ ಮತ್ತು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ನಡೆಸಲಾಯಿತು. ಸಸಿಗಳನ್ನು ಪುತ್ತಿಗೆ ಗ್ರಾಮಪಂಚಾಯತು ವಿದ್ಯಾಲಯಕ್ಕೆ ಒದಗಿಸಿದ್ದು, ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಪುತ್ತಿಗೆ ಗ್ರಾಮಪಂಚಾಯತು ಉಪಾಧ್ಯಕ್ಷರಾದ ಶ್ರೀಯುತ ಜಯಂತ ಪಾಟಾಳಿ ಆಗಮಿಸಿ ಸಾಂಕೇತಿಕವಾಗಿ ಗಿಡ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ದಿನಾಂಕ ೨೬-೦೭-೨೦೧೦ನೇ ಸೋಮವಾರದಂದು ಗುರುಪೂರ್ಣಿಮೆಯ ನಿಮಿತ್ತ ಶ್ರೀಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಗುರುಹಿರಿಯರಿಗೆ ವಂದಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.
ದಿನಾಂಕ ೧೫-೦೮-೨೦೧೦ನೇ ರವಿವಾರದಂದು ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ವಿದ್ಯಾಲಯದಲ್ಲಿ ರಾಷ್ಟ್ರಧ್ವಜಾರೋಹಣವನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ದೇಶಭಕ್ತಿಗೀತೆ, ಭಾಷಣ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದರು.
ದಿನಾಂಕ ೨೦-೦೮-೨೦೧೦ನೇ ಶುಕ್ರವಾರದಂದು ಈ ಶೈಕ್ಷಣಿಕ ವರ್ಷದ ವಿಶೇಷ ಕಾರ್ಯಕ್ರಮವಾದ ’ಹಿರಿಯರೊಂದಿಗೆ ಮಾತುಕತೆ’ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಹಿರಿಯ ಅಭ್ಯಾಗತರಾಗಿ ಶ್ರೀಯುತ ಅಡ್ಕ ಗೋಪಾಲಕೃಷ್ಣ ಭಟ್ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ನಂಬಿಕೆ ಇತ್ಯಾದಿ ವಿಚಾರಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ದಿನಾಂಕ ೨೧-೦೮-೨೦೧೦ನೇ ಶನಿವಾರದಂದು ಓಣಂ ಹಬ್ಬದ ಸಲುವಾಗಿ ಹೂವಿನ ರಂಗವಲ್ಲಿ ಮತ್ತು ಓಣಂ ಹಬ್ಬದ ವಿಶೇಷ ಊಟವನ್ನು ನಡೆಸಲಾಯಿತು. ಈ ಕಾರ್ಯಕ್ರಮದೊಂದಿಗೆ ರಕ್ಷಾಬಂಧನ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಓಣಂ ಊಟದ ಬಗ್ಗೆ ರಕ್ಷಕರು ನಮ್ಮೊಂದಿಗೆ ಸಹಕರಿಸಿದ್ದರು.

ದಿನಾಂಕ ೧-೦೯-೨೦೧೦ನೇ ಬುಧವಾರದಂದು ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಮತ್ತು ಮುದ್ದುಕೃಷ್ಣವೇಷ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದಿನಾಂಕ ೭-೦೯-೨೦೧೦ನೇ ಮಂಗಳವಾರದಂದು ಶ್ರೀಕ್ಷೇತ್ರ ಗೋಕರ್ಣದ ಅಶೋಕವನದಲ್ಲಿ ಚಾತುರ್ಮಾಸ್ಯ ವ್ರತದಲ್ಲಿದ್ದ ಶ್ರೀಗುರುಗಳನ್ನು ಅಧ್ಯಾಪಕವೃಂದ ಭೇಟಿಮಾಡಿ ಶೈಕ್ಷಣಿಕ ಮಾರ್ಗದರ್ಶನದೊಂದಿಗೆ ಆಶೀರ್ಮಂತ್ರಾಕ್ಷತೆಯನ್ನೂ ಪಡೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀಗುರುಗಳು ವಿದ್ಯಾರ್ಥಿಗಳ ಪ್ರಗತಿಗೆ ಅಧ್ಯಾಪಕರು ಶೈಕ್ಷಣಿಕವಾಗಿ ನೀಡಬೇಕಾದ ಅಮೂಲ್ಯ ಮಾಹಿತಿಗಳನ್ನು ನೀಡಿದರು.

ದಿನಾಂಕ ೧೦-೦೯-೨೦೧೦ನೇ ಶುಕ್ರವಾರದಂದು ಗಣೇಶ ಚತುರ್ಥಿಯ ಅಂಗವಾಗಿ ವಿದ್ಯಾಸಂಸ್ಥೆಗಳಲ್ಲಿ ಗಣಪತಿ ಹವನವನ್ನು ನಡೆಸಲಾಯಿತು.

ದಿನಾಂಕ ೧೭-೧೦-೨೦೧೦ ರವಿವಾರದಂದು ವಿದ್ಯಾದಶಮಿ ಪ್ರಯುಕ್ತ ಶಾರದಾ ಪೂಜೆಯನ್ನು ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.

ದಿನಾಂಕ ೮-೧೧-೨೦೧೦ನೇ ಸೋಮವಾರದಿಂದ ೧೨-೧೧-೨೦೧೦ನೇ ಶುಕ್ರವಾರದವರೆಗೆ ಮೈತ್ರೇಯಿ ಗುರುಕುಲದ ಶ್ರದ್ಧಾಗಣದ ವಿದ್ಯಾರ್ಥಿನಿಯಾದ ಕುಮಾರಿ ಪಾರ್ವತಿ ಎಡಪ್ಪಾಡಿ ಇವಳು ಶಿಶುಮಂದಿರ, ೧ ಮತ್ತು ೨ನೇ ತರಗತಿ ವಿದ್ಯಾರ್ಥಿಗಳಿಗೆ ಬಾಲಗೋಕುಲ ಕಾರ್ಯಕ್ರಮವನ್ನು ನಡೆಸಿಕೊಟ್ಟಳು.

ದಿನಾಂಕ ೧೩-೧೨-೨೦೧೦ನೇ ಸೋಮವಾರದಿಂದ ವಿದ್ಯಾಲಯಮಟ್ಟದ ಬೌದ್ಧಿಕ ಸ್ಪರ್ಧೆಗಳನ್ನು ವಿವಿಧ ಹಂತಗಳಲ್ಲಿ ನಡೆಸಲಾಯಿತು. ಇದೇ ದಿನ ಮಧ್ಯಾಹ್ನ ೨-೩೦ರಿಂದ ಪಾಂಗಾಳ ಗೋಪಾಲಕೃಷ್ಣ ಶೆಣೈ ಇವರಿಂದ ವಿಶೇಷ ಜಾದೂ ಕಾರ್ಯಕ್ರಮವು ನಡೆಯಿತು.

ದಿನಾಂಕ ೭-೦೧-೨೦೧೧ನೇ ಶುಕ್ರವಾರ ಮತ್ತು ೮-೧೧-೨೦೧೧ನೇ ಶನಿವಾರಗಳಂದು ವಿದ್ಯಾಲಯ ಮಟ್ಟದ ಕ್ರೀಡೋತ್ಸವ ೨೦೧೦-೨೦೧೧ನ್ನು ನಡೆಸಲಾಯಿತು. ಕ್ರೀಡೋತ್ಸವಕ್ಕೆ   ಅತಿಥಿಗಳಾಗಿ ಶ್ರೀಯುತ ಶಂಕರಪ್ರಸಾದ ಕುಂಚಿನಡ್ಕ (ನಿವೃತ್ತ ಶಾರೀರಿಕ ಶಿಕ್ಷಕರು) ಆಗಮಿಸಿ ಕ್ರೀಡಾಕೂತಕ್ಕೆ ಚಾಲನೆಯನ್ನು ನೀಡಿ, ಸೂಕ್ತ ಮಾರ್ಗದರ್ಶನ ನೀಡಿದರು.

ಶೈಕ್ಷಣಿಕಪ್ರವಾಸ
ದಿನಾಂಕ ೧೯-೭-೨೦೧೦ನೇ ಸೋಮವಾರದಂದು ೭, ೮ ಮತ್ತು೯ನೇ ತರಗತಿ ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಯನ್ವಯ ಕೃಷಿಕ್ಷೇತ್ರ ಸಂದರ್ಶನಕ್ಕೆ ಶ್ರೀಯುತ ಚಂದ್ರಶೇಖರ ಭಟ್ಟ ಎಯ್ಯೂರು ಇವರ ಗದ್ದೆಕೃಷಿ ವೀಕ್ಷಣೆಗೆ ಕರೆದೊಯ್ಯಲಾಯಿತು. ದಿನಾಂಕ ೨೧-೭-೨೦೧೦ನೇ ಬುಧವಾರದಂದು ೫ ಮತ್ತು ೬ನೇ ತರಗತಿ ವಿದ್ಯಾರ್ಥಿಗಳನ್ನು ಸನಿಹದ ಶ್ರೀಯುತ ಉಮೇಶ್ ಮುಜುಂಗಾವು ಇವರ ಕೃಷಿಕ್ಷೇತ್ರಕ್ಕೆ ಕರೆದೊಯ್ಯಲಾಯಿತು. ವಿದ್ಯಾರ್ಥಿಗಳು ಈ ಪ್ರವಾಸದಲ್ಲಿ ಉತ್ಸಾಹದಿಂದ ಭಾಗವಹಿಸಿ ಮಾಹಿತಿಗಳನ್ನು ಪಡೆದುಕೊಂಡರು.

ಪರೀಕ್ಷೆಗಳು-ಸ್ಪರ್ಧೆಗಳು-ಮತ್ತು ಪ್ರಶಸ್ತಿಗಳು
ದಿನಾಂಕ ೨೪-೦೭-೨೦೧೦ನೇ ಶನಿವಾರದಂದು ಕೊಡ್ಲಮೊಗರು ವಾಣೀವಿಜಯ ವಿದ್ಯಾಲಂiiದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಹಮ್ಮಿಕೊಂಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾಲಯದ ೧೪ ವಿದ್ಯಾರ್ಥಿಗಳು ಭಾಗವಹಿಸಿ, ಉತ್ತಮ ನಿರ್ವಹಣೆ ತೋರಿದರು. ಈ ಸ್ಪರ್ಧೆಗಳಲ್ಲಿ U.P ವಿಭಾಗದ ಸಮೂಹಗಾನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವು ನಮ್ಮ ವಿದ್ಯಾಲಯಕ್ಕೆ ದೊರೆತಿರುತ್ತದೆ.

ದಿನಾಂಕ ೯-೧೦-೨೦೧೦ನೇ ಶನಿವಾರದಂದು ಚಿನ್ಮಯ ವಿದ್ಯಾಲಯ ಕಾಸರಗೋಡು ಇವರು ಜಿಲ್ಲಾಮಟ್ಟದಲ್ಲಿ ಆಯೋಜಿಸಿದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ನಮ್ಮ ವಿದ್ಯಾಲಯದ ೭ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ಶಾಸ್ತ್ರಪ್ರತಿಭಾ ಪರಿಷತ್ತು ಕೇರಳ ಘಟಕ ಇದರ ವತಿಯಿಂದ ದಿನಾಂಕ ೧೩-೧೧-೨೦೧೦ನೇ ಶನಿವಾರದಂದು ಜಿಲ್ಲಾ ಮಟ್ಟದಲ್ಲಿ ನಡೆಸಿದ ವಿಜ್ಞಾನ ಪರೀಕ್ಷೆಯಲ್ಲಿ ವಿದ್ಯಾಲಯದ ೩೯ ವಿದ್ಯಾರ್ಥಿಗಳು ಭಾಗವಹಿಸಿ ೨೭ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ದ್ವಿತೀಯ ಹಂತದ ಪರೀಕ್ಷೆಯಲ್ಲಿ ಭಾಗವಹಿಸಿರುತ್ತಾರೆ.

ತರಬೇತಿಗಳು ಮತ್ತು ಉಪನ್ಯಾಸಗಳು

ದಿನಾಂಕ ೪-೦೫-೨೦೧೦ ರಿಂದ ೬-೦೫-೨೦೧೦ರವರೆಗೆ ಮೂರು ದಿನಗಳ ಕಾಲ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು ಮತ್ತು ಬದಿಯಡ್ಕ ಜಂಟಿಯಾಗಿ ಅಧ್ಯಾಪಕರಿಗೆ ತರಬೇತಿ ಶಿಬಿರವನ್ನು ಆಯೋಜಿಸಿ ಪಾಠ್ಯಕ್ರಮಗಳ ತರಬೇತಿಯನ್ನು ನೀಡಲಾಯಿತು.

ದಿನಾಂಕ ೧೭-೦೫-೨೦೧೦ರಿಂದ ಹತ್ತು ದಿನಗಳ ಕಾಲ ೫ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಿಶೇಷ ಇಂಗ್ಲೀಷ್ ತರಬೇತಿ ಮತ್ತು ಶಾರೀರಿಕ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಚಂದ್ರಪ್ರಭಾ ಬಿ ರಾವ್ ಮುಂಬೈ ಮತ್ತು ಶ್ರೀಯುತ ಶಂಕರಪ್ರಸಾದ್ ಕುಂಚಿನಡ್ಕ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ದಿನಾಂಕ ೨೨-೦೧-೨೦೧೧ನೇ ಶನಿವಾರದಂದು ಶ್ರೀಯುತ ಗಣಪತಿ ಭಟ್ ಮಧುರಕಾನನ (ಭೂಗರ್ಭಶಾಸ್ತ್ರಜ್ಞರು) ಇವರಿಂದ ೭, ೮ ಮತ್ತು ೯ನೇ ತರಗತಿ ವಿದ್ಯಾರ್ಥಿಗಳಿಗೆ ಭೂಮಿಯ ಶಿಲಾರಚನೆ, ಅಂತರ್ಜಲದಂತಹ ವಿಶೇಷ ಮಾಹಿತಿ ಕಾರ್ಯಕ್ರಮ ನಡೆಯಿತು.

ಈ ಶೈಕ್ಷಣಿಕ ವರ್ಷದ ವಿಶೇಷ ಕಾರ್ಯಕ್ರಮವಾದ ’ವೈದ್ಯರ ಮಾತುಗಳು’ ಪ್ರಥಮ ಕಾರ್ಯಕ್ರಮವನ್ನು ದಿನಾಂಕ ೧೨-೦೮-೨೦೧೦ನೇ ಗುರುವಾರದಂದು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಡಾ|| ಮಾಲತೀ ಪ್ರಕಾಶ್ ನೀರ್ಚಾಲ್ ಇವರು ಆಗಮಿಸಿ ಶುಚಿತ್ವ, ಆರೋಗ್ಯ ಮತ್ತು ಜೀವನ ಎಂಬ ವಿಷಯಗಳ  ಬಗ್ಗೆ ಉಪನ್ಯಾಸವನ್ನು ನೀಡಿದರು.
ದಿನಾಂಕ ೨೪-೦೯-೨೦೧೦ನೇ ಶುಕ್ರವಾರದಂದು ಇಂಡಿಯನ್ ಡೆಂಟಲ್ ಎಸೋಸಿಯೇಷನ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಡಾ|| ಡಿ.ಪಿ ಭಟ್ ಕುಂಬಳೆ ಇವರು ದಂತ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ನೀಡಿದರು.

ಈ ಶೈಕ್ಷಣಿಕ ವರ್ಷದ ಓಣಂ ವಿರಾಮದಲ್ಲಿ ೧೦ ದಿನಗಳ ಕಾಲ ವಿದ್ಯಾರ್ಥಿಗಳಿಗೆ ’ರಂಗಶಿಕ್ಷಣ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ರಂಗನಿರ್ದೇಶಕರಾದ ಶ್ರೀಯೂತ ಮೂರ್ತಿ ದೇರಾಜೆ ಮತ್ತು ಬಳಗದವರು ವಿದ್ಯಾರ್ಥಿಗಳಿಗೆ ರಂಗ ತರಬೇತಿಯನ್ನು ನೀಡಿದರು.

ವಿದ್ಯಾರ್ಥಿವೇತನ ಮತ್ತು ವಿದ್ಯಾನಿಧಿ ಯೋಜನೆ
ಕೇರಳ ಸರಕಾರದಿಂದ ಬೀಡಿ ಕಾರ್ಮಿಕರ ಮಕ್ಕಳಿಗೆ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿವೇತನ ನಮ್ಮ ವಿದ್ಯಾಲಯದಲ್ಲಿಯೂ ದೊರೆಯುತ್ತಿದ್ದು ೨೦೧೦-೧೧ನೇ ಶೈಕ್ಷಣಿಕ ವರ್ಷದಲ್ಲಿ ದೊರಕಿದ ಮೊತ್ತವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.

ವಿದ್ಯಾಸಂಸ್ಥೆಯ ಶೈಕ್ಷಣಿಕ ಖರ್ಚುವೆಚ್ಚಗಳನ್ನು ಸರಿದೂಗಿಸಲು ’ವಿದ್ಯಾನಿಧಿ ಯೋಜನೆ’ ಎನ್ನುವ ಹೆಸರಿನ ದೂರಗಾಮೀ ಯೋಜನೆಯನ್ನು ರೂಪೀಕರಿಸಿದ್ದು ಈ ಯೋಜನೆಗೆ ವಾರ್ಷಿಕ ೫೦೦೦/- ರೂ.ಗಳನ್ನು ನಿಗದಿಪಡಿಸಲಾಗಿದೆ. ಹಣವನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಖರ್ಚುವೆಚ್ಚಗಳಿಗೆ ಅಳವಡಿಸಿಕೊಂಡು ಅಂತಹ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇದನ್ನು ವಿನಿಯೋಗಿಸಲಾಗುವುದು. ಈ ಯೋಜನೆಯಲ್ಲಿ ಇದುವರೆಗೆ ೧೯ ಜನ ವಿದ್ಯಾಭಿಮಾನಿಗಳು ನಮ್ಮೊಂದಿಗೆ ಕೈಜೋಡಿಸಿದ್ದು, ವಿದ್ಯಾಭಿಮಾನಿಗಳಾದ ತಮ್ಮೆಲ್ಲರ ಸಹಾಯಹಸ್ತವನ್ನು ಈ ಸಂದರ್ಭದಲ್ಲಿ ಬಯಸುತ್ತೇನೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.

ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಲಯಕ್ಕೆ ಶ್ರೀ ಮಠದ ವತಿಯಿಂದ ೪ ಮತ್ತು ಶ್ರೀ ಸುರೇಶ್ ದೊಡ್ಡಮಾಣಿ ಮತ್ತು ಮನೆಯವರು ೨ ಕಂಪ್ಯೂಟರ್ ಗಳನ್ನು ನೀಡಿ ಸಹಕರಿಸಿದ್ದಾರೆಂದು ತಿಳಿಸಲು ಸಂತೋಷವಾಗುತ್ತಿದೆ. ಇದಕ್ಕೆ ಪೂರಕವಾಗಿ ದಾನಿಗಳಿಂದ ರೂ.೧೨,೦೦೦/- ಮೌಲ್ಯದ UPS ವಿದ್ಯಾಲಯಕ್ಕೆ ದೊರಕಿರುತ್ತದೆ.
 
ಪ್ರತಿಭಾ ಭಾರತಿ - ಜ್ಞಾನದೀಪ್ತಿ ಮತ್ತು ಮಾಹಿತಿ ತಂತ್ರಜ್ಞಾನ ಸಂಘಗಳು:

ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕಾಗಿ ವಿದ್ಯಾರ್ಥಿಗಳೇ ನಿರೂಪಿಸಿ, ನಿರ್ವಹಿಸುವ ಸಭಾಕಾರ್ಯಕ್ರಮ ’ಪ್ರತಿಭಾಭಾರತೀ’ ಪ್ರತೀ ತಿಂಗಳೂ ನಡೆಯುತ್ತಿದೆ. ವಿದ್ಯಾರ್ಥಿಗಳು ತಮ್ಮದೇ ಶೈಲಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು ಆಗಮಿಸಿದ  ಅತಿಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿವಿಧ ಪಠ್ಯ ವಿಷಯಗಳಿಗೆ ಸಂಬಂಧಪಟ್ಟಂತೆ ’ಜ್ಞಾನದೀಪ್ತಿ ಸಂಗಮ’ ಎಂದು ಹೆಸರಿಸಲಾದ ಸಂಘವೊಂದು ನಮ್ಮ ವಿದ್ಯಾಲಯದಲ್ಲಿದ್ದು ಪ್ರಭೋದನ, ವಿಕಸನ, ಚಿಂತನವೆನ್ನುವ ಧ್ಯೇಯದೊಂದಿಗೆ ಪ್ರತಿತಿಂಗಳೂ ಈ ಸಂಘದ ಅಡಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಕ್ಕೆ ಸಂಬಂಧಪಟ್ಟು ವಿಚಾರಗೋಷ್ಠಿಗಳನ್ನು ನಡೆಸುತ್ತಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಮಾಹಿತಿ ತಂತ್ರಜ್ಞಾನ ಸಂಘವನ್ನು ರೂಪಿಸಿದ್ದು ವಿದ್ಯಾರ್ಥಿಗಳು ಈ ಸಂಘದ ಅಡಿಯಲ್ಲಿ ಪ್ರೋಜೆಕ್ಟ್‌ಗಳೊಂದಿಗೆ ಸೆಮಿನಾರ್‌ಗಳನ್ನು ನಡೆಸುತ್ತಿದ್ದಾರೆ.

ಇದಲ್ಲದೇ ವಿದ್ಯಾರ್ಜನೆಯೊಂದಿಗೆ ಆಧ್ಯಾತ್ಮಿಕವಾಗಿಯೂ ವಿದ್ಯಾರ್ಥಿಗಳು ಬೆಳವಣಿಗೆ ಹೊಂದುವ ದೃಷ್ಠಿಯಿಂದ ಗುರುವಾರಗಳಂದು ಭಜನಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿರಿಸಿ ಪ್ರತೀ ೧೫ ದಿನಗಳಿಗೊಮ್ಮೆ ಅಧ್ಯಾಪಕರ ಸಭೆ ನಡೆಯುತ್ತಿದೆ. ರಕ್ಷಕ-ಶಿಕ್ಷಕ ಸಂಘದ ಸಭೆ ಮತ್ತು ಆಡಳಿತಮಂಡಳಿ ಸಭೆಗಳು ನಡೆಯುತ್ತಿದ್ದು ವಿದ್ಯಾಲಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.

ವಿದ್ಯಾಲಯದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ರಕ್ಷಕರು ಧನಸಹಾಯಗಳೊಂದಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದು ಈ ಸಂದರ್ಭದಲ್ಲಿ ರಕ್ಷಕರನ್ನು ಸ್ಮರಿಸುತ್ತೇನೆ.

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯು ಮುಷ್ಠಿಭಿಕ್ಷಾ ಯೋಜನೆಯನ್ವಯ ನಡೆಯುತ್ತಿದ್ದು ಊರಿನಿಂದಲ್ಲದೇ ಪರವೂರಿನಿಂದಲೂ ಅಕ್ಕಿ ನಮ್ಮಲ್ಲಿಗೆ ಬರುತ್ತಿದೆ. ವಿದ್ಯಾರ್ಥಿಗಳ ಮನೆಯಿಂದಲೂ ಈ ಯೋಜನೆಗೆ ಸ್ಪಂದನ ದೊರೆತಿದ್ದು ಮಧ್ಯಾಹ್ನದ ಊಟದ ಯೋಜನೆಗೆ ತಮ್ಮೆಲ್ಲರ ಸಹಾಯವನ್ನೂ ಬಯಸುತ್ತೇನೆ.

ಶ್ರೀಗುರುಗಳ ದಿವ್ಯಸಂಕಲ್ಪವನ್ನು ಈಡೇರಿಸುವ ಉದ್ದೇಶದಿಂದ ಆಡಳಿತಮಂಡಳಿ, ಅಧ್ಯಾಪಕವೃಂದ, ರಕ್ಷಕ-ಶಿಕ್ಷಕ ಸಂಘ ನಿರಂತರ ಶ್ರಮಿಸುತ್ತಿದ್ದು ವಿದ್ಯಾಭಿಮಾನಿಗಳ ಸಹಾಯ ಸಹಕಾರಗಳು ದೊರಕುತ್ತಿದೆ. ವಿದ್ಯಾಲಯದ ಪ್ರಗತಿಯಲ್ಲಿ ಸಹಕರಿಸಿದ ದಾನಿಗಳನ್ನು ಮತ್ತು ಸಲಹೆಗಳನ್ನು ನೀಡಿದ ಹಿರಿಯರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ವಿದ್ಯಾಲಯದ ಇನ್ನೂ ಹೆಚ್ಚಿನ ಪ್ರಗತಿಗಾಗಿ ತಮ್ಮೆಲ್ಲರ ಸಹಾಯ-ಸಹಕಾರಗಳನ್ನು ಬಯಸುತ್ತಾ ಶ್ರೀಶ್ರಿಗಳವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತಾ ಈ ವರದಿಯನ್ನು ಶ್ರೀಗುರುಗಳ ಚರಣಾರವಿಂದಗಳಿಗೆ ಸಮರ್ಪಿಸುತ್ತಿದ್ದೇನೆ.

ಅಧ್ಯಕ್ಷರು/ಕಾರ್ಯದರ್ಶಿ                                                                            ಮುಖ್ಯೋಪಾಧ್ಯಾಯರು        
ಆಡಳಿತ ಮಂಡಳಿ


Jan 24, 2011

ಭೂಗರ್ಭ ತಜ್ಞರಿಂದ ಉಪನ್ಯಾಸ

ಖ್ಯಾತ ಅಂತರ್ಜಲ ಸಂಶೋಧಕ, ಭೂಗರ್ಭ ತಜ್ಞ ಮಧುರಕಾನನ ಗಣಪತಿ ಭಟ್ ಮೊನ್ನೆ ನಮ್ಮ ಶಾಲೆಗೆ ಭೇಟಿ ನೀಡಿದ್ದರು. ಭೂಮಿಯಲ್ಲಿರುವ ಪದರುಗಳು ಮತ್ತು ಅಂತರ್ಜಲದ ಕುರಿತಾದ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಸಂಶಯವನ್ನು ದೂರೀಕರಿಸಿದರು.
ನಾಡಿದ್ದು 28 ರಂದು ನಮ್ಮ ಶಾಲಾ ವರ್ಧಂತ್ಯುತ್ಸವ ನಡೆಯಲಿದೆ. ನಿಮ್ಮೆಲ್ಲರ ಉಪಸ್ಥಿತಿ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಲಿದೆ. ಬನ್ನಿ, ಇದು ನಿಮ್ಮೆಲ್ಲರಿಗೆ ನಮ್ಮ ಪ್ರೀತಿಪೂರ್ವಕ ಆಮಂತ್ರಣ.

Jan 9, 2011

ನಿನ್ನೆ ಕ್ರೀಡಾ ದಿನ...

ಹಿರಿಯ ಶಾರೀರಿಕ ಶಿಕ್ಷಣ ಶಿಕ್ಷಕ ಶಂಕರಪ್ರಸಾದ್ ಕುಂಚಿನಡ್ಕ ಇವರ ನೇತೃತ್ವದಲ್ಲಿ ನಿನ್ನೆ ನಮ್ಮ ಶಾಲೆಯ ಕ್ರೀಡಾ ದಿನಾಚರಣೆ ಜರಗಿತು. ವಿದ್ಯಾರ್ಥಿಗಳು ವಿವಿಧ ಆಟೋಟ ಚಟುವಟಿಕೆಗಳಲ್ಲಿ ಭಾಗವಹಿಸಿ ಮಾನಸಿಕ ಉಲ್ಲಾಸ ಪಡೆದುಕೊಂಡರು. ಆರಂಭದಲ್ಲಿ ಧ್ವಜಾರೋಹಣಗೈದು ಸ್ಪರ್ಧೆಗಳಿಗೆ ಚಾಲನೆ ನೀಡಿದವರು ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.

Dec 31, 2010

ಹೊಸ ವರ್ಷದ ಶುಭಾಶಯಗಳು...

ನಮ್ಮ ಸಂಸ್ಕೃತಿಯಲ್ಲಿ ನಾಳೆ ಹೊಸ ವರ್ಷ ಅಲ್ಲ. ಆದರೂ ವ್ಯಾವಹಾರಿಕವಾಗಿ ಈ ಕ್ಯಾಲೆಂಡರಿಗೆ ನಾವು ಒಗ್ಗಿ ಹೋಗಿದ್ದೇವೆ. ಕ್ಯಾಲೆಂಡರ್ ಬದಲುವ ಈ ವೇಳೆಯಲ್ಲಿ ನಿಮಗೆಲ್ಲ 2011ರ ಶುಭಾಶಯಗಳು.

Dec 22, 2010

ನಿಲ್ಲು ಚಂದಿರ


ನಿಲ್ಲು ನಿಲ್ಲು ಚಂದಿರ
ಎಲ್ಲಿ ಓಡುವೆ
ನನ್ನ ಬಿಟ್ಟು ಏಕೆ ನೀನು
ಓಡಿ ಹೋಗುವೆ..!
               ಹಗಲಿನಲ್ಲಿ ಹೋದೆ ನೀ
               ಎಲ್ಲಿ ಚಂದಿರ
               ಇರುಳಿನಲ್ಲಿ ಎಲ್ಲಿ ಇದೆ
               ನಿನ್ನ ಮಂದಿರ...!
ನಿಲ್ಲು ನಿಲ್ಲು ಚಂದಿರ
ಎಲ್ಲಿ ಓಡುವೆ
ಚೆಲ್ಲು ಚೆಲ್ಲು ಸುಂದರ
ಬೆಳದಿಂಗಳ ನೋಡುವೆ

-- ಶ್ವೇತಾ.ಕೆ
ಆರನೇ ತರಗತಿ

Dec 15, 2010

ಜಾದೂ...

ಮೊನ್ನೆ ಸೋಮವಾರ ನಮ್ಮ ಸಂಸ್ಥೆಗೆ ಉಡುಪಿ ಜಿಲ್ಲೆಯ ಪಾಂಗಾಳದಲ್ಲಿರುವ ಗೋಪಾಲಕೃಷ್ಣ ಶೆಣೈ ಬಂದಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ಅವರು ಪರಿಚಿತರು. ಶಾಲೆಗಳಿಗೆ ಭೇಟಿ ನೀಡಿ ಜಾದೂ ಪ್ರದರ್ಶನ ನಡೆಸುವುದು ಅವರ ಹವ್ಯಾಸ. ಅವರ ಜಾದೂ ಪ್ರದರ್ಶನ ವಿದ್ಯಾರ್ಥಿಗಳಿಗೆ ಕುತೂಹಲದ ಕ್ಷಣವನ್ನು ಒದಗಿಸಿತು.

Dec 11, 2010

ಐಟಿ ಪ್ರೋಜೆಕ್ಟ್

ಶಾಲಾ ಸುದ್ದಿಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ತಡವಾಗಿದ್ದಕ್ಕೆ ಕ್ಷಮೆ ಇರಲಿ. ಮಧ್ಯಾವಧಿ ಪರೀಕ್ಷೆಗಳು, ಪಠ್ಯೇತರ ಚಟುವಟಿಕೆಗಳ ನಡುವೆ ಈ ಕಡೆ ತಲೆ ಹಾಕಲು ಸಾಧ್ಯವಾಗಿಲ್ಲ. ಆದರೆ ಈ ನಡುವೆಯೂ ನಮ್ಮ ವಿದ್ಯಾರ್ಥಿಗಳು ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದರು ಎಂಬುದನ್ನು ತಿಳಿಸಲು ಸಂತಸವಾಗುತ್ತಿದೆ. ಅಂತಹದ್ದೇ ಒಂದು ಕಾರ್ಯಕ್ರಮ ನಿನ್ನೆ ನಡೆಯಿತು.
ಐಟಿ ಕ್ಲಬ್ ಆರಂಭವಾದ ನಂತರ ನಡೆದ ಕೆಲವಾರು ಚಟುವಟಿಕೆಗಳ ಭಾಗವಾಗಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರೋಜೆಕ್ಟನ್ನು ನಿನ್ನೆ ಸಭೆಯಲ್ಲಿ ಪ್ರದರ್ಶಿಸಿದರು. ಶಿಖರಗಳು, ನಮ್ಮ ವಿಶ್ವ ಮತ್ತು ಗ್ರಹಗಳ ಬಗ್ಗೆ ಸಿದ್ಧ ಪಡಿಸಿದ ಪ್ರತ್ಯೇಕ ಪ್ರೋಜೆಕ್ಟ್ ಗಳನ್ನು ಅವರು ಮಂಡಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ ಮಾರ್ಗ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಕಂಪ್ಯೂಟರ್ ಶಿಕ್ಷಕಿ ಶಿವಕುಮಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವತಿ ಸ್ವಾಗತಿಸಿ ಕಿರಣ್ ಮಹೇಶ್ ವಂದಿಸಿದರು. ವೈಶಾಲಿ ಎಂ.ಸಿ ಕಾರ್ಯಕ್ರಮ ನಿರೂಪಿಸಿದರು.

Oct 26, 2010

ಆರನೇ ತರಗತಿಯ ನಿಶಿತಾ

ಕಳೆದ ವರ್ಷ ನಿಶಿತಾ ಬಿಡಿಸಿದ ಚಿತ್ರ ಇದು. ಪುಟಾಣಿಗಳ ಕಲ್ಪನೆ ಕ್ಯಾನ್ವಾಸ್ ಮೇಲೆ ಹೇಗೆ ಮುದ್ದು ಮುದ್ದಾಗಿ ರೂಪುಗೊಳ್ಳುತ್ತದೆಯಲ್ಲವೇ...

Oct 20, 2010

ವಿದ್ಯಾ ದಶಮಿ

 
ನಮ್ಮ ಶಾಲೆಯ ವಿದ್ಯಾ ದಶಮಿ ಕಾರ್ಯಕ್ರಮ ಮೊನ್ನೆ ೧೭.೧೦.೨೦೧೦ ರಂದು ವೇದಮೂರ್ತಿ ಮಹಾದೇವ ಭಟ್ಟ ಕೋಣಮ್ಮೆ ಇವರ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಅವರು ಪುಟಾಣಿಗಳಿಗೆ ‘ಹರಿಶ್ರೀ’ ಬರೆದು ಅಕ್ಷರಾಭ್ಯಾಸ ಮಾಡಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಡಿ.ಪಿ.ಭಟ್, ಅನಂತಕೃಷ್ಣ ಭಟ್ ಹಿಳ್ಳೆಮನೆ, ಶ್ಯಾಮರಾಜ್ ದೊಡ್ಡಮಾಣಿ, ವೇಣುಗೋಪಾಲ ಆರೋಳಿ ಉಪಸ್ಥಿತರಿದ್ದರು.

Oct 7, 2010

ಚಿತ್ರ - ವೈಶಾಖ್

ನಾಲ್ಕನೇ ತರಗತಿಯ ವೈಶಾಖ್ ಬಿಡಿಸಿದ ಚಿತ್ರ ಇದು. ಎಲ್ಲೋ ಕಂಡ ಚಿತ್ರಗಳನ್ನು ಮತ್ತೆ ಎಷ್ಟು ಸುಂದರವಾಗಿ ಬಿಡಿಸುವ ಪ್ರತಿಭೆ ಇದೆ ಪುಟಾಣಿಗಳಲ್ಲಿ ಅಲ್ಲವೇ...

Sep 30, 2010

ರಂಗೋಲಿ

ಇದು ಏಳನೇ ತರಗತಿಯ ಕಾರ್ತಿಕ್ ಬಿಡಿಸಿದ ರಂಗೋಲಿ. ಇಂದು ನಾಡೆಲ್ಲ ಒತ್ತಡದಲ್ಲಿ ಮುಳುಗಿದೆ. ಮಕ್ಕಳು ಬಿಡಿಸಿದ ಈ ಚಿತ್ರ ನಮ್ಮ ಮನಸ್ಸಿಗೆ ತಂಪೆರೆಯಲಿ...

Sep 24, 2010

ಐಟಿ ಕ್ಲಬ್ ಉದ್ಘಾಟನೆ


“ಜಗತ್ತು ಕಂಪ್ಯೂಟರ್ ಬೆಳವಣಿಗೆಯ ಮೂಲಕ ಹೊಸ ಮನ್ವಂತರದ ಕಡೆಗೆ ದಾಪುಗಾಲು ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ಜಗತ್ತಿನ ಜೊತೆಯಲ್ಲಿ ಬೆಳೆಯುವ ದೃಷ್ಟಿಯಿಂದ ಐಟಿ ಕ್ಲಬ್ ಆರಂಭಿಸಲಾಗಿದೆ. ಜಾಗತಿಕ ಬೆಳವಣಿಗೆಗಳ ಕಡೆಗೆ ಗಮನ ನೀಡುತ್ತಾ ಮಾಹಿತಿ ಪೂರ್ಣ ಅಧ್ಯಯನ ನಡೆಸಲು ಐಟಿ ಕ್ಲಬ್ ವಿದ್ಯಾರ್ಥಿಗಳಿಗೆ ನೆರವಾಗಲಿದೆ." ಎಂದು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಭೆ ಮಾರ್ಗ ಅಭಿಪ್ರಾಯಪಟ್ಟರು. ಅವರು ೨೩.೦೯.೨೦೧೦ ಗುರುವಾರ ನಮ್ಮ ಶಾಲಾ ವಿದ್ಯಾರ್ಥಿಗಳ ಐಟಿ ಕ್ಲಬ್ ಉದ್ಘಾಟಿಸಿ ಮಾತನಾಡುತ್ತಿದ್ದರು.

 ಶಾಲಾ ಆಡಳಿತ ಮಂಡಳಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿ ಇಂದಿರಾ.ಎಂ. ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಸುಹಾಸ್ ಜಿ.ಕಾಕತ್ಕರ್ ಸ್ವಾಗತಿಸಿ ನಿಕ್ಷಿತ್ ವಂದಿಸಿದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.

Sep 1, 2010

ಶ್ರೀಕೃಷ್ಣ ಜಯಂತಿ

“ಅಧರ್ಮದ ಮೇರೆ ಮೀರಿದಾಗ ಅವತಾರವೆತ್ತಿದ ಕೃಷ್ಣ ಪರಮಾತ್ಮನು ಧರ್ಮದ ಪುನಸ್ಥಾಪನೆ ಮಾಡಿದನು. ಸತ್ಯ, ಧರ್ಮದಿಂದ ಬಾಳಿ ಬದುಕುವ ಜನರ ಏಳಿಗೆಗಾಗಿ ಶ್ರಮಿಸಿದನು. ದೇವತಾರಾಧನೆ ಮತ್ತು ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ವಿದ್ಯಾಲಯಗಳಲ್ಲಿ ಅಂತಹ ಧಾರ್ಮಿಕ ಮೌಲ್ಯದ ದಿನಗಳನ್ನು ಆಚರಿಸುವುದು ಸ್ತುತ್ಯರ್ಹವಾಗಿದೆ" ಎಂದು ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಬಿ.ರಾವ್ ಹೇಳಿದರು. ಅವರು ೦೧.೦೯.೨೦೧೦ ಬುಧವಾರ ಮುಜುಂಗಾವು ಶ್ರೀಭಾರತೀ ವಿದ್ಯಾಸಂಸ್ಥೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.


ಶ್ರೀಭಾರತೀ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ಹಾಗೂ ಶ್ರೀ ಭಾರತೀ ವಿದ್ಯಾಪೀಠ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಹರಿಶಂಕರ ಶರ್ಮ ಸ್ವಾಗತಿಸಿ ವೈಶಾಲಿ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಮುದ್ದುಕೃಷ್ಣ ವೇಷ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Aug 21, 2010

ಬಾಂಧವ್ಯದ ಸಂಕೇತ ರಕ್ಷಾಬಂಧನ

“ರಕ್ಷಾಬಂಧನ ಅಣ್ಣತಂಗಿಯರಿಗೆ ಪ್ರೀತಿಯ ದಿನ. ತಂಗಿ ಅಣ್ಣನಿಗೆ ನೀಡುವ ರಕ್ಷಾಬಂಧನ ಸಹೋದರತೆಯ ಪರಮ ಸಂಕಲ್ಪವನ್ನು ಅನಾವರಣಗೊಳಿಸುತ್ತದೆ. ಈ ಬಾರಿ ಓಣಂ ಮತ್ತು ರಕ್ಷಾಬಂಧನ ಜೊತೆಯಾಗಿ ಬಂದಿರುವುದು ಹಬ್ಬಗಳ ಆಚರಣೆಯ ಮಹತ್ವವನ್ನು ಹೆಚ್ಚಿಸುತ್ತದೆ. ಕೋಮು ಸೌಹಾರ್ದಕ್ಕೆ ಕಾರಣವಾಗುವ ಓಣಂ ಹಬ್ಬ ನಾಡಿನ ಒಳಿತಿಗೆ ಪ್ರಯತ್ನಿಸುತ್ತದೆ" ಎಂದು ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳ ಪ್ರೌಢಶಾಲಾ ಸಂಸ್ಕೃತ ಶಿಕ್ಷಕ ನಾರಾಯಣ ಜಿ.ಹೆಗಡೆ ಅಭಿಪ್ರಾಯಪಟ್ಟರು. ಅವರು ೨೧.೦೮.೨೦೧೦ ಶನಿವಾರ ನಮ್ಮ ಶಾಲೆಯಲ್ಲಿ ರಕ್ಷಾಬಂಧನ ಮತ್ತು ಓಣಂ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.


ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶ್ರೀ ಭಾರತೀ ವಿದ್ಯಾಪೀಠ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವತಿ ಸ್ವಾಗತಿಸಿ ಕಿರಣ ಮಹೇಶ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

Aug 20, 2010

ಸುರಂಗದ ಕೊನೆಯ ಬೆಳಕು

ಸುರಂಗದ ಕೊನೆಯ ಬೆಳಕು
- ಅನ್ನಪೂರ್ಣಿಮ. ಜೆ.ಎಂ - ಏಳನೇ ತರಗತಿ

ಅಲೆದು ಅಲೆದು ಸುಸ್ತಾಗಿದ್ದಾರೆ
ಆದರೆ ಸಿಗುತ್ತಿಲ್ಲ ಎಲ್ಲೂ ನೆಲೆ
ಅತ್ತು ಕರೆದು ಗೋಗರೆಯುತ್ತಾರೆ
ನೀಡುತ್ತಿಲ್ಲ ಕಣ್ಣೀರಿಗೂ ಬೆಲೆ

ಹುಡುಕುವರು ಇಲ್ಲಿ ಕಾಣದ ಯಾವುದೋ ವಸ್ತುವನ್ನು
ಪರಿಗಣಿಸರು ಇವರಿಗಾಗುವ ಬೇನೆ
ಅಲೆಮಾರಿಗಳಲ್ಲ ಇವರು ಆದರೂ ಅಲೆಯುತ್ತಾರೆ
ಭಿಕ್ಷುಕರೇನಲ್ಲ ಇವರು ಆದರೂ ಬೇಡುತ್ತಾರೆ

ಇವರಿಗೆ ಹಸಿವು ಬಾಯಾರಿಕೆಯ ಪರಿವಿಲ್ಲ
ರಾತ್ರಿ ಹಗಲೆಂಬುದರ ಅರಿವೇ ಇಲ್ಲ
ಎತ್ತಲೋ ನಡೆಯುತ್ತಾರೆ ಎಲ್ಲಿಗೋ ದೃಷ್ಟಿ ನೆಟ್ಟು
ಮಾರ್ನುಡಿಯಲ್ಲಿ ಹಿಡಿದು ಎಳೆದರೂ ಜುಟ್ಟು

ಎತ್ತಲೋ ದೂರ ಹಾರಿದೆ ಇವರ
ನೆಮ್ಮದಿ ಶಾಂತಿಯ ಆ ಪಕ್ಷಿ
ಮೊರೆಯಿಡುತ್ತಾರೆ ಕೋರಿ ದೇವರ
ನಮ್ಮ ವೇದನೆಗೆ ನೀನೇ ಸಾಕ್ಷಿ

ಇನ್ನೂ ಅರಸುತ್ತಲೇ ಇದ್ದಾರೆ
ಕಳೆದ ವಸ್ತುವೊಂದನ್ನು ಹುಡುಕುವಂತೆ
ಮತ್ತೂ ಕಾತರಿಸುತ್ತಲೇ ಇದ್ದಾರೆ
ಸುರಂಗದ ಕೊನೆಯ ಬೆಳಕನ್ನು ಕಾಣುವಂತೆ

Aug 17, 2010

ಸ್ವಾತಂತ್ರ್ಯೋತ್ಸವ


“ದೇಶವು ಸ್ವತಂತ್ರವಾಗಿ ೬೩ ವರ್ಷಗಳು ಕಳೆದಿವೆ. ನಮ್ಮದೇ ಆಡಳಿತ ವ್ಯವಸ್ಥೆ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಯ ನಾಯಕರನ್ನು ಗೌರವಿಸುವುದು ನಮ್ಮ ಕರ್ತವ್ಯ" ಎಂದು ಕುಂಬಳೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಭಿಪ್ರಾಯಪಟ್ಟರು. ಅವರು ಮೊನ್ನೆ ನಮ್ಮ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಆಡಳಿತ ಮಂಡಳಿ ಅಧ್ಯಕ್ಷ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಭಟ್ ಅಮ್ಮಂಕಲ್ಲು, ಮೊಹಮ್ಮದ್ ಪೆಲತ್ತಡ್ಕ, ಕೃಷ್ಣಮೂರ್ತಿ ಪುದುಕೋಳಿ, ಶ್ಯಾಮಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಇಂದಿರಾ ಸ್ವಾಗತಿಸಿ ಈಶ್ವರಚಂದ್ರ ಜೋಯ್ಸ ವಂದಿಸಿದರು. ಪ್ರತಿಮಾ ಡಿ.ಕೆ ಕಾರ್ಯಕ್ರಮ ನಿರೂಪಿಸಿದರು.

Aug 13, 2010

ವೈದ್ಯರೊಂದಿಗೆ ಮಾತುಕತೆ

"ಜೀವನದಲ್ಲಿ ಶಿಸ್ತು ರೂಪಿಸಿಕೊಳ್ಳುವುದರ ಜೊತೆಗೆ ಶುಚಿತ್ವದ ಕಡೆಗಿನ ಗಮನವನ್ನೂ ಬೆಳೆಸಿಕೊಳ್ಳಬೇಕು. ಹಿರಿಯರ ಬಗ್ಗೆ ಗೌರವವನ್ನು ಬೆಳೆಸಿಕೊಂಡು ವಿದ್ಯಾರ್ಥಿ ದೆಸೆಯಲ್ಲಿಯೇ ಶುಚಿತ್ವ, ಆರೋಗ್ಯ ಮತ್ತು ಅಧ್ಯಯನಗಳ ಬಗ್ಗೆ ಶ್ರದ್ಧೆ ವಹಿಸಿದರೆ ಯಶಸ್ಸು ಸಾಧ್ಯ" ಎಂದು ಖ್ಯಾತ ವೈದ್ಯೆ ಡಾ| ಮಾಲತೀ ಪ್ರಕಾಶ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮಲ್ಲಿ ನಡೆದ ವೈದ್ಯರೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ- ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಪ್ರೀತಾ.ಎಂ ಸ್ವಾಗತಿಸಿ ಶಿಕ್ಷಕಿ ಸರಿತಾ ವಂದಿಸಿದರು. ರಮ್ಯಾ.ಎಂ. ಕಾರ್ಯಕ್ರಮ ನಿರೂಪಿಸಿದರು.

Aug 8, 2010

ವೃಂದಾವನ - ಶ್ರೀವತ್ಸ.ಕೆ ಆರನೇ ತರಗತಿ

ಬನ್ನಿರಿ ಬನ್ನಿರಿ ಗೆಳೆಯರೆ

ವೃಂದಾವನದೆಡೆಗೆ ಸಾಗೋಣ

ಇರುಳು ಬಣ್ಣದ ಬೆಳಕಿನ ಬೆಳಗಿದ

ಗೆಲುವಿಗೆ ಚೆಲುವಿಗೆ ಬಾಗೋಣ

ನೀರಿನ ಹರಿವಿನ ಕಡಲಿನ ಹಾಗಿನ

ಭಾರೀ ಜಲಾಶಯ ಒಂದೆಡೆಗೆ

ಬಗೆ ಬಗೆ ಜಾತಿಯ ಮರಗಿಡ ಬಳ್ಳಿಯ

ಹುಲ್ಲಿನ ಹಾಸಿಗೆ ಬೇರೆಡೆಗೆ

ಗಿಡದೆಡೆಯಲಿ ಹಸುರಿನ ಮಡಿಲಲಿ

ಸಾವಿರ ವಿದ್ಯುದ್ದೀಪಗಳು

ಕತ್ತಲ ಮೊತ್ತವ ಹೊಡೆಹೊಡೆದಟ್ಟುವ

ರಂಗಿನ ಬೆಳಕಿನ ತೋಪುಗಳು

Aug 5, 2010

ಒಂದು ಚಿತ್ರ

ಇದು ಎಂಟನೇ ತರಗತಿಯ ಇಂದಿರಾ ಬಿಡಿಸಿದ ಚಿತ್ರ.

Jul 31, 2010

‘ಪ್ರತಿಭಾ ಭಾರತೀ’ ತಿಂಗಳ ಕಾರ್ಯಕ್ರಮ

“ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜ್ಯೋತಿಯಾಗು ಜಗಕೆಲ್ಲ ಎಂಬ ಮಾತು ನಮಗೆಲ್ಲ ದಾರಿದೀಪವಾಗಬೇಕು. ಪುಟಾಣಿಗಳು ದೀಪಗಳಂತೆ, ಅದು ಶಾಲೆಯಲ್ಲಿ ಬೆಳಗುತ್ತದೆ. ಜೀವನ ಮೌಲ್ಯಗಳನ್ನು ಅಭಿವ್ಯಕ್ತಿಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ.” ಎಂದು ಇಚ್ಲಂಪಾಡಿ ಹಿರಿಯ ಬುನಾದಿ ಶಾಲಾ ಮುಖ್ಯೋಪಾಧ್ಯಾಯ ಪಿ. ನರಹರಿ ಅಭಿಪ್ರಾಯಪಟ್ಟರು. ಅವರು ದಿನಾಂಕ ೩೦.೦೭.೨೦೧೦ ಶುಕ್ರವಾರ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಆರನೇ ತರಗತಿ ವಿದ್ಯಾರ್ಥಿ ನವನೀತ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್.ಎಂ, ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಿರಣ ಮಹೇಶ ಸ್ವಾಗತಿಸಿ, ಸುಹಾಸ್ ಜಿ.ಕಾಕತ್ಕರ್ ವಂದಿಸಿದರು. ಕೃಷ್ಣಕಿರಣ ಮತ್ತು ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.

Jul 25, 2010

ಪ್ರತಿಭಾ ಭಾರತೀ ಉದ್ಘಾಟನೆ...

ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ವಿಕಾಸಕ್ಕಾಗಿ ನಮ್ಮಲ್ಲಿ ರೂಪುಗೊಂಡಿರುವ ವೇದಿಕೆ ‘ಪ್ರತಿಭಾ ಭಾರತೀ’. ಪ್ರತಿಭಾ ಭಾರತೀ ವಾರ್ಷಿಕ ಉದ್ಘಾಟನೆಯನ್ನು ಈ ಬಾರಿ ನೆರವೇರಿಸಿದವರು ಹಿರಿಯ ಚಿತ್ರಕಲಾ ಅಧ್ಯಾಪಕ ಶ್ರೀ ರಾಮಕೃಷ್ಣ ಹೆಬ್ಬಾರ್. ಧನ್ಯವಾದಗಳು.
ಕಾರ್ಯಕ್ರಮದ ಬಹುಪಾಲು ಕರ್ತವ್ಯವನ್ನೂ ವಿದ್ಯಾರ್ಥಿಗಳೇ ನಿರ್ವಹಿಸುವುದು ಪ್ರತಿಭಾ ಭಾರತೀ ವಿಶೇಷ.

Jul 22, 2010

ವನಜೀವನ ಯಜ್ಞ

“ಎಳವೆಯಲ್ಲೇ ಪರಿಸರ ಕುರಿತ ಕಾಳಜಿ ಜಾಗೃತಗೊಳ್ಳಲು ವನಮಹೋತ್ಸವ ಕಾರ್ಯಕ್ರಮ ಉತ್ತಮ ತರಬೇತಿ ನೀಡುತ್ತದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ, ಅರಣ್ಯ ಸಂರಕ್ಷಣೆಯ ಆಶಯಗಳು ಮೂಡುತ್ತವೆ. ಈ ನಿಟ್ಟಿನಲ್ಲಿ ಗೋಕರ್ಣ ಮಂಡಲಾಧೀಶ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಂಕಲ್ಪ ನಮಗೆಲ್ಲ ಉತ್ತಮ ಹಾದಿಯನ್ನು ತೋರಿಸಿದೆ." ಎಂದು ಪುತ್ತಿಗೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಜಯಂತ ಪಾಟಾಳಿ ಅಭಿಪ್ರಾಯಪಟ್ಟರು. ಅವರು ನಮ್ಮ ಶಾಲೆಯಲ್ಲಿ ೨೧.೦೭.೨೦೧೦ ಬುಧವಾರದಂದು ವನಜೀವನ ಯಜ್ಞ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಭೆ-ಮಾರ್ಗ ಮತ್ತು ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವತಿ ಸ್ವಾಗತಿಸಿ ಜೀವಿತ್ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

Jul 21, 2010

ಎಯ್ಯೂರಿನ ಭತ್ತದ ಗದ್ದೆಗೆ ಭೇಟಿ

ಕ್ಷೇತ್ರ ಭೇಟಿಯ ಉದ್ದೇಶದಲ್ಲಿ ಮೊನ್ನೆ ಸೋಮವಾರ ಎಡನಾಡು ಗ್ರಾಮದ ಕೃಷಿಕ ಎಯ್ಯೂರು ಚಂದ್ರಶೇಖರ ಭಟ್ಟರ ಭತ್ತದ ಗದ್ದೆಗೆ ಭೇಟಿ ನೀಡಿ ಬಂದೆವು. ವಿದ್ಯಾರ್ಥಿಗಳು ಭತ್ತದ ಗದ್ದೆಗೆ ಇಳಿದು ನಾಟಿ ಕಾರ್ಯದ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಸ್ವಯಂ ಭತ್ತದ ಗಿಡಗಳನ್ನು ನೆಟ್ಟು ಹೊಸ ಅನುಭೂತಿಯನ್ನು ಪಡೆದುಕೊಂಡರು.

Jun 2, 2010

ಶಾಲಾ ಪ್ರವೇಶೋತ್ಸವ


ನಮ್ಮ ಶಾಲಾ ಪ್ರವೇಶೋತ್ಸವವನ್ನು ೦೧.೦೬.೨೦೧೦ ಮಂಗಳವಾರದಂದು ಪುತ್ತಿಗೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಜಯಂತ ಪಾಟಾಳಿ ಉದ್ಘಾಟಿಸಿದರು. ಆಡಳಿತ ಮಂಡಳಿಯ ಮುಖ್ಯಸ್ಥ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಧರ್ಮತ್ತಡ್ಕ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಉಳುವಾನ ರಾಮಚಂದ್ರ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಶಾಲಾ ಮುಖ್ಯೋಪಾಧ್ಯಾಯ ಎಮ್.ಶ್ಯಾಮ ಭಟ್, ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವೈಶಾಲಿ ಸ್ವಾಗತಿಸಿ ಅನೂಷಾ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

ಗುರುನಮನ

ಶ್ರೀಮತಿ ಚಂದ್ರಪ್ರಭಾ ಬಿ. ರಾವ್ ನಮ್ಮ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಬೇಸಿಗೆ ತರಬೇತಿ ನೀಡಿದ್ದಾರೆ. ೨೫.೦೫.೨೦೧೦ ರಂದು ತರಬೇತಿ ಶಿಬಿರದ ಕೊನೆಯ ದಿನದ ಸಂದರ್ಭದಲ್ಲಿ ನಮ್ಮೆಲ್ಲರ ಪ್ರೀತಿಯ ಮೇಡಂಗೆ ಗೌರವ ಸಲ್ಲಿಸಿದ್ದೇವೆ. ಈ ಸಂದರ್ಭದಲ್ಲಿ ಕಥೆಗಾರ್ತಿ ಕೃಷ್ಣವೇಣಿ ಕಿದೂರು, ಲಕ್ಷ್ಮಿ. ವಿ. ಭಟ್, ಆಡಳಿತ ಮಂಡಳಿಯ ಶ್ಯಾಮರಾಜ್. ಡಿ.ಕೆ ಉಪಸ್ಥಿತರಿದ್ದರು. ಸೀರೆ ಹೊದೆಸಿ ನಮ್ಮೆಲ್ಲರ ಪರವಾಗಿ ಗೌರವಿಸಿದವರು ಶಾಲಾ ಮುಖ್ಯೋಪಾಧ್ಯಾಯ ಎಂ. ಶ್ಯಾಮ ಭಟ್, ದರ್ಬೆ ಮಾರ್ಗ.