Jun 16, 2014

‘ಸ್ವಾಗತ ಭಾರತೀ - 2014’




                ಒಬ್ಬ ವಿದ್ಯಾರ್ಥಿಯು ಸ್ವಹಿತಕ್ಕಾಗಿ ಕಲಿತರೆ ಅದರ ಶ್ರೇಯಸ್ಸು ಮೊದಲು ಆತನಿಗೆ, ನಂತರ ಆತನ ತಂದೆ ತಾಯಂದಿರಿಗೆ, ಹಿರಿಯರಿಗೆ, ಶಾಲೆಗೆ, ಗುರುಗಳಿಗೆ ಮತ್ತು ನಾಡಿನ ಜನತೆಗೆ ದೊರೆಯುತ್ತದೆ. ಪಠ್ಯೇತರ ಚಟುವಟಿಕೆಗಳ ಭಾಗವಾಗಿ ವಿದ್ಯಾರ್ಥಿಗಳು ಕರಕುಶಲ ಕಲೆಗಳ ಕಡೆಗೂ ಗಮನ ನೀಡಬೇಕು. ಇವುಗಳೆಲ್ಲವೂ ವೈವಿಧ್ಯತೆಯಲ್ಲಿ ಏಕತೆ ಎಂಬಂತೆ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿರಬೇಕು. ಮನಸ್ಸಿನಲ್ಲಿ ಸಂಶಯಗಳು ಮೂಡಿದ ತಕ್ಷಣ ವಿದ್ಯಾರ್ಥಿಗಳಲ್ಲಿ ಚಿಂತನಾ ಮನೋಭಾವ ಬೆಳೆಯಬೇಕು ಮತ್ತು ಅಗತ್ಯ ಸಂದರ್ಭಗಳಲ್ಲಿ ಅವುಗಳನ್ನು ಪ್ರಶ್ನಿಸುವ ಸಾಮರ್ಥ್ಯವನ್ನೂ ಗಳಿಸಿಕೊಳ್ಳಬೇಕು. ಹತ್ತನೇ ತರಗತಿ ವಿದ್ಯಾರ್ಥಿಗಳ ಸತತ ಮೂರನೇ ತಂಡವು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸಿ ಮುಜುಂಗಾವು ಶಿಕ್ಷಣ ಸಂಸ್ಥೆಗಳ ಕಡೆಗೆ ಸಮಾಜದ ಗಮನವನ್ನು ಸೆಳೆದಿದ್ದಾರೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಂಕಲ್ಪದಂತೆ ರೂಪುಗೊಂಡ ವಿದ್ಯಾಸಂಸ್ಥೆ ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿವೆ ಎನ್ನುವುದಕ್ಕೆ ಇದು ನೂತನ ನಿದರ್ಶನಎಂದು ನಿವೃತ್ತ ಮುಖ್ಯೋಪಾಧ್ಯಾಯ ಕೈಲಂಕಜೆ ವೆಂಕಟ್ರಮಣ ಭಟ್ ಅಭಿಪ್ರಾಯಪಟ್ಟರು. ಅವರು 02.06.2014 ಸೋಮವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದಸ್ವಾಗತ ಭಾರತೀಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಜಾ ಗಿರೀಶ್ ಸ್ವಾಗತಿಸಿ ಚೈತ್ರಶ್ರೀ ವಂದಿಸಿದರು. ರೇಶ್ಮಾ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

ಯೋಗ ಶಿಬಿರ 2014



ಮುಜುಂಗಾವು ಗ್ರಾಮೋತ್ಥಾನ ಸೇವಾ ಕೇಂದ್ರದ ಆಶ್ರಯದಲ್ಲಿ 31.05.2014 ಶನಿವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರಿಂದ ಉತ್ತಮ ಜೀವನ ಶೈಲಿಗಾಗಿ ಯೋಗ ವಿಚಾರ ಸಂಕಿರಣ ಮತ್ತು ಯೋಗಾಭ್ಯಾಸ ಕಾರ್ಯಕ್ರಮ ಜರಗಿತು.

`ವಸಂತ ವೇದ ಶಿಬಿರ - 2014' ಸಮಾರೋಪ



ಭಾರತದ ಅಮೂಲ್ಯ ಸಂಪತ್ತು ಎಂದು ಪರಿಗಣಿಸಲ್ಪಟ್ಟಿರುವ ವೇದಗಳಲ್ಲಿ ಅಪಾರ ಜ್ಞಾನ ಅಡಗಿದೆ. ಅವುಗಳ ಅಧ್ಯಯನ ಮೂಲಕ ನಿತ್ಯಜೀವನಕ್ಕೆ ಅಗತ್ಯವಾದ ವಿಚಾರಗಳನ್ನು ಸಂಪಾದಿಸಿಕೊಳ್ಳಬಹುದು. ಇದು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ವೇದ ಮತ್ತು ಶಾಸ್ತ್ರಗಳ ಅಧ್ಯಯನದ ಕಡೆಗೆ ಜನ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹಿನ್ನೆಲೆಯಲ್ಲಿ ಜನಸಾಮಾನ್ಯರ ಅಪೇಕ್ಷೆಯಂತೆ ಮುಜುಂಗಾವಿನ ದೇವ-ವೈದ್ಯ-ವೇದಗಳ ಸಂಗಮ ಭೂಮಿಯಲ್ಲಿ ನಡೆದ ವಸಂತವೇದ ಶಿಬಿರ ಯಶಸ್ವಿಯಾಗಿದೆ ಎಂದು ಕುಂಬಳೆ ವಲಯ ಅಧ್ಯಕ್ಷ . ಕೃಷ್ಣಮೋಹನ ಭಟ್ ಅಭಿಪ್ರಾಯಪಟ್ಟರು. ಅವರು 17.05.2014 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಸುಮಾರು ಒಂದೂವರೆ ತಿಂಗಳು ಕಾಲ ವೇ|ಮೂ ಮಹಾದೇವ ಭಟ್ ಕೋಣಮ್ಮೆ ಇವರ ನೇತೃತ್ವದಲ್ಲಿ ಜರಗಿದ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶ್ರೀ ಭಾರತೀ ವಿದ್ಯಾಪೀಠದ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಹಿಳ್ಳೆಮನೆ ಮುಖ್ಯ ಅತಿಥಿಗಳಾಗಿದ್ದರು. ವೇದ ಶಿಕ್ಷಣ ನೀಡಿದ ವೇ|ಮೂ ವಿಶ್ವೇಶ್ವರ ಭಟ್ ಮಣಿಮುಂಡ ಮತ್ತು ನಾರಾಯಣ.ಜಿ.ಹೆಗಡೆ ಉಪಸ್ಥಿತರಿದ್ದರು. ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸ್ವಾಗತಿಸಿದರು. ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ ವಂದಿಸಿದರು.

Apr 22, 2014

ವಸಂತ ವೇದ ಶಿಬಿರ - 2014



“ಪ್ರಾಚೀನ ಮತ್ತು ಪರಂಪರಾಗತವಾಗಿ ಬಂದ ಎಲ್ಲ ಅಧ್ಯಯನಗಳೂ ವೇದದ ತಳಹದಿಯಲ್ಲಿ ಬೆಳೆದಿವೆ. ವೇದದ ಅಧ್ಯಯನವು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಮುಜುಂಗಾವಿನ ದೇವ-ವೈದ್ಯ-ವೇದಗಳ ಸಂಗಮ ಭೂಮಿಯಲ್ಲಿ ನಡೆಯುವ ಈ ವಸಂತವೇದ ಶಿಬಿರವು ಯಶಸ್ವಿಯಾಗಲಿ" ಎಂದು ಕುಂಬಳೆ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಹಿಳ್ಳೆಮನೆ ಅಭಿಪ್ರಾಯಪಟ್ಟರು. ಅವರು 10.04.2014 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ವೇ|ಮೂ ಮಹಾದೇವ ಭಟ್ ಕೋಣಮ್ಮೆ ಇವರ ನೇತೃತ್ವದಲ್ಲಿ ಆಯೋಜಿಸಲಾದ ವಸಂತ ವೇದ ಶಿಬಿರದ ಉದ್ಘಾಟನೆಯನ್ನು ನಿರ್ವಹಿಸಿ ಮಾತನಾಡುತ್ತಿದ್ದರು.

ವೇದ ಶಿಕ್ಷಣ ನೀಡುವ ವೇ|ಮೂ ವಿಶ್ವೇಶ್ವರ ಭಟ್ ಮಣಿಮುಂಡ, ನಾರಾಯಣ.ಜಿ.ಹೆಗಡೆ ಮತ್ತು ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ಶ್ರೀ ಭಾರತೀ ಸಮೂಹ ವಿದ್ಯಾ ಸಂಸ್ಥೆಗಳ ಜತೆಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ ಸ್ವಾಗತಿಸಿದರು. ಶ್ರೀ ಭಾರತೀ ವಿದ್ಯಾಪೀಠದ ಶಿಕ್ಷಕಿ ಚಿತ್ರಾ ಸರಸ್ವತಿ.ಕೆ ವಂದಿಸಿದರು.

ಸ್ಪಂದನ 2014



         

    “ಜೀವನದ ಹಾದಿಯುದ್ದಕ್ಕೂ ಬಾಲ್ಯ ಕಾಲದ ಶಾಲಾ ಜೀವನ ಅವಿಸ್ಮರಣೀಯ ಆನಂದವನ್ನು ಕಟ್ಟಿಕೊಡುತ್ತದೆ. ಈ ಹಂತದಲ್ಲಿ ಬದುಕಿನ ಭವಿಷ್ಯ ಅರಳತೊಡಗುತ್ತದೆ. ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಶಾಲೆಯಿಂದ ತೇರ್ಗಡೆ ಹೊಂದಿ, ಬೀಳ್ಕೊಡುವ ಹಂತದಲ್ಲಿ ವಿದ್ಯಾರ್ಥಿಯು ಮಾತೃ ಶಾಲೆಯ ಸ್ಮರಣೆ ಮಾಡುತ್ತಿದ್ದಾನೆಂದರೆ ಆತನಿಗೆ ಶಾಲೆಯು ಉತ್ತಮ ನೈತಿಕ ಶಿಕ್ಷಣವನ್ನು ನೀಡಿದೆ ಎಂದು ತಿಳಿದುಕೊಳ್ಳಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡು ಘಟಕದ ಮಹಿಳಾ ವಿಭಾಗದ ಅಧಕ್ಷೆ ವಿಜಯಲಕ್ಷ್ಮಿ ಶಾನುಭೋಗ್ ಕೂಡ್ಲು ಅಭಿಪ್ರಾಯಪಟ್ಟರು. ಅವರು 27.03.2014 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಬೀಳ್ಕೊಡುವ ‘ಸ್ಪಂದನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
   ಶಾಲಾ ಸಮಿತಿಯ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಕ್ರಮ್.ಬಿ ಸ್ವಾಗತಿಸಿ ತೀಕ್ಷಾ ವಂದಿಸಿದರು. ಶಾಲೆಯ ವತಿಯಿಂದ ಬೆಳಕಿನ ಸಂಕೇತವಾಗಿ ವಿದ್ಯಾರ್ಥಿಗಳಿಗೆ ಪ್ರಜ್ವಲಿಸುತ್ತಿರುವ ದೀಪವನ್ನು ನೀಡಲಾಯಿತು. ವಿದ್ಯಾರ್ಥಿಗಳು ಶಾಲೆಗೆ ಸ್ಮರಣಿಕೆಯಾಗಿ ಕವಾಟು ಸಮರ್ಪಿಸಿದರು.

Mar 30, 2014

ಮಾರ್ಚ್ ತಿಂಗಳ ‘ಪ್ರತಿಭಾ ಭಾರತೀ’

   

“ಜಗತ್ತು ಆಧುನಿಕತೆಯ ಕಡೆಗೆ ನಡೆಯುತ್ತಿರುವ ಸಂದರ್ಭದಲ್ಲಿ ಜನರೆಲ್ಲ ಹೆಚ್ಚುಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಂವಹನ ಮಾರ್ಗಗಳು ಹೆಚ್ಚಿದ್ದರೂ ಬಾಂಧವ್ಯ ಕಡಿಮೆಯಾಗುತ್ತಿದೆ. ಮುಜುಂಗಾವಿನ ಪ್ರಶಾಂತ ವಾತಾವರಣದಲ್ಲಿ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳು ಕರ್ತವ್ಯಶೀಲತೆಯನ್ನೂ ಪ್ರಾಮಾಣಿಕತೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂದು ನಿವೃತ್ತ ನ್ಯಾಯವಾದಿ ಕಾಕುಂಜೆ ಸುಬ್ರಹ್ಮಣ್ಯ ಭಟ್ ಅಭಿಪ್ರಾಯಪಟ್ಟರು. ಅವರು ಮೊನ್ನೆ 28.03.2014 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಮಾರ್ಚ್ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಭಟ್ ಮಡ್ವ, ಶಾಲಾ ಸಮಿತಿಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್, ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ನಾಯಕಿ ಶ್ವೇತಾ.ಕೆ ಪ್ರಾಸ್ತಾವಿಕ ಭಾಷಣ ಮಾಡಿದರು.

    ವಿದ್ಯಾರ್ಥಿಗಳಾದ ಸಂಕೇತ.ಎಂ ಸ್ವಾಗತಿಸಿ ಮಾನಸ.ಎನ್ ವಂದಿಸಿದರು. ದೀಪಕ್ ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿದರು.